21ರಂದು ರೈತಸಂಘದಿಂದ ಹೆದ್ದಾರಿ ತಡೆ
ಮೈಸೂರು: ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಹತ್ತಿ ಬೆಳೆ ಕೈಕೊಟ್ಟಿದ್ದು ಸರ್ಕಾರ ಕಡಿಮೆ ಪರಿಹಾರ ನೀಡಿರುವುದನ್ನು ಖಂಡಿಸಿ ಹಾಗೂ ಕಬ್ಬು ಬೆಳೆಗೆ ಉತ್ತಮ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಫೆ.21ರಂದು ಬೆಂಗಳೂರು- ಪೂನಾ ರಾ.ಹೆ. (ಎನ್ಎಚ್-4) ತಡೆ ಹಮ್ಮಿಕೊಳ್ಳಲಾಗಿದೆ.
ಮಹಿಕೋ, ಕಾವೇರಿ, ಕನಕ ಕಂಪನಿಗಳು ಹಾವೇರಿ, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಕೊಪ್ಪಳ ಸೇರಿದಂತೆ ಇನ್ನಿತರ ಜಿಲ್ಲೆಗಳ ರೈತರಿಗೆ ಕಳಪೆ ಬೀಜಗಳನ್ನು ಪೂರೈಸಿವೆ. ಈ ಬೀಜಗಳನ್ನು ಬಿತ್ತನೆ ಮಾಡಿದ ರೈತರಿಗೆ ಫಸಲು ಕೈಗೆ ಬಂದಿಲ್ಲ. ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ ನಷ್ಟವಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೆ ಪ್ರತಿ ಎಕರೆಗೆ ಕೇವಲ 1800 ಪರಿಹಾರ ನೀಡುವುದಾಗಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರದಿಂದ ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಅಪ್ಪ ಕೃಷಿ ಸಚಿವರಾಗಿದ್ದರು ಎಂಬ ಕಾರಣಕ್ಕೆ ಕೃಷಿಯ ಬಗ್ಗೆ ಕನಿಷ್ಠ ಜ್ಞಾನ ಇಲ್ಲದ ಕೃಷ್ಣ ಭೈರೇಗೌಡರು ಅದೇ ಖಾತೆಯ ಮಂತ್ರಿಯಾಗಿ ರೈತರ ಬೇಡಿಕೆಗಳ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಒಂದು ಎಕರೆಯಲ್ಲಿ ಹತ್ತಿ ಬೆಳೆಯಲು ರೈತ 2200 ಖರ್ಚು ಮಾಡುತ್ತಾನೆ. ಜತೆಗೆ ಕುಟುಂಬಸ್ಥರೆಲ್ಲ ಸೇರಿ ವರ್ಷಪೂರ್ತಿ ಹೊಲದಲ್ಲಿ ದುಡಿಯುತ್ತಾರೆ. ಕೂಲಿ ಎಲ್ಲ ಸೇರಿಸಿ ರೈತನ ಮೇಲೆ ಹೆಚ್ಚು ಖರ್ಚು ಬೀಳುವುದರಿಂದ ಸರ್ಕಾರ ಪ್ರತಿ ಎಕರೆಗೆ 30 ಸಾವಿರ ಪರಿಹಾರ ಘೋಷಿಸಬೇಕು. ಸರ್ಕಾರದಿಂದ ಭರಿಸಲು ಸಾಧ್ಯವಾಗದಿದ್ದರೆ ಬೀಜೋತ್ಪಾದನೆ ಮಾಡಿ ಪೂರೈಸಿರುವ ಮಹಿಕೋ, ಕಾವೇರಿ, ಕನಕ ಕಂಪನಿಗಳಿಂದ ಭರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, ಫೆ. 21ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಮ್ಮಿಕೊಳ್ಳುವ ಚಳವಳಿಯಲ್ಲಿ ಎಲ್ಲ ರೈತರು ಭಾಗವಹಿಸಿ ಬೆಂಬಲ ಸೂಚಿಸಬೇಕು ಎಂದು ಕೋರಿದರು.
ಕಬ್ಬು ಬೆಳೆಗೆ ಬೆಲೆ ನೀಡಿ: ಇತ್ತೀಚೆಗೆ ಕಬ್ಬು ಬೆಳೆಗಾರರ ಸಭೆ ನಡೆಸಿದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿಗೆ ತಪ್ಪಿದ್ದು ಕಬ್ಬಿಗೆ ಬೆಂಬಲ ಕೊಡಿಸುವಲ್ಲಿ ಎಡವಿದೆ. ಬೆಳಗಾವಿ ಅಧಿವೇಶನದಲ್ಲಿ ಒಬ್ಬ ರೈತನನ್ನೇ ಕಳೆದುಕೊಳ್ಳಬೇಕಾಯಿತು. ಸರ್ಕಾರಕ್ಕೆ ತಾಕತ್ತು ಇದ್ದಲ್ಲಿ ಕೂಡಲೇ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಿ ರೈತರಿಗೆ ನ್ಯಾಯಯುತ ಬೆಲೆ ಕೊಡಿಸಬೇಕು. ಹಿಂದೆ ರೈತ ಸಂಘ ನಡೆಸಿದ ಚಳವಳಿಗೆ ಸರ್ಕಾರವೇ ಕೆಳಗೆ ಉರುಳಿರುವ ಉದಾಹರಣೆಯನ್ನು ಸಿದ್ದರಾಮಯ್ಯ ಅರಿಯಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

