ಮೈಸೂರು

ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ

Published On :

ಕ.ಪ್ರ.ವಾರ್ತೆ ,  ಹುಣಸೂರು ,  ಜ. 7
ತಾಲೂಕಿನ ವಿವಿಧ ಭಾಗಗಳಲ್ಲಿ ಟಿಎಸ್ಪಿ ಯೋಜನೆಯಡಿ 1.20 ಕೋಟಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಪಿ. ಮಂಜುನಾಥ್ ಗುದ್ದಲಿಪೂಜೆ ನೆರವೇರಿಸಿದರು.
ತಾಲೂಕಿನ ವಿನೋಬಾ ಕಾಲೋನಿಯಲ್ಲಿ 40 ಲಕ್ಷ ಯೋಜನೆಯಡಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಅವರು ಮಾತನಾಡಿದರು.
ನೂತನ ಸರ್ಕಾರದ ಮೊದಲ ಅನುದಾನ ಇದಾಗಿದ್ದು, ಕಾಮಗಾರಿಗಳ ಗುಣಮಟ್ಟ ಕಾಪಾಡುವಲ್ಲಿ ಸ್ಥಳೀಯರು ಹೆಚ್ಚಿನ ಗಮನಹರಿಸಬೇಕು. ತಾಲೂಕಿನ ಸಿಂಗಮಾರನಹಳ್ಳಿ, ಸಂಜೀವನಗರ ಹಾಗೂ ಮಾದಳ್ಳಿಕೊಪ್ಪಲು ಗ್ರಾಮದಲ್ಲಿ ತಲಾ 25 ಲಕ್ಷ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಸತತ ಎರಡನೇ ಬಾರಿಗೆ ತಮ್ಮ ಮೇಲೆ ವಿಶ್ವಾಸವಿಟ್ಟು, ತಾಲೂಕಿನ ಜನತೆ ಶಾಸಕನನ್ನಾಗಿ ಆಯ್ಕೆ ಮಾಡಿರುವುದಕ್ಕೆ ಧಕ್ಕೆ ಬಾರದಂತೆ ಬದ್ಧತೆಯಿಂದ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಜಿಪಂ ಸದಸ್ಯ ರಮೇಶ್, ಡಾ.ಪುಷ್ಪಾವತಿ ಅಮರನಾಥ್ ಮಾತನಾಡಿದರು. ಆಸ್ಪತ್ರೆ ಕಾವಲ್ ಗ್ರಾಪಂ ಅಧ್ಯಕ್ಷ ರಾಮಯ್ಯ, ತಾಪಂ ಸದಸ್ಯೆ ಜಯಂತಿ ವೀರಭದ್ರಪ್ಪ, ರಂಗಸ್ವಾಮಿ, ಗ್ರಾಪಂ ಸದಸ್ಯ ವೆಂಕಟೇಶ್, ರಮೇಶ್, ಇಒ ಡಾ.ಪ್ರೇಮ್ ಕುಮಾರ್, ಮುಖಂಡ ಚಿನ್ನವೀರಯ್ಯ, ಲೋಕೋಪಯೋಗಿ ಇಲಾಖೆಯ ಎಇಇ ವಾಸು ಹಾಗೂ ಗ್ರಾಮಸ್ಥರು ಇದ್ದರು.
ಜೆಡಿಎಸ್ ಸಭೆಯಾದ ಜನಸಂಪರ್ಕ ಸಭೆ
ಭೇರ್ಯ: ತಾಲೂಕಿನಲ್ಲಿ ನಡೆಯುವ ಜನಸಂಪರ್ಕ ಸಭೆಯನ್ನು ಜೆಡಿಎಸ್ ಸಭೆಯನ್ನಾಗಿ ತಹಸೀಲ್ದಾರ್ ವೀಣಾ ನಡೆಸುತ್ತಿದ್ದಾರೆ ಎಂದು ಭೇರ್ಯ ಜಿಪಂ ಸದಸ್ಯೆ ಪುಷ್ಪಲತಾ ಆರೋಪಿಸಿದ್ದಾರೆ.
ಇತ್ತೀಚೆಗೆ ಹೊಸಅಗ್ರಹಾರ ಹೋಬಳಿಯ ಮುಂಜನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಜನಸಂಪರ್ಕ ಸಭೆಗೆ ಈ ಭಾಗದ ಜಿಪಂ ಸದಸ್ಯೆಯಾದ ನನ್ನನ್ನು ಸಭೆಗೆ ಆಹ್ವಾನಿಸದೆ ಕಡೆಗಣಿಸಿದ್ದು, ಒಬ್ಬ ಜನಪ್ರತಿನಿಧಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಜನಸಂಪರ್ಕ ಸಭೆಗೆ ಆಹ್ವಾನ ನೀಡದೆ ಇರುವುದು ತಾಲೂಕಿನ ತಹಸೀಲ್ದಾರ್ ಅವರ ದುಂಡಾವರ್ತನೆಯಾಗಿದ್ದು, ಮುಂಬರುವ ಜಿಪಂ ಸಾಮಾನ್ಯ ಸಭೆಯಲ್ಲಿ ತಾಲೂಕಿನ ತಹಸೀಲ್ದಾರ್ ವೀಣಾ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ತಿಳಿಸಿದ್ದಾರೆ.
ಜನಸಂಪರ್ಕ ಸಭೆಗಳು ಪಕ್ಷಾತೀತವಾಗಿ ನಡೆಯಬೇಕು. ಆದರೆ ತಹಸೀಲ್ದಾರ್ ವೀಣಾ ಅವರು ಶಾಸಕರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಪಕ್ಷದ ಜಿಪಂ ಸದಸ್ಯರನ್ನು ಸಭೆಗಳಿಗೆ ಆಹ್ವಾನಿಸುತ್ತಿಲ್ಲ ಎಂಬುದು ಸಾಬೀತಾಗಿದ್ದು. ತಹಸೀಲ್ದಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಸಿ.ಪಿ.ರಮೇಶ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಟಿ. ಮೋಹನ್‌ಕುಮಾರ್, ಖಂಡಿಸಿದ್ದಾರೆ.
ಬಿಎಸ್ಪಿ ತಾಲೂಕು ಸಮಿತಿಗೆ ಆಯ್ಕೆ
ನಂಜನಗೂಡು: ನಂಜನಗೂಡು ತಾಲೂಕಿನ ಬಹುಜನ ಸಮಾಜ ಪಾರ್ಟಿಯ ವಿಧಾನಸಭಾ ಕ್ಷೇತ್ರ ಸಮಿತಿಗೆ ಮತ್ತು ಸೆಕ್ಟರ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಭುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.ಕ್ಷೇತ್ರ ಸಂಶೋಧಕರಾಗಿ ರಾಮಚಂದ್ರ ಸಿಂಗಾರಿಪುರ, ಜಿಲ್ಲಾ ಕಾರ್ಯದರ್ಶಿಯಾಗಿ ಡಿ.ಕೆ. ಶಿವಣ್ಣ, ಕ್ಷೇತ್ರದ ಅಧ್ಯಕ್ಷರಾಗಿ ಶ್ರೀಕಂಠ ಶಂಕರಪುರ, ಉಪಾಧ್ಯಕ್ಷರಾಗಿ ಚನ್ನಬಸವಯ್ಯ ಸಿದ್ದೇಗೌಡನಹುಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಚನ್ನಪ್ಪ ಮಲ್ಲಹಳ್ಳಿ, ಖಜಾಂಚಿಯಾಗಿ ಮಹದೇವು ಉಪ್ಪಿನಹಳ್ಳಿ, ಕಚೇರಿ ಕಾರ್ಯದರ್ಶಿಯಾಗಿ ಶಿವಣ್ಣ ಮುಳ್ಳೂರು ಹಾಗೂ ಕ್ಷೇತ್ರ ಕಾರ್ಯದರ್ಶಿಗಳಾಗಿ ಶಿವಣ್ಣ ಶ್ರೀನಗರ, ಸಿದ್ದೇಶ್ ದೇವನೂರು, ರಮೇಶ್ ಹಗಿನವಾಳು, ಪುಟ್ಟೀರಯ್ಯ ಬ್ಯಾಳಾರು, ಮಲ್ಲೇಶ್ ಹರದನಹಳ್ಳಿ ಇವರನ್ನು ಆಯ್ಕೆ ಮಾಡಲಾಯಿತು. ಹುರ ಸೆಕ್ಟರ್ ಸಮಿತಿ ಅಧ್ಯಕ್ಷರಾಗಿ ಶಿವರಾಜು ಹುರ ಅವರನ್ನು ಆಯ್ಕೆ ಮಾಡಲಾಯಿತು.
ಶುಲ್ಕ ಏರಿಕೆ ವಿರೋಧಿಸಿ ಪ್ರತಿಭಟನೆ
ಎಚ್.ಡಿ. ಕೋಟೆ: ಸರ್ಕಾರಿ ಹಾಗು ಖಾಸಗಿ ಪದವಿಪೂರ್ವ ಕಾಲೇಜುಗಳ ಶುಲ್ಕ ಏರಿಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಅಖಿಲ ಭಾರತ ವಿಧ್ಯಾರ್ಥಿ ಫೆಡರೇಷನ್‌ನಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ರಾಜ್ಯ ಸರ್ಕಾರವು ಕಾಲೇಜುಗಳ ಶುಲ್ಕವನ್ನು ಶೇ.20 ರಷ್ಟು ಏರಿಕೆ ಆದೇಶ ಹೊರಡಿಸಿರುವುದನ್ನು ಎಎಸ್‌ಎಫ್‌ಐ ಖಂಡಿಸುತ್ತದೆ. ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ) 2006 ಕಾಯ್ದೆ ಜಾರಿ ಮಾಡಲು ಹೊರಟಾಗ ರಾಜ್ಯದಲ್ಲಿ ಪ್ರತಿಭಟನೆ ಮುಖಾಂತರ ಅದನ್ನು ತಡೆಹಿಡಿಯಲಾಗಿತ್ತು. ಆದರೆ ಈಗ ಹಣದ ಆಸೆಗಾಗಿ ಶುಲ್ಕವನ್ನು ಏರಿಕೆ ಮಾಡಲು ಮುಂದಾಗಿದೆ. ಶುಲ್ಕ ಏರಿಕೆಯಿಂದ ಬಡವರು, ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡದವರು ಶಿಕ್ಷಣದಿಂದ ವಂಚಿತರಾಗುವ ಕಾಲ ಬಂದಿದೆ ಎಂದು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಿಂದ ಮೆರವಣಿಗೆಯ ಮುಖಾಂತರ ಬಂದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಗ್ರಾಪಂ ಕಾರ್ಯದರ್ಶಿ ಅಮಾನತು
ಮೈಸೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ತಾಲೂಕಿನ ಕರ್ಣಕುಪ್ಪೆ ಗ್ರಾಪಂ ಕಾರ್ಯದರ್ಶಿ ಗ್ರೇಡ್-2 ಸಿ.ಎಸ್. ಶೇಖರ್ ಎಂಬವರನ್ನು ಜಿಪಂ ಸಿಇಒ ಪಿ.ಎ. ಗೋಪಾಲ ಅಮಾನತುಗೊಳಿಸಿದ್ದಾರೆ. 2014ರ ಜ.4 ರಂದು ಶೇಖರ್ ಅವರು ತಮ್ಮ ಮನೆಯಲ್ಲೇ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದರು.
ಮನೋಜ್‌ಗೆ ಶೌರ್ಯ ಪ್ರಶಸ್ತಿ
ತಾಲೂಕಿನ ದೊಡ್ಡಮಾರಗೌಡನಹಳ್ಳಿಯ ನವೋದಯ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಎಸ್.ಎಸ್. ಮನೋಜ್‌ಗೆ ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಲಭಿಸಿದೆ. ಸೆ.2, 2012 ರಲ್ಲಿ ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಗೆ ಕಾಲುಜಾರಿ ಬಿದ್ದ ಮಂಚಮ್ಮ ಎಂಬ ಅಂಗವಿಕಲೆಯನ್ನು ಪ್ರಾಣಾಪಾಯದಿಂದ ರಕ್ಷಿಸಿರುವ ಈತನ ಸಾಧನೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜ.26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿ ಪತ್ರ, ಚಿನ್ನದ ಪದಕ ಹಾಗೂ 1 ಲಕ್ಷ ನಗದು ಪುರಸ್ಕಾರ ನೀಡಿ ಗೌರವಿಸುವರು. ಈ ಹಿಂದೆ ಕರ್ನಾಟಕ ಸರ್ಕಾರ ಸಹ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಮನೋಜ್ ಸಾಧನೆ ಪರಿಗಣಿಸಿ ಹೊಯ್ಸಳ ಶೌರ್ಯಪ್ರಶಸ್ತಿ ನೀಡಿ ರಾಜ್ಯಪಾಲ ಡಾ.ಭಾರದ್ವಾಜ್ ಸನ್ಮಾನಿಸಿದ್ದರು.
ಬತ್ತ, ಮಾವು ಬೆಳೆಗಾರರಿಗೆ ಸಲಹೆ
ಬತ್ತ ಮತ್ತು ಮಾವು ಬೆಳೆಗೆ ತಗಲಬಹುದಾದ ರೋಗಗಳ ಬಗ್ಗೆ ರೈತರು ಎಚ್ಚರಿಕೆಯಿಂದಿರಬೇಕು ಎಂದು ನಾಗನಹಳ್ಳಿ ಸಮಗ್ರ ಕೃಷಿ ಹವಾಮಾನ ವಿಭಾಗ ತಿಳಿಸಿದೆ. ಜ.8 ರಿಂದ 10 ರವರೆಗೆ ಮಳೆ ಬರುವ ಸಾಧ್ಯತೆ ಇಲ್ಲಿರುವುದರಿಂದ ರೈತರು ಬತ್ತದ ಕಟಾವು ಮಾಡಬಹುದು. ಅದಕ್ಕೂ ಮುಂಚೆ ಒಂದು ವಾರ ಬಸಿಗಾಲುವೆಗಳನ್ನು ತೆಗೆದು ನೀರನ್ನು ಬಸಿಯಬೇಕು. ಮಾವು ಹೂ ಬಿಡುವ ವೇಳೆಗೆ ಜಿಗಿಹುಳು ಮತ್ತು ಬೂದಿ ರೋಗ ತಗಲುತ್ತದೆ. ಮಾವಿನಲ್ಲಿ ಹೂ ಬಿಡುವುದಕ್ಕೆ ಮುಂಚೆ ಹಾಗೂ ಕಾಯಿ ಕಚ್ಚಿದ ಕೂಡಲೆ ಜಿಗಿಹುಳು ಮತ್ತು ಬೂದಿ ರೋಗದ ನಿಯಂತ್ರಣಕ್ಕಾಗಿ ಗಿಡಗಳಿಗೆ 1.5 ಮಿ.ಲೀ. ರೋಗರ್ ಜೊತೆಗೆ 3 ಗ್ರಾಂ. ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಸಿಂಪಡಿಸಬೇಕು.ಹೆಚ್ಚಿನ ಮಾಹಿತಿಗೆ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ. ಗೋವಿಂದರಾಜು ಮತ್ತು ಸಹ ಸಂಶೋಧಕ ಎನ್. ನರೇಂದ್ರ ಬಾಬು ದೂ. 0821- 2591267.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.