ಮೈಸೂರು

ಪರಿಶಿಷ್ಟರ ಕೊಳವೆಬಾವಿಗೆ ವಿದ್ಯುತ್ ನೀಡದಿದ್ದರೆ ಕ್ರಮ: ಶಂಭು ದಯಾಳ್

Published On :

ಚಾಮರಾಜನಗರ: ವಿವಿಧ ನಿಗಮಗಳಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಫಲಾನುಭವಿಗಳಿಗೆ ಕೊರೆಸಲಾದ ಕೊಳವೆ ಬಾವಿಗಳನ್ನು ಮಾ.20ರೊಳಗಾಗಿ ವಿದ್ಯುದ್ದೀಕರಣಗೊಳಿಸದಿದ್ದರೆ ಸಂಬಂಧ ಪಟ್ಟ ಚೆಸ್ಕಾಂ ಹಾಗೂ ನಿಗಮಗಳ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಂಭು ದಯಾಳ್ಮೀನಾ ಎಚ್ಚರಿಸಿದರು.
ನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಳವೆ ಬಾವಿಗಳನ್ನು ಕೊರೆಸಿ ಹಲವು ವರ್ಷ ಕಳೆದಿದ್ದರೂ ಅನೇಕ ಕೊಳವೆ ಬಾವಿಗಳು ವಿದ್ಯುದ್ದೀಕರಣಗೊಂಡಿಲ್ಲ.
ಅರ್ಹ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಸವಲತ್ತುಗಳು ಸಿಗದ ಮೇಲೆ ಕೊಳವೆ ಬಾವಿ ಕೊರಸಿ ಪ್ರಯೋಜನವಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯುದ್ದೀಕರಣಕ್ಕೆ ಬಾಕಿ ಉಳಿದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿ ಕಠಿಣ ಕ್ರಮದಿಂದ ಪಾರಾಗಲು ಅಧಿಕಾರಿಗಳಿಗೆ ತಿಳಿಸಿದರು.      
ಯೋಜನೆ ಅನುಷ್ಠಾನ ಹೊಣೆ ಹೊತ್ತಿರುವ ಇಲಾಖೆ ಅಧಿಕಾರಿಗಳು ಕ್ಷೇತ್ರ ಪ್ರವಾಸ ಮಾಡಿ ಸಮಸ್ಯೆ ಅರಿಯಬೇಕು. ಗ್ರಾಮಗಳಿಗೆ ತೆರಳಿ ಸರ್ಕಾರದ ಜನಪರ ಕೆಲಸ ಸುಗಮವಾಗಿ ಸಾಗುತ್ತಿದೆಯೇ ಪರಿಶೀಲಿಸಬೇಕು.  
ಕ್ಷೇತ್ರ ಪ್ರವಾಸ ಕೈಗೊಳ್ಳುವ ಪಟ್ಟಿಯನ್ನು ಜಿಪಂಗೆ ಸಂಬಂಧಪಟ್ಟವರು ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದೆಂದರು.
ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸವಿರಬೇಕು. ಇಲ್ಲದಿದ್ದಲ್ಲಿ ಅಂತವರ ವಿರುದ್ಧ  ಕ್ರಮ ವಹಿಸಲು ಇಲಾಖಾ ಅಧಿಕಾರಿಗಳು ಮುಂದಾಗಬೇಕು ಎಂದರು. ಕ್ಷೇತ್ರ ಪ್ರವಾಸದ ವೇಳೆ ಸಮಸ್ಯೆಗಳು ಗಮನಕ್ಕೆ ಬಂದ ಕೂಡಲೇ ಅಧಿಕಾರಿಗಳು ನನ್ನಿಂದ ಸೂಚನೆ ಬರುವ ವರೆಗೆ ಕಾಯದೆ ತಮ್ಮ ಅಧಿಕಾರವನ್ನು ಚಲಾಯಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಜಿಪಂ ಸಿಇಒ ನರಸಿಂಹಮೂರ್ತಿ ಅವರು ಉದ್ಯೋಗ ಖಾತರಿ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಪ್ರಗತಿ ಸಾಧಿಸಿದ್ದು, ಜಿಲ್ಲೆಯು ರಾಜ್ಯದ ಯೋಜನಾ ಪ್ರಗತಿಯಲ್ಲಿ 9ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಉಳಿದಂತೆ ಅನ್ನಭಾಗ್ಯ, ಕ್ಷೀರಭಾಗ್ಯ, ಬಿದಾಯಿ, ವಿದ್ಯಾಸಿರಿ, ಯಶಸ್ವಿನಿ ಯೋಜನೆಗಳ ಪ್ರಗತಿಯನ್ನು ಉಸ್ತುವಾರಿ ಕಾರ್ಯದರ್ಶಿ ಪರಿಶೀಲಿಸಿದರು. ಕುಡಿವ ನೀರು, ಮೇವು ಲಭ್ಯತೆ, ಕಾಲುಬಾಯಿ ರೋಗ ನಿಯಂತ್ರಣ, ಕೃಷಿ, ಮಳೆ ಬೆಳೆ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.