ತವರಿನ ಮೇಲೆ ಒಲವು ತೋರಿದ ಸಿದ್ದು
ಮೈಸೂರು: ಮುಖ್ಯಮಂತ್ರಿಯಾಗಿ ಸತತ ಎರಡನೇ ಮಂಡಿಸಿದ ಸಿದ್ದರಾಮಯ್ಯ ಅವರು ತವರು ಮೈಸೂರು ಜಿಲ್ಲೆಯ ಮೇಲೆ ಮತ್ತೊಮ್ಮೆ ಒಲವು ತೋರಿದ್ದಾರೆ. ಆ ಮೂಲಕ ಕಳೆದ ಮೂರು ದಶಕಗಳಿಂದ ರಾಜಕೀಯವಾಗಿ ತಮ್ಮನ್ನು ಬೆಳೆಸಿದ ಜಿಲ್ಲೆಯ ಋಣ ತೀರಿಸಲು ಮುಂದಾಗಿದ್ದಾರೆ.
ಈ ಹಿಂದೆ ಹಣಕಾಸು ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಏಳು ಬಾರಿ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಆಗಲೂ ಜಿಲ್ಲೆಯ ಅಭಿವೃದ್ಧಿಗೆ ಗಮನ ಹರಿಸಿದ್ದರು. ಇದೀಗ ರಾಜ್ಯದ ಆಡಳಿತ ಚುಕ್ಕಾಣಿಯೇ ತಮ್ಮ ಕೈಯಲ್ಲಿ ಇರುವುದರಿಂದ ಕಳೆದ ಬಾರಿಯಂತೆ ಈ ಬಾರಿಯೂ ಮೈಸೂರಿಗೆ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದಾರೆ.
ರಾಜರ ಕಾಲದಲ್ಲಿ ಆರಂಭವಾದ ಶ್ರೀ ಕೃಷ್ಣರಾಜೇಂದ್ರ ಆಸ್ಪತ್ರೆ ಮೈಸೂರಿನ ಸುತ್ತಮುತ್ತಲಿನ ಜಿಲ್ಲೆಗಳಿಗೆ ದೊಡ್ಡಾಸ್ಪತ್ರೆ ಎಂದೇ ಖ್ಯಾತಿ. ಈಗ ಅಲ್ಲಿಯೂ ರೋಗಿಗಳ ಒತ್ತಡ. ಹೀಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬುದು ಸಂಸದ ಎಚ್. ವಿಶ್ವನಾಥ್, ಶಾಸಕರಾದ ವಾಸು, ಸೋಮಶೇಖರ್, ತನ್ವೀರ್ ಸೇಠ್ ಅವರ ನೇತೃತ್ವದಲ್ಲಿ ಐಸಿಐಸಿಎಂ, ಮೈಸೂರು ವಾಣಿಜ್ಯಮತ್ತು ಕೈಗಾರಿಕಾ ಸಂಸ್ಥೆ, ಮೈಸೂರು ಕೈಗಾರಿಕಾ ಸಂಘಟನೆ ಮೊದಲಾದವರ ಬೇಡಿಕೆಯಾಗಿತ್ತು. ಇದಕ್ಕೆ ಸ್ಪಂದನೆ ಸಿಕ್ಕಿ ಮೈಸೂರಿನಲ್ಲಿ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಲಿದೆ.
ಮೈಸೂರು ಪಾರಂಪರಿಕ ನಗರ. ಇಲ್ಲಿರುವ ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ, ಇರ್ವಿನ್ ರಸ್ತೆ, ದಸರಾ ಮಾರ್ಗದ ರಸ್ತೆಗಳ ಅಭಿವೃದ್ಧಿ, ಹಾರ್ಡಿಂಜ್ ವೃತ್ತದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ 100 ಕೋಟಿ ವಿಶೇಷ ನೆರವಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಿಸಲಾಗಿದೆ. ಇರ್ವಿನ್ ರಸ್ತೆ ವಿಸ್ತರಣೆಗೆ ಪಾಲಿಕೆ ಸದಸ್ಯೆ ರಾಜಲಕ್ಷ್ಮಿ ಶಿವಣ್ಣ ಹಾಗೂ ಮಾಜಿ ಸದಸ್ಯ ಎಂ. ಶಿವಣ್ಣ ಗಮನ ಸೆಳೆದಿದ್ದರು.
ಮೈಸೂರು ಜಿಲ್ಲಾಧಿಕಾರಿ ಕಚೇರಿಯೂ ಪಾರಂಪರಿಕ ಕಟ್ಟಡ. ಆದರೆ ಅಲ್ಲಿ ಎಲ್ಲ ಜಿಲ್ಲಾ ಕಚೇರಿಗಳಿಗೆ ಸ್ಥಳಾವಕಾಶ ಇಲ್ಲ. ಹೀಗಾಗಿ ಲಲಿತ ಮಹಲ್ ಹೆಲಿಪ್ಯಾಡ್ ಬಳಿ 25 ಎಕರೆ ಪ್ರದೇಶದಲ್ಲಿ ನೂತನ ಜಿಲ್ಲಾ ಸಂಕೀರ್ಣ ನಿರ್ಮಾಣವಾಗಲಿದೆ. ಫೆ.2ರಂದು ಸ್ವತಃ ಸಿದ್ದರಾಮಯ್ಯ ಅವರೇ ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ್ದರು.
ಮೈಸೂರು ರಾಯಲ್ ಸರ್ಕೀಟ್ ಹೆಸರಿನಲ್ಲಿ ಮೈಸೂರು ಸುತ್ತಮುತ್ತಲಿನ ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಸಂಪರ್ಕಕ್ಕೆ ಕಾವೇರಿ ಪ್ರವಾಸೋದ್ಯಮ ಪ್ರಾಧಿಕಾರ ರಚಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅಲ್ಲದೇ ಮೈಸೂರಿನಿಂದ ಆರು ಐಷಾರಾಮಿ ಬಸ್ಸುಗಳ ಸಂಚಾರ ಪ್ರಕಟಿಸಿದ್ದಾರೆ. ಪಂಚಲಿಂಗ ದರ್ಶನಕ್ಕೆ ಹೆಸರುವಾಸಿಯಾದ ತಲಕಾಡಿನಲ್ಲಿ ಕಾವೇರಿ ಉತ್ಸವ ನಡೆಸುವುದಾಗಿ, ಮೈಸೂರು ಹಾಗೂ ಕಬಿನಿಯಲ್ಲಿ ಪ್ರವಾಸೋದ್ಯಮ ಇಂಟರ್ಪಿಟೇಷನ್ ಸೆಂಟರ್ ಆರಂಭಿಸುವುದಾಗಿ ತಿಳಿಸಿದ್ದಾರೆ.
ನಗರದ ಜೆಎಲ್ಬಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜು ಕಲಾ ಮತ್ತು ವಾಣಿಜ್ಯ, ವಿಜ್ಞಾನ ಕಾಲೇಜಾಗಿ ವಿಭಜನೆಯಾಗಿದ್ದರೂ ಸಾವಿರಾರು ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿರುವುದರಿಂದ ಜಾಗ ಕಿಷ್ಕಿಂಧೆಯಂತಾಗಿ, ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿತ್ತು. ಈ ಬಗ್ಗೆ ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರು ಉನ್ನತ ಶಿಕ್ಷಣ ಸಚಿವ ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸಪ್ರಸಾದ್ ಅವರು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರು. ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಗೋ. ಮಧುಸೂದನ್ ಮತ್ತಿತರರು ಸಹ ಇದಕ್ಕೆ ಧ್ವನಿಗೂಡಿಸಿದ್ದರು. ಇದೀಗ ಮಹಾರಾಣಿ ವಾಣಿಜ್ಯ ಕಾಲೇಜು ಮತ್ತು ಎಂಬಿಎ ಕಾಲೇಜನ್ನು ಪಡುವಾರಹಳ್ಳಿಯ ಖಾಲಿ ಜಾಗಕ್ಕೆ ಸ್ಥಳಾಂತರಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಪ್ರಕಟಿಸಿದ್ದಾರೆ. ಇತ್ತೀಚೆಗೆ ದೇಶಪಾಂಡೆ, ಶ್ರೀನಿವಾಸಪ್ರಸಾದ್ ಹಾಗೂ ವಾಸು ಅವರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಪಡುವಾರಹಳ್ಳಿ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಈ ಜಾಗ ಗ್ರಾಮಾಭಿವೃದ್ಧಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದ್ದರು. ಈಗ ಜಿಲ್ಲಾಡಳಿತ ಯಾವ ರೀತಿ ಮನವೊಲಿಸುತ್ತದೆ ಎಂಬುದನ್ನು ಕಾದು ನೋಡಬೇಕು.
ಮಹಾರಾಣಿ ಕಾಲೇಜಿನಂತೆ ಮಹಾರಾಣಿ ವಿದ್ಯಾರ್ಥಿನಿಲಯದಲ್ಲಿಯೂ ಜನಸಂದಣಿ. ಈ ಒತ್ತಡವನ್ನು ಕಡಿಮೆ ಮಾಡಲು ಪಕ್ಕದಲ್ಲಿರುವ ನಂಜರಾಜ ಬಹದ್ದೂರ್ ಛತ್ರದ ಖಾಲಿ ಜಾಗದಲ್ಲಿ ವಿದ್ಯಾರ್ಥಿನಿಯರ ನಿಲಯ ಆರಂಭಿಸಲಾಗುವುದು ಎಂದು ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ವೈದ್ಯಕೀಯ ಕಾಲೇಜು ಇರುವ ಕಡೆ ಹಾಸ್ಟೆಲ್ ಕೂಡ ಆರಂಭವಾಗಲಿದೆ.
ಮೈಸೂರು ಜಿಲ್ಲೆಯಿಂದ ಡಿ. ದೇವರಾಜ ಅರಸು ಅವರ ನಂತರ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು 7 ಜಿಲ್ಲೆ ಹಾಗೂ 50 ತಾಲೂಕು ಕೇಂದ್ರಗಳಲ್ಲಿ ಅರಸು ಭವನಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅರಸು ಅವರ ಕರ್ಮಭೂಮಿ ಹುಣಸೂರಿನಲ್ಲಿ ಅರಸು ಭವನ ನಿರ್ಮಾಣಕ್ಕೆ 5 ಕೋಟಿ ಘೋಷಿಸಿದ್ದಾರೆ.
ಆನೆ- ಮಾನವ ಸಂಘರ್ಷ ತಡೆಗೆ ಕ್ರಮ
ಮೈಸೂರು ಜಿಲ್ಲೆಯಲ್ಲಿ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನಗಳು ಬರುತ್ತವೆ. ಹೀಗಾಗಿ ಕಾಡಂಚಿನ ಗ್ರಾಮಗಳಲ್ಲಿ ಸದಾ ಮಾನವ- ವನ್ಯಜೀವಿಗಳ ನಡುವೆ ಸಂಘರ್ಷ. ಅದರಲ್ಲೂ ಆನೆಗಳ ಹಾವಳಿ ವಿಪರೀತ. ಇವುಗಳ ತಡೆಗೆ 212 ಕೋಟಿ ವೆಚ್ಚದಲ್ಲಿ ಹಳೆಯ ರೇಲ್ವೆ ಹಳಿಗಳಿಂದ ಕಟೆಕಟೆ ನಿರ್ಮಿಸಲಾಗುವುದು. ಅಲ್ಲದೇ ಸೌರಬೇಲಿ ನಿರ್ಮಿಸಿಕೊಳ್ಳುವ ರೈತರಿಗೆ ಶೇ.50ರಷ್ಟು ಸಹಾಯಧನ ಕೂಡ ಸಿಗಲಿದೆ. ಬೆಳೆ ಹಾನಿಯ ಪರಿಹಾರ ಮೊತ್ತವನ್ನು ಗರಿಷ್ಠ 50,000ದಿಂದ 75,000ಕ್ಕೆ ಹೆಚ್ಚಿಸಲಾಗಿದೆ.
ನೀರಾವರಿ ಯೋಜನೆಗಳು
ಎಚ್.ಡಿ. ಕೋಟೆ ತಾಲೂಕಿನ ನುಗು ಯೋಜನೆ, ಹುಣಸೂರು ತಾಲೂಕು ಹನಗೋಡಿನ ಅಣೆಕಟ್ಟು ನವೀಕರಣ, ತಾರಕ, ಹಾರಂಗಿ, ಕಬಿನಿ ಎಡ ಮತ್ತು ಬಲದಂಡೆ ನಾಲೆಗಳ ಲೈನಿಂಗ್ ಕಾಮಗಾರಿ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆಲವು ಕೆರೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.
ಇತರೆ ಯೋಜನೆಗಳು
ಜಿಲ್ಲಾ ಕೇಂದ್ರದಲ್ಲಿ ಆಯುಷ್ ಹಾಗೂ ಸಮುದಾಯ ಆರೋಗ್ಯ ಕೇಂದ್ರ. ಮಹಿಳಾ ವಿಶೇಷ ಚಿಕಿತ್ಸಾ ಘಟಕ, ಒಂದು ತಾಲೂಕು ಕೇಂದ್ರದಲ್ಲಿ ಡಯಾಲಸಿಸ್ ಘಟಕ.
ಕೊಳಚೆ ಪ್ರದೇಶಗಳ ಅಭಿವೃದ್ಧಿ ಮತ್ತು ಮನೆಗಳ ನಿರ್ಮಾಣ, ಈ ಹಿಂದೆ ಪಡೆದಿದ್ದ ಮನೆ ನಿರ್ಮಾಣ ಸಾಲ ಮನ್ನಾ.
ವಿಶೇಷ ಮಕ್ಕಳ ಶಾಲೆಗೆ ನೀಡುತ್ತಿರುವ ಅನುದಾನ ದುಪ್ಪಟ್ಟು. ಈ ಬಗ್ಗೆ ಮೈಸೂರಿನ ನಿಯೋಗ ಗಮನ ಸೆಳೆದಿತ್ತು.
ಮೈಸೂರಿನಲ್ಲಿ ತಾಂಡಾ ಅಭಿವೃದ್ಧಿ ಕಚೇರಿ ಮತ್ತು ಸಮುದಾಯ ಭವನ ನಿರ್ಮಾಣ.
ಮೈಸೂರಿನಲ್ಲಿ ವಸತಿ ಶಾಲೆ, ಸ್ನಾತಕೋತ್ತರ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಹಾಸ್ಟೆಲ್ಗಳು.
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

