ಮೈಸೂರು

ಶೃಂಗೇರಿ ಶೂಟೌಟ್: ತನಿಖೆಗೆ ಒತ್ತಾಯ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಏ. 21
ಶೃಂಗೇರಿ  ಚೆಕ್‌ಪೋಸ್ಟ್ ಬಳಿ ತಪಾಸಣೆ ಮಾಡುವ ವೇಳೆ ಜಾನುವಾರು ಸಾಗಿಸುತ್ತಿದ್ದ ಕಬೀರ್ ಎಂಬವರನ್ನು ಶೂಟೌಟ್ ಮಾಡಿ ಕೊಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಕರ್ನಾಟಕ ರಾಜ್ಯ ಪಶು ವ್ಯಾಪಾರಿಗಳ ಮತ್ತು ಕಾರ್ಮಿಕರ ಹಿತರಕ್ಷಣಾ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
ತೀರ್ಥಹಳ್ಳಿಯಿಂದ ಮಂಗಳೂರು ಕಡೆಗೆ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ತಪಾಸಣೆಗೆ ಒಳಪಡಿಸಿದ ನಕ್ಸಲ್ ನಿಗ್ರಹ ಪಡೆಯವರು ಕಬೀರ್‌ರನ್ನು ಅಮಾನುಷವಾಗಿ ಕೊಂದಿದ್ದಾರೆ. ಈ ಕೃತ್ಯವನ್ನು ಕೊಲೆ ಎಂದೇ ಪ್ರತಿಪಾದಿಸಬೇಕು. ಅಲ್ಲಿನ ಪೊಲೀಸರು ಕೋಮುವಾದಿಗಳೊಂದಿಗೆ ಸೇರಿಕೊಂಡು ಅಲ್ಪಸಂಖ್ಯಾತರಿಗೆ ತೊಂದರೆ ನೀಡುತ್ತಿದ್ದಾರೆ. ಇದನ್ನು ಖಂಡಿಸಿ ಏ.22ರ ಮಧ್ಯಾಹ್ನ 12ಕ್ಕೆ ನಗರದ ಪುರಭವನದ ಎದುರಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರೊ.ಶಬ್ಬೀರ್ ಮುಸ್ತಫಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರಕರಣವನ್ನು ಸಿಒಡಿ ತನಿಖೆಯ ಬದಲಾಗಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಈ ತನಿಖೆಯಲ್ಲಿ ನಿವೃತ್ತ ನ್ಯಾಯಮೂರ್ತಿ, ನಿವೃತ್ತ ಪೊಲೀಸ್ ಅಧಿಕಾರಿ, ಮಾನವ ಹಕ್ಕುಗಳಿಗಾಗಿ ಹೋರಾಟ ಸಮಿತಿಯ ಪದಾಧಿಕಾರಿ ಹಾಗೂ ಮಾನವ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿರುವ ಕಾರ್ಯಕರ್ತರನ್ನು ನೇಮಿಸಬೇಕು. ಮೃತ ಕಬೀರ್ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು. ಗುಂಡಿಕ್ಕಿದ ನಕ್ಸಲ್ ನಿಗ್ರಹ ದಳದ ಯೋಧನಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದರು.
ಪಿಯುಸಿಎಲ್ ರಾಜ್ಯಾಧ್ಯಕ್ಷ ಡಾ.ಲಕ್ಷ್ಮೀನಾರಾಯಣ ಮಾತನಾಡಿ, ಈ ಪ್ರಕರಣವನ್ನು ಖಂಡಿಸಿ ಪಿಯುಸಿಎಲ್, ಬಿಎಸ್ಪಿ, ಎಸ್‌ಡಿಪಿಐ ಹಾಗೂ ಕರ್ನಾಟಕ ದಲಿತ ವೇದಿಕೆಯ ಸಹಯೋಗದೊಂದಿಗೆ ಏ.24 ರಂದು ಶೃಂಗೇರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪದಾಧಿಕಾರಿಗಳಾದ ಬಿ.ಕುಮಾರಸ್ವಾಮಿ, ದೇವನೂರು ಪುಟ್ಟನಂಜಯ್ಯ, ಶಿವಮಾದು, ದೇವರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.