ಅನುದಾನ ಹಂಚಿಕೆಯಲ್ಲಿ ತಾರತಮ್ಯ; ಆರೋಪ
ಕ.ಪ್ರ.ವಾರ್ತೆ ಕೆ.ಆರ್. ನಗರ ಫೆ.18
ತಾಲೂಕಿನ ಮೂಲಭೂತ ಸವಲತ್ತುಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ, ಅವುಗಳ ಪರಿಹಾರಕ್ಕೆ ದಾರಿ ಹುಡುಕಬೇಕಾದ ಜವಾಬ್ದಾರಿಯುತ ಸದಸ್ಯರೇ ಅನುದಾನ ಹಂಚಿಕೆ ವಿಚಾರವಾಗಿ ಪರಸ್ಪರ ವಾಗ್ವಾದ ನಡೆಸಿದ ಪ್ರಸಂಗ ಮಂಗಳವಾರ ನಡೆಯಿತು.
ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಸೀತಾರಾಮು ಅನುದಾನ ವಿತರಿಸುವಾಗ ಆಡಳಿತ ನಡೆಸುತ್ತಿರುವ ಜೆಡಿಎಸ್ನವರು ತಾರತಮ್ಯ ಮಾಡುತ್ತಿದ್ದು, ಕಾಂಗ್ರೆಸ್ನವರಿಗೆ 7.5 ಲಕ್ಷ, ಜೆಡಿಎಸ್ನವರಿಗೆ 11 ಲಕ್ಷ ಅನುದಾನ ನಿಗದಿಪಡಿಸಿದ್ದಾರೆ ಎಂದು ಏರಿದ ಧ್ವನಿಯಲ್ಲಿ ಅಧ್ಯಕ್ಷರನ್ನು ಪ್ರಶ್ನಿಸಿದ್ದು, ಪರಸ್ಪರ ವಾಗ್ವಾದಕ್ಕೆ ಕಾರಣವಾಯಿತು.
ಇದೇ ವೇಳೆ ಮಧ್ಯ ಪ್ರವೇಶಿಸಿದ ಜೆಡಿಎಸ್ ಸದಸ್ಯ ನಾಗಣ್ಣ ಈ ಹಿಂದೆ ತಾಪಂನಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ನವರ ಅನುದಾನ ವಿಳಂಬದಲ್ಲಿದೆ. ನಿಯಮವನ್ನು ಅನುಸರಿಸಿದ್ದು, ಈಗಿನ ಆಡಳಿತ ಮಂಡಳಿಯವರು ದೊಡ್ಡ ತಪ್ಪು ಮಾಡಿಲ್ಲ ಎಂದಾಗ ಅವರ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ ಸದಸ್ಯರಾದ ಜಯಲಕ್ಷ್ಮಿ, ಕಮಲಮ್ಮ, ಜಾನಕಮ್ಮ ಅವರು ಈ ವರ್ತನೆಯನ್ನು ಬದಲಿಸಿಕೊಂಡು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದರು.
ಜೆಡಿಎಸ್ ಸದಸ್ಯರಾದ ಹಾಡ್ಯ ಮಹದೇವಸ್ವಾಮಿ ಮತ್ತು ಮೇಲೂರು ಕೃಷ್ಣೇಗೌಡ ಕಾಂಗ್ರೆಸ್ ಸದಸ್ಯರ ಮಾತಿನಿಂದ ಕೆರಳಿ ಅವರನ್ನು ತರಾಟೆಗೆ ತೆಗೆದುಕೊಂಡಾಗ ಕೆಂಡಾಮಂಡಲವಾದ ಸೀತಾರಾಮು ಮತ್ತು ಇತರ ಕಾಂಗ್ರೆಸ್ ಸದಸ್ಯರು, ಜೆಡಿಎಸ್ ಸದಸ್ಯರ ವರ್ತನೆ ಸರ್ವಾಧಿಕಾರದಿಂದ ಕೂಡಿದ್ದು, ಹೀಗಾದರೆ ನಾವು ಜನರ ಕೆಲಸ ಮಾಡುವುದು ಹೇಗೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಸಿದ್ದಲಿಂಗಮೂರ್ತಿ ಮತ್ತು ಇತರ ಸದಸ್ಯರು ಪರಸ್ಪರ ವಾಗ್ವಾದ ನಡೆಸುತ್ತಿದ್ದ ಸದಸ್ಯರನ್ನು ಸಮಾಧಾನ ಪಡಿಸಿದರು. ಆದರೂ ಇದರಿಂದ ಸುಮ್ಮನಾಗದ ಹಾಡ್ಯ ಮಹದೇವಸ್ವಾಮಿ ಇಡಿ ರಾಜ್ಯದಲ್ಲಿ ಅಧಿಕಾರ ನಡೆಸುವ ಎಲ್ಲ ತಾಪಂಗಳಲ್ಲಿ ಇದೇ ರೀತಿ ಇದ್ದು, ಅನುದಾನ ಹಂಚಿಕೆಯ ವಿಚಾರದಲ್ಲಿ ನಮ್ಮದು ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡಾಗ ಇತರ ಸದಸ್ಯರು ಮುಂದಿನ ಸಭೆಯಲ್ಲಿ ಈ ಹಿಂದೆ ಅಧಿಕಾರ ನಡೆಸಿದ ಅಧ್ಯಕ್ಷರು ಬಂದಾಗ ಈ ಬಗ್ಗೆ ಚರ್ಚೆ ಮಾಡೋಣ ಎಂದಾಗ ಎಲ್ಲರೂ ಸುಮ್ಮನಾದರು.
ಸಭೆಯ ಆರಂಭದಲ್ಲಿ 11.30 ಆದರೂ ಕೆಲವು ಅಧಿಕಾರಿಗಳು ಸಭೆಗೆ ಬಾರದಿದ್ದುದಕ್ಕೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ ಬಹುತೇಕ ಸದಸ್ಯರು, ಮುಂದೆ ವಿಳಂಬವಾಗಿ ಸಭೆಗೆ ಆಗಮಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಉಪಾಧ್ಯಕ್ಷೆ ಭಾರತಿ ಮಹದೇವ್, ಸದಸ್ಯರಾದ ವಿಜಯಲಕ್ಷ್ಮಿ, ರಮ್ಯ ಸತೀಶ್, ಸುಷ್ಮಾ ಹಲಗೇಗೌಡ, ರಾಮಪ್ಪ, ಸಣ್ಣಪ್ಪ, ಚಿಕ್ಕೇಗೌಡ, ತಂದ್ರೆರವಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

