16ರಂದು ನೌಕರರಿಗೆ ಆರೋಗ್ಯ ತಪಾಸಣೆ
ಮೈಸೂರು: ಜಿಲ್ಲಾಡಳಿತ, ಜಿಪಂ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಫೆ.16ರಂದು ರಾಯಲ್ ಸ್ಕೂಲ್ ಆವರಣ ಬಳಿ ಇರುವ ವೈದ್ಯಕೀಯ ಕಾಲೇಜಿನಲ್ಲಿ (ಹಳೆ ವಸ್ತು ಪ್ರದರ್ಶನ ಕಟ್ಟಡ) ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರಿಗೆ ಆರೋಗ್ಯ ಉಚಿತ ತಪಾಸಣೆ ಹಾಗೂ ಸಂಜೆ ನಗೆಹನಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದರಾದ ಎಚ್. ವಿಶ್ವನಾಥ್, ಧ್ರುವನಾರಾಯಣ, ಶಾಸಕರಾದ ಕೃಷ್ಣಪ್ಪ, ವಾಸು, ತನ್ವೀರ್ ಸೇಠ್, ಸೋಮಶೇಖರ್, ದೇವೇಗೌಡ, ಚಿಕ್ಕಮಾದು, ಸಾ.ರಾ. ಮಹೇಶ್, ಮಂಜುನಾಥ್, ವೆಂಕಟೇಶ್, ಮರಿತಿಬ್ಬೇಗೌಡ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಮಹದೇವು ಭಾಗವಹಿಸುವರು ಎಂದು ಜಿಲ್ಲಾಧ್ಯಕ್ಷ ರಾಮು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಂತರ ರಕ್ತದಾನ ಶಿಬಿರವನ್ನು ಸಂಘದ ರಾಜ್ಯಾಧ್ಯಕ್ಷ ಎಲ್. ಭೈರಪ್ಪ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಸಿ. ಶಿಖಾ, ಎಸ್ಪಿ ಅಭಿನವ್ ಖರೆ, ಜಿಪಂ ಸಿಇಒ ಪಿ.ಎ. ಗೋಪಾಲ್, ಎಂಡಿಎ ಆಯುಕ್ತ ಎಸ್. ಪಾಲಯ್ಯ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಭಾಗವಹಿಸುವರು. ಸಂಜೆ 5.30ಕ್ಕೆ ಜೆ.ಕೆ. ಮೈದಾನದಲ್ಲಿ ನಡೆಯುವ ನಗೆಹನಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ನಂತರ ಪ್ರೊ.ಎಂ. ಕೃಷ್ಣೇಗೌಡ ಕಾರ್ಯಕ್ರಮ ನಡೆಸಿಕೊಡುವರು.
ಹೆಬ್ಬಾಳು ಕೊಪ್ಪಲಿನಲ್ಲಿ ಯುವಜನ ಮೇಳ
ಮೈಸೂರು: ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಕೆ.ಆರ್. ನಗರ ತಾಲೂಕಿನ ಹೆಬ್ಬಾಳು ಕೊಪ್ಪಲು ಗ್ರಾಮದಲ್ಲಿ ಫೆ. 15ರಂದು ನಡೆಸಲಾಗುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮೈಸೂರು ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಭಾವಗೀತೆ, ಗೀಗಿಪದ, ಲಾವಣಿ, ಕೋಲಾಟ, ಡೊಳ್ಳು ಕುಣಿತ, ರಂಗಗೀತೆ, ಜಾನಪದ ನೃತ್ಯ, ಸೋಬಾನೆ ಪದ, ಭಜನೆ, ಯಕ್ಷಗಾನ, ಚರ್ಮವಾದ್ಯ ಮೇಳ, ಮುಂತಾದ ಸ್ಪರ್ಧೆಗಳನ್ನು ಯುವಕ, ಯುವತಿಯರಿಗೆ ಪ್ರತ್ಯೇಕವಾಗಿ ನಡೆಸಲಾಗುವುದು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಡೆದ 2013-14ನೇ ಸಾಲಿನ ತಾಲೂಕು ಮಟ್ಟದ ಯುವಜನ ಮೇಳದಲ್ಲಿ ಸ್ಪರ್ಧಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಕೆ.ಆರ್. ನಗರ ತಾಲೂಕು ಹೆಬ್ಬಾಳಿನಲ್ಲಿ ನಡೆಯುವ ಯುವಜನ ಮೇಳದಲ್ಲಿ ಭಾಗವಹಿಸಬಹುದು. ಆಸಕ್ತರು ಫೆ.15ರ ಬೆಳಗ್ಗೆ 9ರೊಳಗೆ ಸಂಘಟಕರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕ್ರೀಡಾ ಇಲಾಖೆ ಅಥವಾ ದೂ. 0821- 2564179 ಸಂಪರ್ಕಿಸಬಹುದು.
ಆಹಾರ ಸೇವನೆಯಲ್ಲಿ ಹಿಡಿತವಿರಲಿ
ಮೈಸೂರು: ಆಹಾರ ಸೇವನೆಯಲ್ಲಿ ಹಿಡಿತವಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಹೇಳಿದರು. ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯು ಗುರುವಾರ ಏರ್ಪಡಿಸಿದ್ದ ಆರೋಗ್ಯ ರಕ್ಷಣೆ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಆಹಾರವನ್ನು ಮನಬಂದಂತೆ ತಿನ್ನಬಾರದು. ತಿಂದ ಮೇಲೆ ಚೆನ್ನಾಗಿ ಜೀರ್ಣ ಮಾಡಬೇಕು. ವೈದ್ಯರು ಹೇಳಿದಾಗ ವಾಯು ವಿಹಾರಕ್ಕೆ ಹೋಗುವ ಪರಿಪಾಠ ಹಲವರಲ್ಲಿದೆ. ಅದನ್ನು ಬಿಡಬೇಕು. ಪ್ರತಿಯೊಬ್ಬರೂ ಕ್ರೀಡಾ ಸಂಸ್ಕೃತಿ ಬೆಳೆಸಿಕೊಂಡಾಗ ಆರೋಗ್ಯ ಚೆನ್ನಾಗಿರುತ್ತದೆ ಎಂದರು. ಜೀವನದಲ್ಲಿ ಆರೋಗ್ಯವೆ ಮುಖ್ಯ. ನಾವು ಬೆಳೆಯುತ್ತ ಹೋದಂತೆ ಅನುಭವ ಪಡೆಯುತ್ತೇವೆ. ನಮ್ಮ ಅನುಭವವೆ ದೊಡ್ಡ ಆಸ್ತಿ. ಅದನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕು. ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಿಕೊಳ್ಳಬೇಕು ಎಂದರು. ಹೃದಯ ತಜ್ಞ ಡಾ. ರಾಜಗೋಪಾಲ್ ಜಂಬುನಾಥನ್, ವಿಜುರಾಜ್ ಇದ್ದರು.
ನಾಳೆಯಿಂದ ಬಯಲು ನಾಟಕೋತ್ಸವ
ಮೈಸೂರು: ಆವಿಷ್ಕಾರ ಸಂಸ್ಥೆಯು ಕೊಡಗಿನ ಗೌರಮ್ಮ ನೆನಪಿನಾರ್ಥ 4ನೇ ಬಯಲು ನಾಟಕೋತ್ಸವವನ್ನು ಫೆ.15 ಮತ್ತು 16ರಂದು ಆಯೋಜಿಸಿದೆ. ಸರಸ್ವತಿಪುರಂನ ಜವರೇಗೌಡ ಉದ್ಯಾನವನದಲ್ಲಿ ಫೆ.15ರ ಸಂಜೆ 6ಕ್ಕೆ ಈ ನಾಟಕೋತ್ಸವಕ್ಕೆ ರಂಗಕರ್ಮಿ ಶ್ರೀಮತಿ ಹರಿಪ್ರಸಾದ್ ಚಾಲನೆ ನೀಡುವರು. ಆವಿಷ್ಕಾರ ರಾಜ್ಯ ಸಮಿತಿ ಸದಸ್ಯ ಎಸ್.ಎನ್. ಸ್ವಾಮಿ, ಎಐಡಿವೈಒ ಜಿಲ್ಲಾಧ್ಯಕ್ಷ ಚಂದ್ರಶೇಖರ ಮೇಟಿ ಅಧ್ಯಕ್ಷತೆ ವಹಿಸುವರು. ಅಂದು ಸಂಜೆ 6.45ಕ್ಕೆ ತುಮಕೂರಿನ ಡಮರುಗ ರಂಗಸಂಪನ್ಮೂಲ ಕೇಂದ್ರದವರು ಬಡವನ ಬವಣೆ ನಾಟಕ ಪ್ರದರ್ಶನ ನೀಡುವರು. 7.30ಕ್ಕೆ ಅಂಕುರ ಸಾಂಸ್ಕೃತಿಕ ವೇದಿಕೆ ಪದಾಧಿಕಾರಿಗಳು ಅಪರಾಧಿ ಯಾರು ನಾಟಕ ಪ್ರದರ್ಶನ ನೀಡುವರು. ಫೆ.16ರ ಸಂಜೆ 6ಕ್ಕೆ ವಿವೇಕಾನಂದ ಪ್ರೌಢಶಾಲೆ ಮಕ್ಕಳು ಬರ ನಾಟಕವನ್ನೂ, ಸಂಜೆ 6.45ಕ್ಕೆ ಚಾಮರಾಜನಗರದ ಶಾಂತಲಾ ತಂಡದವರು ತೋಬಾ ತೇಜ್ಸಿಂಗ್ ನಾಟಕ ಪ್ರದರ್ಶಿಸುವರು. ಸಂಜೆ 7.30ಕ್ಕೆ ಆವಿಷ್ಕಾರ ಸಂಸ್ಥೆಯು ಮೋಜಿನ ಸೀಮೆಯಾಚೆ ಒಂದೂರು ಮತ್ತು ರಾತ್ರಿ 8.15ಕ್ಕೆ ರಾಜಮಾರ್ಗದ ಮ್ಯಾನ್ಹೋಲ್ ನಾಟಕವನ್ನು ಪ್ರದರ್ಶಿಸುವರು.
ಸಂಗೀತ ಸ್ಪರ್ಧೆಗೆ ಅರ್ಜಿ ಆಹ್ವಾನ
ಚಾಮರಾಜಪುರಂ ಬಡಾವಣೆಯ ಶ್ರೀರಂಜನಿ ಸಂಗೀತ ಕಲಾ ನಿಲಯವು ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ದೇವರನಾಮ ಸ್ಪರ್ಧೆ ಏರ್ಪಡಿಸಿದೆ. ಫೆ. 15ರ ಮಧ್ಯಾಹ್ನ 1.30ಕ್ಕೆ ಕೃಷ್ಣಮೂರ್ತಿಪುರಂನ ಶ್ರೀರಾಮಮಂದಿರದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಲು ಫೆ.14 ಕಡೆಯ ದಿನ. ಆಸಕ್ತರು ಪಿ.ಎಸ್. ರಂಜಿನಿ, ನಂ. 1208/1, ಚಾಮರಾಜಪುರಂ, ಗೀತಾ ರಸ್ತೆ, ಮೈಸೂರು ಅಥವಾ ಮೊ. 9902651098 ಸಂಪರ್ಕಿಸಬಹುದು.
ಕಲ್ಲಿನಿಂದ ಜಜ್ಜಿ ಯುವಕನ ಕೊಲೆ
ಯುವಕನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ, ಜಜ್ಜಿ ಕೊಲೆ ಮಾಡಿರುವ ಘಟನೆ ಬೋಗಾದಿ ವರ್ತುಲ ರಸ್ತೆಯಲ್ಲಿರುವ ಉಪ್ಪರಗಿ ಬಸಪ್ಪನ ದೇವಸ್ಥಾನದ ಬಳಿ ಗುರುವಾರ ಬೆಳಗಿನ ಜಾವ ನಡೆದಿದೆ. ಬೋಗಾದಿ ಗ್ರಾಮದ ನಿವಾಸಿ ಲೇ. ರಾಜು ಎಂಬವರ ಪುತ್ರ ನಟರಾಜ್(20) ಕೊಲೆಯಾದವನು. ಈತನು ತನ್ನ ಮಾವನಾದ ಮಂಜುನಾಥ್ ಎಂಬವರ ಕೋಳಿಫಾರಂನಲ್ಲಿ ಕೆಲಸ ಮಾಡಿಕೊಂಡಿದ್ದ. ಕೋಳಿಫಾರಂನಿಂದ ಭಾನುವಾರ ಹೋದ ನಟರಾಜ್ ವಾಪಸ್ ಬಂದಿರಲಿಲ್ಲ. ಗುರುವಾರ ಯುವಕ ಕೊಲೆ ಆಗಿರುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಜುನಾಥ್ ಮೃತನ ಗುರುತು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಠಾಣೆ ಇನ್ಸ್ಪೆಕ್ಟರ್ ವೆಂಕಟೇಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವರ್ಷದಿಂದ ವ್ಯಕ್ತಿ ನಾಪತ್ತೆ
ಅಶೋಕಪುರಂ ಠಾಣೆ ವ್ಯಾಪ್ತಿಯ ನಿವಾಸಿ ಚಿಕ್ಕತಿಮ್ಮ ಎಂಬವರ ಪುತ್ರ ದಿಲೀಪ್(31) ಒಂದು ವರ್ಷದಿಂದ ನಾಪತ್ತೆಯಾಗಿದ್ದಾರೆ. ಕಾಣೆಯಾಗಿರುವ ಪತಿ ದಿಲೀಪ್ನನ್ನು ಪತ್ತೆ ಮಾಡಿಕೊಡುವಂತೆ ಪತ್ನಿ ದೀಪಿಕಾ ತಡವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಬಲ ತೋಳಿನ ಮೇಲೆ ಚಾಮುಂಡೇಶ್ವರಿ ಮತ್ತು ಎಡಗೈ ಮೇಲೆ ಜೈ ಭೀಮ್ ಎಂಬ ಹಚ್ಚೆ ಇದೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418321, 521 ಸಂಪರ್ಕಿಸಲು ಅಶೋಕಪುರಂ ಠಾಣೆ ಎಸ್ಐ ಸಿ.ಆರ್. ಆನಂದ್ ಕೋರಿದ್ದಾರೆ.
ಇಂದು ಪ್ರತಿಭಟನೆ
ಮೈಸೂರು: ಪ್ರಜಾಶಕ್ತಿ ಆಂದೋಲನ ವೇದಿಕೆ ಪದಾಧಿಕಾರಿಗಳು ಫೆ.14ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿ ವಿವಿಧ ಸಂಘಟನೆಗಳ ಜೊತೆಗೂಡಿ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಪ್ರೌಢಶಾಲೆಗಲ್ಲಿ ಖಾಲಿ ಇರುವ ಬೋಧಕ ಹುದ್ದೆ ಭರ್ತಿ ಮಾಡುವಂತೆ ಒತ್ತಾಯಿಸಿ ಪ್ರತಿಭಟಿಸುವರು.
ಆರೋಗ್ಯ ತಪಾಸಣೆ
ಆಯುರ್ವೇದ ವೆಲ್ನೆಸ್ ಎಲೀಸಿಯಂ ಸಂಸ್ಥೆಯು ಪಿತ್ತಕೋಶದ ಕಲ್ಲು ಮತ್ತು ಮೂತ್ರಕೋಶದ ಕಲ್ಲು ಸಮಸ್ಯೆಗೆ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಶಿಬಿರವನ್ನು ಫೆ. 15, 16ರಂದು ಸಿದ್ಧಾರ್ಥನಗರದ ಬುದ್ಧಮಾರ್ಗದ ಎಲಿಸಿಯಂನಲ್ಲಿ ಆಯೋಜಿಸಿದೆ. ಹೆಚ್ಚಿನ ಮಾಹಿತಿಗೆ ಮೊ. 9980656297 ಸಂಪರ್ಕಿಸಬಹುದು.
ಪ್ರತಿಭಾ ಪುರಸ್ಕಾರ
ಸಮಾಜ ಕಲ್ಯಾಣ ಇಲಾಖೆ, ಪ. ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಗ್ರೂಪ್ ಡಿ ನೌಕರರ ಕೇಂದ್ರ ಸಂಘವು ಸರ್ಕಾರಿ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಫೆ.15ರ ಬೆಳಗ್ಗೆ 11.30ಕ್ಕೆ ನಿಲಯದ ಆವರಣದಲ್ಲಿ ಏರ್ಪಡಿಸಿದೆ. ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ಧ್ರುವನಾರಾಯಣ್ ಬಹುಮಾನ ವಿತರಿಸುವರು. ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಸಿ. ಶಿಖಾ, ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕದ ನಿರ್ದೇಶಕ ಕ್ಯಾಪ್ಟನ್ ಮಾಧವರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.ಜಿಲ್ಲಾ ಯೋಜನಾ ಸಮಿತಿ ಸಭೆ
ಜಿಲ್ಲೆಯ ಜಿಲ್ಲಾ ಯೋಜನಾ ಸಮಿತಿಯ ಸಭೆಯನ್ನು ಜಿಪಂ ಅಧ್ಯಕ್ಷ ಎಂ. ಮಹದೇವು ಅವರ ಅಧ್ಯಕ್ಷತೆಯಲ್ಲಿ ಫೆ. 21ರ ಬೆಳಿಗ್ಗೆ 11ಕ್ಕೆ ಜಿಪಂ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಸಿಇಒ ಪಿ.ಎ. ಗೋಪಾಲ್ ತಿಳಿಸಿದ್ದಾರೆ.
ಶೋಧ್ಗಂಗಾ ಜಾಗೃತಿ ಕಾರ್ಯಕ್ರಮ
ಮೈಸೂರು ವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಫೆ.15ರ ಬೆಳಗ್ಗೆ 11ಕ್ಕೆ ರಾಣಿಬಹದ್ದೂರ್ ಸಭಾಂಗಣದಲ್ಲಿ ಶೋಧ್ಗಂಗಾ ಕುರಿತು ಒಂದು ದಿನ ಬಳಕೆದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ.
ಯೋಗ ತರಬೇತಿ
ಸಂಧ್ಯಾ ಸುರಕ್ಷಾ ಟ್ರಸ್ಟ್ ವತಿಯಿಂದ ಜಿಲ್ಲಾ ಬ್ರಾಹ್ಮಣ ಮಹಾಸಭಾವು ಬೆಳಗ್ಗೆ 6.30ರಿಂದ 7.30ರವರೆಗೆ ಯೋಗಾಸನ ತರಬೇತಿ ಮತ್ತು ಪ್ರವಚನ ಕಾರ್ಯಕ್ರಮ ಆಯೋಜಿಸಿದೆ. ಮಾಹಿತಿಗೆ 9743769403 ಸಂಪರ್ಕಿಸಬಹುದು.
ವಾರ್ಷಿಕ ಸದಸ್ಯತ್ವ
ವೇದಾಂತ ಆಯುರ್ವೇದಿಕ್ ಕೇಂದ್ರವು ವಾರ್ಷಿಕ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಿದೆ. 6 ತಿಂಗಳು ಮತ್ತು 1 ವರ್ಷಕ್ಕೆ ನಂ. 396, 14ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು- 09 ಇಲ್ಲಿ ಸದಸ್ಯತ್ವ ನೋಂದಾಯಿಸಿ, ಮೊ. 9036123425 ಸಂಪರ್ಕಿಸಿ.
ಪದವಿ ದಿನ
ಸೆಂಟ್ ಮರಿಯಾ ಮಾಂಟೆಸರಿ ಕಿಂಡರ್ಗಾರ್ಟನ್ ಮತ್ತು ನರ್ಸರಿ ಟೀಚರ್ಸ್ ಟ್ರೈನಿಂಗ್ ಸಂಸ್ಥೆಯು ಫೆ. 15ರ ಸಂಜೆ 4.30ಕ್ಕೆ ಆದಿಚುಂಚನಗಿರಿ ರಸ್ತೆಯ ಗಾನಭಾರತಿ ಸಭಾಂಗಣದಲ್ಲಿ 7ನೇ ವರ್ಷದ ಪದವಿ ದಿನಾಚರಣೆ ಆಯೋಜಿಸಿದೆ. ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಪಿಎಚ್.ಡಿ ಪದವಿ
ಮೈಸೂರು: ಡಾ. ವಸಂತ ಡಿ. ಭಟ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಸುಜಾತ ಬಿ. ಹಂಚಿನಲ್ಕರ್ ಅವರ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ, ಶಿಕ್ಷಣ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.
ಕಥೆ ಕೇಳೋಣ ಬನ್ನಿ
ಕಲಾಸುರುಚಿಯು ಫೆ. 15ರ ಸಂಜೆ 4.30ಕ್ಕೆ ಕಥೆ ಕೇಳೋಣ ಬನ್ನಿ ಕಾರ್ಯಕ್ರಮವನ್ನು ಚಿತ್ರಭಾನು ರಸ್ತೆಯ ಸುರುಚಿ ರಂಗಮನೆಯಲ್ಲಿ ಆಯೋಜಿಸಿದೆ. ವಿಜಯನಗರದ ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ತಾಂತ್ರಿಕ ಸಮನ್ವಯಾಧಿಕಾರಿ ಸುಬ್ರಾಯ ಭಟ್ ಕಥೆ ಹೇಳುವರು. ಮಾಹಿತಿಗೆ ದೂ. 2541795 ಸಂಪರ್ಕಿಸಬಹುದು.
ಕ್ರೇಜಿಸ್ಟಾರ್ ಅಭಿಮಾನಿಗಳ ಬೈಕ್ ರ್ಯಾಲಿ
ಮೈಸೂರು: ನಟ ವಿ. ರವಿಚಂದ್ರನ್ ಅವರ ಕ್ರೇಜಿಸ್ಟಾರ್ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ರೇಜಿಸ್ಟಾರ್ ವಿಆರ್ಸಿ ಗ್ರೂಪ್ ಎಂಬ ಸಂಘದವರು ಗುರುವಾರ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು. ಕ್ರೇಜಿಸ್ಟಾರ್ ಚಿತ್ರದ ಪ್ರಚಾರದ ಜೊತೆಗೆ ನೇತ್ರದಾನ ಮಹಾದಾನ, ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ ಎಂಬ ಸಂದೇಶ ಸಾರಿದರು. ಅಗ್ರಹಾರ 101 ಗಣಪತಿ ದೇವಸ್ಥಾನ ಬಳಿಯಿಂದ ಆರಂಭವಾದ ಬೈಕ್ ರ್ಯಾಲಿಯು ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್ಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರ್ಯಾಲಿ ಆರಂಭವಾದ ಸ್ಥಳದಲ್ಲೇ ಅಂತ್ಯಗೊಂಡಿತು. 50ಕ್ಕೂ ಹೆಚ್ಚಿನ ಬೈಕ್ಗಳಲ್ಲಿ ನೂರಾರು ಮಂದಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕ್ರೇಜಿಸ್ಟಾರ್ ವಿಆರ್ಸಿ ಗ್ರೂಪ್ನ ಜಿಲ್ಲಾ ಗೌರವಾಧ್ಯಕ್ಷ ರವಿಚಂದ್ರ, ಜಿಲ್ಲಾಧ್ಯಕ್ಷ ಸಿ. ಸಂತೋಷ್ಗೌಡ, ಪದಾಧಿಕಾರಿಗಳಾದ ಎನ್. ಮನು, ಆರ್. ರವಿ, ಪ್ರಶಾಂತ್, ಭಾಸ್ಕರ್, ಮೋಹನ್, ಮಾಧು, ಪುರುಷೋತ್ತಮ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

