ಮತ ಮಾಡದವರಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ವಿಶ್ವನಾಥ್
ಕ.ಪ್ರ.ವಾರ್ತೆ , ಮೈಸೂರು , ಏ. 22
ಭಾರತ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಕೇಂದ್ರ ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡು ಚುನಾವಣೆ ನಡೆಸುತ್ತಿದೆ. ಜಾಹೀರಾತುಗಳ ಮೂಲಕ ಮತದಾನ ಜಾಗೃತಿ ಮೂಡಿಸಿದರೂ ಸಹ ಸಂಪೂರ್ಣ ಮತದಾನವಾಗಿಲ್ಲ ಎಂದು ಸಂಸದ ಎಚ್.ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸುವಾಗ ಪ್ರತಿಯೊಬ್ಬರೂ ಹಕ್ಕು ಚಲಾವಣೆಯ ಅವಕಾಶ ಸಿಗುವಂತೆ ನೋಡಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶೇ.65 ರಷ್ಟು ಮತದಾನವಾಗಿರುವುದು ವಿಪರ್ಯಾಸ. ಯಾರು ಮತದಾನ ಮಾಡಿಲ್ಲವೊ ಅವರೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಎಸಗಿದ್ದಾರೆ ಎಂದರು.
ಎಲ್ಲಾ ಚುನಾವಣೆಗಳಲ್ಲಿ ಮನಿ ಪವರ್ (ಹಣದ ಬಲ) ಹಾಗೂ ಮಜಲ್ ಪವರ್ (ತೋಳ್ಬಲ) ಕೆಲಸ ಮಾಡುತ್ತಿದ್ದವು. ನಾನು ನೋಡಿದಂತೆ ಇತ್ತೀಚೆಗೆ ಮಜಲ್ ಪವರ್ ಕಡಿಮೆಯಾಗಿದ್ದು, ಮನಿ ಪವರ್ ತಣ್ಣಗೆ ಕೆಲಸ ಮಾಡುತ್ತಿದೆ. ಇದರ ಒಂದು ಭಾಗವಾಗಿರುವ ನಾನು ಕೂಡ ಇಂತಹ ವ್ಯವಸ್ಥೆಯನ್ನು ಒಪ್ಪಿಕೊಳ್ಳುವಂತಾಗಿದೆ. ಚುನಾವಣೆ ಆಯೋಗ ಎಷ್ಟೇ ತಪಾಸಣೆ ನಡೆಸಿದರೂ ಹಣ ನುಸುಳುತ್ತಿದೆ. ಇದರ ತಡೆಗೆ ಒಂದು ಸಮಿತಿಯನ್ನು ರಚಿಸಿ ಅದರಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು, ಅಧಿಕಾರಿಗಳು, ಆಯೋಗದ ಸದಸ್ಯರು ಹಾಗೂ ರಾಜ್ಯಶಾಸ್ತ್ರ ಬೋಧಿಸುವ ಅಧ್ಯಾಪಕರನ್ನು ಸೇರಿಸಬೇಕು. ನಂತರ ಮನಿ ಪವರ್ ಅನ್ನು ತಿರಸ್ಕರಿಸುವಂತೆ ಮಾಡಬೇಕು ಎಂದು ವಿಶ್ವನಾಥ್ ಪ್ರತಿಪಾದಿಸಿದರು.
ಚುನಾವಣೆ ಗುಂಗಿನಿಂದ ಹೊರಬರಬೇಕು: 16ನೇ ಲೋಕಸಭೆಗೆ ಕರ್ನಾಟಕದಲ್ಲಿ ಚುನಾವಣೆ ನಡೆದಿದೆ. ಇಷ್ಟು ದಿನ ಚುನಾವಣೆ ಗುಂಗಿನಲ್ಲಿದ್ದ ರಾಜ್ಯ ಸರ್ಕಾರ ಹೊರಬರಬೇಕು. ರಾಜ್ಯಾದ್ಯಂತ ಮಳೆಯಾಗಿ ಹಾನಿಯಾಗಿದೆ. ರಸ್ತೆಗಳ ಅಭಿವೃದ್ಧಿ ಆಗಬೇಕಿದೆ. ಚುನಾವಣೆ ನೀತಿ ಸಂಹಿತೆ ಎಂದೇಳಿ ಬೇಜವಾಬ್ದಾರಿ ವಹಿಸುವುದು ತಪ್ಪು. ಆದ್ದರಿಂದ ಆಡಳಿತ ಯಂತ್ರ ಮತ್ತೆ ಚುರುಕಾಗಿ ಜನರ ಸಂಕಷ್ಟಗಳನ್ನು ಆಲಿಸಬೇಕು ಎಂದು ಸಲಹೆ ನೀಡಿದರು. ಮೈಸೂರು- ಕೊಡಗು ಕ್ಷೇತ್ರಕ್ಕೆ ನಡೆದ ಚುನಾವಣೆಯನ್ನು ಫ್ರೆಂಡ್ಲಿ ಮ್ಯಾಚ್ನಂತೆ ಸ್ವೀಕರಿಸಿದ್ದೇನೆ. ನಾನು ಎದುರಿಸಿದ 10 ಚುನಾವಣೆಗಳಲ್ಲಿ ಹಲವು ಉಗ್ರಪ್ರತಾಪಗಳನ್ನು ನೋಡಿದ್ದೇನೆ. ಈ ಕ್ಷೇತ್ರದ ಮತದಾರರು ಯಾರ್ಯಾರಿಗೆ ಎಷ್ಟೆಷ್ಟು ಮತ ನೀಡಬೇಕು ಎಂಬುದನ್ನು ನಿರ್ಧರಿಸಿ ಆಗಿದೆ. ಕೆಲವರು ಮ್ಯಾಚ್ ಫಿಕ್ಸಿಂಗ್ ಮಾಡಿ ಅವರ ಅಂತರಂಗವನ್ನು ಬಹಿರಂಗ ಮಾಡಿಕೊಂಡಿದ್ದಾರೆ. ಅವರ ಹೆಸರನ್ನು ನಾನು ಹೇಳಲಾರೆ. ಒಕ್ಕಲಿಗ ಜನಾಂಗದವರು ಎಂದೆಂದಿಗೂ ಕಾಂಗ್ರೆಸ್ ಜತೆ ಇದ್ದಾರೆ. ಕೆಲವರು ಇದೇ ಸಮುದಾಯವನ್ನು ಟಾರ್ಗೆಟ್ ಮಾಡಿ ಪ್ರತ್ಯೇಕಿಸುವುದು ಸರಿಯಲ್ಲ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
ಶಾಸಕರಾದ ಎಂ.ಕೆ. ಸೋಮಶೇಖರ್, ಆರ್. ಧರ್ಮಸೇನ, ಕಾಂಗ್ರೆಸ್ ನಗರಾಧ್ಯಕ್ಷ ಸಿ.ದಾಸೇಗೌಡ, ಮಾಜಿ ಶಾಸಕ ಎಂ.ಸತ್ಯನಾರಾಯಣ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು, ನಿರ್ಮಾಪಕ ಎಸ್ಎ ಚಿನ್ನೇಗೌಡ, ಡಾ.ಬಿ.ಜೆ.ವಿಜಯಕುಮಾರ್ ಇದ್ದರು.
ಗೆಲವು ನನ್ನದೆ: ವಿಶ್ವನಾಥ್ ವಿಶ್ವಾಸ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಅಭಿವೃದ್ಧಿ ಕಾರ್ಯಕ್ರಮಗಳೇ ನನ್ನ ಗೆಲವಿಗೆ ಶ್ರೀರಕ್ಷೆಯಾಗಿವೆ. ಆದ್ದರಿಂದ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಮೈಸೂರು- ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ನಗರದ ಇಟ್ಟಿಗೆಗೂಡಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಈ ಭಾರಿ ಅತ್ಯಂತ ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ನರಸಿಂಹರಾಜ ಕ್ಷೇತ್ರಗಳಲ್ಲಿ ಹೆಚ್ಚು ಮತಗಳು ನನಗೆ ಲಬಿಸಲಿವೆ. ಕೇಂದ್ರದಲ್ಲಿ ಮತ್ತೆ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ, ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರು ತಾವು ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಯೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷವನ್ನೇ ಬಿಜೆಪಿಗೆ ಅಡವಿಟ್ಟಿದ್ದಾರೆ ಎಂದು ಟೀಕಿಸಿದರು.
ಶಾಸಕರಾದ ತನ್ವೀರ್ ಸೇಠ್, ಆರ್.ಧರ್ಮಸೇನ, ಮಾಜಿ ಶಾಸಕ ಎಂ.ಸತ್ಯನಾರಾಯಣ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು, ಮುಖಂಡರಾದ ಎಸ್.ಸಿ. ಬಸವರಾಜು, ಸಿ. ಬಸವೇಗೌಡ, ಡಿಸಿಸಿ ಸದಸ್ಯರಾದ ಎಚ್.ಸಿ. ಕೃಷ್ಣಕುಮಾರ್ ಸಾಗರ್, ಬಸಪ್ಪ, ಹೊಸಹುಂಡಿ ರಘು, ಸಿದ್ದಯ್ಯ, ಕಾಂಗ್ರೆಸ್ ನಗರಾಧ್ಯಕ್ಷ ಸಿ. ದಾಸೇಗೌಡ, ಡಿ. ನಾಗಭೂಷಣ್, ಜಿ.ವಿ. ಸೀತಾರಾಂ, ಮಂಜುಳಾ ಮಾನಸ, ದಕ್ಷಿಣಾಮೂರ್ತಿ, ಸಿ.ಎಂ. ಸಿದ್ದರಾಮೇಗೌಡ, ಸಿದ್ದರಾಜು, ಜಿ.ಕೆ. ಬಸವಣ್ಣ, ಕೆಂಚಪ್ಪ, ಬ್ಯಾಂಕ್ ಪುಟ್ಟಸ್ವಾಮಿ, ಕುರಬಾರಹಳ್ಳಿ ಪ್ರಕಾಶ್, ಡಾ. ಶಿವರಾಂ, ಮೀನಾ ತೂಗುದೀಪ ಶ್ರೀನಿವಾಸ್, ಮಾರ್ಬಳ್ಳಿ ಕುಮಾರ್, ದಿನೇಶ್, ಹಿನಕಲ್ ಪ್ರಕಾಶ್, ಉದಯ್, ಹೇಮಾವತಿ, ವಿಜಯಲಕ್ಷ್ಮೀ, ಮೀನಾಕ್ಷಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

