ಬಹುರೂಪಿಗೆ ತಂತ್ರಜ್ಞಾನ ಸ್ಪರ್ಶ
ಕ.ಪ್ರ.ವಾರ್ತೆ , ಮೈಸೂರು , ಜ. 12
ಕರ್ನಾಟಕ ನಾಟಕ ರಂಗಾಯಣವು ಇದೇ ಮೊದಲ ಬಾರಿಗೆ ಕಲೆ- ವಿಜ್ಞಾನವನ್ನು ಒಟ್ಟುಗೂಡಿಸಿ ಹೊಸ ಸಾಧ್ಯತೆಗೆ ನಾಂದಿ ಹಾಡಿದ್ದು, ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಮತ್ತಷ್ಟು ಸಂಭ್ರಮದೊಂದಿಗೆ ಆಚರಿಸಲು ಹೊಸದಾಗಿ ಢಿಢಿಢಿ.್ಠಛಟ್ಜಿಛಣಛಟಿಛ.್ಝಟಿ ವೆಬ್ಸೈಟ್ ಅನಾವರಣಗೊಳಿಸಿದೆ.
ಭಾನುವಾರ ರಂಗಾಯಣದ ಭೂಮಿಗೀತದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಹಿತಿ ಡಾ. ರಾಜಪ್ಪ ದಳವಾಯಿ ವೆಬ್ಸೈಟ್ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ಕಲೆ ಮತ್ತು ವಿಜ್ಞಾನ ಒಂದಕ್ಕೊಂದು ಪೂರಕ ಸಂಬಂಧ ಹೊಂದಿವೆ. ಕಲಾ ನೆಲೆಯಲ್ಲಿ ಬೆಳೆದು ಬಂದಿರುವ ರಂಗಾಯಣ ಇದೀಗ ಕಲೆ ಮತ್ತು ವಿಜ್ಞಾನವನ್ನು ಸಮೀಕರಿಸಿ ವೆಬ್ಸೈಟ್ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಈ ಮೂಲಕ ರಂಗಾಸಕ್ತರು ರಂಗಾಯಣದ ಸಾಧನೆಯನ್ನು ಆನ್ಲೈನ್ನಲ್ಲಿ ನೋಡಬಹುದು. ಪ್ರಸ್ತುತ ದಿನಗಳಲ್ಲಿ ಆನ್ಲೈನ್ಗೆ ಬೇಡಿಕೆ ಹೆಚ್ಚಾಗಿದ್ದು, ವಿಜ್ಞಾನ, ತಂತ್ರಜ್ಞಾನ ಬಳಸಿಕೊಂಡು ಜನರನ್ನು ತಲುಪಲು ಸುಲಭ ಮಾರ್ಗ ಕಂಡುಕೊಳ್ಳಬಹುದಾಗಿದೆ. ರಂಗಾಯಣ ಕೂಡ ತನ್ನ ಸಾಧನೆಯನ್ನು ವಿಕಿಪೀಡಿಯಾದಂತೆ ವಿಸ್ತರಿಸಿಕೊಳ್ಳಲಿ ಎಂದು ಆಶಿಸಿದರು.
ರಂಗಾಯಣ ನಿರ್ದೇಶಕ ಎಚ್.ಜನಾರ್ದನ್ ಮಾತನಾಡಿ, ಬಿ.ವಿ.ಕಾರಂತರಿಂದ ಸ್ಥಾಪನೆಯಾದ ರಂಗಾಯಣವು 25 ವರ್ಷಗಳ ಕಾಲ ತನ್ನ ರಂಗಚಟುವಟಿಕೆಗಳನ್ನು ನಡೆಸಿಕೊಂಡು ಯಶಸ್ಸಿನ ಹಾದಿಯಲ್ಲಿ ಸಾಗಿಬಂದಿದೆ. ವೆಬ್ಸೈಟ್ ರೂಪಿಸಬೇಕೆಂಬುದು ನಮ್ಮೆಲ್ಲರ ಬಹುದಿನದ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ. ವೆಬ್ಸೈಟ್ ಮುಖಾಂತರ ಎಲ್ಲ ವರ್ಗದವರನ್ನು ರಂಗಭೂಮಿಯತ್ತ ಸೆಳೆಯಲು ಈ ಮಾಧ್ಯಮ ಸಹಾಯಕವಾಗಲಿದೆ ಎಂದರು.
ರಂಗಾಯಣ ಉಪ ನಿರ್ದೇಶಕ ಎಸ್.ಐ. ಭಾವಿಕಟ್ಟೆ, ವೆಬ್ಸೈಟ್ ರೂಪಿಸಿದ ಮಾಧವ ಖರೆ, ಮಹೇಶ್ ಇದ್ದರು.
ಆರಂಭಕ್ಕೂ ಮುನ್ನವೇ ಟಿಕೆಟ್ ಮಾರಾಟ
ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಆರಂಭಕ್ಕೆ ಇನ್ನು ಎರಡು ದಿನಗಳು ಬಾಕಿ ಇದ್ದರೂ ಕನ್ನಡ ಸೇರಿದಂತೆ ಇತರೆ ಭಾಷೆಗಳ ನಾಟಕಗಳನ್ನು ನೋಡುವ ತವಕದಲ್ಲಿ ಪ್ರೇಕ್ಷಕರು ಟಿಕೆಟ್ ಖರೀದಿಸಲು ಮುಗಿ ಬಿದ್ದಿದ್ದಾರೆ.
ರಂಗಾಯಣ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಬಹುರೂಪಿಯ ಕಾರ್ಯಕ್ರಮ ಪಟ್ಟಿ ಪ್ರಕಟಿಸಿದೆ. ಹೀಗಾಗಿ ರಂಗಾಸಕ್ತರು ರಂಗಾಯಣದ ಕಡೆ ಧಾವಿಸಿ ತಾವು ಇಷ್ಟ ಪಡುವ ನಾಟಕಗಳ ಟಿಕೆಟ್ ಖರೀದಿಸುತ್ತಿದ್ದಾರೆ. ನಾಟಕ ಪ್ರದರ್ಶನಗೊಳ್ಳುವ ಭೂಮಿಗೀತದಲ್ಲಿ 209 ಆಸನ ವ್ಯವಸ್ಥೆ ಇದ್ದು, ಈಗ 80 ಟಿಕೆಟ್ ಹಾಗೂ ವನರಂಗದಲ್ಲಿ 207 ಆಸನ ವ್ಯವಸ್ಥೆ ಇದ್ದು, 79 ಟಿಕೆಟ್ ಮಾರಾಟವಾಗಿವೆ.
ಯಾವ ನಾಟಕಗಳು ಫೇಮಸ್ಸು?: ಬಹುರೂಪಿಯಲ್ಲಿ ಪ್ರದರ್ಶನಗೊಳ್ಳುವ ಮಲಯಾಳಂ ಮೆಕ್ಬೆತ್, ಕನ್ನಡದ ಮಾಯಾಸೀತಾ ಪ್ರಸಂಗ, ನಮ್ಮೊಳಗೊಬ್ಬ ನಾಜೂಕಯ್ಯ, ಬೆಂಗಾಲಿಯ ಊರುಭಂಗಂ, ಮರಾಠಿಯ ಹಿಜಡಾ, ತೆಲುಗಿನ ಜೈ ಪಾತಾಳ ಭೈರವಿ, ಕನ್ನಡದ ಮೆಕ್ಕಾ ದಾರಿ ನಾಟಕಗಳಿಗೆ ಪ್ರೇಕ್ಷಕರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ.
ಆನ್ಲೈನ್ ಸೌಲಭ್ಯವೂ ಉಂಟು: ರಂಗಾಯಣ ಪ್ರಥಮ ಬಾರಿಗೆ ಆರಂಭಿಸಿರುವ ಢಿಢಿಢಿ.್ಠಛಟ್ಜಿಛಣಛಟಿಛ.್ಝಟಿ ವೆಬ್ಸೈಟ್ನಲ್ಲಿಯೂ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಆನ್ಲೈನ್ ಪ್ರೇಕ್ಷಕರಿಗಾಗಿ ಭೂಮಿಗೀತ, ವನರಂಗದಲ್ಲಿ ಶೇ. 20ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ಕೇವಲ ಬಹುರೂಪಿ ಮಾತ್ರವಲ್ಲದೆ ರಂಗಾಯಣದ ವಾರಾಂತ್ಯ ನಾಟಕಗಳ ಟಿಕೆಟ್ಗಳನ್ನು ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಲು ರಂಗಾಯಣ ಅವಕಾಶ ಒದಗಿಸಿದೆ.
ವೆಬ್ಸೈಟ್ನಲ್ಲಿ ಏನೇನಿದೆ?
ಇದೇ ಮೊದಲ ಬಾರಿಗೆ ಆರಂಭಿಸಲಾಗಿರುವ ರಂಗಾಯಣದ ಢಿಢಿಢಿ.್ಠಛಟ್ಜಿಛಣಛಟಿಛ.್ಝಟಿ ವೆಬ್ಸೈಟ್ನಲ್ಲಿ ರಂಗಾಯಣ ಬೆಳೆದು ಬಂದ ಹಾದಿ, ಜ.14ರಿಂದ 20ರವರೆಗೆ ನಡೆಯುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಕಾರ್ಯಕ್ರಮಗಳು ಕನ್ನಡ ಮತ್ತು ಇಂಗ್ಲಿಷ್ ಅವತರಣಿಕೆಯಲ್ಲಿ ನೋಡಬಹುದಾಗಿದೆ. ರೆಪರ್ಟರಿಯಲ್ಲಿ ಪ್ರದರ್ಶಿಸಿದ ನಾಟಕಗಳ ಚಿತ್ರಗಳ ಗ್ಯಾಲರಿಯೂ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

