ಮೈಸೂರು

ಸ್ವಚ್ಛತೆಗೆ ಸಿಬ್ಬಂದಿ ಕೊರತೆ

Published On :

ಮಾ. ವೆಂಕಟೇಶ್
ಮೈಸೂರು: ಇದು ಮೈಸೂರಿನ ವಾಣಿಜ್ಯ ಕೇಂದ್ರಗಳನ್ನು ಒಳಗೊಂಡಿರುವ ಹಾಗೂ ನಗರದ ಹೃದಯ ಭಾಗವನ್ನು ವ್ಯಾಪಿಸಿರುವ ವಾರ್ಡ್. ಬಹುಮುಖ್ಯವಾಗಿ ಮಹಾನಗರ ಪಾಲಿಕೆಯ ಕಚೇರಿಯೇ ಇಲ್ಲಿದೆ. ಆದರೆ ಇದರ ಸಮೀಪ ಇರುವ ಲ್ಯಾನ್ಸ್ ಡೌನ್ ಕಟ್ಟಡದ ಹಿಂಭಾಗ ನೋಡಿದರೆ ವಾಕರಿಕೆ ತರಿಸುತ್ತದೆ.
ಇದು ಪ್ರಸಿದ್ಧ ಮೈಸೂರು ಅರಮನೆಯ ಪಕ್ಕದಲ್ಲಿರುವ ಪ್ರದೇಶ. ಆದರೂ ತ್ಯಾಜ್ಯದ ವಿಲೇವಾರಿಯಾಗಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಿ ಪರಿಸರ ಅನೈರ್ಮಲ್ಯ ತಡೆಗಟ್ಟುವಲ್ಲಿ ಸಾಧ್ಯವಾಗಿಲ್ಲ. ತಳ್ಳುವ ಗಾಡಿ ಹಾಗೂ ಇತರ ವಾಹನಗಳಲ್ಲಿ ಬೆಳಗೆ ಹಾಗೂ ಸಂಜೆ ಫಾಸ್ಟ್ ಫುಡ್ ನಡೆಸುವುದನ್ನು ಕಾಣಬಹುದು. ಅಲ್ಲದೆ ಇಲ್ಲಿನ ಮುಖ್ಯರಸ್ತೆಯಲ್ಲಿ ತರಕಾರಿ ಹಾಗೂ ಹಣ್ಣಿನ ವ್ಯಾಪಾರವೂ ನಡೆಯಲಿದೆ. ಇದರಿಂದಾಗಿ ಸಹ ತ್ಯಾಜ್ಯದ ಉತ್ಪಾದನೆ ಇಲ್ಲವೆನ್ನುವಂತಿಲ್ಲ.          
ನಗರ ಬಸ್ ನಿಲ್ದಾಣ, ಸಂತೇಪೇಟೆ, ಶಿವರಾಂ ಪೇಟೆ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಚಾಮರಾಜ ಜೋಡಿ ರಸ್ತೆ ಈ ಮುಂತಾದ ವಾಣಿಜ್ಯ ಕೇಂದ್ರಗಳು ಇಲ್ಲಿವೆ. ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಹಾಗೂ ಗ್ರಾಹಕರು ಭೇಟಿ ನೀಡುವರು. ಹೀಗಿರುವಾಗ ಸ್ವಚ್ಛತೆಯಿಂದ ಕಂಗೊಳಿಸಿ ಅವರನ್ನು ಆರ್ಕಷಿಸುವಂತೆ ಮಾಡಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿ.
    ಸುಮಾರು ವರ್ಷಗಳ ಹಿಂದೆ ಈ ಭಾಗದ ಸ್ವಚ್:್ತೆಗಾಗಿ ಸುಮಾರು 50 ಮಂದಿ ಪೌರಕಾರ್ಮಿಕರನ್ನು ನೇಮಿಸಲಾಗಿತ್ತು. ಕಾಲ ಕ್ರಮೇಣ ಅವರಲ್ಲಿ ಕೆಲವರು ನಿವೃತ್ತರಾದರು, ಇನ್ನೂ ಕೆಲವರು ನಿಧನರಾದರು. ಈಗ ಉಳಿದಿರುವುದು 30 ಮಂದಿ ಮಾತ್ರ. ಅವರಲ್ಲಿ ಪ್ರತಿದಿನ ನಾನಾ ಕಾರಣಗಳಿಂದ 6-7 ಮಂದಿ ಗೈರಾಗುವರು. ಹೀಗಿರುವಾಗ ಸ್ವಚ್ಛತೆಯನ್ನು ಯಾವು ರೀತಿ ನಿರ್ವಹಿಸುವುದು ಎನ್ನುತ್ತಾರೆ ಸ್ಥಳೀಯ ನಗರ ಪಾಲಿಕೆ ಸದಸ್ಯರು.
36ನೇ ವಾರ್ಡ್‌ನ  ವ್ಯಾಪ್ತಿಯು ಉತ್ತರಕ್ಕೆ ಜೆಎಲ್‌ಬಿ ರಸ್ತೆ ಮತ್ತು ಡಿ. ದೇವರಾಜ ಅರಸು ರಸ್ತೆ ಸೇರುವ ಬಿಂದುವಿನಿಂದ ದೇವರಾಜ ಅರಸು ರಸ್ತೆ ಮೂಲಕ ಎನ್.ಎಸ್. ರಸ್ತೆಯವರೆಗೆ. ದೇವರಾಜ ಅರಸು ರಸ್ತೆ ಬಿಂದುವಿನಿಂದ ಎನ್.ಎಸ್. ರಸ್ತೆ ಮುಖೇನ ವಿನೋಬ ರಸ್ತೆಯಲ್ಲಿ ಸಾಗಿ ನಲ್ಲಪ್ಪ ಪೊಲೀಸ್ ಠಾಣೆ ವೃತ್ತದಿಂದ ಚಿಕ್ಕಗಡಿಯಾರದ ವೃತ್ತದವರಗೆ. ಪೂರ್ವಕ್ಕೆ ಚಿಕ್ಕಗಡಿಯಾರ ವೃತ್ತದಿಂದ ಸಯ್ಯಾಜಿರಾವ್ ರಸ್ತೆ ಮೂಲಕ ಕೆ.ಆರ್ ವೃತ್ತ, ಅಲ್ಲಿಂದ ಸಯ್ಯಾಜಿರಾವ್ ರಸ್ತೆ ಮೂಲಕ ರಮಾವಿಲಾಸ ರಸ್ತೆ ಸೇರುವ ಬಿಂದುವಿನಿಂದ ಚೆಲುವಾಂಬ ಅಗ್ರಹಾರ ರಸ್ತೆ ಸೇರುವ ಬಿಂದುವರೆಗೆ. ಚೆಲುವಾಂಬ ಅಗ್ರಹಾರ ಬಿಂದುವಿನಿಂದ ಚಾಮರಾಜ ಜೋಡಿ ರಸ್ತೆಯವರೆಗೆ.  
ದಕ್ಷಿಣಕ್ಕೆ ಚೆಲುವಾಂಬ ಅಗ್ರಹಾರ ರಸ್ತೆ ಮತ್ತು ಚಾಮರಾಜ ಜೋಡಿರಸ್ತೆ ಸೇರುವ ಬಿಂದುವಿನಿಂದ  ಜೋಡಿರಸ್ತೆ ಮೂಲಕ ರಾಮಸ್ವಾಮಿ ವೃತ್ತದರೆಗೆ. ಪಶ್ಚಿಮಕ್ಕೆ ರಾಮಸ್ವಾಮಿ ವೃತದಿಂದ ಜೆಎಲ್‌ಬಿ ರಸ್ತೆ ಮೂಲಕ ಡಿ. ದೇವರಾಜ ಅರಸು ರಸ್ತೆ ಸೇರುವ ಬಿಂದುವರೆಗೆ ಒಳಗೊಂಡಿದೆ. ಈ ಭಾಗದಲ್ಲಿ ಸುಮಾರು 12 ಸಾವಿರ ಜನಸಂಖ್ಯೆ, 2700 ಮನೆಗಳು ಹಾಗೂ 1 ಸಾವಿರಕ್ಕೂ ಅಧಿಕ ಉದ್ದಿಮೆಗಳಿವೆ.
ಈ ಪ್ರದೇಶದಲ್ಲಿ ಹೋಟೆಲ್‌ಗಳು ಹಾಗೂ ಲಾಡ್ಜ್‌ಗಳು ಸಹ ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ತ್ಯಾಜ್ಯದ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಿ ನಗರದ ಸ್ವಚ್ಛತೆ ಕಾಪಾಡಬೇಕಿದೆ.


ಹೊಸ ಟೆಂಡರ್ ಪ್ರಕ್ರಿಯೆ: ಪಿ.ಜಿ. ರಮೇಶ್


ಸ್ವಚ್ಛತಾ ಕಾರ್ಯದ ಸಲುವಾಗಿ ಪೌರಕಾರ್ಮಿಕರ ನೇಮಕಕ್ಕೆ ಹೊಸ ಟೆಂಡರ್ ಕರೆಯಲಾಗಿದೆ ಎಂದು ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ತಿಳಿಸಿದ್ದಾರೆ.
ಕನ್ನಡಪ್ರಭ ದಿನಪತ್ರಿಕೆಯ ಮೈಸೂರು ಕಸಬ್ ಸರಣಿ ಮಾಲಿಕೆಯಲ್ಲಿ ಆ. 1 ರಂದು ಪ್ರಕಟವಾಗಿದ್ದ ಸಮಸ್ಯೆಗಳ ನಡುವೆ ಸ್ವಚ್ಛತಾ ಕಾರ್ಯ ಎಂಬ ವರದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸದರಿ ವಾರ್ಡ್‌ಗೆ 39 ಮಂದಿ ಪೌರಕಾರ್ಮಿಕರನ್ನು ಒದಗಿಸಲಾಗುವುದು. 100 ಹೊಸ ಕಂಟೈನರ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಸದರಿ ವಾರ್ಡ್‌ಗೆ ಹೊಸ ಕಂಟೈನರ್ ಒದಗಿಸಲಾಗುವುದು ಎಂದಿದ್ದಾರೆ.
ಆ. 2 ರಂದು ಮೇಯರ್ ವಾರ್ಡ್‌ನಲ್ಲಿ ಸ್ವಚ್ಛತೆ ಮರೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಅವರು,  ವಾರ್ಡ್‌ನಲ್ಲಿ ಕಸದ ಬುಟ್ಟಿಗಳನ್ನು ವಿತರಿಸಿಲ್ಲ ಎಂದು ವರದಿಯಾಗಿದೆ. ವಲಯ 4 ರ ವ್ಯಾಪ್ತಿಯ 32 ಮತ್ತು 33 ರ ವ್ಯಾಪ್ತಿಯಲ್ಲಿ ಶೀಘ್ರವೇ  ವಿತರಿಸಲಾಗುವುದು. ಅಲ್ಲದೆ ಈ ವಾರ್ಡ್‌ಗೆ 35 ಮಂದಿ ಪೌರಕಾರ್ಮಿಕರ ನೇಮಕಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.


ಈ  ವಾರ್ಡ್‌ನಲ್ಲಿ ಶೇ. 60 ವಾಣಿಜ್ಯ ಕೇಂದ್ರಗಳು ಹಾಗೂ ಶೇ. 40 ವಸತಿ ಪ್ರದೇಶಗಳನ್ನು ಒಳಗೊಂಡಿದೆ. ಕಸದ ವಿಲೇವಾರಿ ಹಾಗೂ ನಿರ್ವಹಣೆಯು ಶೇ. 75ರಷ್ಟು ಸಮಸ್ಯೆಯಿದೆ. ಆದರೂ ಇರುವ ಪೌರಕಾರ್ಮಿಕರು ಹಾಗೂ ಸೌಕರ್ಯದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಇದು ನಗರದ ಹೃದಯ ಭಾಗದಲ್ಲಿನ ವಾರ್ಡ್ ಆಗಿರುವುದರಿಂದ ಇದರ ಅಭಿವೃದ್ಧಿಗೆ ಪಕ್ಷಾತೀತವಾಗಿ ನಗರ ಪಾಲಿಕೆಯ ಎಲ್ಲಾ ಸದಸ್ಯರು ಸಹಕಾರ ನೀಡುವರು. ಚಾಮರಾಜ ಕ್ಷೇತ್ರಕ್ಕೆ ಸೇರಿರುವ ಕಾರಣ ಶಾಸಕ ವಾಸು ಅವರು ಸಹ ಹೆಚ್ಚಿನ ಒತ್ತಾಸೆಯಾಗಿದ್ದಾರೆ. ಪೌರಕಾರ್ಮಿಕರ ನೇಮಕಾತಿಯಾದರೆ ಅರ್ಧ ಸಮಸ್ಯೆ ಪರಿಹಾರವಾಗಲಿದೆ.    
ಟಿ ಪಿ. ಪ್ರಶಾಂತಗೌಡ,, ವಾರ್ಡ್  36, ನಗರ ಪಾಲಿಕೆ ಸದಸ್ಯರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.