ತೆರಿಗೆ ಹೆಚ್ಚಿಸುವಾಗ ಬಡವರ ಮೇಲೆ ಕಾಳಜಿ ಕಾಣಲಿಲ್ಲವೆ?
ಕ.ಪ್ರ. ವಾರ್ತೆ , ಮೈಸೂರು , ಜ.15
ಈಗ ಬಡವರ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವು ಮಂಡಿಸಿದ ಬಜೆಟ್ನಲ್ಲಿ ಮದ್ಯದ ಮೇಲಿನ ತೆರಿಗೆಯನ್ನು ಶೇ.15 ರಿಂದ 18ಕ್ಕೆ ಏರಿಸುವಾಗ ಬಡವರ ಬಗ್ಗೆ ಕಾಳಜಿ ಇರಲಿಲ್ಲವೆ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮದ್ಯ ವರ್ತಕರ ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ ಟೀಕಿಸಿದ್ದಾರೆ.
ಸಾರಾಯಿ ನಿಷೇಧ ಮಾಡಲು ಜೆಡಿಎಸ್, ಬಿಜೆಪಿ ಸಮ್ಮಿಶ್ರ ಸರ್ಕಾರದ ದೃಢ ನಿರ್ಧಾರ ಕಾರಣ. ಹಿಂದೆ ಅನಧಿಕೃತವಾಗಿ ಮಾರಾಟವಾಗುತ್ತಿದ್ದ ಸೆಕೆಂಡ್ಸ್ ಮದ್ಯ ಸಾರಾಯಿ ಮಾರಾಟವು ಸರ್ಕಾರದ ಣ್ಚಕ್ಕಸಕ್ಕೆ ಬರುವಂತಾಗಲು ಸರ್ಕಾರ ಸೆಕೆಂಡ್ಸ್ ಮದ್ಯ ಸಾರಾಯಿ ಮಾರಾಟ ನಿಷೇಧಿಸಿತ್ತು. ಈ ಬಗ್ಗೆ ಹಿಂದೆ ಸೆಕೆಂಡ್ಸ್ ಮದ್ಯ ನಿಲ್ಲಿಸಲು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಅಬಕಾರಿ ಆಯುಕ್ತರಾಗಿದ್ದ ಎಸ್.ಕೆ. ಪಟ್ನಾಯಕ್ ಮತ್ತು ಬಜೆಟ್ ಕಾರ್ಯದರ್ಶಿ, ಪಾನೀಯ ನಿಗಮದ ಆಡಳಿತ ನಿರ್ದೇಶಕರಾಗಿದ್ದ ರಾಮಶೇಷನ್ ಪರಿಶ್ರಮ ಮಹತ್ವದ್ದು. 2001 ರಿಂದಲೆ ಫೆಡರೇಷನ್ ರಾಜ್ಯ ಮಟ್ಟದಲ್ಲಿ ತೆರಿಗೆ ರಹಿತ ಮದ್ಯ ನಿಲ್ಲಿಸಲು ಮಾಡಿದ ಹೋರಾಟದ ಪರಿಣಾಮ ಇದರ ಹಿಂದೆ ಇದೆ ಎಂದು ತಿಳಿಸಿದ್ದಾರೆ.
ಸಾರಾಯಿ ನಿಷೇಧ ತಪ್ಪು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾರಾಯಿ ನಿಷೇಧದ ಬಳಿಕ ಕುಡುಕರ ಸಂಖ್ಯೆ ಹೆಚ್ಚಾಗಿದೆ. 20 ಖರ್ಚು ಮಾಡುತ್ತಿದ್ದವರು ಈಗ ಒಂದು ಬಾಟಲಿ ಮದ್ಯಕ್ಕೆ 50 ರಿಂದ 70 ಕೊಡುತ್ತಿದ್ದಾರೆ. ಇದರಿಂದ ಸಮಸ್ಯೆ ಬಗೆಹರಿದಿಲ್ಲ ಎಂದು ಹೇಳಿದ್ದಾರೆ. ಕರ್ನಾಟಕ ರಾಜ್ಯ ಮದ್ಯ ಮಾರಾಟ ಸಂಘಗಳ ಒಕ್ಕೂಟ ಸಿದ್ಧಪಡಿಸಿದ 2013-14ನೇ ಸಾಲಿನ ಬಜೆಟ್ ಮತ್ತು ಇತರೆ ಮನವಿಯ ಕೈಪಿಡಿ ನೋಡಿದರೆ ಇನ್ನೊಂದು ಮುಖ ಕಾಣುತ್ತದೆ. ಸಾರಾಯಿ, ಶೇಂದಿ, ಇಎಂಎಲ್ ಚಾಲ್ತಿಯಲ್ಲಿದ್ದಾಗ 35 ವರ್ಷಗಳಲ್ಲಿ ಒಟ್ಟು 15,736 ಕೋಟಿ ಆದಾಯ ಇತ್ತು. 2003ರ ಜುಲೈನಲ್ಲಿ ತೆರಿಗೆ ರಹಿತ ಮದ್ಯ ನಿಲ್ಲಿಸಿದ ಬಳಿಕ ನಾಲ್ಕು ವರ್ಷಗಳಲ್ಲಿ 13,139 ಕೋಟಿ ಆದಾಯ ಬಂದಿದೆ. ಸಾರಾಯಿ ನಿಲ್ಲಿಸಿದ್ದು 2007-08ನೇ ಸಾಲಿನಲ್ಲಿ.
2007-08 ರಿಂದ 2012- 13 ರವರೆಗೆ ಆರು ವರ್ಷಗಳಲ್ಲಿ ಕೇವಲ ಐಎಂಎಲ್ ಮೂಲದ ಆದಾಯ 46,850 ಕೋಟಿ ಇದೆ ಎಂದು ಅವರು ಹೇಳಿದ್ದಾರೆ.
ಆದಾಯ ನಷ್ಟಕ್ಕೆ ಹೊಣೆ ಯಾರು?: ಇಷ್ಟೊಂದು ದೊಡ್ಡ ಮೊತ್ತದ ಆದಾಯ ಬಂದಿದ್ದು ಗ್ರಾಹಕರ ಸಂಖ್ಯೆಯ ಹೆಚ್ಚಳದಿಂದಲ್ಲ. ತೆರಿಗೆ ರಹಿತ ಮದ್ಯ ಮತ್ತು ಸಾರಾಯಿ ನಿಷೇಧದ ನಂತರ ಆದದ್ದು. ತೆರಿಗೆ ರಹಿತ ಮದ್ಯ ಮತ್ತು ಸಾರಾಯಿಯಿಂದ 39 ವರ್ಷಗಳಲ್ಲಿ ಆದ ನಷ್ಟಕ್ಕೆ ಹೊಣೆ ಯಾರು? ಸೆಕೆಂಡ್ಸ್ ಮದ್ಯ ನಿಲ್ಲಿಸುವ ಮೊದಲು ವಾರ್ಷಿಕ 30 ಲಕ್ಷ ಪಟ್ಟಿಗೆ ಮದ್ಯ ಮಾರಾಟವಾಗುತ್ತಿತ್ತು. 2003-04ರಲ್ಲಿ ಸೆಕೆಂಡ್ಸ್ ನಿಲ್ಲಿಸಿದ ನಂತರ 2006-07ನೇ ಸಾಲಿನಲ್ಲಿ 153.61 ಲಕ್ಷ ಪಟ್ಟಿಗೆಯಷ್ಟು ಮದ್ಯ ಮಾರಾಟವಾಗಿತ್ತು.
2007-08ರಲ್ಲಿ ಸಾರಾಯಿ ನಿಷೇಧ ಮಾಡಿದ ನಂತರ 325.48 ಲಕ್ಷ ಪೆಟ್ಟಿಗೆ ಮದ್ಯ ಮಾರಾಟವಾಯಿತು. 2006-07ಕ್ಕೆ ಅಧಿಕೃತ ಸಾರಾಯಿ ಮಾರಾಟ 1.50 ಕೋಟಿ ಲೀಟರ್ ಅನ್ನು ಮದ್ಯದ ಪೆಟ್ಟಿಗೆಗೆ ನೇರವಾಗಿ ಪರಿವರ್ತಿಸಿದರೆ 17 ಲಕ್ಷ ಪೆಟ್ಟಿಗೆಯಾಗುತ್ತದೆ. ಈ 17 ಲಕ್ಷ ಪೆಟ್ಟಿಗೆ ಮತ್ತು ಮದ್ಯ ಮಾರಾಟದ 153 ಲಕ್ಷ ಪೆಟ್ಟಿಗೆ ಸೇರಿದರೆ ವ್ಯಾಪಾರವು ಅನಧಿಕೃತವಾಗಿ ನಡೆಯುತ್ತಿತ್ತು ಎಂದು ಒಕ್ಕೂಟ ವಾದಿಸಿದೆ.
2012-13ನೇ ಸಾಲಿನಲ್ಲಿ 506 ಲಕ್ಷ ಪೆಟ್ಟಿಗೆ ಮದ್ಯ ಮಾರಾಟವಾಗಿದೆ. ಅಂದರೆ 5 ಪಟ್ಟು ಹೆಚ್ಚಾಗಿದೆ. ಇದು ಮದ್ಯ ಮಾರಾಟದಲ್ಲಿ ಹಿಂದಿನಿಂದಲೂ ಇದ್ದ ನೈಜ ಮಾರಾಟದ ಪ್ರಮಾಣ ಸೂಚಿಸುತ್ತದೆಯೋ ಈ ಅಂತರ ಹಿಂದಿನ ಅನಧಿಕೃತ ಮಾರಾಟ ಸೂಚಿಸುತ್ತದೆಯೋ? ಇದರಿಂದ ಸರ್ಕಾರಕ್ಕೆ ಎಷ್ಟು ಲಾಭವಾಯಿತು ಈ ಹಿಂದೆ ಸರ್ಕಾರವು ಬಡವರು ಹೆಚ್ಚಿಗೆ ಕುಡಿಯದಂತೆ ಮಾಡಿದ ಚಿಂತನೆಯೇ ಅಥವಾ ಸರ್ಕಾರದ ಕೈಸುಡುವಂತೆ ಮಾಡುತ್ತಿದ್ದವರಿಂದ ತಪ್ಪಿಸಿಕೊಳ್ಳಲು ಮಾಡಿದ ಚಿಂತನೆಯೇ ಮಾರಾಟವಾಗುವ ಮದ್ಯವನ್ನು ಲೆಕ್ಕಕ್ಕೆ ತೆಗೆದುಕೊಂಡು ಸರ್ಕಾರದ ವರಮಾನವನ್ನು ಹೆಚ್ಚಿಸಿಕೊಳ್ಳಲು ಮಾಡಿದ ಚಿಂತನೆಯೇ ಎಂದು ಗುರುಸ್ವಾಮಿ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

