ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವಾಗ ಎಚ್ಚರವಿರಲಿ
ಮೈಸೂರು: ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವಾಗ ಸರ್ಕಾರವಾಗಲಿ ಅಥವಾ ಸರ್ಕಾರೇತರ ಸಂಸ್ಥೆಗಳಾಗಲಿ ಎಚ್ಚರ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಜೆ. ಸುರೇಶ್ ಹೇಳಿದರು.
ಕೇಂದ್ರ ಗೃಹ ಸಚಿವಾಲಯ, ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಬೆಂಗಳೂರಿನ ನೆಹರು ಯುವ ಕೇಂದ್ರ ಸಂಘಟನೆ ಮತ್ತು ನೆಹರು ಯುವ ಕೇಂದ್ರ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಬುಧವಾರ ಮುಕ್ತ ಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ 6ನೇ ರಾಷ್ಟ್ರೀಯ ಬುಡಕಟ್ಟು ಯುವಜನ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರವು ಜಾಗತೀಕರಣ, ತಂತ್ರಜ್ಞಾನದ ಭರಾಟೆಗೆ ಒಳಗಾಗಿರುವುದರಿಂದ ಕ್ಷಿಪ್ರತೆಯಿಂದ ಚಲಿಸುತ್ತಿದೆ. ಅದಕ್ಕೆ ಇತ್ತೀಚೆಗೆ ನಡೆದ ದೆಹಲಿ ಚುನಾವಣೆ ಸೂಕ್ತ ಉದಾಹರಣೆ. ಆದಿವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದೆಂದರೆ ನಗರಕ್ಕೆ ತರುವುದು ಎಂಬಂತಾಗಿದೆ. ಹೀಗೆ ಕರೆ ತರುವಾಗ ಸರ್ಕಾರ, ಎನ್ಜಿಒ, ಮಾಧ್ಯಮಗಳು ಜತನದಿಂದ ಕರೆತರಬೇಕು. ಕಾಡಿನ ಪರಿಸರದಲ್ಲಿ ಬೆಳೆದ ಆದಿವಾಸಿಗಳು ನಗರೀಕರಣಕ್ಕೆ ಹೊಂದಿಕೆಯಾಗದೆ ತುಮುಲಗಳಿಂದ ಬದುಕುವ ಸ್ಥಿತಿ ಅನುಭವಿಸುತ್ತಾರೆ ಎಂದರು.
ಎಚ್.ಡಿ. ಕೋಟೆಯ ಹಾಡಿಯೊಂದರಲ್ಲಿ ಬೆಳೆದಿದ್ದ ರಾಜೇಶ್ ಎಂಬ ಯುವಕ ದೃಶ್ಯ ಮಾಧ್ಯಮದ ಪ್ರಭಾವಕ್ಕೆ ಒಳಗಾಗಿ ತನ್ನ ಸತ್ವವನ್ನು ಕಳೆದುಕೊಂಡ. ಆ ಕ್ಷೇತ್ರದಲ್ಲಿ ಜೀವಿಸಲಾಗದೆ ಇಹಲೋಕವನ್ನೆ ತ್ಯಜಿಸಿದ. ಹಾಗೆ ಬಿಳಿಗಿರಿರಂಗನ ಬೆಟ್ಟದ ಸೋಲಿಗರು ಬದಲಾಗಿದ್ದಾರೆ. ಆದ್ದರಿಂದ ಪತ್ರಿಕಾ ಮಾಧ್ಯಮವನ್ನು ಹೊರತುಪಡಿಸಿ ದೃಶ್ಯ ಮಾಧ್ಯಮ ಎಚ್ಚರಿಕೆಯಿಲ್ಲದೆ ಇಂತಹ ಸಂದಿಗ್ಧ ಸ್ಥಿತಿಯನ್ನು ತಂದೊಡ್ಡಿದೆ ಎಂದು ಅವರು ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಿರಿಯ ಉಪನಿರ್ದೇಶಕ ಡಾ.ಕಾ. ರಾಮೇಶ್ವರಪ್ಪ ಮಾತನಾಡಿ, ಪ್ರಜಾಪ್ರಭುತ್ವ ಅಳವಡಿಸಿಕೊಂಡಿರುವ ನಮ್ಮ ದೇಶದಲ್ಲಿ ಸಂವಿಧಾನದತ್ತವಾಗಿರುವ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ. ಸಮಾನತೆ, ಶಿಕ್ಷಣದಿಂದ ವಂಚಿತರಾಗಿರುವ ಆದಿವಾಸಿ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಬುಡಕಟ್ಟು ಜನರು ದೇಶ ಸುತ್ತಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಬಹುತೇಕ ಶಿಕ್ಷಣದಿಂದ ವಂಚಿತರಾದ ಬಡುಕಟ್ಟಿನ ಯುವಜನತೆ ಈಗ ದೇಶ ಸುತ್ತಿ ತಮ್ಮ ಜ್ಞಾನ ವೃದ್ಧಿಸಿಕೊಳ್ಳುತ್ತಿದ್ದಾರೆ. ಆಧುನಿಕ ಯುಗದಲ್ಲಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲ ಜ್ಞಾನ ಮತ್ತು ಸಂಘರ್ಷದ ಮಾರ್ಗವನ್ನು ಅನುಸರಿಸಬೇಕು. ಜತೆಗೆ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬುಡಕಟ್ಟು ಸಂಸ್ಕೃತಿ ಅನಾವರಣ: ಬುಡಕಟ್ಟು ಯುವಜನ ವಿನಿಮಯ ಕಾರ್ಯಕ್ರಮದ ಪ್ರತಿನಿಧಿಗಳ ಸ್ವಾಗತ ಮತ್ತು ಸಂವಾದದಲ್ಲಿ ಬುಧವಾರ ಬುಡಕಟ್ಟು ಸಂಸ್ಕೃತಿ ಅನಾವರಣಗೊಂಡಿತು. ಒರಿಸ್ಸಾ, ಬಿಹಾರ, ಛತ್ತೀಸ್ಗಡ, ಜಾರ್ಖಂಡ್ನಿಂದ ಆಗಮಿಸಿದ್ದ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮೂಲ ಸಂಸ್ಕೃತಿಯನ್ನು ಬಿಂಬಿಸಿದರು. ಹಾಡು, ಕುಣಿತ, ತತ್ವಪದ, ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
ನೆಹರು ಯುವ ಕೇಂದ್ರದ ಸಲಹಾ ಸಮಿತಿ ಸದಸ್ಯ ಪಿ.ರಾಜು, ಸಂಯೋಜಕರಾದ ಜಿ.ಟಿ.ನಾರಾಯಣಗೌಡ, ಜಸಿಂತಾ ಡಿಸೋಜಾ, ಚಿಕ್ಕಲಿಂಗೇಗೌಡ, ಹಿರೇಮಠ್, ಭಾರತ್ ಸೇವಾದಳದ ಮಂಜುನಾಥ್ ಇದ್ದರು. ಜಿಲ್ಲಾ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್ ಸ್ವಾಗತಿಸಿದರು.
ಯುವಜನತೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಾವೇ ಉದಾಹರಣೆಯಾಗಿದ್ದೇವೆ. ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶಿಕ್ಷಣದೊಂದಿಗೆ ಶೌಚಾಲಯದ ಮಹತ್ವವನ್ನು ಸಾರುತ್ತಿದ್ದೇವೆ. ಇದು ದೇಶಾದ್ಯಂತ ವಿಸ್ತರಣೆಯಾಗಬೇಕು.
- ಚೈತ್ರಕುಮಾರಿ, ಬಿಹಾರ,
ಐದು ದಿನಗಳ ಹಿಂದೆಯೇ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿ ಸುತ್ತಾಡಿದೆವು. ಈ ಊರು ನಮಗೆ ಬಹಳ ಇಷ್ಟವಾಯಿತು.
- ಸಪ್ನಾ, ಜಾರ್ಖಂಡ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

