ಮೈಸೂರು

ಎಪಿಎಂಸಿಗೆ 87 ಲಕ್ಷ ಉಳಿತಾಯ ಬಜೆಟ್

Published On :

ಕೆ.ಆರ್. ನಗರ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು 2013-14ರಲ್ಲಿ 87 ಲಕ್ಷ ಉಳಿತಾಯ ಮಾಡಿದ್ದು, ಇದರಲ್ಲಿ ಈಗಾಗಲೇ 60 ಲಕ್ಷ ಹಣವನ್ನು ಪಟ್ಟಣ ಮತ್ತು ಸಾಲಿಗ್ರಾಮದ ಸಂತೆ ಪ್ರಾಂಗಣದಲ್ಲಿ ರಸ್ತೆ, ಶೌಚಾಲಯ ಮತ್ತು ಚರಂಡಿ ನಿರ್ಮಿಸಲು ಬಳಸಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಂ. ರಮೇಶ್ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಸಭಾಂಗಣದಲ್ಲಿ ಸೋಮವಾರ 2014-15ಸಾಲಿನ ಬಜೆಟ್ ಮಂಡಿಸಿ ಮಾಹಿತಿ ನೀಡಿದ ಅವರು, ಕಳೆದ ಆರ್ಥಿಕ ವರ್ಷದಲ್ಲಿ 1.58ಕೋಟಿ ಹಣ ಸಂದಾಯವಾಗಿತ್ತು. ಅದರಲ್ಲಿ 64 ಲಕ್ಷಗಳನ್ನು ಸರ್ಕಾರಕ್ಕೆ ವಂತಿಗೆ ಪಾವತಿಸಿ ಉಳಿದ ಹಣದಲ್ಲಿ ಅಭಿವೃದ್ಧಿ ಕೈಗೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದರು.
ಪ್ರಸಕ್ತ ಆರ್ಥಿಕ ವರ್ಷ 1.31 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದ್ದು, ಚಂದಗಾಲು, ಮನುಗನಹಳ್ಳಿ, ಬಂಡಹಳ್ಳಿ, ಬೆಣಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಕಣಗಳನ್ನು ನಿರ್ಮಾಣ ಮಾಡಲು ಕ್ರಿಯಾ ಯೋಜನೆ ಮಾಡಲಾಗಿದೆ. ಜತೆಗೆ ರೈತರ ಅನುಕೂಲಕ್ಕಾಗಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಶೀಘ್ರದಲ್ಲಿಯೇ ವೇಬ್ರಿಡ್ಜ್: 42 ಲಕ್ಷ ವೆಚ್ಚದಲ್ಲಿ ವೇಬ್ರಿಡ್ಜ್ ಮತ್ತು ಎಪಿಎಂಸಿ ಮಾರುಕಟ್ಟೆಗೆ ಸ್ವಾಗತ ಕಮಾನು ಸೇರಿದಂತೆ ಇತರ ಅಗತ್ಯ ಕಾಮಗಾರಿಗಳನ್ನು ಮಾಡಲು ತೀರ್ಮಾನ ಕೈಗೊಂಡಿದ್ದು, ಶೀಘ್ರದಲ್ಲಿಯೇ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ರಮೇಶ್ ಪ್ರಕಟಿಸಿದರು. ಕಳೆದ ಮೂರು ವರ್ಷದ ಅವಧಿಯಲ್ಲಿ ರೈತ ಸಂಜೀವಿನಿ ಯೋಜನೆಯಡಿ 16 ಮಂದಿ ಮೃತ ರೈತರ ಕುಟುಂಬಗಳಿಗೆ 16 ಲಕ್ಷ ಪರಿಹಾರದ ಚೆಕ್‌ಗಳನ್ನು ನೀಡಲಾಗಿದ್ದು, ಈಗ 2 ಅರ್ಜಿಗಳು ಬಂದಿದ್ದು, ಅವುಗಳಿಗೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ಸಭೆಗೆ ಅಂಕಿ ಅಂಶ ನೀಡಿದರು.
ಕಳೆದ ತಿಂಗಳು ಆಡಳಿತ ಮಂಡಳಿಯವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗ್ರಾಮಾಭಿವೃದ್ಧಿ ನಿಧಿಯಡಿ ಎಪಿಎಂಸಿಗೆ 2 ಕೋಟಿ ಅನುದಾನ ನೀಡುವಂತೆ ಮನವಿ ಮಾಡಲಾಗಿದ್ದು, ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ಅನುದಾನ ನೀಡಲು ಒಪ್ಪಿದ್ದಾರೆ ಎಂದರು. ಉಪಾದ್ಯಕ್ಷ ತೋಟಪ್ಪನಾಯಕ, ನಿರ್ದೇಶಕರಾದ ಸಿದ್ದೇಗೌಡ, ರಾಜೇಗೌಡ, ನಂಜುಂಡಸ್ವಾಮಿ, ಶಿವಕುಮಾರ್, ಪ್ರಶಾಂತ್, ಸುಬ್ಬಯ್ಯ, ರೂಪಶ್ರೀ, ವ್ಯವಸ್ಥಾಪಕ ಬಸವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.