ವಿಜ್ಞಾನ ಸಂಶೋಧನೆಯಿಂದ ವಿಶ್ವಕ್ಕೆ ಕೊಡುಗೆ ನೀಡಿ
ಕ.ಪ್ರ.ವಾರ್ತೆ , ಮೈಸೂರು , ಜ. 11
ಭಾರತ ತನ್ನ ಸಂಸ್ಕೃತಿಯಲ್ಲಿ ಆರ್ಥಿಕ ಸಹಯೋಗದಂತಹ ಅಂಶಗಳನ್ನು ಒಳಗೊಂಡಿದೆ. ಇಂಥ ಬೆಳವಣಿಗೆಗೆ ಬೆಂಗಳೂರು ನಗರ ಸೂಕ್ತ ಉದಾಹರಣೆಯಾಗಿದ್ದು, ಈ ತರಹದ ಶೈಕ್ಷಣಿಕ ವಿಜ್ಞಾನ ಸಂಶೋಧನೆಯಿಂದ ದೊಡ್ಡ ಮಟ್ಟದಲ್ಲಿ ಭಾರತವು ವಿಶ್ವಕ್ಕೆ ಕೊಡುಗೆ ನೀಡಬಹುದಾಗಿದೆ ಎಂದು ಕೇಂಬ್ರಿಡ್ಜ್ ವಿವಿಯ ಅಣುಜೀವ ವಿಜ್ಞಾನಿ ಪ್ರೊ.ಸರ್ ಟಾಮ್ ಬ್ಲೆಂಡಮ್ ಅಭಿಪ್ರಾಯಪಟ್ಟರು.
ಶನಿವಾರ ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆದ ಯುವರಾಜ ಕಾಲೇಜಿನ ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ನಮ್ಮ ಮೂಲಭೂತ ವಿಜ್ಞಾನ ಯಾವಾಗಲೂ ಜೀವನ ಉತ್ತಮಗೊಳ್ಳಲು ಸಹಾಯಕ. ನಮ್ಮ ವಿಜ್ಞಾನದೊಳಗೆ ಇರುವ ಹಲವಾರು ಜೀವಕೋಶಗಳ ರಚನೆಯಷ್ಟೇ ಸುಂದರ ಹಾಗೂ ಸಮಾಜಕ್ಕೆ ಫಲದಾಯಕ. ಹಾಗಾಗಿ ನಮ್ಮ ಸಂಶೋಧನಾಲಯದ ಸಂಶೋಧನೆಗಳು ನಿರಂತರವಾಗಿ ಸಾಗುತ್ತಿರಬೇಕು. ಈ ನಿಟ್ಟಿನಲ್ಲಿ ಸರ್ಕಾರದ, ಆಸ್ಪತ್ರೆಗಳ ಅಥವಾ ದೊಡ್ಡ ಕಂಪನಿಗಳ ಸಹಯೋಗವನ್ನು ನಾವು ಪಡೆಯಬಹುದಾಗಿದೆ ಎಂದರು.
ಜಾತಿ ಭೇದದಿಂದ ಹೊರಬನ್ನಿ: ನಾವು ವರ್ಗ, ವರ್ಣ, ಜಾತಿ ಮತ್ತು ಲಿಂಗ ಭೇದಗಳಿಂದ ಹೊರಗೆ ಬರಬೇಕು. ಈ ನಿಟ್ಟಿನಲ್ಲಿ ವಿಶ್ವದ ಹಲವು ರಾಷ್ಟ್ರಗಳು ಇನ್ನೂ ಬಹುದೂರ ಸಾಗಬೇಕು. ನನ್ನ ಅಪೇಕ್ಷೆ ಏನೆಂದರೆ ಮೈಸೂರು ವಿವಿಯ ಎಲ್ಲಾ ಪದವೀಧರರು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಬೌದ್ಧಿಕ, ಭೌತಿಕ ಹಾಗೂ ಮಾನಸಿಕವಾಗಿ ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು. ನಿಮ್ಮ ಪ್ರಪಂಚವೇ ತೆರೆದುಕೊಂಡಿದೆ. ವಿಜ್ಞಾನಿಗಳು ಸಮಾಜದಲ್ಲಿ ಸಿಗಬಹುದಾದ ವಿಜ್ಞಾನದ ಪರಿಣತಿಯನ್ನು ಸೂಕ್ತವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಸಂಶೋಧನೆ ಬಹು ಶಿಸ್ತೀಯ: ಮುಂದಿನ ದಶಕಗಳ ಸಂಶೋಧನೆಯು ಬಹು ಶಿಸ್ತೀಯ. ನೂತನ ಜಿನಾಮಿಕ್ಸ್ ರಾಸಾಯನಶಾಸ್ತ್ರವನ್ನು ಅವಲಂಬಿಸಿ ಡಿಎನ್ಎ ಕಂಡುಕೊಳ್ಳಬೇಕಾಗುತ್ತದೆ.
ಅದೇ ರೀತಿ ಪ್ರೋಟಾಮಿಕ್ಸ್ ಮತ್ತು ಮೆಟೋಬೋಲೋಮಿಕ್ಸ್ಗಳು ಬಯೋ ಫಿಸಿಕಲ್ ಮೆಥಡ್ಗಳಾದ ಸ್ಪೆಕ್ಟ್ರೋಮೀಟರಿ ಮತ್ತು ಎನ್ಎಂಆರ್ಗಳನ್ನು ಬಳಸಬೇಕಾಗುತ್ತದೆ. ಹಾಗಾಗಿ ಮುಂದಿನ ಜೀವಶಾಸ್ತ್ರ ಡೇಟಾ ಆಧಾರಿತವಾಗಿರುತ್ತದೆ. ಈ ಡೇಟಾವನ್ನು ಸೂಕ್ತವಾಗಿ ಬಳಸಿ, ರಕ್ಷಿಸಿ ಮತ್ತು ಪರಿಷ್ಕರಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಎಚ್ಐವಿಗಳು ಬದುಕಬಹುದು: ನಾನು ಹಲವು ವರ್ಷಗಳಿಂದ ರೆವಿನ್ನ ರಚನೆಯಿಂದ ಉಪಯುಕ್ತವಾದಂತಹ ರಕ್ತದೊತ್ತಡದ ಔಷಧಗಳ ಬಗ್ಗೆ ಯೋಚನೆ ಮಾಡಲು ಸಾಧ್ಯವಾಗಿದೆ. ಇವೆಲ್ಲದರ ಫಲವಾಗಿ ನಮ್ಮ ರೆನಿನ್ಅನ್ನು ಅರ್ಥ ಮಾಡಿಕೊಂಡಿದ್ದು ಎಚ್ಐವಿ ಪ್ರೋಟೆಸ್ ಸ್ಥಿಮಿತದಲ್ಲಿಡಲು ಸಾಧ್ಯವಾದ್ದರಿಂದ ಎಚ್ಐವಿ ರೋಗಿಗಳು ಸ್ವಲ್ಪ ಮಟ್ಟಿಗಾದರು ಬದುಕಲು ಸಾಧ್ಯವಾಗಿದೆ ಎಂದರು.
ಇದೇ ವೇಳೆ 2012-13ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಬಿ.ಎಸ್ಸಿ- 436, ಬಿಎಸಿ- 39, ಬಿಬಿಎ-17, ಎಂ.ಎಸ್ಸಿ- 30, ಮಾಲಿಕ್ಯೂಲರ್ ಬಯೋಲಜಿ- 3 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪದವಿ ಗಳಿಸಿದ್ದಾರೆ. ಅತ್ಯುತ್ತಮ ಅಂಕ ಗಳಸಿ ಉತ್ತೀರ್ಣರಾದ ಬಿ.ಎಸ್ಸಿ. ವಿಭಾಗದ ಬಿ.ಜಿ. ಅಂಬಿಕಾ, ಸುರಭಿ ಮದನ್ ನಾಡಿಗರ್, ವಿ. ಅಕ್ಷತಾ, ಜಿ. ನಿರೋಷಾ, ಎಚ್.ಸಿ. ರಾಮಚಂದ್ರಯ್ಯ, ದಿವ್ಯ ಆರ್. ಲೋಕರೆ, ಆರ್.ವಿ. ಊರ್ಮಿಳಾ, ಬಿ.ಆರ್. ಯಶವಂತ್, ಸಿ.ಆರ್. ಉಷಾರಾಣಿ, ಸಿ.ಗೌತಮ್, ಎಂ.ರಘುಹರ್, ಜೀವನ್ಪ್ರಕಾಶ್ ರಮೇಶ್ ಭಾಗವತ್, ಎಸ್. ಲಕ್ಷ್ಮೀ, ಸಿ. ಚಿನ್ನಸ್ವಾಮಿ, ಪ್ರಿಯಾಂಕ ಆರ್. ಪಾಟೀಲ್, ಮೊಹಮ್ಮದ್ ಹಸೀಬ್ ಖಾನ್, ಯೋಗಿತ್ ಕೆ. ಅರಸ್ ಹಾಗೂ ಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗದ ಎ. ದಿಲೀಪ್ಕುಮಾರ್, ಎಸ್.ಜಿ. ರಮ್ಯಾ, ಸುರೇಂದ್ರ ಅವರಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಸ್.ಎನ್. ಹೆಗ್ಡೆ, ಯುವರಾಜ ಕಾಲೇಜು ಪ್ರಾಂಶುಪಾಲ ಡಾ.ಎಚ್. ನಂಜೇಗೌಡ ಇದ್ದರು.
ಭಾರತದೊಂದಿಗಿನ ನಂಟು ಬಿಚ್ಚಿಟ್ಟ ಟಾಮ್
ಮನೆಯಲ್ಲಿದ್ದು ಬೇಸರವಾಗಿತ್ತು. ಆಗ ವಿದೇಶ ಪ್ರವಾಸ ಕೈಗೊಂಡ ಸಂದರ್ಭವಾದ 1972 ರಲ್ಲಿ ಭಾರತಕ್ಕೆ ಆಗಮಿಸಿದೆ. ಇಲ್ಲಿ ಕೋಲತ್ತಾ, ದೆಹಲಿ, ಮದ್ರಾಸಿಗೆ ಹಾಗೆಯೇ ಬೆಂಗಳೂರಿಗೆ ಬಂದೆ. ಇಲ್ಲಿದ್ದ ನನ್ನ ಸ್ನೇಹಿತರಾದ ಶಿವರಾಮಶೇಷನ್, ಕೆ. ವೆಂಕಟೇಶನ್, ಎಂ.ಎ. ವಿಶ್ವಾಮಿತ್ರ ಮತ್ತು ಎಂ. ವಿಜಯನ್ ಬರಮಾಡಿಕೊಂಡಿದ್ದು ನನಗೆ ಖುಷಿ ತಂದಿತು. ಆಗ ನಾನು ವೀಣೆ ಮತ್ತು ಕರ್ನಾಟಕ ಸಂಗೀತ ಕಲಿತೆ. ಇದಾದ ಬಳಿಕ ಪ್ರತಿ ವರ್ಷವೂ ನಾನು ಭಾರತಕ್ಕೆ ಬರುತ್ತೇನೆ. ಕೆಲವೊಮ್ಮೆ ಎರಡು ವರ್ಷಕ್ಕೊಮ್ಮೆ ಬಂದದ್ದು ಉಂಟು. ಕೆಲವು ಸಂಗೀತಗಾರರ ಜತೆಗೂಡಿ 800 ಜನರಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕಛೇರಿ ನಡೆಸಿಕೊಟ್ಟಿದ್ದೇನೆ. ಇದಾದ ಒಂದು ವರ್ಷಕ್ಕೆ ನಾನು ಮತ್ತೆ ಭಾರತದಲ್ಲಿರಲು ಅದರಲ್ಲೂ ಅತೀ ಸುಂದರ ನಗರ ಮೈಸೂರಿನಲ್ಲಿರಲು ಭಾವುಕನಾಗಿದ್ದೇನೆ ಎಂದು ಮನದಾಸೆ ವ್ಯಕ್ತಪಡಿಸಿದರು.
ಪ್ರಶಸ್ತಿ ಪಡೆದವರ ಅಭಿಪ್ರಾಯ
ಓದಿನಲ್ಲಿ ಸಾಧನೆ ಮಾಡಿ ಉತ್ತಮ ಅಂಕ ಗಳಸಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ನನ್ನ ಸಾಧನೆಗೆ ತಂದೆ- ತಾಯಿ, ಅಧ್ಯಾಪಕರ ಸಹಕಾರ ಕಾರಣ. ಮುಂದೆ ಐಎಫ್ಎಸ್ ಮಾಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಹಂಬಲವಿದೆ.
ಎ. ದಿಲೀಪ್ಕುಮಾರ್, ಎಂ.ಎಸ್ಸಿ ವಿದ್ಯಾರ್ಥಿ
ನಮ್ಮ ತಾಯಿ ಅನಕ್ಷರಸ್ಥರು. ಆದರೂ ಮಗ ಚೆನ್ನಾಗಿ ಓದಲಿ ಎಂದು ಕಷ್ಟಪಟ್ಟು ಇಲ್ಲಿಗೆ ಸೇರಿಸಿದರು. ಉತ್ತಮ ಅಂಕ ಗಳಿಸಿ ಪ್ರಶಸ್ತಿ ಗಳಿಸಿದ್ದೇನೆ. ಈಗ ಸಂತೋಷವಾಗುತ್ತಿದೆ. ಉಪನ್ಯಾಸಕನಾಗಿ ಮತ್ತಷ್ಟು ವಿದ್ಯಾರ್ಥಿಗಳನ್ನು ತಯಾರಿಸುವ ಬಯಕೆ ನನ್ನದಾಗಿದೆ.
ಸುರೇಂದ್ರ, ಎಂ.ಎಸ್ಸಿ ವಿದ್ಯಾರ್ಥಿ
ನಾನು ಸಾಲಿಗ್ರಾಮದಿಂದ ಬಂದವಳು. ಅಪ್ಪ- ಅಮ್ಮ ತುಂಬಾ ಕಷ್ಟಪಟ್ಟು ಓದಿಸಿದ್ದಾರೆ. ನಾನು ಉಪನ್ಯಾಸಕಿಯಾಗುವ ಆಸೆ ಇದೆ.
ಎಸ್.ಜಿ. ರಮ್ಯಾ, ಎಂ.ಎಸ್ಸಿ ವಿದ್ಯಾರ್ಥಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

