ಮೈಸೂರು

ಶಿಕ್ಷಣ ಸಂಸ್ಥೆ, ವಿವಿಗಳ ನಿಯಂತ್ರಣದಲ್ಲಿ ವಿದ್ಯಾರ್ಥಿಗಳು: ಡಾ.ಕೆ.ವೈ. ನಾರಾಯಣಸ್ವಾಮಿ

Published On :

ಮೈಸೂರು: ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯಗಳು ಕೆಟ್ಟ ಪಠ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ನಿಯಂತ್ರಿಸುತ್ತಿವೆ ಎಂದು ನಾಟಕಕಾರ ಡಾ.ಕೆ.ವೈ. ನಾರಾಯಣಸ್ವಾಮಿ ಕಿಡಿಕಾರಿದರು.
ಅಭಿಯಂತರರು ಸಂಸ್ಥೆಯು ಕರ್ನಾಟಕ ರಾಜ್ಯ ಮುಕ್ತ ವಿವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಂಗಾಯಣದ ಶ್ರೀರಂಗದಲ್ಲಿ ಏರ್ಪಡಿಸಿರುವ ರಂಗಭೂಮಿಯತ್ತ ರಂಗ ತರಬೇತಿ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಮೂಲಕ ಕ್ರಿಯಾಶೀಲತೆ ಬೆಳೆಸಿದರೆ ಎಲ್ಲಿ ತಮ್ಮನ್ನು ಪ್ರಶ್ನಿಸುತ್ತಾರೋ, ಪ್ರತಿಭಟನೆ ಮಾಡುತ್ತಾರೋ, ಅನ್ಯಾಯದ ವಿರುದ್ಧ ಹೋರಾಡುತ್ತಾರೋ ಎಂಬ ಆಲೋಚನೆಯಿಂದ ಕಟ್ಟಿ ಹಾಕುತ್ತಿವೆ. ಭಾರತದ ಶಿಕ್ಷಣ ಮಾದರಿ ವಿಕೃತಿಯಿಂದ ಕೂಡಿದೆ. ಯೂರೋಪಿನಲ್ಲಿ ವಸಾಹತುಶಾಹಿ ಕೊನೆಗಾಣಿಸಲು ಅಲ್ಲಿನ ಜನತೆ ಈಗ ಕ್ರಿಯಾಶೀಲರಾಗುತ್ತಿದ್ದಾರೆ. ಅದೇ ರೀತಿ ಭಾರತದಲ್ಲೂ ಯುವಜನತೆ ಯೌವ್ವನ ಮತ್ತು ಕನಸಿನೊಂದಿಗೆ ಕ್ರಿಯಾಶೀಲರಾಗಬೇಕು. ಕಾರ್ಯಕರ್ತರಾಗಿ ಹೋರಾಟಕ್ಕೆ ಧುಮಿಕಿದಾಗ ನ್ಯಾಯ ಧಕ್ಕಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪೂರ್ಣಚಂದ್ರ ತೇಜಸ್ವಿ ಮತ್ತು ಲಂಕೇಶರು ಭೂತವನ್ನು ಕೆಣಕದೆ ವರ್ತಮಾನಕ್ಕೆ ಬಂದು ಚಿಂತಿಸುತ್ತಿದ್ದರು. ಅದೇ ಯು.ಆರ್. ಅನಂತಮೂರ್ತಿ, ಎಸ್.ಎಲ್. ಬೈರಪ್ಪ ಭೂತವನ್ನು ಕೆಣಕಿ, ಅಗೆದು ನೋಡುತ್ತಿದ್ದರು. ಅದರಿಂದ ಯಾವುದೇ ಪ್ರಯೋಜನವಿಲ್ಲ. ಈ ರಂಗ ತರಬೇತಿ ಶಿಬಿರದಲ್ಲಿ ತೇಜಸ್ವಿಯವರ ಮಾಯಾಲೋಕವನ್ನು ನಾಟಕವಾಗಿ ಅಭಿನಯಿಸಲು ಕೈಗೆತ್ತಿಕೊಂಡಿರುವುದು ವರ್ತಮಾನಕ್ಕೆ ಸಲ್ಲುವಂತಹದ್ದು. ರಂಗಭೂಮಿಯತ್ತ ಬಂದಿರುವ ಎಂಜಿನಿಯರುಗಳ ಪ್ರಯತ್ನ ಒಳ್ಳೆಯದೆ. ತಾವು ಅಭಿಯಂತರರು ಎಂಬ ಪದ ಬಳಸದೆ ಎಂಜಿನಿಯರುಗಳ ಎಂಬ ಹೆಸರಿನ ಮೂಲಕವೇ ಸಂಸ್ಥೆ ನಡೆಸಿದರೆ ಚೆನ್ನಾಗಿರುತ್ತದೆ ಎಂದರು.
ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಮಾತನಾಡಿ, ರಂಗಭೂಮಿಯಲ್ಲಿ ವಿಷಯಪಲ್ಲಟಗಳಾಗುತ್ತಿವೆ. 70ರ ದಶಕದಲ್ಲಿ ನಾವು ರಂಗಭೂಯಮಿಯನ್ನು ಆತುಕೊಂಡಾಗ ಕ್ಲೀಷೆ ಇರಲಿಲ್ಲ. ವಿಷಯದ ಬಗ್ಗೆ ಸ್ಪಷ್ಟತೆ ಇತ್ತು. ಈಗ ಎಲ್ಲವೂ ಪಲ್ಲಟವಾಗುತ್ತಿದೆ ಎಂದು ಹೇಳಿದರು.
ಶಿಬಿರದ ನಿರ್ದೇಶಕ ಸಿ. ಬಸವಲಿಂಗಯ್ಯ ಮಾತನಾಡಿ, ರಂಗಭೂಮಿ ಕ್ರಾಂತಿಕಾರಿಯಲ್ಲ. ಬದಲಾಗಿ ಕ್ರಾಂತಿಕಾರಿಗಳನ್ನು ಹುಟ್ಟುಹಾಕುತ್ತದೆ. ಕ್ರಿಯಾಶೀಲ ಮನಸ್ಸು ಮತ್ತು ದೇಹ ಇದ್ದಲ್ಲಿ ಜಿಡ್ಡು ಆವರಿಸುವುದಿಲ್ಲ. ವಿಚಾರ ಮಂಥನವಾಗಿ ಪ್ರಶ್ನೆಸುವುದನ್ನು ಕಲಿಸುತ್ತದೆ ಎಂದ ಅವರು, ಸಿರಿಯಲ್ ಕಥೆ ಇಲ್ಲದಿದ್ದರೂ ಕಥೆ ಹೇಳಲು ಹೊರಟಿದೆ. ಅದರಿಂದ ವಿದ್ಯುತ್ ವ್ಯಯ, ಕಾಲಹರಣವಾಗುತ್ತಿದೆ ಎಂದು ತಿಳಿಸಿದರು.
ಅಭಿಯಂತರರು ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಸುರೇಶ್ ಬಾಬು ಮೊದಲಾದವರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.