ಮೈಸೂರು

ಮೊದಲ ಮಾಲ್ ಈಗ ಶಿಕ್ಷಣ ಸಮುಚ್ಚಯ

Published On :

ಮೈಸೂರು: ಒಂದು ಕಾಲದಲ್ಲಿ ಅರಮನೆಯ ಉಗ್ರಾಣವಾಗಿ, ಬಳಿಕ ಅರಮನೆ ಆಸ್ಪತ್ರೆಯಾಗಿ ಮತ್ತು ಮೊದಲ ಮಾಲ್ (ಸೂಪರ್ ಮಾರ್ಕೆಟ್) ಆಗಿದ್ದ ಕಟ್ಟಡ ಈಗ ಶಿಕ್ಷಣ ಸಮುಚ್ಛಯವಾಗಿ ರೂಪಾಂತರಗೊಂಡಿದೆ.
ಸಯ್ಯಾಜಿರಾವ್ ರಸ್ತೆಯಲ್ಲಿನ ಬನುಮಯ್ಯ ಶಿಕ್ಷಣ ಸಂಸ್ಥೆಗೆ ಸೇರಿದ ಈ ಕಟ್ಟಡಕ್ಕೆ ಈಗ ನೂರು ವರ್ಷ. ಪಾರಂಪರಿಕ ಕಟ್ಟಡ ಎಂಬ ಹಣೆಪಟ್ಟಿಯೂ ಬಿದ್ದಿದೆ.
ಆದರೆ ತೀವ್ರ ದುಸ್ಥಿತಿಯಲ್ಲಿದ್ದ ಕಟ್ಟಡವನ್ನು ಇತ್ತೀಚೆಗಷ್ಟೆ 45 ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಲಾಗಿದೆ. ಮೈಸೂರು ವಿವಿಯಿಂದ ಅನುಮತಿ ಪಡೆದು 2014-15ನೇ ಸಾಲಿನಿಂದ ಎಂಕಾಂ ತರಗತಿ ತೆರೆಯಲು ಸಂಸ್ಥೆ ತೀರ್ಮಾನಿಸಿದೆ.
ನಗರದಲ್ಲಿ ಬನುಮಯ್ಯ ಸಂಸ್ಥೆ ದೊಡ್ಡ ವಿದ್ಯಾಸಂಸ್ಥೆ. ಸಂಸ್ಥೆಯ ಇತಿಹಾಸವನ್ನು ಈ ಕಟ್ಟಡವೇ ಹೇಳುತ್ತದೆ. ಪಾರಂಪರಿಕ ಕಟ್ಟಡದಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮಹಾರಾಜ, ಯುವರಾಜ, ಮಹಾರಾಣಿ ಕಾಲೇಜು, ಅರಸು ಬೋರ್ಡಿಂಗ್ ಶಾಲೆ ಹೊರತುಪಡಿಸಿದರೆ, ಖಾಸಗಿ ಒಡೆತನದಲ್ಲಿರುವ ಬನುಮಯ್ಯ ಶಿಕ್ಷಣ ಸಂಸ್ಥೆ ಮಾತ್ರ.
ಕಟ್ಟಡದ ಇತಿಹಾಸ: ಮೈಸೂರು ಮಹಾರಾಜರು ಈ ಕಟ್ಟಡವನ್ನು ಮೊದಲು ಕಟ್ಟಿಸಿದ್ದು ಅರಮನೆಯ ಉಗ್ರಾಣಕ್ಕಾಗಿ. ಅರಮನೆಗೆ ಅಗತ್ಯವಿರುವ ಎಲ್ಲ ರೀತಿಯ ದವಸ- ಧಾನ್ಯಗಳನ್ನು ಈ ಕಟ್ಟಡದಲ್ಲಿ ಸಂಗ್ರಹಿಸಲಾಗುತ್ತಿತ್ತು. ಕಾಲಾನಂತರ ಮಹಾರಾಜರು ಉಗ್ರಾಣವನ್ನು ಬೇರೆಡೆಗೆ ಸ್ಥಳಾಂತರಿಸಿ, ಆ ಕಟ್ಟಡದಲ್ಲಿ ಅರಮನೆ ಆಸ್ಪತ್ರೆ ತೆರೆದರು. ಬಡವರು ಮತ್ತು ಸಾರ್ವಜನಿಕರಿಗಾಗಿ ತೆರೆದ ಈ ಆಸ್ಪತ್ರೆ ಬಹು ವರ್ಷಗಳ ಕಾಲ ನಡೆಯಿತು.
ಬಳಿಕ 1972ರಲ್ಲಿ ಜಯಚಾಮರಾಜ ಒಡೆಯರ್ ಅವರಿಂದ ಧರ್ಮಪ್ರಕಾಶ ಬನುಮಯ್ಯ ಅವರು ಈ ಕಟ್ಟಡವನ್ನು ಖರೀದಿಸಿದರು. ಈ ಕಟ್ಟಡ ಸೇರಿದಂತೆ ಆ ಸಾಲಿನಲ್ಲಿರುವ ಇತರ ಕಟ್ಟಡಗಳಿಗೂ ಬಹಳ ಬೇಡಿಕೆ ಇತ್ತು. ಸಾಕಷ್ಟು ಮಂದಿ ಕಟ್ಟಡ ಖರೀದಿಗೆ ಮುಂದಾಗಿದ್ದರು. ಆದರೆ ಮಹಾರಾಜರು ಆ ಎಲ್ಲ ಕಟ್ಟಡಗಳನ್ನೂ ಬನುಮಯ್ಯ ಅವರಿಗೆ ಮಾರಿದರು.
ಮೊದಲ ಮಾಲ್: ಆರಂಭದ ಕೆಲ ದಿನಗಳವರೆಗೆ ಅಲ್ಲಿ ಪ್ರೌಢಶಾಲೆ ನಡೆಯುತ್ತಿತ್ತು. ಬಳಿಕ ಅದನ್ನು ಈಗಿನ ಬನುಮಯ್ಯ ಪ್ರೌಢಶಾಲೆ ಆವರಣಕ್ಕೆ ಸ್ಥಳಾಂತರಿಸಲಾಯಿತು. ಆಗ ಸಂಸ್ಥೆಗೆ ಉಂಟಾದ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಜನತಾ ಬಜಾರ್‌ನವರಿಗೆ ಆ ಕಟ್ಟಡವನ್ನು ಬಾಡಿಗೆಗೆ ನೀಡಲಾಯಿತು.
ನಮ್ಮ ಜನರಿಗೆ ಮಾಲ್ ಸಂಸ್ಕೃತಿಯೇ ತಿಳಿಯದಿದ್ದ ಕಾಲದಲ್ಲಿ ಅಂದರೆ 1983-84ರ ಸುಮಾರಿನಲ್ಲಿ ಜನತಾ ಬಜಾರ್‌ನವರು ಸಾರ್ವಜನಿಕರು ಪ್ರತಿನಿತ್ಯ ಬಳಸುವ ಅನೇಕ ಗೃಹೋಪಯೋಗಿ ವಸ್ತುಗಳು, ದಿನಸಿ ಸಾಮಗ್ರಿಗಳು, ಬಟ್ಟೆ, ಸೋಪು, ಮುಂತಾದ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಮಳಿಗೆ ಆರಂಭಿಸಿದರು.
ಆದರೆ ನಾಗರೀಕತೆ ಬೆಳೆದಂತೆ ಹಲವರು ಜನತಾ ಬಜಾರ್ ಮರೆತರು. ಕಟ್ಟಡ ದಿನೆ ದಿನೆ ಕೃಶವಾಗತೊಡಗಿತು. ಇದನ್ನು ಅರಿತ ಬನುಮಯ್ಯ ಸಂಸ್ಥೆಯವರು ಜನತಾ ಬಜಾರ್ ಅವರಿಂದ ಕಟ್ಟಡವನ್ನು ತಮ್ಮ ಸುಪರ್ದಿಗೆ ಪಡೆದು ಈಗ ಕಟ್ಟಡವನ್ನು ದುರಸ್ತಿ ಪಡಿಸಿದ್ದಾರೆ. ಕಟ್ಟಡದ ಮೂಲ ವಿನ್ಯಾಸಕ್ಕೆ ಧಕ್ಕೆ ಆಗದಂತೆ, ಪಾರಂಪರಿಕತೆಗೆ ತೊಂದರೆ ಆಗದಂತೆ ನೋಡಿಕೊಂಡಿರುವುದಾಗಿ ಸಂಸ್ಥೆಯ ಅಧ್ಯಕ್ಷ ಡಾ.ವಿ.ಬಿ. ಜಯದೇವ ಕನ್ನಡಪ್ರಭಕ್ಕೆ ತಿಳಿಸಿದರು.



-ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.