ಮೈಸೂರು

ವೈವಿಧ್ಯಮಯ ಬೆಳೆ ಬೆಳೆಯಿರಿ: ರಮ್ಯಾ

Published On :

ಕ.ಪ್ರ.ವಾರ್ತೆ    ಕೆ.ಆರ್. ನಗರ    ಫೆ.25
ರೈತರು ಒಂದೇ ಬೆಳೆಗೆ ಜೋತು ಬೀಳದೆ, ಹೆಚ್ಚು ಆದಾಯ ಕೊಡುವ ವಾಣಿಜ್ಯ ಬೆಳೆ ಮತ್ತು ವೈವಿಧ್ಯ ಬೆಳೆಗಳತ್ತ ಗಮನ ಹರಿಸಿ, ಲಾಭ ಗಳಿಸಬೇಕು ಎಂದು ಸಂಸದೆ ರಮ್ಯಾ ಕರೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೃಷಿ ಉತ್ಸವ ಸಮಿತಿ ವತಿಯಿಂದ ನಡೆದ ತಾಲೂಕು ಮಟ್ಟದ ಕೃಷಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಚಟುವಟುಕೆ ಕೈಗೊಳ್ಳುವಾಗ ಇಲಾಖೆಯ ಅಧಿಕಾರಿಗಳು ಹಾಗೂ ಅನುಭವಿಗಳ ಸಲಹೆ ಪಡೆಯಬೇಕೆಂದು ತಿಳಿಸಿದರು.
ಕಬ್ಬು ಬೆಳೆಯುವುದರಲ್ಲಿ ಭಾರತ ಪ್ರಪಂಚದಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಅದರ ಉಪಉತ್ಪನ್ನಗಳ ಸದ್ಬಳಕೆ ಆಗುತ್ತಿಲ್ಲ. ಈ ವಿಚಾರದಲ್ಲಿ ಹೆಚ್ಚಿನ ಸಂಶೋಧನೆ ನಡೆದು ಅದರಿಂದ ಬರುವ ಎಥೆನಾಲ್ ಬಳಸಿಕೊಂಡರೆ ಹೆಚ್ಚು ಆದಾಯದ ಜತೆಗೆ ಇಂಧನದ ಆಮದನ್ನು ಕಡಿಮೆ ಮಾಡಿಕೊಳ್ಳಬಹುದು ಎಂದರು.
ದೇಶದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಕೃಷಿ ಇಂದು ಬಹುದೊಡ್ಡ ಉದ್ಯಮವಾಗಿ ಬೆಳೆದಿದ್ದು, ಉತ್ತಮ ತಂತ್ರಜ್ಞಾನ ಮತ್ತು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ರೈತರು ಹೆಚ್ಚು ಲಾಭ ಗಳಿಸಬಹುದು. ಈ ದಿಸೆಯಲ್ಲಿ ಇಂಥ ಉತ್ಸವಗಳು, ವಿಚಾರ ಸಂಕಿರಣಗಳ ಅವಶ್ಯಕತೆ ಅಗತ್ಯವಿದೆ ಎಂದರು.
ರಾಜಕಾರಣಿಗಳು ಮತ ಕೇಳುವಾಗ ಇರುವ ಪ್ರಾಮಾಣಿಕತೆ ಆಯ್ಕೆಯಾದ ನಂತರವೂ ಇರಬೇಕು. ಗೆದ್ದ ನಂತರ ಅಭಿವೃದ್ಧಿ ಕೆಲಸವನ್ನು ಜನತೆಯ ನಿರೀಕ್ಷೆಗೆ ತಕ್ಕಂತೆ ಮಾಡಿದರೆ ಮತ ನೀಡಿದವರಿಗೂ ಚುನಾಯಿತ ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಮೂಡುತ್ತದೆ. ರೈತರ ಹಿತಕ್ಕಾಗಿ ಮತ್ತು ಅವರ ಅನುಕೂಲಕ್ಕಾಗಿ ಜನತೆ ನನಗೆ ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯ ಪುನರಾರಂಭಕ್ಕೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.
ಸಂಸದರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉತ್ತಮ ಕಾರ್ಯಕ್ರಮಗಳು ಸದಾ ಜನರಿಗೆ ದೊರೆತು ಅವರಲ್ಲಿ ಧಾರ್ಮಿಕ ಭಾವನೆ ಮೂಡಿಸುವುದರ ಜತೆಗೆ ಕೃಷಿಗೆ ಸಂಬಂಧಿಸಿದಂತೆ ಹೆಚ್ಚು ಜ್ಞಾನ ದೊರಕಿಸಿಕೊಡಲಿ ಎಂದು ಆಶಿಸಿದರು.
ಕೃಷಿ ಉತ್ಸವ ಸಮಿತಿ ಅಧ್ಯಕ್ಷ ಎಂ. ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶ್ರೀಹರಿ, ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸುನಯ್ಗೌಡ ಮಾತನಾಡಿದರು.
ಕೃಷಿ ಯಾಂತ್ರೀಕರಣ ನೀರು ಮತ್ತು ಮಣ್ಣು ನಿರ್ವಹಣೆ, ತಂಬಾಕಿಗೆ ಪರ್ಯಾಯ ಬೆಲೆ ಮತ್ತು ಲಾಭದಾಯಕ ಹೈನುಗಾರಿಗೆ, ಮೇವು ಅಭಿವೃದ್ಧಿ ಹಾಗೂ ಬೇಸಿಗೆಯಲ್ಲಿ ಜಾನುವಾರು ನಿರ್ವಹಣೆ ಎಂಬ ವಿಚಾರಗಳ ಬಗ್ಗೆ ವಿಚಾರಗೋಷ್ಠಿಗಳನ್ನು ನಡೆಸಿ, ರೈತ ಮಹಿಳೆಯರು ಮತ್ತು ಮಾದರಿ ರೈತರೊಂದಿಗೆ ಸಂವಾದ ನಡೆಯಿತು.
ಹಿರಿಯ ರೈತ ವೆಂಕಟರಮಣೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ನಿರಂಜನ್, ಡಾ. ರಾಜಣ್ಣ, ಡಾ. ಮಹಂತೇಶ್, ಹೊಂಬಯ್ಯ, ಮನೋಜ್ ಮಿನೇಜಸ್, ದಿನೇಶ್ಕುಮಾರ್, ಡಾ. ರಮೇಶ್, ಡಾ. ರಘುಪತಿ, ಸಿ.ಎಂ. ಚಂದ್ರಶೇಖರ್, ಪ್ರವೀಣ್, ವೆಂಕಟೇಶ್, ಬಸವರಾಜು, ಇಂದ್ರಮ್ಮ,  ನಟರಾಜು, ವಿ. ಚಂದ್ರಪ್ಪ ಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡು, ರೈತರಿಗೆ ಮಾಹಿತಿ ನೀಡಿದರು.


'ಕನ್ನಡಪ್ರಭ' ಪ್ರದರ್ಶನ ಮಳಿಗೆ


ಕೃಷಿ  ವಸ್ತುಪ್ರದರ್ಶನದಲ್ಲಿ ತೆರೆಯಲಾಗಿದ್ದ ಕನ್ನಡಪ್ರಭ ಪ್ರದರ್ಶನ ಮಳಿಗೆ ಎಲ್ಲರ ಗಮನ ಸೆಳೆಯಿತಲ್ಲದೆ ಆರಂಭಿಸಿದ ಕೆಲ ಹೊತ್ತಿನಲ್ಲಿ ನೂರಾರು ಕನ್ನಡಪ್ರಭ ಪ್ರತಿಗಳು ಮಾರಾಟವಾದವು. ಸಂಸದೆ ರಮ್ಯಾ ಮಳಿಗೆಗೆ ಭೇಟಿ ನೀಡಿ ಕೆಲ ಹೊತ್ತು ಕಳೆದರಲ್ಲದೆ ಪ್ರಶಂಸೆ ವ್ಯಕ್ತಪಡಿಸಿದರು.


ಉತ್ಸವಕ್ಕೆ ಜನಸಾಗರ


ಹರಿದು ಬಂದ ಜನಸಾಗರ, ಮೇಳೈಸಿದ ಕೃಷಿ ಸಂಭ್ರಮ, ಎತ್ತ ನೋಡಿದರೂ ಕೃಷಿ ವಸ್ತುಪ್ರದರ್ಶನದ ಮಳಿಗೆಗೆಳು, ಅಚ್ಚುಕಟ್ಟಾದ ಕಾರ್ಯಕ್ರಮ, ಜನಮನ ಗೆದ್ದ ವಿಚಾರ ಗೋಷ್ಠಿಗಳು...
ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೃಷಿ ಉತ್ಸವ ಸಮಿತಿಯ ವತಿಯಿಂದ ನಡೆದ ತಾಲೂಕು ಮಟ್ಟದ ಕೃಷಿ ಉತ್ಸವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿವು.
ಕೃಷಿ ಉತ್ಸವಕ್ಕೆ ತಾಲೂಕಿನ ವಿವಿಧೆಡೆಗಳಿಂದ 10 ಸಾವಿರಕ್ಕೂ ಅಧಿಕ ಮಹಿಳೆಯರು ಮತ್ತು 5 ಸಾವಿರ ಮಂದಿ ಪುರುಷರು ಪಾಲ್ಗೊಂಡಿದ್ದರಲ್ಲದೆ, ಆವರಣದ ತುಂಬೆಲ್ಲಾ ಎತ್ತ ನೋಡಿದರೂ ಜನ ಸಾಗರವೆ ಕಂಡು ಬಂತು. ಬಂದವರೆಲ್ಲಾ ಆಸಕ್ತಿಯಿಂದ ಪಾಲ್ಗೊಂಡು ವಿಚಾರ ವಿನಿಮಯ ಮಾಡುತ್ತಾ ಉತ್ಸವದ ಆಯೋಜನೆ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಆವರಣದ ತುಂಬ ಕೃಷಿಗೆ ಸಂಬಧಿಸಿದಂತೆ ಮಾಹಿತಿ, ಪ್ರಾತ್ಯಕತೆಗಳು, ಮುಸುಕಿನ ಜೋಳದ ಚಪ್ಪರ, ಬತ್ತದ ತೆನೆಗಳ ಮನೆ, ಹಳ್ಳಿ ಮನೆಯ ಪ್ರತಿಕೃತಿ, ಟೊಮ್ಯಾಟೋ, ಗೋಪುರ, ತೆಂಗಿನ ಕಾಯಿಯ ತೇರು, ಹೈನುಗಾರಿಕೆ ಪ್ರದರ್ಶನ ಸೇರಿದಂತೆ ಕಣ್ಣು ಹಾಯಿಸಿದಷ್ಟು ದೂರವು ಕೃಷಿ ಸಂಭ್ರಮ ಮನೆ ಮಾಡಿತ್ತು.
ಕೃಷಿ ಉತ್ಸವದಲ್ಲಿ 70 ವಸ್ತುಪ್ರದರ್ಶನದ ಮಳಿಗೆಗಳನ್ನು ತೆರೆಯಲಾಗಿತ್ತು. ಇವುಗಳಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೈಮುಲ್, ಹಂದಿ ಸಾಕಾಣಿಕೆ, ಪುಸಕ್ತ ಪ್ರದರ್ಶನ, ಗೃಹ ಉತ್ಪನ್ನಗಳು, ಗೋ ಸಂಬಂಧಿತ ವಸ್ತುಗಳ ಮಾರಾಟ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳ ದ್ವಿಚಕ್ರ ವಾಹನಗಳು, ಕೃಷಿ ಬಳಕೆಯ ಯಂತ್ರೋಪಕರಣಗಳು ಸೇರಿದಂತೆ ಇತರ ಮಳಿಗೆಗಳು ಜನರ ಮನ ಸೆಳೆದವಲ್ಲದೆ ಬೆಳಿಗ್ಗೆಯಿಂದ ಸಂಜೆವರೆಗೂ ಮುಗಿ ಬಿದ್ದು ವೀಕ್ಷಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.
ಕಳೆದ ನಾಲ್ಕು ದಿನಗಳಿಂದಲೂ ಕೃಷಿ ಉತ್ಸವ ಸಮಿತಿಯ ಪದಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮತ್ತು ಸಂಘ ಸಂಸ್ಥೆಗಳ ಸ್ವಯಂ ಸೇವಕರ ಪರಿಶ್ರಮದಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತಲ್ಲದೆ, 15 ಸಾವಿರ ಮಂದಿಗೆ ಮಾಡಿದ್ದ ಭೋಜನದ ವ್ಯವಸ್ಥೆ ಹಸಿದವರ ಹೊಟ್ಟೆ ತುಂಬಿಸಿತು. ವಿಚಾರ ಗೋಷ್ಠಿಗಳು ರೈತರ ಮನ ಮುಟ್ಟುವಲ್ಲಿ ಯಶಸ್ವಿಯಾದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.