ಮೈಸೂರು

ಪಾಳುಬಿದ್ದ ಸ್ಥಿತಿಯಲ್ಲಿರುವ ಶೌಚಾಲಯ

Published On :

ಭೇರ್ಯ ಮಹೇಶ್
ಭೇರ್ಯ: ಭೇರ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮರ್ಪಕ ಶೌಚಾಲಯವಿಲ್ಲದೆ ವಿದ್ಯಾರ್ಥಿನಿಯರಿಗೆ ತೀವ್ರ ತೊಂದರೆಯಾಗುತ್ತಿದ್ದು, ಬಯಲು ಕಡೆ ಹೋಗುವ ಪರಿಸ್ಥಿತಿ ಉಂಟಾಗಿದೆ.
ಇಲ್ಲಿ ಗಂಡು ಮಕ್ಕಳಿಗೆ 2, ಹೆಣ್ಣು ಮಕ್ಕಳಿಗೆ ಪ್ರತ್ಯೇಕ 2 ಶೌಚಾಲಯವಿದ್ದು, ಸುಮಾರು 3 ರಿಂದ 4 ವರ್ಷಗಳಿಂದ ಉಪಯೋಗಕ್ಕೆ ಬಾರದಂತೆ ಪಾಳು ಬಿದ್ದಿದೆ. ಶೌಚಾಲಯದ ಸುತ್ತಲೂ ಗಿಡಗಂಟೆಗಳು ಬೆಳೆದು ಶೌಚಾಲಯವೇ ಕಾಣದಾಗಿದೆ. ಇದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಹಳ ಮುಜುಗರದ ಪರಿಸ್ಥಿತಿ ಇದೆ.
ಈ ಬಗ್ಗೆ ಪೋಷಕರು ಶೌಚಾಲಯ ನಿರ್ಮಿಸಬೇಕೆಂದು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಶಾಸಕರು ಹಾಗೂ ಶಿಕ್ಷಣ ಇಲಾಖೆಯವರಿಗೂ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಆರೋಪಿಸಿದ್ದಾರೆ.
ಸರ್ಕಾರ ಶಾಲೆಗಳಿಗೆ ಹಲವು ಯೋಜನೆಗಳ ರೂಪದಲ್ಲಿ ಹಣ ಬಿಡುಗಡೆ ಮಾಡಿದರೆ ಸಾಲದು, ಅದು ಸಮರ್ಪಕವಾಗಿ ಬಳಕೆಯಾಗುತ್ತಿದ್ದೆಯೇ ಎಂದು ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು. ಶಾಲೆಯ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಹಣ ನೀಡುತ್ತಿದ್ದರೂ ಅಧಿಕಾರಿಗಳು ಶೌಚಾಲಯ ನಿರ್ಮಿಸಲು ಮುಂದಾಗದಿರುವುದು ಯಕ್ಷ ಪ್ರಶ್ನೆಯಾಗಿದೆ.
ಶಿಕ್ಷಕರ ಶೌಚಾಲಯ ಕೊರತೆ: ಶಾಲೆಯಲ್ಲಿ 9 ಶಿಕ್ಷಕರಿದ್ದು, ಅವರಲ್ಲಿ 7 ಶಿಕ್ಷಕಿಯರಿದ್ದಾರೆ. ಎಲ್ಲರೂ ದುರಸ್ತಿ ಇರುವ ಒಂದೇ ಶೌಚಾಲಯವನ್ನು ಉಪಯೋಗಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಶಾಲೆಯಲ್ಲಿ ಕುಡಿಯುವ ನೀರಿನ ಕೊರತೆ ಇದ್ದು, ಇತ್ತೀಚಿಗೆ ಅಷ್ಟೇ ಜಿಪಂ ಸದಸ್ಯರ ಅನುದಾನದಡಿ ಶಾಲೆಗೆ ಕೊಳವೆಬಾವಿ ಕೊರೆಸಿದ್ದು, ನೀರಿನ ಸಮಸ್ಯೆ ಸ್ಪಲ್ವ ಮಟ್ಟಿಗೆ ಸುಧಾರಣೆಯಾಗಿದೆ. ಆದರೆ ಶೌಚಾಲಯ ಸಮಸ್ಯೆ ಪರಿಹರಿಸಲು ಯಾರು ಮುಂದಾಗುತ್ತಿಲ್ಲ.
ಶಾಲೆಯಲ್ಲಿ ಒಂದರಿಂದ 8ನೇ ತರಗತಿಯವರೆಗೆ ವಿದ್ಯಾರ್ಥಿಗಳ ಸಂಖ್ಯೆ 360 ಇದ್ದು, ಇದರಲ್ಲಿ ವಿದ್ಯಾರ್ಥಿನಿಯರು 181 ಹಾಗೂ 179  ವಿದ್ಯಾರ್ಥಿಗಳು ಇದ್ದಾರೆ. ಶಾಲೆಯ ಸುತ್ತ-ಮುತ್ತ ಸಾರ್ವಜನಿಕರು ವಾಸಿಸುವ ಮನೆಗಳಿದ್ದು, ಸಾರ್ವಜನಿಕರು ಶಾಲೆಯ ಕಾಂಪೌಂಡ್ಗೆ ತ್ಯಾಜ್ಯ ಪದಾರ್ಥಗಳನ್ನು ಸುರಿದು ತಿಪ್ಪೇಗುಂಡಿ ನಿರ್ಮಾಣವಾಗಿದ್ದು, ಇದರಿಂದ ಅನೈರ್ಮಲ್ಯ ಉಂಟಾಗಿದೆ.
ವಿದ್ಯಾರ್ಥಿನಿಯರ ಹಾಗೂ ಶಿಕ್ಷಕಿಯರ ಹಿತದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾದರೂ ಶೌಚಾಲಯವನ್ನು ಈ ಕೂಡಲೇ ನಿರ್ಮಿಸಿ ಶಾಲೆಯಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಲು ಸಹಕರಿಸಬೇಕಾಗಿದೆ.



ಪುಂಡ ಹುಡುಗರ ಕಾಟ
ಶೌಚಾಲಯವನ್ನು ಎಷ್ಟು ಸಾರಿ ಸ್ವಚ್ಛತೆ ಮಾಡಿದರೂ ಕೆಲವು ಸಾರ್ವಜನಿಕ ಪುಂಡ ಹುಡುಗರಿಂದ ಬಾರಿ ತೊಂದರೆಯಾಗುತ್ತಿದೆ. ಕಿಟಕಿ ಬಾಗಿಲು ಮುರಿಯುತ್ತಾ ಕಲ್ಲುಗಳನ್ನು ತುಂಬುತ್ತಿರುವುದರಿಂದ ಉಪಯೋಗಿಸುತ್ತಿರುವ ಶೌಚಾಲಯವನ್ನು ಉಪಯೋಗಕ್ಕೆ ಬಾರದಂತೆ ಮಾಡುತ್ತಿದ್ದಾರೆ. ಹಾಗಾಗಿ ಶಾಲೆಯ ವತಿಯಿಂದ ಹಣ ಖರ್ಚಾಗುತ್ತಿದೆಯೇ ಹೊರೆತು ಬಳಕೆ ಮಾಡಲಾಗುತ್ತಿಲ್ಲ.
 ವೆಂಕಟೇಶ್,  ಭೇರ್ಯ ಶಾಲೆ ಮುಖ್ಯ ಶಿಕ್ಷಕ



ಯುವಕರಿಂದ ತೊಂದರೆ
ಗ್ರಾಮದ ದೊಡ್ಡ ದೊಡ್ಡ ಹುಡುಗರು ಇಲ್ಲಿ ಕ್ರಿಕೆಟ್ ಇತ್ಯಾದಿ ಆಟಗಳನ್ನು ಆಡುತ್ತಾ ತೊಂದರೆ ಕೊಡುತ್ತಿದ್ದಾರೆ. ಕೇಳಿದರೆ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಶೌಚಾಲಯಗಳ ದುರಸ್ತಿಯಾಗಲು ಈ ಪುಂಡು ಹುಡುಗರೇ ಕಾರಣರಾಗಿದ್ದಾರೆ. ಆದ್ದರಿಂದ ನಮ್ಮಗಳಿಗೆ ಶೌಚಾಲಯ ಸೌಲಭ್ಯವಿಲ್ಲದೆ ಬಯಲು ಕಡೆ ಹೋಗುವ ವ್ಯವಸ್ಥೆ ಇದೆ. ದಯಮಾಡಿ ಸಂಬಂಧಪಟ್ಟವರು ಶೌಚಾಲಯ ಕಲ್ಪಿಸಿಕೊಡಬೇಕೆಂದು ಕೋರುತ್ತೇವೆ.
 7ನೇ ತರಗತಿ, ವಿದ್ಯಾರ್ಥಿನಿಯರು



ಸಮಸ್ಯೆ ಪರಿಹರಿಸಿ
ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದೆವೆ ಆದರೆ ಶಾಲೆಗೆ ಡಿ.ದರ್ಜೆ ನೌಕರರ ಕೊರತೆ ಇರುವುದರಿಂದ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ.  ಶೌಚಾಲಯ ಮತ್ತು ಕಾಂಪೌಂಡ್ ನಿರ್ಮಿಸಲು ಯಾವ ಅಧಿಕಾರಿಯೂ ಮುಂದಾಗುತ್ತಿಲ್ಲ, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಇರುವ ಸಮಸ್ಯೆ ಪರಿಹರಿಸಿ ಕೊಡುವಂತೆ ಮನವಿ.
 ಅಭಿ, 7ನೇ ತರಗತಿ ವಿದ್ಯಾರ್ಥಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.