ಮೈಸೂರು

ಸಂವಿಧಾನದ ಪುನರ್ ವಿಮರ್ಶೆ ಅಗತ್ಯ

Published On :

ಮೈಸೂರು: ಸಂವಿಧಾನದ ಪುನರ್ ವಿಮರ್ಶೆ ಆಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ.ಜಾತಿ, ಪ.ಪಂಗಡ ನೌಕರರ ಕಲ್ಯಾಣ ಸಂಘ ಆಯೋಜಿಸಿದ್ದ ಮೈಸೂರು ವಿಭಾಗಮಟ್ಟದ ಸಮಾವೇಶ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ಪುನರ್ ರಚನೆಯ ಅಗತ್ಯವಿಲ್ಲ. ಆದರೆ ಸಂವಿಧಾನ ಪುನರ್ ವಿಮರ್ಶೆ ಆಗಬೇಕಿದೆ. ಭಾರತದಲ್ಲಿ ಬಲಿಷ್ಠ ಸಂವಿಧಾನ ಜಾರಿಯಾಗಿ ಮತ್ತು ಸ್ವಾತಂತ್ರ್ಯ ಬಂದು ಅರವತ್ತು ವರ್ಷ ಕಳೆದರೂ ಸರ್ವ ಶಿಕ್ಷಣ ಅಭಿಯಾನ ಜಾರಿಗೊಳಿಸಿ, 1ಕ್ಕೆ ಒಂದು ಕೆ.ಜಿ. ಅಕ್ಕಿ, ಶಾಲೆಗೆ ಬರುವ ಹೆಣ್ಣು ಮಕ್ಕಳಿಗೆ 2 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೊಳಿಸುವುದು ಮತ್ತು ಅಸ್ಪೃಶ್ಯತೆ ಮತ್ತು ಜಾತೀಯತೆ ತಾಂಡವವಾಡುತ್ತಿರುವುದರಿಂದ ನಾವು ಎಲ್ಲಿ ಸೋತಿದ್ದೇವೆ ಎಂಬುದರ ಬಗ್ಗೆ ಪುನರ್ ವಿಮರ್ಶೆ ನಡೆಯಬೇಕು ಎಂದರು.
ವಿದ್ಯಾವಂತರು ಈ ಬಗ್ಗೆ ಹೆಚ್ಚು ಗಮನ ನೀಡಬೇಕು. ಮೀಸಲಾತಿ ಬಂದ ಬಳಿಕ ಸಾಕಷ್ಟು ಸವಲತ್ತು ಸಿಕ್ಕಿದೆ. ಆದರೆ ಪ.ಜಾತಿ ಮತ್ತು ಪ.ಪಂಗಡ ಕಲ್ಯಾಣ ಸಂಘದ ಬಗ್ಗೆ ಈ ಹಿಂದೆ ಅಪಸ್ವರ ಎದ್ದಿತ್ತು. ಅದನ್ನು ಲೋಕಸಭೆಯಲ್ಲಿ ನಾನು ವಿರೋಧಿಸಿದ್ದೆ. ಸಂವಿಧಾನದಲ್ಲಿ ಪ.ಜಾತಿ, ಪ. ಪಂಗಡದವರಿಗೆ ನೀಡಲಾದ ಮೀಸಲಾತಿಯಲ್ಲಿ ನಮಗೆ ವಂಚನೆಯಾದಾಗ ಅದರ ವಿರುದ್ಧ ಹೋರಾಡಲು ಇಂತಹ ಸಂಘಟನೆಗಳ ಅಗತ್ಯವಿದೆ ಎಂದು ಹೇಳಿದರು.
ಹೆಚ್ಚು ಕಾಳಜಿ ವಹಿಸಿ: ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ಬ್ಯಾಂಕಿಗೆ ಬರುವ ದಲಿತರು, ಬಡವರು ಮತ್ತು ಹಿಂದುಳಿದವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಕೇಂದ್ರ ಸರ್ಕಾರವು ಎಲ್ಲಾ ಸವಲತ್ತುಗಳನ್ನು ಬ್ಯಾಂಕ್ ಮೂಲಕವೆ ನೀಡುತ್ತಿದೆ. ಆದ್ದರಿಂದ ಕಡು ಬಡುವರೂ ಸಹ ಬ್ಯಾಂಕಿಗೆ ಬರುವಂತಾಗಿದೆ. ಆದ್ದರಿಂದ ಮೊದಲು ಅವರಿಗೆ ತಾವು ಸ್ಪಂದಿಸಬೇಕು ಎಂದರು.
ಸಂಘದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕ ಎ.ಮಲ್ಲಿಕಾರ್ಜುನ ಸ್ವಾಮಿ ಮತ್ತು ಅಧ್ಯಕ್ಷ ಕೆ.ಗುರುಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯದರ್ಶಿ ರಾಜಪ್ಪ ಅಭಿನಂದನಾ ಭಾಷಣ ಮಾಡಿದರು. ಕಾರ್ಯಾಧ್ಯಕ್ಷ ಎನ್.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕೆ.ಎನ್. ಶಿವಲಿಂಗಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.