ಸುದ್ದಿ ಸಂಕ್ಷೇಪ
ಪತ್ರಕರ್ತರ ಸಂಘಕ್ಕೆ ಆಯ್ಕೆ
ಕೆ.ಆರ್.ನಗರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕುಪ್ಪೆ ಮಹದೇವಸ್ವಾಮಿ ಅವಿರೋಧ ಆಯ್ಕೆಯಾದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಿನಯ್ ದೊಡ್ಡಕೊಪ್ಪಲು, ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್, ಸಹ ಕಾರ್ಯದರ್ಶಿಯಾಗಿ ಕೆ.ಟಿ. ಮೋಹನ್ಕುಮಾರ್, ಖಜಾಂಚಿಯಾಗಿ ಎಸ್. ಯೋಗಾನಂದ ಅವರನ್ನು ಆಯ್ಕೆ ಮಾಡಲಾಯಿತು. ಸಂಘದ ನಿರ್ದೇಶಕರಾಗಿ ಕೆ.ಟಿ.ಮಂಜುನಾಥ್, ರಾಮಕೃಷ್ಣೇಗೌಡ, ಕೆ.ಟಿ. ರಮೇಶ್, ಎಸ್.ಬಿ. ಹರೀಶ್, ಎ.ಚೈತನ್ಯ, ಪಂಡಿತ್ನಾಟಿಕರ್, ಜಿ.ಕೆ. ನಾಗಣ್ಣ, ಭೇರ್ಯಮಹೇಶ್, ಕೆ.ಸಿ. ಮಹದೇವ್, ಡಿ. ಮಂಜುನಾಥ್ ಅವರನ್ನು ನೇಮಿಸಲಾಯಿತು.
ಗ್ರಾಪಂ ಅಧ್ಯಕ್ಷರ ವಿರುದ್ಧ ಆರೋಪ
ಕೆ.ಆರ್.ನಗರ: ತಾಲೂಕಿನ ದೊಡ್ಡೇಕೊಪ್ಪಲು ಗ್ರಾಪಂನಲ್ಲಿ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾದ ಅನುದಾನ ಅರ್ಹರಿಗೆ ದೊರಕದೆ ದುರ್ಬಳಕೆ ಆಗುತ್ತಿದೆ ಎಂದು ಸದಸ್ಯರಾದ ಸಿ.ಎ. ರಾಜು, ಶಿವಾಜಿ, ರಾಮಲಿಂಗೇಗೌಡ, ಮಹದೇವಿ, ರವಿ ಆರೋಪಿಸಿದ್ದಾರೆ. ಜ. 3 ರಂದು ನಡೆದ ಸಾಮಾನ್ಯ ಸಭೆಗೆ ಸಿ.ಎ. ರಾಜು ಮತ್ತು ಶಿವಾಜಿಯವರಿಗೆ ಸಭೆಯ ನೋಟಿಸ್ ನೀಡದೆ ಇದನ್ನು ಸಭೆಯಲ್ಲಿ ಪ್ರಶ್ನಿಸಿದಕ್ಕೆ ಅಧ್ಯಕ್ಷ ಬಿ.ಎಂ. ಗಿರೀಶ್ ಸಭೆಯನ್ನೇ ಮುಂದೂಡಿ ಸರ್ವಾಧಿಕಾರಿಯಂತೆ ವರ್ತಿಸಿದ್ದು ಈ ಬಗ್ಗೆ ಮೇಲಧಿಕಾರಿಗಳು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಜಿಪಂ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಲಾಗಿದ್ದು, ತಾಪಂ ಇಒ ಪಂಚಾಯಿತಿಗೆ ಭೇಟಿ ನೀಡಿ ಕಡತ ಪರಿಶೀಲಿಸಿ ಅಕ್ರಮ ಎಸಗಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.ದೊಡ್ಡೇಕೊಪ್ಪಲು ಗ್ರಾಪಂನಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಹಳೇ ಚೌಕಹಳ್ಳಿ ಬಳಿಯ ಅತ್ತಿಕೆರೆ ಕಾಮಗಾರಿ ಮಾಡದೆ ರು.97 ಸಾವಿರ ಪಡೆದಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಸದಸ್ಯರು ಒತ್ತಾಯಿಸಿದ್ದಾರೆ.
ಕಿರುಕುಳ; ದೂರು
ಮೈಸೂರು: ವರದಕ್ಷಿಣೆ ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ಪೊಲೀಸರ ಮೊರೆ ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಪಡುವಾರಹಳ್ಳಿ ನಿವಾಸಿ ಮಹದೇವ್ ಎಂಬವರ ಪತ್ನಿ ಪ್ರತಿಮಾ ವರದಕ್ಷಿಣೆ ಕಿರುಕುಳಕ್ಕೆ ಒಳಗಾದವರು. ಅತ್ತೆ ಮತ್ತು ಅತ್ತಿಗೆಯರು ಇವರಿಗೆ ವರದಕ್ಷಿಣೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ. ಹುಣಸೂರು ತಾಲೂಕು ಮೂಡಲಕೊಪ್ಪಲು ನಿವಾಸಿ ಬೋರೇಗೌಡ- ರೇವಮ್ಮ ಪುತ್ರಿ ಪ್ರತಿಮಾ ಹಾಗೂ ಮೈಸೂರಿನ ಪಡುವಾರಹಳ್ಳಿ ಬೋರಯ್ಯ-ಸಾವಿತ್ರಮ್ಮ ಪುತ್ರ ಮಹದೇವ್ ವಿವಾಹವಾಗಿ 7 ವರ್ಷಗಳಾಗಿದೆ. ಮದುವೆ ಸಂದರ್ಭದಲ್ಲಿ ಸಾಕಷ್ಟು ವರದಕ್ಷಿಣೆ ಪಡೆದಿದ್ದರು. ಈ ದಂಪತಿ ಅನೋನ್ಯವಾಗಿಯೇ ಸಂಸಾರ ಸಾಗಿಸುತ್ತಿದ್ದರು. ಆದರೆ, ಮಹದೇವ್ ತಾಯಿ ಸಾವಿತ್ರಮ್ಮ, ಅಕ್ಕಂದಿರಾದ ಮಂಜುಳಾ ಮತ್ತು ಭಾಗ್ಯ ಸೇರಿಕೊಂಡು ಪ್ರತಿಮಾ ಅವರಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ಮನೆಯಿಂದ ಹೊರ ಹಾಕಿದ್ದಾರೆ. ಪ್ರತಿಮಾ ತನ್ನ ಇಬ್ಬರು ಮಕ್ಕಳನ್ನು ತವರಿಗೆ ಬಿಟ್ಟು, ಅತ್ತೆ ಮತ್ತು ಅತ್ತಿಗೆಯರ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ನಡುವೆ ಪ್ರತಿಮಾ ಪತಿ ಮಹದೇವ್ ಸಹ ಒಂದು ತಿಂಗಳಿಂದ ನಾಪತ್ತೆಯಾಗಿದ್ದಾರೆ. ಮೈಸೂರಿನ ಮಹಿಳಾಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಡಿಕ್ಕಿ: ಚಾಲಕ ಸಾವು
ಮೈಸೂರು: ರಸ್ತೆಬದಿ ನಿಂತಿದ್ದ ಗೂಡ್ಸ್ ಆಟೋಗೆ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಚಾಲಕನೊಬ್ಬ ಮೃತಪಟ್ಟಿರುವ ಘಟನೆ ಮೇಟಗಳ್ಳಿ- ಹೆಬ್ಬಾಳು ಮುಖ್ಯರಸ್ತೆಯಲ್ಲಿ ನಡೆದಿದೆ. ಗೂಡ್ಸ್ ಆಟೋ ಚಾಲಕ ರಾಜು (31) ಮೃತಪಟ್ಟವರು. ಈತ ಮೇಟಗಳ್ಳಿ- ಹೆಬ್ಬಾಳು ಮುಖ್ಯರಸ್ತೆಯ ಬದಿಯಲ್ಲಿ ಗೂಡ್ಸ್ ಆಟೋ ನಿಲ್ಲಿಸಿಕೊಂಡು ಕಬ್ಬಿಣ ತುಂಬುತ್ತಿದ್ದರು. ಲಾರಿ ಡಿಕ್ಕಿಯಾದ ರಭಸಕ್ಕೆ ಅಂಗಡಿ ಸಹ ಜಖಂಗೊಂಡಿದೆ. ಗಾಯಾಳು ರಾಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

