ರಾಜಕಾರಣಿಗಳಿಂದಾಗಿ ಮಾತು ಮೌಲ್ಯ ಕಳೆದುಕೊಂಡಿದೆ: ಡಾ.ಹಿಶಿರಾ
ಮೈಸೂರು: ರಾಜಕಾರಣಿಗಳ ಹುಸಿ ಭರವಸೆಯ ಪರಿಣಾಮ ಮಾತು ಮೌಲ್ಯ ಕಳೆದುಕೊಂಡಿದ್ದು, ಕಲಾ ಪ್ರದರ್ಶನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎಂದು ಜಾನಪದ ವಿದ್ವಾಂಸ ಡಾ.ಹಿ.ಶಿ. ರಾಮಚಂದ್ರಗೌಡ ಅಭಿಪ್ರಾಯಪಟ್ಟರು.
ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯು ರಂಗಾಯಣದ ಶ್ರೀರಂಗದಲ್ಲಿ ಏರ್ಪಡಿಸಿರುವ ಮೂರು ದಿನಗಳ ನಾಟಕೋತ್ಸವಕ್ಕೆ ಸೋಮವಾರ ಕಂಸಾಳೆ ಬಾರಿಸಿ ಚಾಲನೆ ನೀಡಿ ಮಾತನಾಡಿದ ಅವರು, ಈಗ ಭಾಷಣ, ಚರ್ಚೆ ಏರ್ಪಡಿಸಿದರೆ ಜನರು ಇಷ್ಟಪಡುವುದಿಲ್ಲ. ಮಾತಿನ ಮೇಲಿದ್ದ ಆಸಕ್ತಿ ಕಳೆದುಕೊಂಡಿದ್ದು, ಎಲ್ಲಿಯಾದರೂ ಕಲಾಪ್ರದರ್ಶನ ಏರ್ಪಡಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂದರು.
ಮಹಾತ್ಮ ಗಾಂಧಿ, ಡಾ. ಅಂಬೇಡ್ಕರ್ ಅವರು ಮಾತನಾಡುತ್ತಾರೆ ಎಂದರೆ ಜನ ಗಂಭೀರವಾಗಿ ಪರಿಗಣಿಸುತ್ತಿದ್ದರು. ಅವರ ಮಾತುಗಳಿಗೆ ಮೌಲ್ಯವಿತ್ತು. ಇಂದು ಅದು ಇಲ್ಲದಂತಾಗಿದೆ. 21ನೇ ಶತಮಾನ ನಮ್ಮಲ್ಲಿ ಭಯ ಹುಟ್ಟಿಸುತ್ತಿದೆ. ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುವೇ ನಮಗೆ ಹೆಚ್ಚು ಭಯ ಹುಟ್ಟಿಸುತ್ತಿದ್ದಾನೆ. ನಾವು ಘಟನೆಗಳಿಗೆ ಮಾನ್ಯತೆ ನೀಡುವುದನ್ನು ಬಿಡಬೇಕು. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿದ್ದಾಗಲೆ ಅರ್ಥ ಬರುತ್ತದೆ. ಹಾಗಾಗಿ ದೇಸಿರಂಗ ಸಂಘಟನೆಯ ಗೋಡ್ಸೆ ಮತ್ತು ಗಾಂಧಿ ಇಬ್ಬರನ್ನು ಒಳಹೊಕ್ಕು ನೋಡುವ ಪ್ರಯತ್ನ ನನಗೆ ಖುಷಿ ತಂದಿದೆ ಎಂದರು.
ಇದೇ ವೇಳೆ ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯು ಕಳೆದ ಒಂದು ತಿಂಗಳಿಂದ ಆಯೋಜಿಸಿದ್ದ ರಂಗತರಬೇತಿ ಶಿಬಿರದ ಕಲಿಕಾರ್ಥಿಗಳು ಕಂಸಾಳೆ ಹಾಗೂ ಕೋಲಾಟ ಪ್ರದರ್ಶಿಸಿದರು. ನಂತರ ಗೋಡ್ಸೆ ನಾಟಕ ಪ್ರದರ್ಶನಗೊಂಡಿತು. ರಂಗಕರ್ಮಿ ಶ್ರೀಕಂಠ ಗುಂಡಪ್ಪ, ಸಂಸ್ಥೆಯ ಅಧ್ಯಕ್ಷ ಕೃಷ್ಣ ಜನಮನ, ಕಾರ್ಯದರ್ಶಿ ದಿನಮಣಿ ಇದ್ದರು.
ಮಾ.10ರಂದು ಸಾಮೂಹಿಕ ವಿವಾಹ
ಮೈಸೂರು: ಶ್ರೀಕ್ಷೇತ್ರ ಸುತ್ತೂರಿನಲ್ಲಿ ಮಾ.10ರಂದು ಸಾಮೂಹಿಕ ವಿವಾಹ ನೆರವೇರಲಿದೆ. ಈ ಸಾಮೂಹಿಕ ವಿವಾಹದಲ್ಲಿ ಹರಗುರು ಚರಮೂರ್ತಿಗಳು, ವಧುವರರ ಬಂಧುಮಿತ್ರರು ಹಾಗೂ ಸಾರ್ವಜನಿಕರು ಭಾಗವಹಿಸಿ ವಧು-ವರರಿಗೆ ಶುಭ ಹಾರೈಸುವರು. ಆಸಕ್ತರು 10 ದಿನಗಳ ಮುಂಚಿತವಾಗಿ ಆಡಳಿತಾಧಿಕಾರಿಗಳು, ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳು, ಸುತ್ತೂರು ಇವರನ್ನು ನೇರವಾಗಿ ಸಂಪರ್ಕಿಸಿ ಅಥವಾ ದೂ. 08221- 232559, 232033, 232054 ಸಂಖ್ಯೆಗಳಲ್ಲಿ ಮಾಹಿತಿ ಪಡೆದು ನೋಂದಣಿ ಮಾಡಿಸಿಕೊಳ್ಳಬಹುದು.
ಏಷಿಯಾ ಕಪ್ ಕ್ರಿಕೆಟ್ಗೆ ಸೈಕಲ್ ಅಗರಬತ್ತಿ ಪ್ರಾಯೋಜಕತ್ವ
ಮೈಸೂರು: ಮೈಸೂರಿನ ಎನ್ಆರ್ ಸಮೂಹದ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು 12ನೇ ಆವೃತ್ತಿಯ ಏಷಿಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಜೊತೆಗೆ ಕೈಜೋಡಿಸಿದೆ. ಇದರ ಪರಿಣಾಮವಾಗಿ ಪಂದ್ಯಾವಳಿಯನ್ನು ಅರೈಸ್ ಏಷಿಯಾ ಕಪ್- ಪವರ್ಡ್ ಬೈ ಸೈಕಲ್ ಪ್ಯೂರ್ ಅಗರಬತ್ತೀಸ್ ಶೀರ್ಷಿಕೆಯಡಿ ನಡೆಸಲಾಗುತ್ತಿದೆ. ಫೆ.25ರಿಂದ ಮಾ. 7ರವರೆಗೆ ನಡೆಯುವ ಏಷ್ಯಾ ಕಪ್ನಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ತಂಡಗಳು ಭಾಗವಹಿಸಲಿವೆ. ಪಂದ್ಯ ನಡೆಯುವಾಗ ಸೈಕಲ್ ಅಗರಬತ್ತಿಯ ಲೊಗೋ ಪ್ರೀಮೀಟರ್ ಫಲಕಗಳು, ಬೌಲರ್ಸ್ಗಳ ತುದಿ, ಪಿಚ್ ಮ್ಯಾಟ್ಗಳು, ಇದರ ಟ್ರೇಡ್ ಮಾರ್ಕ್ ಪ್ರಾಪರ್ಟಿ, ಥರ್ಡ್ ಅಂಪೈರ್ ಬ್ರಾಂಡಿಂಗ್ನಲ್ಲೂ ಕಾಣಲಿದೆ.
ಆದರ್ಶ ವಿದ್ಯಾಲಯಕ್ಕೆ ಪ್ರವೇಶಕ್ಕೆ ಅರ್ಜಿ
ಮೈಸೂರು: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಮಂಜೂರಾಗಿರುವ ಆದರ್ಶ ವಿದ್ಯಾಲಯಗಳಿಗೆ ಪ್ರವೇಶಾತಿ ಮಾಡಿಕೊಳ್ಳುವ ಸಂಬಂಧ ಅರ್ಜಿ ಆಹ್ವಾನಿಸಿದ್ದು, ಫೆ. 28ರವರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲು ಅರ್ಹರಾಗಿರುತ್ತಾರೆ. ಪ್ರವೇಶ ಪರೀಕ್ಷೆಯು ಮಾ.30ರಂದು ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಢಿಢಿಢಿ.ಡಡಛ್ಞಛ್ಠಟಿಛಡಿಛ್ಞಛ.್ಜ್ಟಢ.್ಝಟಿ ನೋಡಬಹುದು.
ದೇವರಿಗೆ ಚಿನ್ನದ ಕೊಳಗ ಧಾರಣೆ
ಮೈಸೂರು: ಅರಮನೆ ಮುಜರಾಯಿ ದೇವಾಲಯಗಳಲ್ಲಿ ಒಂದಾದ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ಫೆ.27ರಂದು ಮಹಾಶಿವರಾತ್ರಿ ಅಂಗವಾಗಿ ಮೂಲ ದೇವರಿಗೆ ಚಿನ್ನದ ಕೊಳಗ ಧಾರಣೆ ಮಾಡಲಾಗುವುದು. ಅಂದು ಬೆಳಗ್ಗೆ 6 ರಿಂದಲೇ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಮಾನುಜ ರಸ್ತೆಯಲ್ಲಿರುವ ಕಾಮಕಾಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮುಜರಾಯಿ ದೇವಾಲಯಗಳ ವ್ಯವಸ್ಥಾಪಕರು ತಿಳಿಸಿದ್ದಾರೆ.
ಶಿವರಾತ್ರಿ; ಮಾಂಸ ಮಾರಾಟ ನಿಷೇಧ
ನಗರಪಾಲಿಕೆ ಸೇರಿದ ಕುರಿ, ಮೇಕೆ, ಕಸಾಯಿ ಖಾನೆ ಹಾಗೂ ಎಲ್ಲ ಮಾಂಸದ ಅಂಗಡಿಗಳನ್ನು ಫೆ.27ರಂದು ಮಹಾಶಿವರಾತ್ರಿಯ ಪ್ರಯುಕ್ತ ಮುಚ್ಚಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಪ್ರತಿಭಟನೆ
ಮೈಸೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ದಿನಗೂಲಿ ನೌಕರರ ಮಹಾಮಂಡಲದವರು ಸೋಮವಾರ ಪ್ರತಿಭಟಿಸಿದರು. ನಗರದ ಜೆಎಲ್ಬಿ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಹಮ್ಮಿಕೊಂಡಿದ್ದ ಅವರು, 27 ಸಾವಿರ ದಿನಗೂಲಿ ನೌಕರರ ಹೆಸರನ್ನು ಗೆಜೆಟ್ನಲ್ಲಿ ಪ್ರಕಟಿಸಬೇಕು. ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮಕ್ಕೆ ಮಹಾಮಂಡಲ ನೀಡಿರುವ ಸಲಹೆಗಳನ್ನು ಸೇರಿಸಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

