ಮೈಸೂರು

ಮಹೇಶ್ ಸೋಸಲೆ ಗ್ರಾಪಂ ಅಧ್ಯಕ್ಷ

Published On :

ಟಿ. ನರಸೀಪುರ: ಸೋಸಲೆ ಗ್ರಾಪಂ ಅಧ್ಯಕ್ಷರಾಗಿ ಬಿ.ಎಸ್. ಮಹೇಶ ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷ ಎಚ್. ಅಣ್ಣಯ್ಯಸ್ವಾಮಿ ಅವರು ರಾಜಿನಾಮೆ ನೀಡಿದ ಹಿನ್ನೆಲೆ ನೂತನ ಅಧ್ಯಕ್ಷರ ಆಯ್ಕೆಗೆ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ನಡೆಯಿತು.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿ.ಎಸ್. ಮಹೇಶ ಹಾಗೂ ವೆಂಕಟರಾಮು ನಾಮಪತ್ರ ಸಲ್ಲಿಸಿದರು. ನಂತರ ನಡೆದ ಗುಪ್ತ ಮತದಾನದಲ್ಲಿ 10 ಮತಗಳನ್ನು ಪಡೆದ ಮಹೇಶ ಅಧ್ಯಕ್ಷರಾದರೆ, 8 ಮತಗಳನ್ನು ಪಡೆದ ವೆಂಕಟರಾಮು ಪರಾಭವಗೊಂಡರು.
ಪಂಚಾಯಿತಿಯಲ್ಲಿರುವ 19 ಸದಸ್ಯರಲ್ಲಿ 18 ಸದಸ್ಯರು ನೂತನ ಅಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ರೇಷ್ಮೆ ಮಾರುಕಟ್ಟೆ ಸಹಾಯಕ ನಿರ್ದೇಶಕ ಸಂಪತ್‌ಕುಮಾರ್ ಚುನಾವಣಾಧಿಕಾರಿಯಾಗಿ, ಸಹಾಯಕ ಚುನಾವಣಾಧಿಕಾರಿಯಾಗಿ ಕೇಶವಮೂರ್ತಿ ಕಾರ್ಯನಿರ್ವಹಿಸಿದರು.
ಗ್ರಾಪಂ ಸದಸ್ಯರಾದ ಸಿದ್ದನಹುಂಡಿ ಸೋಮಣ್ಣ, ನಟರಾಜು, ಕೆ.ಬಸವರಾಜು, ರಂಗಸ್ವಾಮಿ, ರಾಜಣ್ಣ, ಗಣೇಶ್, ನಾಗರಾಜು, ನಿಂಗಮ್ಮ, ಮಂಗಳ ಸುರೇಶ್, ತಾಪಂ ಅಧ್ಯಕ್ಷ ನಟರಾಜು, ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನಸ್ವಾಮಿ, ಎಸ್ಸಿ ಕಾಂಗ್ರೆಸ್ ಅಧ್ಯಕ್ಷ ಎ. ಶಿವಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು ಇದ್ದರು.
ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ
ಕೆ.ಆರ್. ನಗರ: ರೋಟರಿ ಕ್ಲಬ್‌ನ ವತಿಯಿಂದ ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆಯ ಜತೆಗೆ, ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದವರನ್ನು ಗುರುತಿಸಿ, ಅಭಿನಂದಿಸಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಒದಗಿಸುವ ಸಮಾನಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಕ್ಲಬ್ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಮಧುವನಹಳ್ಳಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ನೀಡಿದ ತಟ್ಟೆ, ಲೋಟ ಹಾಗೂ ವಿವಿಧ ಲೇಖನ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಕ್ಲಬ್ ವತಿಯಿಂದ ಪ್ರತಿ ವರ್ಷ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಶಿಕ್ಷಣ ಸಂಯೋಜಕ ನಾಗರಾಜು, ಕ್ಲಬ್ ಕಾರ್ಯದರ್ಶಿ ರವಿಶಂಕರ್, ಮಾಜಿ ಅಧ್ಯಕ್ಷ ನಟರಾಜು, ಆದಿ ಜಾಂಬವ ಸಂಘದ ತಾಲೂಕು ಅಧ್ಯಕ್ಷ ಎಂ.ಲೋಕೇಶ್, ಯುವ ಮುಖಂಡ ರವಿಕುಮಾರ್ ಮಾತನಾಡಿದರು.
ಆರ್‌ಟಿಸಿ ವಿತರಣಾ ಕೇಂದ್ರ ಆರಂಭಕ್ಕೆ ಆಗ್ರಹ
ಟಿ. ನರಸೀಪುರ: ತಾಲೂಕು ಕಚೇರಿಯಲ್ಲಿ ಪ್ರತ್ಯೇಕ ಆರ್‌ಟಿಸಿ ವಿತರಣಾ ಕೇಂದ್ರ ತೆರೆಯುವಂತೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತೋಟದಪ್ಪ ಬಸವರಾಜು ಸರ್ಕಾರವನ್ನು ಆಗ್ರಹಿಸಿದ್ದಾರೆ. ಸಕಾಲದಲ್ಲಿ ರೈತರಿಗೆ ಪಹಣಿ (ಆರ್‌ಟಿಸಿ) ಪತ್ರ ಸಿಗುತ್ತಿಲ್ಲ. ನಿಗದಿತ ಅವಧಿಯೊಳಗೆ ಖರೀದಿ ಕೇಂದ್ರದಲ್ಲಿ ಬತ್ತ ವಿಲೇವಾರಿಯಾಗದ್ದಕ್ಕೆ ತಾಲೂಕಿನ ರೈತರ ಬವಣೆ ಹೇಳತೀರದು. ರಾಜ್ಯದ ಆಡಳಿತ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಸಂಕಷ್ಟದ ಅರಿವಿಲ್ಲ. ಜಿಲ್ಲಾ ಮಂತ್ರಿಗಳೇ ಕಂದಾಯ ಸಚಿವರಾಗಿದ್ದರೂ ರೈತಾಪಿ ವರ್ಗ ಪರಿತಪಿಸುವಂತಾಗಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ತಾಲೂಕು ಕೇಂದ್ರವಾದ ನರಸೀಪುರದಲ್ಲಿ ರೈತಾಪಿ ವರ್ಗದ ಪರಿತಪಿಸುವುದನ್ನು ತಪ್ಪಿಸಲು ಕೂಡಲೇ ಮತ್ತೊಂದು ಆರ್‌ಟಿಸಿ ವಿತರಣಾ ಕೇಂದ್ರ ತೆರೆದು, ನಿಗದಿತ ಅವಧಿಯಲ್ಲೇ ಬತ್ತ ಖರೀದಿ ಮಾಡಬೇಕು. ಇಲ್ಲದಿದ್ದರೆ ಬಿಜೆಪಿಯಿಂದ ಹೋರಾಟ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
18ಕ್ಕೆ ಕ್ಯಾನ್ಸರ್ ತಪಾಸಣೆ ಶಿಬಿರ
ಕೆ.ಆರ್. ನಗರ: ಮೈಸೂರು ರೆಡಿಯಂಟ್ ಗ್ಲೋಬಲ್ ಸೆಲ್ಯೂಷನ್ ಆಸ್ಪತ್ರೆಯಿಂದ ಕ್ಯಾನ್ಸರ್ ತಪಾಸಣೆ ಶಿಬಿರವನ್ನು ಜ. 18ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ತೋಪಮ್ಮನ ದೇವಸ್ಥಾನದ ಹಿಂಭಾಗದ ಸೇಂಟ್ ಜೋಸೆಫ್ ಶಾಲೆ ಹತ್ತಿರದ ಐಎಂಎ ಭವನದಲ್ಲಿ ನಡೆಯಲಿದೆ. ವಿವರಗಳಿಗಾಗಿ ಮೊ. 88610 14454 ಸಂಪರ್ಕಿಸಬಹುದು.
ಭಾವಗೀತೆಗಳ ಕಾರ್ಯಕ್ರಮ 14ಕ್ಕೆ
ಕೆ.ಆರ್. ನಗರ: ನಾಡಿನ ಖ್ಯಾತ ಕನ್ನಡ ಕವಿಗಳ ಕವನಗಳನ್ನು ಜನತೆಗೆ ತಲುಪಿಸುವ ಮತ್ತು ತಾಲೂಕಿನ ಯುವ ಗಾಯಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ತಾಲೂಕು ಕಸಾಪ ವತಿಯಿಂದ ಜ.14ರ  ಸಂಜೆ 5ಕ್ಕೆ ಪಟ್ಟಣದ ಕೃಷ್ಣ ಮಂದಿರದಲ್ಲಿ ಭಾವ ಬೆಳದಿಂಗಳ ಸಂಕ್ರಾಂತಿ ಎಂಬ ಭಾವಗೀತೆಗಳ ಕಾರ್ಯಕ್ರಮ ಆಯೋಜಿಸಿದೆ. ಗಾಯಕರು, ಸಾಹಿತ್ಯಾಸಕ್ತರು ಹಾಗೂ ಕನ್ನಡ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಸೈಯದ್ ರಿಜ್ವಾನ್ ಕೋರಿದ್ದಾರೆ.
ಜಿಪಂ ಸದಸ್ಯೆ ಆರೋಪ ಸತ್ಯಕ್ಕೆ ದೂರ
ಭೇರ್ಯ: ಮುಂಜನಹಳ್ಳಿ ಗ್ರಾಪಂನಲ್ಲಿ ನಡೆದ ಜನಸ್ಪಂದನ ಸಭೆಯನ್ನು ತಹಸೀಲ್ದಾರ್ ವೀಣಾ ಅವರು ಜೆಡಿಎಸ್ ಸಭೆಯಂತೆ ನಡೆಸಿದ್ದಾರೆ ಎಂದು ಕ್ಷೇತ್ರದ ಜಿಪಂ ಸದಸ್ಯೆ ಪುಷ್ಪಲತಾ ರಮೇಶ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಮುಂಜನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅನೀಪ್‌ಗೌಡ ಹೇಳಿದ್ದಾರೆ. ಜನಸ್ಪಂದನ ಕಾರ್ಯಕ್ರಮ ವ್ಯಾಪ್ತಿಗೆ ಸೇರುವ ಎಲ್ಲ ಚುನಾಯಿತ ಪ್ರತಿನಿಧಿಗಳಿಗೂ ಆಹ್ವಾನ ನೀಡಿದ್ದು, ಸಭೆಗೆ ಎಲ್ಲರೂ ಹಾಜರಾಗಿದ್ದಾರೆ. ಆದರೆ ಪುಷ್ಪಲತಾ ಗೆದ್ದು ಮೂರು ವರ್ಷಗಳಾಗಿವೆ. ಇದುವರೆಗೆ ಯಾವ ಕಾರ್ಯಕ್ರಮಕ್ಕೆ ಬಂದಿದ್ದಾರೆ, ಯಾವ ಗ್ರಾಮಕ್ಕೆ ಎಷ್ಟು ಅನುದಾನ ನೀಡಿದ್ದಾರೆ. ಎಷ್ಟು ಸಾರಿ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಸಾರ್ವಜನಿಕರ ಸಾವು-ನೋವು ಕಷ್ಟ ಸುಖಗಳಿಗೆ ಕೊಡುಗೆ ಏನು ಎಂಬದನ್ನು ಮೊದಲು ತಾವು ಅರಿತುಕೊಳ್ಳುವಂತೆ ತಿಳಿಸಿದ್ದಾರೆ.
ಬೆನ್ನಿಹಿನ್ ಬಗ್ಗೆ ಮಾತನಾಡಿಲ್ಲ
ಮೈಸೂರು: ಅಮರಶಿಲ್ಪಿ ವಿದೇರಿಕೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ನಾನು ಬೆನ್ನಿಹಿನ್ ಕಾರ್ಯಕ್ರಮದ ಬಗ್ಗೆ ತಾವು ಮಾತನಾಡಿಲ್ಲ ಎಂದು ವಿಜಯನಗರದ ಯೋಗನರಸಿಂಹಸ್ವಾವು ದೇವಸ್ಥಾನ ಸಂಸ್ಥಾಪಕ ಭಾಷ್ಯಂ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.  ಜ.10 ರಂದು ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ಅಮರಶಿಲ್ಪಿ ಬಗ್ಗೆ ಅಪಪ್ರಚಾರ ಸಲ್ಲದು ಶೀರ್ಷಿಕೆಯ ಸುದ್ದಿಯಲ್ಲಿ ಉಪಶೀರ್ಷಿಕೆಗೆ ತಮ್ಮ ಹೆಸರು ಸೇರಿಸಿರುವುದರಿಂದ ಗೊಂದಲ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ನೇಮಕ
ನಂಜನಗೂಡು: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿ ತಾಲೂಕಿನ ಅಹಲ್ಯ ಮಹೇಶ್ ಅವರನ್ನು ನೇಮಕ ಮಾಡಲಾಗಿದೆ.
ಮೈಸೂರು ಆಟೋ ಎಕ್ಸ್‌ಪೋ ಆರಂಭ
ಮೈಸೂರು: ಜೆಸ್ ಇಂಡಿಯಾ ಇಂಕ್ ಸಂಸ್ಥೆಯು ಕುವೆಂಪುನಗರದಲ್ಲಿರುವ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ 19ನೇ ಮೈಸೂರು ಆಟೋ ಎಕ್ಸ್‌ಪೋ ಎಂಬ ಆಟೋಮೊಬೈಲ್ಸ್ ಮತ್ತು ಪರಿಕರಗಳ ಪ್ರದರ್ಶನವು ಶುಕ್ರವಾರ ಆರಂಭವಾಯಿತು.ವೋಲ್ವೋ, ಮೋಟೋ ಗಿಸಿ, ಬಿಎಂಡಬ್ಲ್ಯೂ, ಹಾಯ್ಯಂಗ್,  ಕೆಟಿಎಂ, ಮಾರುತಿ, ಟಾಟಾ, ಟೊಯೋಟಾ, ರೆನಾಲ್ಟ್, ನಿಸಾನ, ಟಿವಿಎಸ್, ಹೀರೋ ಮೋಟಾರ್ಸ್, ಸುಜುಕಿ ಹೋಂಡಾ, ಬಜಾಜ್ ಮೊದಲಾದ ಕಂಪನಿಗಳ ದ್ವಿಚಕ್ರ ಹಾಗೂ ನಾಲ್ಕು ಚಕ್ರವಾಹನಗಳ ಪ್ರದರ್ಶನದಲ್ಲಿ ಇರಿಸಲಾಗಿದೆ. ಜ.12 ರವರೆಗೆ ಪ್ರತಿದಿನ ಬೆಳಗ್ಗೆ 10.30 ರಿಂದ ರಾತ್ರಿ 8.30 ರವರೆಗೆ ಪ್ರದರ್ಶನ ನಡೆಯಲಿದೆ ಎಂದು ಜೆಸ್ ಇಂಡಿಯಾ ಇಂಕ್‌ನ ಪಾಲುದಾರ ಶ್ರೀಕಾಂತ್ ತಿಳಿಸಿದ್ದಾರೆ.
ಶೋಷಣೆ ವಿರುದ್ಧ ಸೈಕಲ್ ಜಾಥಾ
ಮೈಸೂರು: ಹುಣಸೂರು ತಾಲೂಕು ಬಿಳಿಕೆರೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೋಷಣೆಯ ವಿರುದ್ಧ ಸೈಕಲ್ ಜಾಥಾ ನಡೆಸುವ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸಿದರು. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಹಮ್ಮಿಕೊಂಡಿರುವ ಲೈಂಗಿಕ ಶೋಷಿತರ ಮೀಸಲಾತಿಗೆ ಆಗ್ರಹಿಸಿ ವಿದ್ಯಾರ್ಥಿಗಳ ರಾಜ್ಯವ್ಯಾಪಿ ಸೈಕಲ್ ಜಾಥಾ ಕಾರ್ಯಕ್ರಮವು ಬಿಳಿಕೆರೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಂ. ಪುಟ್ಟು ಅವರು ಒಡನಾಡಿಯ ಅರಿವಿನ ಭಿತ್ತಿ ಪತ್ರಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿದರು. ಬಿಳಿಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಲತಾ, ಒಡನಾಡಿಯ ಸ್ಟ್ಯಾನ್ಲಿ ಪರಶು ಮಾತನಾಡಿದರು. ಬಿಳಿಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಮಹದೇವಸ್ವಾಮಿ, ಎಎಸ್‌ಐ ರಾಜಪ್ಪ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.