ಯಾರಿಗೆ ಮೈಸೂರು ಜಿಪಂ ಗದ್ದುಗೆ
ಕ.ಪ್ರ.ವಾರ್ತೆ , ಮೈಸೂರು , ಏ. 22
ಮೈಸೂರು ಜಿಲ್ಲಾ ಪಂಚಾಯ್ತಿಯ ಮೂರನೇ ಅವಧಿಯ 20 ತಿಂಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಮುಂದಿನ ಜೂನ್ 14ಕ್ಕೆ ಮೊದಲು ನಡೆಯಬೇಕಿದೆ. ರಾಜ್ಯ ಸರ್ಕಾರ ಮುಂಚಿತವಾಗಿಯೇ ಅಧ್ಯಕ್ಷ- ಉಪಾದ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಿದೆ.
ಮೈಸೂರು ಜಿಪಂ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನವು ಪ.ಜಾತಿಯ ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಜಿಪಂನಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ. 46 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್- 21, ಜೆಡಿಎಸ್- 16, ಬಿಜೆಪಿ-8, ಪಕ್ಷೇತರ- 1 ಸ್ಥಾನ ಪಡೆದಿವೆ. ಅಧಿಕಾರ ಹಿಡಿಯಲು 24 ಸದಸ್ಯರ ಬೆಂಬಲ ಬೇಕು.
ಮೊದಲ ಅವಧಿಯ ಅಧ್ಯಕ್ಷ ಸ್ಥಾನ ಬಿಸಿಬಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪ.ಜಾತಿಗೆ ಮೀಸಲಾಗಿತ್ತು. ಕಾಂಗ್ರೆಸ್ ಪಾಲಿಕೆಯಲ್ಲಿ ಕಳೆದ ಅವಧಿಯಲ್ಲಿ ಇದ್ದಂತೆ ಜಿಪಂನಲ್ಲಿ ಜೆಡಿಎಸ್ ಜೊತೆ ದೋಸ್ತಿ ಮಾಡಿ, ಅಧಿಕಾರ ಹಿಡಿಯಲು ಹವಣಿಸಿತ್ತು. ಆದರೆ ಜೆಡಿಎಸ್ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಇರಲಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನ ಕೇಳಿತು. ಕಾಂಗ್ರೆಸ್ ತಾನು ಅತಿ ದೊಡ್ಡ ಪಕ್ಷವಾಗಿರುವುದರಿಂದ ತನಗೆ ಅಧ್ಯಕ್ಷ ಸ್ಥಾನ ಬೇಕು ಎಂದು ಕೇಳಿತ್ತು. ಇದರಿಂದ ಮಾತುಕತೆಗೆ ಬ್ರೇಕ್ ಬಿದ್ದಿತು.
ನಂತರ ಜೆಡಿಎಸ್ 8 ಸದಸ್ಯ ಬಲದ ಬಿಜೆಪಿ ಹಾಗೂ ಓರ್ವ ಪಕ್ಷೇತರ ಸದಸ್ಯನ ಬೆಂಬಲದಿಂದ ಅಧಿಕಾರ ಹಿಡಿಯಿತು. ಜೆಡಿಎಸ್ನ ಜೆ.ಸುನೀತಾ ವೀರಪ್ಪಗೌಡ ಅಧ್ಯಕ್ಷರಾಗಿ, ಬಿಜೆಪಿಯ ಡಾ.ಶಿವರಾಂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧಿಕಾರ ಹಂಚಿಕೆಯ ಒಳ ಒಪ್ಪಂದದಂತೆ ಸುನೀತಾ ಅವರು 10 ತಿಂಗಳಿಗೆ ಅಧಿಕಾರ ಬಿಟ್ಟುಕೊಡಬೇಕಿತ್ತು. ಇದಕ್ಕಾಗಿ ಜೆಡಿಎಸ್ನ ಭಾಗ್ಯ ಶಿವಮೂರ್ತಿ, ಬಿಜೆಪಿಯ ಮಂಜುಳಾ ಪುಟ್ಟಸ್ವಾಮಿ ಕಾದಿದ್ದರು. ಆದರೆ ರಾಜಿನಾಮೆ ನಾಟಕವಾಡಿ, ಅಧಿಕಾರ ಬಿಡುವ ವೇಳೆಗೆ 17 ತಿಂಗಳು ಕಳೆದು
ಹೋಗಿದ್ದವು. ಆ ಅವಧಿಯ ಉಳಿಕೆ 3 ತಿಂಗಳಿಗೆ ಜೆಡಿಎಸ್ನ ಭಾಗ್ಯ ಶಿವಮೂರ್ತಿ ಅಧ್ಯಕ್ಷರಾಗಿ, ಬಿಜೆಪಿಯ ಎಚ್.ಆರ್. ಭಾಗ್ಯಲಕ್ಷ್ಮಿ ಉಪಾಧ್ಯಕ್ಷರಾಗಿದ್ದರು.
ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೂ ಮೀಸಲಾಯಿತು. ಜೆಡಿಎಸ್- ಬಿಜೆಪಿ ಮೈತ್ರಿ ಮುಂದುವರಿಯಿತು. ಅಧ್ಯಕ್ಷರಾಗಿ ಬಿಜೆಪಿಯ ಕಾ.ಪು. ಸಿದ್ದವೀರಪ್ಪ, ಉಪಾಧ್ಯಕ್ಷರಾಗಿ ಜೆಡಿಎಸ್ನ ಎಂ.ಕೆ. ಸುಚಿತ್ರಾ ಆಯ್ಕೆಯಾದರು. ಮೈತ್ರಿ ಪಕ್ಷಗಳಲ್ಲಿ ಆದ ಒಪ್ಪಂದದ ಪ್ರಕಾರ, 10 ತಿಂಗಳ ನಂತರ ರಾಜಿನಾಮೆ ನೀಡಿ, ಬೇರೆಯವರಿಗೆ ಅವಕಾಶ ಮಾಡಿಕೊಡಬೇಕಿತ್ತು. ಆದರೆ ಇವರು ಕೂಡ ವಿಳಂಬ ಮಾಡಿದರು. ಮೊದಲೇ ಕಾಂಗ್ರೆಸ್ ಕಡೆ ಗುರುತಿಸಿಕೊಂಡಿದ್ದ ಪಕ್ಷೇತರ ಸದಸ್ಯ ಎಲ್. ಮಾದಪ್ಪ ಅವರು ಬಿಜೆಪಿಯ ಮಂಜುಳಾ ಪುಟ್ಟಸ್ವಾಮಿ, ಕೆಂಪಣ್ಣ ಹಾಗೂ ಡಾ.ಶಿವರಾಂ ಅವರೊಂದಿಗೆ ಸೇರಿ, ಕಾಂಗ್ರೆಸ್ನ 21 ಸದಸ್ಯರಿಗೆ ಸಾಥ್ ನೀಡಿ, ಅವಿಶ್ವಾಸ ಮಂಡನೆಯ ಪತ್ರ ನೀಡಿದರು. ಆಗ ಅಧ್ಯಕ್ಷ, ಉಪಾಧ್ಯಕ್ಷರು ರಾಜಿನಾಮೆ ನೀಡಿದರು. ಅಧ್ಯಕ್ಷರು ರಾಜಿನಾಮೆ ಹಿಂಪಡೆಯುವ ನಾಟಕವಾಡಿದರೂ ಅಂತಿಮವಾಗಿ ಇಬ್ಬರ ರಾಜಿನಾಮೆಯೂ ಅಂಗೀಕಾರವಾಯಿತು. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
ಅಧಿಕಾರಿ ಕಳೆಯುವುದು ನಿಶ್ಚಿತ: ಡಾ. ಶಿವರಾಂ ಅವರು ಜೆಡಿಎಸ್- ಮೈತ್ರಿಕೂಟಕ್ಕೆ ವಾಪಸ್ ಬಂದರೂ ಮಂಜುಳಾ ಪುಟ್ಟಸ್ವಾಮಿ, ಕೆಂಪಣ್ಣ ಬಾರಲಿಲ್ಲ. ಹೀಗಾಗಿ ಮೈತ್ರಿಕೂಟಕ್ಕೆ ಅಧಿಕಾರ ಹೋಗುವುದು ನಿಶ್ಚಿತವಾಗಿತ್ತು. ಆದರೂ ಅವರು ಆ ಇಬ್ಬರು ಸದಸ್ಯರಿಗೆ ವ್ಹಿಪ್ ಜಾರಿ ಮಾಡುವ ಮೂಲಕ ಬೆದರಿಸಲು ನೋಡಿದರು. ಆದರೆ ಆ ಇಬ್ಬರು ಸದಸ್ಯರು ಸೊಪ್ಪು ಹಾಕಲಿಲ್ಲ. ಪರಿಣಾಮ ಮೈತ್ರಿಕೂಟ ಏನೆಲ್ಲಾ ಸರ್ಕಸ್ ಮಾಡಿದರೂ ಗೆಲ್ಲಲಾಗಿಲ್ಲ.
ಪರಿಣಾಮ ಕಾಂಗ್ರೆಸ್ನ ಕೂರ್ಗಳ್ಳಿ ಮಹದೇವು ಅಧ್ಯಕ್ಷರಾಗಿ, ಅದೇ ಪಕ್ಷದ ಭ್ರಮರಾಂಬ ಮಲ್ಲಿಕಾರ್ಜುನಸ್ವಾಮಿ ಉಪಾಧ್ಯಕ್ಷರಾಗಿ ಕಳೆದ ವರ್ಷದ ಸೆ.18 ರಂದು ಆಯ್ಕೆಯಾಗಿದ್ದರು. ಅಂದಿನ ಚುನಾವಣೆಗೆ ಕಾಂಗ್ರೆಸ್ ಸದಸ್ಯೆ ಶಕುಂತಲಾ ವೆಂಕಟಯ್ಯ, ಜೆಡಿಎಸ್ನ ಸಿ.ಟಿ. ರಾಜಣ್ಣ ಗೈರುಹಾಜರಾಗಿದ್ದರು. ಜೆಡಿಎಸ್- ಬಿಜೆಪಿ ಮೈತ್ರಿಕೂಟದಿಂದ ಅಧ್ಯಕ್ಷ ಸ್ಥಾನಕ್ಕೆ ನಳಿನಾಕ್ಷಿ ವೆಂಕಟೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಬಸವಣ್ಣ ಅವರನ್ನು ಹೆಸರಿಸಲಾಗಿತ್ತು. ಆದರೆ 46 ಸದಸ್ಯ ಬಲದ ಜಿಪಂನಲ್ಲಿ ಹಾಜರಿದ್ದ 44 ಸದಸ್ಯರ ಪೈಕಿ ಕಾಂಗ್ರೆಸ್ನ ಕೂರ್ಗಳ್ಳಿ ಮಹದೇವ್ ಹಾಗೂ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ಅವರು ತಲಾ 23 ಮತಗಳನ್ನು ಪಡೆದು ಕ್ರಮವಾಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಳಿನಾಕ್ಷಿ ವೆಂಕಟೇಶ್ ಹಾಗೂ ಗೀತಾ ಬಸವಣ್ಣ ಅವರು ತಲಾ 21 ಮತಗಳನ್ನು ಪಡೆದು, 2 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಇದಾದ ನಂತರ ಬಿಜೆಪಿಯು ಮಂಜುಳಾ ಪುಟ್ಟಸ್ವಾಮಿ ಹಾಗೂ ಕೆಂಪಣ್ಣ ಅವರ ವ್ಹಿಪ್ ಉಲ್ಲಂಘಿಸಿದ್ದು, ಪಕ್ಷಾಂತರ ಕಾಯ್ದೆಯನ್ವಯ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ವಿಚಾರಣೆಯೂ ಆರಂಭವಾಗಿತ್ತು. ಆದರೆ ಆ ಇಬ್ಬರು ಸದಸ್ಯರು, ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ, ಮುಂದೆ ಪಕ್ಷ ಹೇಳುವ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಹೇಳಿದ್ದರಿಂದ ದೂರು ವಾಪಸ್ ಪಡೆದಿದೆ. ಹೀಗಾಗಿ ಮತ್ತೆ ಸದಸ್ಯರ ಬಲಾಬಲದ ಆಧಾರದ ಮೇಲೆ ಜೆಡಿಎಸ್- ಬಿಜೆಪಿ ಮೈತ್ರಿಕೂಟಕ್ಕೆ ಅಧಿಕಾರ ದಕ್ಕಬೇಕು.
ಕಾಂಗ್ರೆಸ್ಗೆ-21 ಹಾಗೂ ಪಕ್ಷೇತರ ಸದಸ್ಯ ಎಲ್.ಮಾದಪ್ಪ ಅವರ ಬೆಂಬಲವಿದೆ. ಜೆಡಿಎಸ್- ಬಿಜೆಪಿಗೆ 24 ಸದಸ್ಯರ ಬೆಂಬಲ ಇದ್ದರೂ ಸಿ.ಟಿ. ರಾಜಣ್ಣ ಬೆಂಬಲಿಸುವ ಗ್ಯಾರಂಟಿ ಇಲ್ಲ. ಅಲ್ಲದೇ ಪದ್ಮ ಬಸವರಾಜು ಅವರ ಪತಿ ಕಾಂಗ್ರೆಸ್ ಸೇರಿರುವುದರಿಂದ ಅವರು ಯಾವ ಕಡೆ ಇರುತ್ತಾರೆ ಎಂದು ಖಚಿತವಾಗಿಲ್ಲ. ಇವರಿಬ್ಬರು ಗೈರುಹಾಜರಾದರೆ ಆಗ ತಲಾ 22- 22 ಸದಸ್ಯರ ಬೆಂಬಲ ಇದ್ದು, ಲಾಟರಿ ಮೂಲಕ ಆಯ್ಕೆ ಮಾಡಬೇಕಾಗುತ್ತದೆ.
ಹೀಗಾಗಿ ಹೇಗಾದರೂ ಮಾಡಿ, ಅಧಿಕಾರ ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಬಯಸಿದೆ. ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಅವರ ಆಸಕ್ತಿಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಪ.ಜಾತಿ ಮಹಿಳೆಗೆ ಮೀಸಲು ಮಾಡಿಸಿದ್ದಾರೆ.
ಮಂಜುನಾಥ್ ಅವರ ನಾದಿನಿ ಡಾ.ಪುಷ್ಪಾವತಿ ಅಮರನಾಥ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಉದ್ದೇಶವಿದೆ ಎನ್ನಲಾಗಿದೆ. ಕಾಂಗ್ರೆಸ್ನಲ್ಲಿ ಅವರಲ್ಲದೇ ಸುಧಾ ಮಹದೇವಯ್ಯ, ಗೀತಾ ಧರ್ಮೇಂದ್ರ, ಕಾವೇರಿ ಶೇಖರ್ ಕೂಡ ಅರ್ಹರಿದ್ದಾರೆ. ಜೆಡಿಎಸ್- ಬಿಜೆಪಿ ಕಡೆಯಿಂದ ಎಚ್.ಆರ್. ಭಾಗ್ಯಲಕ್ಷ್ಮಿ ಮಾತ್ರ ಅರ್ಹರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಎರಡೂ ಕಡೆಯ ಬಹುತೇಕ ಮಂದಿ ಆಕಾಂಕ್ಷಿಗಳು. ಚುನಾವಣೆ ಬಹತೇಕ ಜೂನ್ 2ನೇ ವಾರದಲ್ಲಿ ನಡೆಯಲಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಜಿಪಂ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳಬಹುದು.
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

