ಮೈಸೂರು

ಎಲ್ಲರೂ ಶಿಕ್ಷಣ ಪಡೆದಾಗ ದೇಶ ಅಭಿವೃದ್ಧಿ: ತಂದ್ರೆಕೊಪ್ಪಲು ರವಿ

Published On :

ಸಾಲಿಗ್ರಾಮ: ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರ್ವರೂ ಶಿಕ್ಷಣ ಪಡೆಯುವಂತೆ ಮಾಡಬೇಕು. ಎಲ್ಲರೂ ಶಿಕ್ಷಣ ಪಡೆದಾಗ ದೇಶ ಅಭಿವೃದ್ಧಿಯಾಗುತ್ತದೆ ಎಂದು ತಾಪಂ ಸದಸ್ಯ ತಂದ್ರೆಕೊಪ್ಪಲು ರವಿ ಹೇಳಿದರು.
ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಸಮೀಪದ ಮುಂಡೂರು ಗ್ರಾಮದ ಸರ್ಕಾರಿ ಫ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡಿದ ಅವರು, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಹತ್ತಾರು ಯೋಜನೆಗಳ ಮೂಲಕ ಹಲವು ಸೇವಾ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಇವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ ಜಯರಾಮನಾಯಕ, ಸಿಆರ್‌ಪಿ ರವಿಕುಮಾರ್, ಮುಖ್ಯಶಿಕ್ಷಕ ಜಯರಾಮೇಗೌಡ, ಶಿಕ್ಷಕರಾದ ರಂಗೇಗೌಡ, ಸತೀಶ್, ಎಸ್‌ಡಿಎಂಸಿ ಸಮಿತಿ ಸದಸ್ಯರು ಇದ್ದರು.
19 ಕ್ಕೆ ಪಲ್ಸ್ ಪೋಲಿಯೋ
ಕೆ.ಆರ್. ನಗರ: ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ಜ.19 ರಂದು ಭಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಮ್ಮ ಗ್ರಾಮದ ಪಲ್ಸ್ ಪೋಲಿಯೋ ಕೇಂದ್ರದಲ್ಲಿ ತಪ್ಪದೇ ಪೋಲಿಯೋ ಹನಿಗಳನ್ನು ಹಾಕಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ಶಿವಪ್ರಸಾದ್ ಮನವಿ ಮಾಡಿದ್ದಾರೆ. ತಾಲೂಕಿನಲ್ಲಿ ಒಟ್ಟು 176 ಪೋಲಿಯೋ ಲಸಿಕಾ ಕೇಂದ್ರಗಳಿದ್ದು, 23,880 ಮಕ್ಕಳ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಗೆ ನೇಮಕ
ಟಿ. ನರಸೀಪುರ: ಬನ್ನೂರು ಟೌನ್ ಶಕ್ತಿ ಕೇಂದ್ರದ ಅಧ್ಯಕ್ಷರನ್ನಾಗಿ ಕಾಳೇಗೌಡ ಅವರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಕರೋಹಟ್ಟಿ ಎಸ್. ಬಸವರಾಜು ತಿಳಿಸಿದ್ದಾರೆ.
ಆಟೋ ಡಿಕ್ಕಿ: ಮೂವರಿಗೆ ಗಾಯ
ಬೈಲಕುಪ್ಪೆ: ವ್ಯಾನ್ ಮತ್ತು ಆಟೋ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸೇರಿ ಮೂವರು ಗಾಯಗೊಂಡಿರುವ ಘಟನೆ ಕೊಪ್ಪ ವೃತ್ತದಲ್ಲಿ ಜರುಗಿದೆ. ಗಾಯಗೊಂಡ ಆಟೋ ಚಾಲಕ ನಂಜಪ್ಪ, ಮನು ಹಾಗೂ ಅನೀಫ ಅವರನ್ನು ಕುಶಾಲನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಕ್ರಾಂತಿ ಹಬ್ಬದ ಶುಭಾಶಯ
ಮೈಸೂರು: ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ನಾಡಿನ ಜನತೆಗೆ ಶುಭ ಹಾರೈಸಿದ್ದಾರೆ. ಜನತೆ ಸೌಹಾರ್ದ ಸಹಬಾಳ್ವೆ ನಡೆಸಲು ಈ ಹಬ್ಬಗಳು ಪ್ರೇರಣೆ ನೀಡಲಿ. ಶಾಂತಿ, ನೆಮ್ಮದಿಯ ಬದುಕು ದೊರೆಯಲಿ ಎಂದು ಅವರು ಹಾರೈಸಿದ್ದಾರೆ. ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಶರತ್‌ಕುಮಾರ್, ಗೌ. ಕಾರ್ಯದರ್ಶಿ ಡಾ.ಎಂ.ಜಿ. ಆರ್. ಅರಸ್ ಸಹ ಸಂಕ್ರಾಂತಿ ಶುಭಾಶಯ ಕೋರಿದ್ದಾರೆ.
ರಸಪ್ರಶ್ನೆ: ಪ್ರಥಮ ಬಹುಮಾನ
ಮೈಸೂರು: ಆಕಾಶವಾಣಿಯು ರಾಷ್ಟ್ರೀಯ ಯುವ ದಿನ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮೈಸೂರಿನ ಸ್ಪರ್ಧಿಗಳು ಪ್ರಥಮ ಬಹುಮಾನ ಪಡೆದಿದ್ದಾರೆ. ರಾಜ್ಯದ 26 ರೇಡಿಯೋ ಸ್ಟೇಷನ್‌ಗಳಿಂದ ಭಾಗವಹಿಸಿದ್ದ ಸ್ಪರ್ಧಿಗಳ ಪೈಕಿ ಮೈಸೂರು ಆಕಾಶವಾಣಿಯ ಎಂ.ಎಸ್. ಲಕ್ಷ್ಮೀ ಕಾರಂತ್ ಮತ್ತು ಎಂ.ವಿಜಯ ಅವರು ಪ್ರಥಮ ಬಹುಮಾನ ಪಡೆದರೆ, ಬೆಂಗಳೂರಿನ ಅಭಿಜಿತ್ ಪುರೋಹಿತ್ ಮತ್ತು ಆರ್.ಮದನ್ ಅವರು ದ್ವಿತೀಯ ಸ್ಥಾನ, ಹೊಸಪೇಟೆ ಕೇಂದ್ರದ ಸತೀಶ್ ಕುಮಾರ್ ಮತ್ತು ರಾಜೇಂದ್ರ ಪ್ರಸಾದ್ ಅವರು ತೃತೀಯ ಸ್ಥಾನ ಪಡೆದಿದ್ದಾರೆ.ಮೈಸೂರಿನ ಆಕಾಶವಾಣಿಯಲ್ಲಿ ನಡೆದ ಸಮಾರೋಪದಲ್ಲಿ ವಿಜೇತರಿಗೆ ನಿಲಯದ ಸಹಾಯಕ ನಿರ್ದೇಶಕ ಡಾ.ಆನಂದ್ ವಿ. ಪಾಟೀಲ್, ಜಿ. ರಾಜಲಕ್ಷ್ಮೀ ಶ್ರೀಧರ್ ಬಹುಮಾನ ವಿತರಿಸಿದರು.
ಕಬ್ಬು ದರ ನಿಗದಿ: ಸರಿಪಡಿಸಲು ಸಿಎಂ ಭರವಸೆ
ಮೈಸೂರು: ಕಬ್ಬು ದರ ನಿಗದಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಕಬ್ಬು ಬೆಳೆಗಾರರಿಗೆ ಭರವಸೆ ನೀಡಿದ್ದಾರೆ. ಮಂಗಳವಾರ ಮೈಸೂರಿನಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಬ್ಬು ದರ ನಿಗದಿಯಲ್ಲಿ ದಕ್ಷಿಣ ಭಾಗದ ಕಾರ್ಖಾನೆಗಳ ವ್ಯಾಪ್ತಿಯ ಬಣ್ಣಾರಿ ಕಾರ್ಖಾನೆ ದರ ನಿಗದಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ಸರ್ಕಾರ ವಿಶೇಷ ಕ್ರಮ ಕೈಗೊಳ್ಳುತ್ತದೆ. ಸರ್ಕಾರ ನಿಗದಿ ಮಾಡಿರುವ ಟನ್ನಿಗೆ 2,650 ಬಾಬ್ತು ಬಾಕಿ, 250 ಅನ್ನು ಶೀಘ್ರವೇ ಕೊಡಿಸಲು ಬದ್ಧವಿರುವುದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ ಹಾಜರಿದ್ದ ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್, ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಮುಖ್ಯಮಂತ್ರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವರು. ಅವರ ಭರವಸೆ ನಂಬಿ ತಕ್ಷಣ ಚಳವಳಿಯನ್ನು ಕೈಬಿಡುವಂತೆ ರೈತ ಮುಖಂಡರಲ್ಲಿ ಮನವಿ ಮಾಡಿದರು. ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರೈತ ಮುಖಂಡರಾದ ಕೂಡನಹಳ್ಳಿ ರಾಜಣ್ಣ ಇದ್ದರು.
ಸಕ್ಕರೆ ಕಾರ್ಖಾನೆ ಮಾಲೀಕರ ಜತೆಮತ್ತೆ ಮಾತುಕತೆ
ಮೈಸೂರು: ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್‌ಗೆ 2,400 ನೀಡಬೇಕು ಎಂಬ ಸರ್ಕಾರದ ತೀರ್ಮಾನದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರನ್ನು ಕರೆಸಿ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತೇನೆ. ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರ್ಕಾರ ಪ್ರತಿ ಟನ್‌ಗೆ 2650 ನಿಗದಿ ಮಾಡಿದೆ. ಇದರಲ್ಲಿ ಮಾಲೀಕರ ಪಾಲು 2.400, ಉಳಿಕೆ 250ಗಳಲ್ಲಿ 100 ತೆರಿಗೆ ವಿನಾಯ್ತಿ. 150 ಸರ್ಕಾರ ಕೊಡಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.