ಮೈಸೂರು

ಕಬ್ಬಿಗೆ ನಿಗದಿತ ಹಣ ಕೊಡಿಸದಿದ್ದರೆ ರಸ್ತೆ ತಡೆ: ಕುರುಬೂರು ಎಚ್ಚರಿಕೆ

Published On :

ಮೈಸೂರು: ಕಬ್ಬು ಬೆಳೆಗಾರರಿಗೆ ನಿಗದಿತ ಹಣ ಸಂಪೂರ್ಣ ಪಾವತಿಸದಿದ್ದರೆ ರಾಜ್ಯಾದ್ಯಂತ ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದರು.
ಸರ್ಕಾರ ಪ್ರತಿ ಟನ್ ಕಬ್ಬಿಗೆ 2,500 ನಿಗದಿಗೊಳಿಸಿದ್ದರೂ, ಕಾರ್ಖಾನೆಗಳು ಸಂಪೂರ್ಣವಾಗಿ ಆ ಬೆಲೆಯನ್ನು ರೈತರಿಗೆ ಕೊಡದ ಹಿನ್ನೆಲೆಯಲ್ಲಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರ್ಕಾರ ಕಚ್ಚಾ ರಫ್ತು ಸಕ್ಕರೆಗೆ ಟನ್‌ಗೆ 3350 ಸಹಾಯಧನವನ್ನು ನೀಡಿದೆ ಹಾಗೂ 1200 ಕೋಟಿ ಬಡ್ಡಿ ರಹಿತ ಸಾಲ ಒದಗಿಸಿದೆ. ಈ ಎಲ್ಲ ಸವಲತ್ತುಗಳನ್ನು ಪಡೆದಿರುವ ಕಾರ್ಖಾನೆಗಳ ಮಾಲೀಕರು ಸರ್ಕಾರದ ಆದೇಶ ಪಾಲಿಸಿಲ್ಲ. ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ರೈತರಿಗೆ ನ್ಯಾಯ ಕೊಡಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಫೆ.20ರ ನಂತರ ಕಬ್ಬು ಬೆಳಗಾರರು ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ 58 ಸಕ್ಕರೆ ಕಾರ್ಖಾನೆಗಳಿದ್ದು, ಯಾರೊಬ್ಬರೂ ಸರ್ಕಾರದ ಆದೇಶ ಪಾಲಿಸುತ್ತಿಲ್ಲ. ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದಲ್ಲಿ 1800 ಹಾಗೂ 2000 ಮಾತ್ರ ನೀಡಲಾಗುತ್ತಿದೆ. ಸರ್ಕಾರಿ ಕಾರ್ಖಾನೆಗಳು ಸಹ ಆದೇಶ ಪಾಲಿಸುತ್ತಿಲ್ಲ. ಸಚಿವ ಸಂಪುಟದಲ್ಲಿರುವ ಸತೀಶ್ ಜಾರಕಿಹೋಳಿ, ಶಾಮನೂರು ಶಿವಶಂಕರಪ್ಪ, ಎಸ್.ಆರ್. ಪಾಟೀಲ್ ಅವರ ಕೃಪಾಕಟಾಕ್ಷ ಇರುವುದರಿಂದ ಸಕ್ಕರೆ ಮಾಲೀಕರು ಆದೇಶ ಉಲ್ಲಂಘಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.  
ಖಾತರಿ ತರಲಿ: ರಾಜ್ಯದ ಬಜೆಟ್‌ನಲ್ಲಿ ಕೃಷಿಕರಿಗೆ ಆದಾಯ ಖಾತರಿ ಯೋಜನೆ ಜಾರಿಗೆ ತರಬೇಕು. ಡಾ.ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಬೆಲೆಗಳಿಗೆ ಉತ್ಪಾದನೆ ವೆಚ್ಚ ಹಾಗೂ ಅದರ ಅರ್ಧದಷ್ಟು ಮೊತ್ತ ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ರಾಜ್ಯ ಕೃಷಿ ಆಯೋಗ ಕ್ರಮ ಕೈಗೊಳ್ಳಬೇಕು. ರೈತನ ಪ್ರತಿ ಹೊಲದ ಬೆಳೆಗೆ ವಿಮಾ ಪದ್ಧತಿ ಜಾರಿಗೆ ತರಬೇಕು ಎಂದು
ಅವರು ಒತ್ತಾಯಿಸಿದರು.
ಮುಖಂಡರಾದ ಕೊಡನಹಳ್ಳಿ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡ ಗದ್ದೆಮೋಳೆ ಪುರುಷೋತ್ತಮ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.