ಮೈಸೂರು

ಅಂತರ್ಜಾತಿ ವಿವಾಹವಾಗಿದ್ದ ಯುವಕ ವಿಷ ಕುಡಿದು ಆತ್ಮಹತ್ಯೆ

Published On :

ಮೈಸೂರು: ಅಂತರ್ಜಾತಿ ವಿವಾಹವಾಗಿದ್ದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಮಂಡಿಮೊಹಲ್ಲಾ ನಿವಾಸಿ ಕೃಷ್ಣಮೂರ್ತಿ ಎಂಬವರ ಪುತ್ರ ವಿಕಾಸ್ (25) ಆತ್ಮಹತ್ಯೆ ಮಾಡಿಕೊಂಡವರು. ವಿಕಾಸ್ ಮತ್ತು ರಾಮಕೃಷ್ಣನಗರದ ನಿವಾಸಿ ವೆಂಕಟೇಶ್ ಎಂಬವರ ಪುತ್ರಿ ಗೀತಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಜಾತಿಯೂ ಬೇರೆ ಬೇರೆಯಾದ ಕಾರಣ ಎರಡೂ ಮನೆಯವರು ಮದುವೆಗೆ ಒಪ್ಪಲಿಲ್ಲ. ಹೀಗಾಗಿ ಪ್ರೇಮಿಗಳು ಮನೆ ಬಿಟ್ಟು ಹೋಗಿ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ನಂತರ ಈ ಜೋಡಿ ಶ್ರೀರಾಂಪುರದಲ್ಲಿ ವಾಸವಿದ್ದರು. ವಿಕಾಸ್ ಕೆ.ಟಿ. ರಸ್ತೆ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ, ಕೆಲವೇ ದಿನಗಳಲ್ಲಿ ಪತ್ನಿಯನ್ನು ಬಿಟ್ಟು ವಿಕಾಸ್ ಪಡುವಾರಹಳ್ಳಿಯಲ್ಲಿ ವಾಸವಿದ್ದ. ಹೀಗಿರುವಾಗ ಮೈಸೂರು ವೈದ್ಯಕೀಯ ಕಾಲೇಜು ಹಿಂಭಾಗದಲ್ಲಿ ಮಂಗಳವಾರ ಸಂಜೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಂಡಿ ಠಾಣೆ ಇನ್ಸ್‌ಪೆಕ್ಟರ್ ಟಿ.ಬಿ. ರಾಜಣ್ಣ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಎಂ.ಜಿ.ಕೊಪ್ಪಲಿನಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ: ವಾಸು
ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೆಗೌಡನಕೊಪ್ಪಲಿಗೆ ಕಾಂಕ್ರಿಟ್ ರಸ್ತೆ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಶಾಸಕ ವಾಸು ತಿಳಿಸಿದರು. ಮಂಚೆಗೌಡನಕೊಪ್ಪಲಿನಲ್ಲಿ ಬುಧವಾರ ಪಾದಯಾತ್ರೆ ನಡೆಸಿದ ಅವರು, ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿದ ಬಳಿಕ ಈ ವಿಷಯ ತಿಳಿಸಿದರು. ಶಾಸಕರ ಅನುದಾನದಡಿ ಸುಮಾರು 70ರಿಂದ 90 ಲಕ್ಷ ವೆಚ್ಚದಲ್ಲಿ ಮಂಚೆಗೌಡನಕೊಪ್ಪಲಿನಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮತ್ತು ಇತರ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು. ಯೋಜನೆ ರೂಪಿಸಲಾಗಿದ್ದು, ಸದ್ಯದಲ್ಲಿಯೇ ಕಾರ್ಯರೂಪಕ್ಕೆ ತರಲಾಗುವುದು ಎಂದರು. ಸ್ಥಳೀಯ ನಿವಾಸಿಗಳು ಕುಡಿಯುವ ನೀರು, ಬೀದಿ ದೀಪ ಮತ್ತು ರಸ್ತೆ ಸರಪಡಿಸುವಂತೆ ಮನವಿ ಸಲ್ಲಿಸಿದರು. ನಗರ ಪಾಲಿಕೆ ಸದಸ್ಯರಾದ ಡಿ. ನಾಗಭೂಷಣ್, ಮಹದೇವಪ್ಪ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಇದ್ದರು.
ಚಿರತೆಗಳ ದಾಳಿ: 4 ಕುರಿ, ಎರಡು ಮೇಕೆ ಬಲಿ
ಹುಣಸೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಚಿರತೆಗಳು ನಾಲ್ಕು ಕುರಿ ಹಾಗೂ ಎರಡು ಮೇಕೆಗಳನ್ನು ಕೊಂದು, ಮತ್ತೆರಡು ಮೇಕೆಗಳನ್ನು ತೀವ್ರವಾಗಿ ಗಾಯಗೊಳಿಸಿದೆ.
ಹನಗೋಡು ಸಮೀಪದ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಚಂದನಗಿರಿ ಹಾಡಿ, ನೇರಳೆಕುಪ್ಪೆ ಬಿ ಹಾಡಿ ಹಾಗೂ ಪಟ್ಟಣ ಸಮೀಪದ ಚಿಕ್ಕಹುಣಸೂರಿನ ಬಳಿ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಚಂದನಗಿರಿ ಹಾಡಿಗೆ ದಾಳಿ ಇಟ್ಟ ಚಿರತೆಯು ಬೈರ ಮತ್ತು ಸೀನ ಅವರಿಗೆ ಸೇರಿದ ಎರಡು ಮೇಕೆಗಳನ್ನು ಕೊಂದು ತಿಂದಿದೆ.
ನೇರಳೆ ಕುಪ್ಪೆ ಬಿ ಹಾಡಿಯ ಸೀತಮ್ಮ ಅವರ ಕೊಟ್ಟಿಗೆಯಲ್ಲಿದ್ದ ಎರಡು ಕುರಿಗಳನ್ನು ಸಾಯಿಸಿ ಮತ್ತೊಂದನ್ನು ತೀವ್ರ ಗಾಯಗೊಳಿಸಿದೆ. ಅಂತೆಯೇ ಚಿಕ್ಕಹುಣಸೂರಿನ ರಾಘವೇಂದ್ರ ಎಂಬವರ ಹೊಲದಲ್ಲಿ ಬೀಡು ಬಿಟ್ಟಿದ್ದ ಕುರಿ ಹಿಂಡಿನ ಮೇಲೆ ದಾಳಿ ನಡೆಸಿ ಎರಡು ಕುರಿಗಳನ್ನು ಕೊಂದಿದೆ. ಸ್ಥಳಕ್ಕೆ ಕಚುವಿನಹಳ್ಳಿ ವನಪಾಲಕ ರಷೀದ್, ಅರಣ್ಯ ರಕ್ಷಕ ಶಿವಶಂಕರ್ ಭೇಟಿ ನೀಡಿ ಮಹಜರು ನಡೆಸಿದರು.
ನಕಲಿ ತನಿಖಾಧಿಕಾರಿ ಬಂಧನ, ಬಿಡುಗಡೆ
ಮೈಸೂರು: ಕೆಎಸ್‌ಆರ್‌ಟಿಸಿ ತಪಾಸಣಾ ಇನ್ಸ್‌ಪೆಕ್ಟರ್ ಸೋಗಿನಲ್ಲಿ ಬಸ್ ಕಂಡಕ್ಟರ್‌ಗಳನ್ನು ಪ್ರಶ್ನಿಸಿ ವಂಚಿಸುತ್ತಿದ್ದ ಮಹಿಳೆಯನ್ನು ನಜರ್‌ಬಾದ್ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ವಿದ್ಯಾನಗರ ನಿವಾಸಿ ನೇತ್ರಾ (25) ಬಂಧಿತ ನಕಲಿ ತನಿಖಾಧಿಕಾರಿ. ಬಸ್ ತಡೆದು, ಕಂಡಕ್ಟರ್‌ಗಳನ್ನು ಪ್ರಶ್ನೆ ಮಾಡುತ್ತಿದ್ದರು. ಈ ಸಂಬಂಧ ಕೆಎಸ್‌ಆರ್‌ಟಿಸಿ ಅಧೀಕ್ಷಕ ನಿತಿನ್ ಕೃಷ್ಣ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ನೇತ್ರಾ ಬುಧವಾರ ತಪಾಸಣೆಯಲ್ಲಿ ನಿರತರಾಗಿದ್ದಾಗ ಬಂಧಿಸಲಾಗಿದೆ. ಕೆಎಸ್‌ಆರ್‌ಟಿಸಿಯಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ ಕೆಲಸ ಸಿಕ್ಕಿಲ್ಲ. ಈ ಕೆಲಸ ಮಾಡಬೇಕೆಂಬ ಬಯಕೆಯಿಂದ ಹೀಗೆ ಮಾಡಿರುವುದಾಗಿ ನೇತ್ರಾ ಒಪ್ಪಿಕೊಂಡಿದ್ದಾರೆ. ಮುಚ್ಚಳಿಕೆ ಬರೆಯಿಸಿಕೊಂಡು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದಾಗಿ ಇನ್ಸ್‌ಪೆಕ್ಟರ್ ಕೆ.ಸಿ. ಪೂವಯ್ಯ ತಿಳಿಸಿದ್ದಾರೆ.
ಮೂವರ ನಾಪತ್ತೆ
ಮೈಸೂರು: ವಂದೇಮಾತರಂ ನಗರದ ನಿವಾಸಿ ಅಂಥೋಣಿ ಎಂಬವರ ಪತ್ನಿ ಲಕ್ಷ್ಮಿ (22), ಪುತ್ರಿ ನವ್ಯಶ್ರೀ ಮತ್ತು ನಾದಿನಿ ಸುಮಾ (20) ನಾಪತ್ತೆಯಾಗಿದ್ದಾರೆ. ಚಾಲಕನಾದ ಅಂಥೋಣಿ ತನ್ನ ಮಗನೊಂದಿಗೆ ಡಿ.29ರಂದು ಮಂಡಿ ಮೊಹಲ್ಲಾಗೆ ಹೋಗಿ ವಾಪಸ್ ಮನೆಗೆ ಹೋದಾಗ ಮೂವರು ನಾಪತ್ತೆಯಾಗಿದ್ದರು. ಈ ಮೂವರನ್ನು ಪತ್ತೆ ಮಾಡಿಕೊಡುವಂತೆ ಪೊಲೀಸರಿಗೆ ಅಂಥೋಣಿ ದೂರು ನೀಡಿದ್ದಾರೆ. ಲಕ್ಷ್ಮಿ ಚಹರೆ- 5 ಅಡಿ ಎತ್ತರ, ಕೋಲು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು. ನವ್ಯಶ್ರೀ ಚಹರೆ- 2.6 ಅಡಿ ಎತ್ತರ, ಗುಂಡು ಮುಖ, ದೃಢಕಾಯ ಶರೀರ. ಸುಮ ಚಹರೆ- 5.1 ಅಡಿ ಎತ್ತರ, ಗುಂಡು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು. ಈ ಮೂವರು ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418313, 513 ಸಂಪರ್ಕಿಸಲು ಮಂಡಿ ಠಾಣೆಯ ಎಎಸ್‌ಐ ಬಿ.ಪಿ. ನಾಗಮ್ಮ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.