ಯುವಕರ ಸಂಘ ಉದ್ಘಾಟನೆ
ತಾಂಡವಪುರ: ಬುದ್ಧ, ಬಸವಣ್ಣ, ಡಾ. ಬಿ.ಆರ್.ಅಂಬೇಡ್ಕರ್, ಭಕ್ತ ಕನಕದಾಸರು ಒಂದೇ ಜಾತಿಗೆ ಸೀಮಿತವಾಗಿಲ್ಲ. ಅವರು ಎಲ್ಲ ವರ್ಗದ ಜನರಿಗೂ ಸೇರಿದವರು. ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಅಂತಹ ಮಹಾನ್ ನಾಯಕರಿಗೆ ಗೌರವ ನೀಡಿದಂತಾಗುತ್ತದೆ ಎಂದು ಕಾಂಗ್ರೆಸ್ ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರ ಹೋಬಳಿಯ ಅಹಲ್ಯ ಗ್ರಾಮದಲ್ಲಿ ಶ್ರೀ ಮೈಲಾರಿ ಯುವಕರ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಈ ಬಾರಿಯೂ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ನಿಂದ ಆರ್. ಧ್ರುವನಾರಾಯಣ್ ಅವರೇ ಸ್ಪರ್ಧಿಸಲಿದ್ದು, ಈ ಬಾರಿ ಕೂಡ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಜಿಪಂ ಸದಸ್ಯರಾದ ರೇವಮ್ಮ ಟಿ.ಕೆ. ಮಾಲೇಗೌಡ, ತಾಪಂ ಸದಸ್ಯರಾದ ರಾಜಶೇಖರ್, ಡಾ.ಬಿ. ಶಿವರುದ್ರಪ್ಪ, ಗ್ರಾಪಂ ಸದಸ್ಯ ಮರಳೂರು ಮಹೇಶ್, ಸಬ್ ಇನ್ಸ್ಪೆಕ್ಟರ್ ಜಯಕುಮಾರ್, ಸಿದ್ದರಾಮಯ್ಯ ಅಭಿಮಾನಿ ಬಳಗದ ಅಧ್ಯಕ್ಷ ಅಣ್ಣಯ್ಯ ಇದ್ದರು.
ಮೈಸೂರು ತಂಗುದಾಣ ಹಣ ದುರ್ಬಳಕೆ; ವರದಿ ನೀಡಲು ಸೂಚನೆ
ಬೆಂಗಳೂರು: ಮೈಸೂರಿನ ವಿವಿಧ ತಂಗುದಾಣಗಳಿಗೆ ನಿಗದಿತ ಮೊತ್ತಕ್ಕಿಂತ ಹೆಚ್ಚು ಖರ್ಚು ಮಾಡಿರುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕೆಎಸ್ಆರ್ಟಿಸಿಯ ಹಣಕಾಸು ಅಧಿಕಾರಿ ಪದ್ಮನಾಭ ಅವರಿಗೆ ಸೂಚಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ. ಶುಕ್ರವಾರ ಲಾಲ್ಬಾಗ್ನ ಫಲಪುಷ್ಪ ಪ್ರದರ್ಶನ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ತಂಗುದಾಣಗಳಿಗೆ ನಿಗದಿಪಡಿಸಿರುವ 1.5 ಲಕ್ಷಕ್ಕಿಂತ ಅಧಿಕ ಅಂದರೆ 3 ಲಕ್ಷ ಖರ್ಚು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಆ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಪದ್ಮನಾಭ ಅವರಿಗೆ ಸೂಚಿಸಲಾಗುವುದು. ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬೈಕ್- ಲಾರಿ ಡಿಕ್ಕಿ; ಯುವಕ ಸಾವು
ಟಿ. ನರಸೀಪುರ: ಬೈಕ್ಗೆ ಮರಳು ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು, ಮಗು ಸೇರಿದಂತೆ ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಚನ್ನಬಸವನಹುಂಡಿ ಗ್ರಾಮದ ತಲಕಾಡು ಮುಖ್ಯ ರಸ್ತೆಯಲ್ಲಿ ಶನಿವಾರ ನಡೆದಿದೆ. ತಾಲೂಕಿನ ಮರಡೀಪುರ ಗ್ರಾಮದ ವಿಷಕಂಠ ಎಂಬುವರ ಪುತ್ರ ಶಿವು (20) ಮೃತಪಟ್ಟವರು. ಇವರ ತಾಯಿ ಮಹದೇವಮ್ಮ, ಅಕ್ಕನ ಮಗಳಾದ ಎರಡು ವರ್ಷದ ಭೂಮಿಕ ಗಾಯಗೊಂಡು ಮೈಸೂರಿನ ಕಾವೇರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮರಳು ಲಾರಿ ಚನ್ನಬಸವನಹುಂಡಿ ಬಳಿ ಅಮ್ಮ ಹಾಗೂ ಅಕ್ಕನ ಮಗಳನ್ನು ಕೂರಿಸಿಕೊಂಡು ತೆರಳುತ್ತಿದ್ದ ಶಿವುವಿನ ಬೈಕ್ಗೆ ಡಿಕ್ಕಿ ಹೊಡೆದದ್ದರಿಂದ ಸವಾರ ಶಿವು ಸ್ಥಳದಲ್ಲಿಯೇ ಕೊನೆಯುಸಿರೆಳೆದ. ನಂಜನಗೂಡು ಉಪವಿಭಾಗದ ಎಎಸ್ಪಿ ಡಾ. ರಾಜಾ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಲಕಾಡು ಠಾಣೆ ಪಿಎಸ್ಐ ಆನಂದ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕ್ರೀಡೆಗೂ ಗಮನ ನೀಡಿ
ಕೆ.ಆರ್. ನಗರ: ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಗಮನ ಹರಿಸಿದರೆ ಆ ಕ್ಷೇತ್ರದಲ್ಲಿಯೂ ಸಾಧನೆ ಮಾಡಬಹುದೆಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ತಾಲೂಕಿನ ಪ್ರೌಢಶಾಲೆಯಿಂದ ಪದವಿ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ವಾರ್ಷಿಕ ಆರು ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಆದಿಶ್ರೀ 70ನೇ ಜಯಂತಿ
ಮೈಸೂರು: ಆದಿಚುಂಚನಗಿರಿ ಮಹಾಸಂಸ್ಥಾನದ ಹಿರಿಯ ಶ್ರೀಗಳಾಗಿದ್ದ ದಿ. ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ 70ನೇ ಜಯಂತಿಯನ್ನು ಶನಿವಾರ ವಿವಿಧೆಡೆ ಆಚರಿಸಲಾಯಿತು. ಮೈಸೂರು, ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘವು ವಿದ್ಯಾರಣ್ಯಪುರಂ ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶ್ರೀಗಳ ಗುಣಗಾನ ಮಾಡಲಾಯಿತು. ಅಲ್ಲಿಂದ ಚೆಲುವಾಂಬ ಆಸ್ಪತ್ರೆಗೆ ತೆರಳಿದ ಮುಖಂಡರು ಸುಮಾರು 250 ಮಂದಿ ಒಳರೋಗಿಗಳಿಗೆ ಹಣ್ಣು ವಿತರಿಸಿದರು. ಆಸ್ಪತ್ರೆಯ ಅಧೀಕ್ಷಕ ಡಾ. ಕೃಷ್ಣಮೂರ್ತಿ, ಸಂಘದ ಅಧ್ಯಕ್ಷ ಕೆ.ಎಂ.ಬಸವೇಗೌಡ, ಮಾಜಿ ಅಧ್ಯಕ್ಷ ನರಸೇಗೌಡ, ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ನಿರ್ದೇಶಕರಾದ ಮಾಜಿ ಉಪಮೇಯರ್ ಲಕ್ಷ್ಮಣ್, ಲೀಲಾವತಿ, ವಿಜಯಕುಮಾರ್, ನಾಗಣ್ಣ, ಸತ್ಯನಾರಾಯಣ್ ಇದ್ದರು. ಕುವೆಂಪುನಗರದ ಬಿಜಿಎಸ್ ವಿದ್ಯಾಪೀಠದಲ್ಲಿ ಆದಿಶ್ರೀಗಳ ಜಯಂತಿ ಆಚರಿಸಲಾಯಿತು. ನಂತರ ಪ್ರಸಾದ, ಪಾನಕ ವಿತರಿಸಲಾಯಿತು.
ಮೈಸೂರು ತಂಗುದಾಣ ಹಣ ದುರ್ಬಳಕೆ; ವರದಿ ನೀಡಲು ಸೂಚನೆ
ಬೆಂಗಳೂರು: ಮೈಸೂರಿನ ವಿವಿಧ ತಂಗುದಾಣಗಳಿಗೆ ನಿಗದಿತ ಮೊತ್ತಕ್ಕಿಂತ ಹೆಚ್ಚು ಖರ್ಚು ಮಾಡಿರುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕೆಎಸ್ಆರ್ಟಿಸಿಯ ಹಣಕಾಸು ಅಧಿಕಾರಿ ಪದ್ಮನಾಭ ಅವರಿಗೆ ಸೂಚಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.
ಶುಕ್ರವಾರ ಲಾಲ್ಬಾಗ್ನ ಫಲಪುಷ್ಪ ಪ್ರದರ್ಶನ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ತಂಗುದಾಣಗಳಿಗೆ ನಿಗದಿಪಡಿಸಿರುವ 1.5 ಲಕ್ಷಕ್ಕಿಂತ ಅಧಿಕ ಅಂದರೆ 3 ಲಕ್ಷ ಖರ್ಚು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಆ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಪದ್ಮನಾಭ ಅವರಿಗೆ ಸೂಚಿಸಲಾಗುವುದು. ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನಾಳೆ ರೈತರ ಧರಣಿ
ಮೈಸೂರು: ಭೂ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ದಸಂಸ ಜಿಲ್ಲಾ ಸಂಘಟನೆ ವತಿಯಿಂದ ಜ.20ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಹಾಗೂ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ ಹೇಳಿದ್ದಾರೆ. ರೈತ ಸಂಘ ಮತ್ತು ದಸಂಸ, ಪ್ರಗತಿ ಪರ ಸಂಘಟನೆಗಳು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
'ನಾನೂ ಬಿಜೆಪಿ ಟಿಕೆಟ್ ಆಕಾಂಕ್ಷಿ'
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ತಾವು ಕೂಡ ಬಿಜೆಪಿ ಟಿಕೆಟ್ ಆಕಾಕ್ಷಿಯಾಗಿರುವುದಾಗಿ ಜಿಪಂ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ತಿಳಿಸಿದ್ದಾರೆ. ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಎರಡೂ ಬಾರಿ ಸ್ಪರ್ಧಿಸಿ, ಕಡಿಮೆ ಅಂತರದಲ್ಲಿ ಸೋತಿದ್ದೇನೆ. ಎರಡೂ ಜಿಲ್ಲೆಯ ಜಿಪಂ ಸದಸ್ಯನಾಗಿ, ಒಮ್ಮೆ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ನನಗೆ ಉಭಯ ಜಿಲ್ಲೆಗಳ ಮುಖಂಡರು, ಕಾರ್ಯಕರ್ತರು, ಮತದಾರರು ಪರಿಚಯ ಇರುವುದರಿಂದ ಟಿಕೆಟ್ ನೀಡಿದಲ್ಲಿ ಅನುಕೂಲವಾಗುತ್ತದೆ ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದಿದ್ದಾರೆ.
ಗಾಂಜಾ ಮಾರಾಟ; ವ್ಯಕ್ತಿ ಬಂಧನ
ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ತಿಲಕ್ನಗರದ ಎರಡನೇ ಈದ್ಗಾ ನಿವಾಸಿ ರಿಯಾಜ್ ಬಂಧಿತ. ಸುಮಾರು ಅರ್ಧ ಕೆಜಿಗೂ ಹೆಚ್ಚು ಗಾಂಜಾವನ್ನು ವಶಪಡಿಸಿಕೊಂಡರು. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

