ಮೈಸೂರು

ತವರು ಜಿಲ್ಲೆಗೆ ಸಿದ್ದು ಬಂಪರ್ ಕೊಡುಗೆ ನಿರೀಕ್ಷೆ

Published On :

ಮೈಸೂರು: ಮುಖ್ಯಮಂತ್ರಿಯಾಗಿ ಎರಡನೇ, ಒಟ್ಟಾರೆ 9ನೇ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ ಅವರು ತವರು ಮೈಸೂರು ಜಿಲ್ಲೆಗೆ ಬಂಪರ್ ಕೊಡುಗೆ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಜನ.
ಜಿಲ್ಲೆಯ ಹಲವಾರು ಯೋಜನೆಗಳ ಬಗ್ಗೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮೈಸೂರು ಕೈಗಾರಿಕೋದ್ಯಮಿಗಳ ಸಂಘ, ಎಫ್‌ಕೆಸಿಸಿಐ, ಎಸಿಐಸಿಎಂ ಮೊದಲಾದ ಸಂಘಟನೆಗಳು, ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ಪ್ರತಿನಿಧಿಗಳು, ಚುನಾಯಿತ ಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.
ಮೈಸೂರನ್ನು ಪಾರಂಪರಿಕ ಮತ್ತು ಬೃಹತ್ ನಗರವೆಂದು ಘೋಷಿಸಿ, ಇದರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 200 ಕೋಟಿ ಬಿಡುಗಜೆ, ನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳನ್ನು ಮತ್ತು ವೃತ್ತಗಳನ್ನು ಪಾರಂಪರಿಕ ದರ್ಜೆಗೇರಿಸುವುದು, ಲಿಂಗಾಂಬುದಿ, ದಳವಾಯಿ, ದೇವನೂರು, ಹೆಬ್ಬಾಳ ಮತ್ತು ರಾಯನಕೆರೆಗಳ ಪುನಶ್ಚೇತನ, 10 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ, ಬಾಂಬ್ ನಿಷ್ಕ್ರಿಯ ದಳ ಹಾಗೂ ಉಪಕರಣಗಳ ಅವಶ್ಯಕತೆ ಪೂರೈಸುವುದು, ಕಾರ್ಖಾನೆಗಳ ಪಟ್ಟಣ ಪ್ರಾಧಿಕಾರ ಮತ್ತು ರಫ್ತುಕೇಂದ್ರ ಸ್ಥಾಪನೆ, ಕೈಗಾರಿಕಾ ಪ್ರದೇಶಗಳಿಗೆ ಪ್ರತ್ಯೇಕ ನೀರು ಸರಬರಾಜು ವ್ಯವಸ್ಥೆ, ಪಿರಿಯಾಪಟ್ಟಣ ಮತ್ತು ಹುಣಸೂರು ಪಟ್ಟಣಗಳಲ್ಲಿ ಕಾಫಿ ರಫ್ತು ಕೇಂದ್ರ, ಸಿ21 ಫ್ಲೇವರ್ಸ್ ಒಳಗೊಂಡಿರುವ ಕೇಂದ್ರ, ಶೈತ್ಯಾಗಾರ, ಆಹಾರ ಸಂಸ್ಕರಣ ಘಟಕ, ಎಂ.ಜಿ. ರಸ್ತೆಯಲ್ಲಿ ಸುಸಜ್ಜಿತ ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆ ಸ್ಥಾಪಿಸುವುದು.
ದೇವರಾಜ, ವಾಣಿವಿಲಾಸ ಮಂಡಿ ಮಾರುಕಟ್ಟೆಗಳ ಪುನರ್ನಿರ್ಮಾಣ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಕೆ.ಆರ್. ಆಸ್ಪತ್ರೆ ಮಾದರಿಯಲ್ಲಿ ಮತ್ತೊಂದು ದೊಡ್ಡಾಸ್ಪತ್ರೆ ನಿರ್ಮಾಣ, ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಪ್ರತ್ಯೇಕ ಪ್ರವಾಸೋದ್ಯಮ ಪ್ರಾಧಿಕಾರ ರಚನೆ, ಚಾಮುಂಡಿಬೆಟ್ಟದ ಸುತ್ತ ಇರುವ ಜಾಗವನ್ನು ಹಸಿರು ವಲಯ ಎಂದು ಘೋಷಿಸುವುದು, ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವುದು, ಮೈಸೂರಿನಲ್ಲಿ ಯೋಗ ವಿವಿ ಸ್ಥಾಪನೆ, ಮೈಸೂರು ಪರಂಪರೆಗೆ ಸೇರಿದ ವಸ್ತುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಮಾಡುವುದು, ನಾಲ್ಕು ದಿಕ್ಕುಗಳಲ್ಲಿ ಕಸ ವಿಲೇವಾರಿ ಕೇಂದ್ರ ಸ್ಥಾಪಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಕೋರಲಾಗಿದೆ.
ಗುಂಡ್ಲುಪೇಟೆ ತಾಲೂಕು ಬರಗಿ ಬಳಿ ಕೇಂದ್ರ ಕೃಷಿ ವಿವಿ ಸ್ಥಾಪನೆ, ಉದ್ಯಮಿಗಳಿಗೆ ರಹದಾರಿಯಿಂದ ವಿನಾಯ್ತಿ, ಮೈಸೂರು- ನಂಜುಗೂಡು ಚತುಷ್ಪಥ ರಸ್ತೆ, ನಗರದ ವಿವಿಧೆಡೆ ಬಹುಮಹಡಿ ವಾಹನ ನಿಲ್ದಾಣ, ಬೆಂಗಳೂರು- ಮೈಸೂರು ಜೋಡಿ ರೈಲು ಮಾರ್ಗ ತ್ವರಿತಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ನೆರವು, ನಗರದಲ್ಲಿ ಐಡಿಯಾ ಸೆಂಟರ್, ಪ್ರವಾಸೋದ್ಯಮ ಉತ್ತೇಜನಕ್ಕೆ ಪ್ರವೇಶ ತೆರಿಗೆ ರದ್ದು, ಸುಸಜ್ಜಿತ ಜವಳಿ ಪಾರ್ಕ್, ಕೈಗಾರಿಕಾ ಪ್ರದೇಶದಲ್ಲಿ ಹೆಲಿಪ್ಯಾಡ್ ಬಗ್ಗೆ ಕೂಡ ಗಮನ ಸೆಳೆಯಲಾಗಿದೆ.
ಜಿಲ್ಲಾಡಳಿತದಿಂದ ನೂತನ ಜಿಲ್ಲಾಡಳಿತ ಭವನ ನಿರ್ಮಾಣ ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಗಮನ ಸೆಳೆಯಲಾಗಿದೆ. ರೈತರು, ಗಿರಿಜರು, ಗಾಣಿಗರು, ಮಡಿವಾಳರು, ವಿಶ್ವಕರ್ಮರು- ಹೀಗೆ ನಾನಾ ಸಂಘಟನೆಯವರು ಕೂಡ ತಮಗೆ ಆಗಬೇಕಾದ ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕಳೆದ ಬಾರಿ ಸಿಎಂ ಆದ ನಂತರ ಮೊದಲ ಬಜೆಟ್‌ನಲ್ಲಿ ಮೈಸೂರು ಜಿಲ್ಲೆಗೆ ಬಂಪರ್ ಕೊಡುಗೆ ನೀಡಲಾಗಿತ್ತು. ಈ ಬಾರಿ ಸಿದ್ದರಾಮಯ್ಯ ಅವರ ಕೊಡುಗೆ ಏನಿರುತ್ತದೆ ಎಂಬ ಬಗ್ಗೆ ಕಾದು ನೋಡಬೇಕಿದೆ.


-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.