ಜೈಲು ಹಕ್ಕಿ ಬಿಡುಗಡೆಗೆ ಮಾನದಂಡ
ಕ.ಪ್ರ.ವಾರ್ತೆ ಮೈಸೂರು ಜ. 5
ಸನ್ನಡತೆ ಕೈದಿಗಳ ಬಿಡುಗಡೆಗೆ ಅನುಸರಿಸುವ ಮಾನದಂಡ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸುವುದಾಗಿ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.
ಕರ್ನಾಟಕ ಕಾರಾಗೃಹಗಳ ಇಲಾಖೆ ಹಾಗೂ ಸಂಕಲ್ಪ ಸಂಸ್ಥೆ ಸಂಯುಕ್ತವಾಗಿ ಮೈಸೂರು ಕೇಂದ್ರ ಕಾರಾಗೃಹ ನಿವಾಸಿಗಳಿಗಾಗಿ ಆಯೋಜಿಸಿರುವ ಮನ- ಪರಿವರ್ತನಾ ರಂಗ ತರಬೇತಿ ಶಿಬಿರವನ್ನು ಅವರು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಸನ್ನಡತೆ ಆಧಾರದ ಮೇಲೆ ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ನಿರ್ಧರಿಸಲಾಗಿದೆ. ಆದರೆ, ಕೆಲಮೊಂದು ಮಾನದಂಡ ಆಧರಿಸಿ ಕೈದಿಗಳ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಜೊತೆಗೆ ಕೈದಿಗಳಿಂದಲೂ ಸಹ ಮಾನದಂಡ ಬದಲಾವಣೆ ಕೋರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಕೈದಿಗಳಲ್ಲಿರುವ ಕಲೆಯನ್ನು ಹೊರ ಜಗತ್ತಿಗೆ ತೋರಿಸುವ ಸಲುವಾಗಿ ಕಾರಾಗೃಹಗಳ ಇಲಾಖೆ, ಸಂಕಲ್ಪ ಸಂಸ್ಥೆಯು ಈ ಶಿಬಿರ ಹಮ್ಮಿಕೊಂಡಿದೆ. ನಾಟಕಗಳಿಂದ ಕೈದಿಗಳ ಮನ- ಪರಿವರ್ತನೆ ಮಾತ್ರವಲ್ಲದೆ, ಅವರಿಗೆ ಸಂದೇಶ, ಜೀವನ ಮೌಲ್ಯ, ಸಾಮಾಜಿಕ ಬದುಕಿನ ಆಗು-ಹೋಗು ತಿಳಿಸಲಾಗುತ್ತಿದೆ ಎಂದು ತಿಳಿಸಿದರು.
ಚಿಂತಕ ಪ. ಮಲ್ಲೇಶ್, ಸಾಹಿತಿ ಪ್ರೊ.ಬಿ. ಜಯಪ್ರಕಾಶ್ಗೌಡ, ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಂ. ಮಹದೇವಯ್ಯ, ಸಂಕಲ್ಪ ಸಂಸ್ಥೆ ನಿರ್ದೇಶಕ ಹುಲುಗಪ್ಪ ಕಟ್ಟೀಮನಿ ಇದ್ದರು.
ಮಹದೇವಗೆ ಕೈದಿಗಳ ಮೊರೆ...
ಇದೇ ವೇಳೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಅವಧಿಪೂರ್ವ ಬಿಡುಗಡೆಗೊಳಿಸುವಂತೆ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು. ನೆರೆಯ ರಾಜ್ಯಗಳಲ್ಲಿ ಸನ್ನಡತೆ ಹೊಂದಿರುವ ಕೈದಿಗಳನ್ನು ಐದು ವರ್ಷಗಳಿಗೆ ಬಂಧಮುಕ್ತಗೊಳಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಕಳೆದ 7 ವರ್ಷಗಳಿಂದ ರಾಜ್ಯ ಸರ್ಕಾರವು ಕೈದಿಗಳನ್ನು ಬಿಡುಗಡೆಗೊಳಿಸದ ಹಿನ್ನೆಲೆಯಲ್ಲಿ ಸಾವಿರಾರು ಕುಟುಂಬ ಬೀದಿಪಾಲಾಗಿದೆ. ಹೀಗಾಗಿ ರಾಜ್ಯ ಸರ್ಕಾರವು ಮಾನವೀಯತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೆ ಮುಂದಾಗಬೇಕು ಎಂದು ಅವರು ಕೋರಿದರು.
ಜೈಲಿನಿಂದ ಜೈಲಿಗೆ ರಂಗಯಾತ್ರೆ...
ಮೈಸೂರಿನ ಸಂಕಲ್ಪ ಸಂಸ್ಥೆಯು ಜೈಲಿನಿಂದ- ಜೈಲಿಗೆ ರಂಗಯಯಾತ್ರೆ ಹಮ್ಮಿಕೊಂಡಿದೆ. ಇದಕ್ಕಾಗಿ ರಾಜ್ಯದ 4 ಜೈಲಿನಿಂದ 90 ಕೈದಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಿದೆ. ಧಾರವಾಡ ಕೇಂದ್ರ ಕಾರಾಗೃಹದ ಕೈದಿಗಳು ದಾವಣಗೆರೆ ವೀರೇಶ್ ನಿರ್ದೇಶನದಲ್ಲಿ ಹಬೀಬ್ ತನ್ವೀರ್ ಅವರ ಚೋರ ಚರಣದಾಸ, ಬೆಳಗಾವಿ ಕೇಂದ್ರ ಕಾರಾಗೃಹದ ಕೈದಿಗಳು ಗಣಪತಿ ಹೊನ್ನಾವರ ನಿರ್ದೇಶನದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರ ಹುಲಿಯ ನೆರಳು, ಮೈಸೂರು ಮತ್ತು ಬೆಂಗಳೂರು ಕೇಂದ್ರ ಕಾರಾಗೃಹದಿಂದ ಹುಲುಗಪ್ಪ ಕಟ್ಟೀಮನಿ ನಿರ್ದೇಶನದಲ್ಲಿ ಜಯಂತ ಕಾಯ್ಕಿಣಿ ಅವರ ಜತೆಗಿರುವನು ಚಂದಿರ ಹಾಗೂ ಹೆಗ್ಗೋಡು ಜೀವನ್ಕುಮಾರ್ ನಿರ್ದೇಶನದಲ್ಲಿ ಕೆ.ವಿ. ಸುಬ್ಬಣ್ಣ ಅವರ ಭಗವದುಜ್ಜುಕೀಯಂ (ಸೂಳೆ ಸನ್ಯಾಸಿ) ನಾಟಕಗಳ ಪ್ರದರ್ಶನ ನಡೆಯಲಿದೆ. ಈ ನಾಲ್ಕು ನಾಟಕದೊಂದಿಗೆ ಜೈಲಿನಿಂದ ಜೈಲಿಗೆ ರಂಗಯಾತ್ರೆಯು ಜನವರಿ ಕೊನೆಯ ವಾರದಿಂದ ಮಾರ್ಚ್ ಅಂತ್ಯದವರೆಗೆ ಮೈಸೂರು, ಮಂಡ್ಯ, ಹಾಸನ, ಧಾರವಾಡ, ಉಡುಪಿ ಹಾಗೂ ಬೆಂಗಳೂರು ನಗರಗಳಲ್ಲಿ ನಾಟಕ ಪ್ರದರ್ಶನವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

