ಸಾಮರಸ್ಯ ಸಾಧನೆಗೆ ಕ್ರೀಡೆ ಸಹಕಾರಿ
ಮೈಸೂರು: ದೇಶದ ಐಕ್ಯತೆ ಹಾಗೂ ಸಾಮರಸ್ಯಕ್ಕೆ ಕ್ರೀಡೆಗಳು ಸಹಕಾರಿ ಎಂದು ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ಹೇಳಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಕುವೆಂಪುನಗರದ ಬಿಜಿಎಸ್ ವಿದ್ಯಾಪೀಠದ ಆವರಣದಲ್ಲಿ ಆಯೋಜಿಸಿರುವ 17ನೇ ರಾಜ್ಯಮಟ್ಟದ ಕ್ರೀಡಾಕೂಟವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ. ಅದರಲ್ಲಿ ಭಾಗವಹಿಸುವುದು ಬಹುಮುಖ್ಯ. ಆದ್ದರಿಂದ ಕ್ರೀಡಾ ಮನೋಭಾವವನ್ನು ಇಂದಿನ ಯುವಜನತೆ ಹೆಚ್ಚಾಗಿ ಮೆರೆಯಬೇಕು. ಇದರಿಂದ ಪರಸ್ಪರ ಸಮಾಜದ ಸಾಮರಸ್ಯ ಹಾಗೂ ದೇಶದ ಐಕ್ಯತೆಗೆ ಸಹಕಾರಿಯಾಗಲಿದೆ ಎಂದರು.
ಒಲಂಪಿಕ್ಸ್ನಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಕಂಚಿನ ಪದಕವನ್ನು ಮೊದಲಿಗೆ ತಂದುಕೊಟ್ಟಾಗ ಇಡೀ ದೇಶವೇ ಸಂಭ್ರಮಿಸಿತು. ಅವರು ಗಳಿಸಿದ ಕಂಚಿನ ಪದಕವು ಭಾರತೀಯ ಸ್ತ್ರೀಯರು ಧರಿಸುವ ಒಟ್ಟು ಚಿನ್ನಕ್ಕಿಂತ ಮೌಲ್ಯಯುತವಾದುದು ಎಂಬ ಹೆಗ್ಗಳಿಕೆ ಕೇಳಿಬಂದದ್ದು ಮರೆಯಲಾಗದು. ಆದ್ದರಿಂದ ಕ್ರೀಡೆಗೆ ಮಹತ್ವದ ಸ್ಥಾನ ಅವಶ್ಯಕ ಎಂದು ಅವರು ತಿಳಿಸಿದರು.
ಗಣ್ಯರ ಉಪಸ್ಥಿತಿ: ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ ಕೃಷ್ಣನ್ ಕ್ರೀಡಾ ಜ್ಯೋತಿ ಬರಮಾಡಿಕೊಂಡರು. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಅವರು ಉಪಸ್ಥಿತರಿದ್ದರು.
ಮೇಯರ್ ಎನ್.ಎಂ. ರಾಜೇಶ್ವರಿ, ಶಾಸಕರಾದ ಜಿ.ಟಿ. ದೇವೇಗೌಡ, ಎಂ.ಕೆ. ಸೋಮಶೇಖರ್, ಮಾಜಿ ಶಾಸಕ ಪ್ರೊ.ಪಿ.ಎಂ. ಚಿಕ್ಕಬೋರಯ್ಯ, ಡಿ. ಮಾದೇಗೌಡ, ಎಂ. ಸತ್ಯನಾರಾಯಣ, ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಪ್ರೊ.ಎಂ. ಚಂದ್ರಕುಮಾರ್, ನಗರ ಪಾಲಿಕೆ ಸದಸ್ಯರಾದ ಕೆ.ವಿ. ಮಲ್ಲೇಶ್, ಆರ್. ಲಿಂಗಪ್ಪ, ಬಾಲು, ಚನ್ನಪ್ಪ, ಕೆ.ಟಿ. ಚೆಲುವೇಗೌಡ, ಶಿವಣ್ಣ, ಮಹದೇವಪ್ಪ, ಪಿ. ಪ್ರಶಾಂತಗೌಡ, ಬಿ.ಎಲ್. ಭೈರಪ್ಪ, ಜೆ. ಜಗದೀಶ್ ಅತಿಥಿಗಳಾಗಿದ್ದರು.
ಆದಿಚುಂಚನಗಿರಿ ಶಾಖಾಮಠದ ಸೋಮನಾಥ ಸ್ವಾಮೀಜಿ ಸ್ವಾಗತಿಸಿದರು. ನಂತರ ನಡೆದ ಕ್ರೀಡಾಕೂಟದಲ್ಲಿ ಶ್ರೀಮಠದ ವಿಭಾಗಗಳ ವ್ಯಾಪ್ತಿಗೆ ಬರುವ ಜಿಲ್ಲೆವಾರು ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಖೋ ಖೋ ಕಬಡ್ಡಿ, ವಾಲಿಬಾಲ್, ಜಿಗಿತ, ಗುಂಡು ಎಸೆತ ಹಾಗೂ ವಿವಿಧ ಓಟ ಹಾಗೂ ಯೋಗಾಸನ ಸೇರಿದಂತೆ ಕ್ರೀಡೆಗಳನ್ನು ನಡೆಸಲಾಯಿತು.
ದೈಹಿಕ ಸಾಮರ್ಥ್ಯಕಲ್ಪಿಸುವಲ್ಲಿ ಹಾಗೂ ಪರಸ್ಪರ ಆತ್ಮೀಯತೆ ವೃದ್ಧಿಸುವಲ್ಲಿ ಕ್ರೀಡೆಗಳು ಅವಶ್ಯಕ. ಸಮಾಜದ ಅನೇಕ ಗಂಭೀರ ಸಮಸ್ಯೆಗೆ ಇದು ಪರಿಹಾರ ಒದಗಿಸಲಿದೆ.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ
ಕ್ರೀಡೆಯು ಸಂಸ್ಕೃತಿಯ ಅವಿಭಾಜ್ಯ ಅಂಗ. ಅದನ್ನು ಪೋಷಿಸುವುದು ಶಿಕ್ಷಣ ಸಂಸ್ಥಗಳ ಜವಾಬ್ದಾರಿ. ಈ ದಿಸೆಯಲ್ಲಿ ಆದಿಚುಂಚನಗಿರಿ ಕಾರ್ಯ ಶ್ಲಾಘನೀಯ.
ಸ್ವಾಮಿ ಮುಕ್ತಿದಾನಂದಜಿ, ಅಧ್ಯಕ್ಷ, ರಾಮಕೃಷ್ಣ ಆಶ್ರಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

