ವಿಜ್ಞಾನಕ್ಕೆ ಯುವಕರ ಕೊಡುಗೆ ಅವಶ್ಯ
ಮೈಸೂರು: ದೇಶದ ಪ್ರಗತಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ತುಂಬಾ ಅವಶ್ಯಕವಾಗಿದ್ದು, ಯುವಜನತೆ ಇತ್ತ ಗಮನ ಹರಿಸಬೇಕು. ಮುಂದಿನ 20 ವರ್ಷಗಳಲ್ಲಿ ದೇಶಕ್ಕೆ ಕೊಡುಗೆ ನೀಡಲು ಸನ್ನದ್ಧರಾಗುವಂತೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ಕರೆ ನೀಡಿದರು.
ಅಕಾಡೆಮಿಯು ನಗರದ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿರುವ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಎರಡು ದಿನಗಳ ಕೆಎಸ್ಟಿಎ ಪ್ರಾದೇಶಿಕ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ವೇಗಕ್ಕೆ ಯುವಜನರು ಹೊಂದಿಕೊಳ್ಳಬೇಕು. ಈಗ ಸಿಕ್ಕಿರುವ ಅವಕಾಶ ಬಳಸಿಕೊಳ್ಳದಿದ್ದರೆ ಭಾರತವು ಅತಿ ಹಿಂದುಳಿದ ರಾಷ್ಟ್ರಗಳ ಪಟ್ಟಿಗೆ ಸೇರಿಬಿಡುತ್ತದೆ. ವಿಜ್ಞಾನ ಕ್ಷೇತ್ರಕ್ಕೆ ನಮ್ಮ ದೇಶದಲ್ಲಿ ಉಜ್ವಲ ಇತಿಹಾಸವಿದೆ. ಈ ಕ್ಷೇತ್ರದಲ್ಲಿ ಸಂಶೋಧನೆ, ಆನ್ವೇಷಣೆ, ಉತ್ಕೃಷ್ಟ ಸಾಧನೆ ಮಾಡಿದವರೆಲ್ಲರೂ ಕಿರಿಯ ವಯಸ್ಸಿನವರು ಎಂಬುದನ್ನು ನಾವು ಗಮನಿಸಬೇಕು ಎಂದರು.
14 ಬಿಲಿಯನ್ ವರ್ಷಗಳಷ್ಟು ದೂರದಲ್ಲಿರುವ ಆಕಾಶಕಾಯಗಳನ್ನು ಗುರುತಿಸುವ ಯಂತ್ರಗಳನ್ನು ಕಂಡು ಹಿಡಿದಿದ್ದೇವೆ. ಪ್ರತಿದಿನ ಒಂದಲ್ಲ ಒಂದು ಅನ್ವೇಷಣೆ ನಡೆಸುತ್ತಿದ್ದು, ದಿನಕ್ಕೆ 20 ಸಾವಿರ ಪುಟಗಳಷ್ಟು ಮಾಹಿತಿ ನಮಗೆ ಲಭ್ಯವಾಗುತ್ತಿದೆ. ಇದಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾದ ಹೊಸ ಬೆಳವಣಿಗೆ ಕಾರಣ. ಹಾಗಾಗಿ ಯುವಜನತೆ ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದರು.
ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್. ಹೆಗ್ಡೆ ಮಾತನಾಡಿ, ಭಾರತದ ವೈದಿಕ ಪರಂಪರೆಯಲ್ಲಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಾದ ಬೆಳವಣಿಗೆಗೆ 2000 ವರ್ಷಗಳ ಇತಿಹಾಸವಿದೆ. ಮಹರ್ಷಿ ಭಾರದ್ವಾಜ್ ಭಾರತೀಯ ವಿಜ್ಞಾನ, ತಂತ್ರಜ್ಞಾನದ ಪಿತಾಮಹರೆನಿಸಿದ್ದಾರೆ. ನಾಗರಿಕತೆ ಕೃಷಿಯಿಂದ ಆರಂಭಗೊಂಡರೂ ಇಂದು ಜ್ಞಾನ ಪಡೆಯಲು ವಿಜ್ಞಾನ, ತಂತ್ರಜ್ಞಾನವನ್ನೇ ಅವಲಂಬಿಸಬೇಕಾಗಿದೆ ಎಂದರು.
ಭಾರತವು ಬಾಹ್ಯಾಕಾಶ, ಸಂಶೋಧನೆ, ಅಣು ವಿಜ್ಞಾನ, ಕೃಷಿ, ಜೈವಿಕ ತಂತ್ರಜ್ಞಾನ ಮತ್ತು ಇತರೆ ಕ್ಷೇತ್ರಗಳಲ್ಲಿ ಗುರುತರ ಬೆಳವಣಿಗೆ ಸಾಧಿಸಿದೆ. ನಮ್ಮ ಶಾಲೆಗಳು ಮತ್ತು ಕಾಲೇಜುಗಳು ಸೃಜನಶೀಲತೆ ಬೆಳೆಸಿಕೊಂಡಿಲ್ಲ. ಇದಕ್ಕೆ ರಸವತ್ತಾಗಿರದ ಬೋಧನೆ, ಪ್ರಯೋಗಾಲಯದ ಕೊರತೆಯೇ ಕಾರಣ. ಗುಣಮಟ್ಟದ ಬೋಧನೆ ವೃತ್ತಿಧರ್ಮವನ್ನು ಹೆಚ್ಚಿಸುತ್ತೆ. ತರಬೇತಿ ನೀಡುವವರೇ ತರಬೇತಿ ಪಡೆಯುವುದು ಒಳ್ಳೆಯದು ಎಂದರು.
ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ. ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಜೆಎಸ್ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ಸಮ್ಮೇಳನದ ಕೆಎಸ್ಟಿಎ ಸಂಯೋಜನಾಧಿಕಾರಿ ಡಾ.ಎ.ಎಂ. ರಮೇಶ್, ಜೆಎಸ್ಎಸ್ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಹಾಗೂ ಸಮ್ಮೇಳನದ ಸಂಯೋಜನಾಧಿಕಾರಿ ಡಾ.ಬಿ.ವೈ. ಸತೀಶ್ಕುಮಾರ್ ಇದ್ದರು. ಪ್ರಾಂಶುಪಾಲ ಪ್ರೊ.ಎಂ.ಬಿ. ಮಲ್ಲಿಕಾರ್ಜುನ ಪಂಡಿತ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

