ಮತ್ತೆ ಚಿಗುರಿದ ಸರಗೂರು ಕನಸು
ಮೈಸೂರು: ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ 43 ಹೊಸ ತಾಲೂಕುಗಳ ರಚನೆ ಘೋಷಿಸಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು ಮರು ವಿಮರ್ಶೆ ಮಾಡುವುದಾಗಿ ಹೇಳಿತ್ತು. ಆದರೆ ಜನರಿಂದ ಅದರಲ್ಲೂ ಉತ್ತರ ಕರ್ನಾಟಕ ಭಾಗದವರಿಂದ ವ್ಯಕ್ತವಾದ ಭಾರಿ ವಿರೋಧದ ಹಿನ್ನೆಲೆಯಲ್ಲಿ ಹೊಸ ತಾಲೂಕುಗಳ ರಚನೆಗೆ ಬದ್ಧವಾಗಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಪದೇ ಪದೆ ಹೇಳುತ್ತಿದ್ದಾರೆ.
ಇದು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಸರಗೂರು ಭಾಗದ ಜನರ ಕನಸು ಮತ್ತೊಮ್ಮೆ ಚಿಗುರುವಂತೆ ಮಾಡಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹನೂರಿನ ವಿಷಯದಲ್ಲಿ ಯಾವುದೇ ತಂಟೆ ತಕರಾರಿಲ್ಲ. ರಾಮಾಪುರದ ಜನ ಕೂಡ ತಾಲೂಕು ಕೇಂದ್ರ ಕೇಳಿದರೂ ಈಗಾಗಲೇ ಶೈಕ್ಷಣಿಕ ತಾಲೂಕು, ವಿಧಾನಸಭಾ ಕ್ಷೇತ್ರ, ಪಪಂ ಸ್ಥಾನಮಾನ ಹೊಂದಿರುವ ಹನೂರು ಇಂದಲ್ಲ, ನಾಳೆ ತಾಲೂಕು ಕೇಂದ್ರವಾಗುವುದು ಖಚಿತವಾಗಿದೆ. ಆದರೆ ಸರಗೂರು ವಿಷಯದಲ್ಲಿ ಯಾಕೋ ಏನೋ ಈ ರೀತಿ ಖಚಿತವಾಗಿ ಹೇಳಲಾಗುತ್ತಿಲ್ಲ. ಮೂರು ಸಮಿತಿಗಳು ಸರಗೂರನ್ನು ತಾಲೂಕು ಮಾಡುವಂತೆ ಶಿಫಾರಸ್ ಮಾಡಿದ್ದರೂ ಬಿಜೆಪಿ ಸರ್ಕಾರ ಪ್ರಕಟಿಸಿದ್ದ 43 ತಾಲೂಕುಗಳ ಪಟ್ಟಿಯಲ್ಲಿ ಸರಗೂರು ಇರಲಿಲ್ಲ.
ರಾಜ್ಯದಲ್ಲಿ ತಾಲೂಕುಗಳ ಪುನರ್ರಚನೆ ಸಂಬಂಧ ಈವರೆಗೆ ಒಟ್ಟು ನಾಲ್ಕು ಸಮಿತಿಗಳು ಅಂದರೆ ಎಂ. ವಾಸುದೇವರಾವ್ ಆಯೋಗ, ಟಿ.ಎಂ.ಹುಂಡೇಕಾರ್ ಸಮಿತಿ, ಪಿ.ಸಿ.ಗದ್ದೀಗೌಡರ್ ಸಮಿತಿ ಮತ್ತು ಎಂ.ಬಿ.ಪ್ರಕಾಶ್ ಅಧ್ಯಕ್ಷತೆಯ ಸಮಿತಿಗಳು ವರದಿ ನೀಡಿವೆ. ಕೊನೆಯದಾದ ಎಂ.ಬಿ.ಪ್ರಕಾಶ್ ಸಮಿತಿಯು 2009ರ ಮೇ 30ರಂದೇ ಸರ್ಕಾರಕ್ಕೆ ತನ್ನ ಶಿಫಾರಸ್ ಸಲ್ಲಿಸಿದೆ.
ಮೈಸೂರು ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಸರಗೂರು, ನಂಜನಗೂಡು ತಾಲೂಕಿನ ಹುಲ್ಲಹಳ್ಳಿ, ಟಿ. ನರಸೀಪುರ ತಾಲೂಕಿನ ಬನ್ನೂರು, ತಲಕಾಡು, ಚಾಮರಾಜನಗರ ಜಿಲ್ಲೆಯಲ್ಲಿ ಹನೂರು, ರಾಮಾಪುರ ನಿವಾಸಿಗಳ ತಾಲೂಕಿನ ಸ್ಥಾನಮಾನಕ್ಕೆ ಆಗ್ರಹಿಸಿ ಸಮಿತಿಗಳ ಮುಂದೆ, ಸರ್ಕಾರಗಳ ಮುಂದೆ ಮನವಿ ಪತ್ರಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಜನತೆ ಕೂಡ ತಾಲೂಕು ಕೇಂದ್ರಕ್ಕೆ ಆಗ್ರಹಿಸುತ್ತಿದ್ದರು. ಹನೂರು ತಾಲೂಕು ಕೇಂದ್ರ ಆಗುತ್ತಿದೆ ಎಂಬುದನ್ನು ತಿಳಿದು ಉಳಿದವರೆಲ್ಲ ಮೌನವಾಗಿದ್ದಾರೆ. ಆದರೆ ಇವತ್ತಿಗೂ ಹೊಸ ತಾಲೂಕಿನ ಬೇಡಿಕೆಯನ್ನು ಸರಗೂರು ಜನತೆ ಬಿಟ್ಟುಕೊಟ್ಟಿಲ್ಲ.
ಅಲ್ಲಿನ ತಾಲೂಕು ಹೋರಾಟ ಸಮಿತಿ, ವರ್ತಕ ಮಂಡಳಿಯ ಪದಾಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ.
ಸರಗೂರು ಏಕೆ?: ಮೈಸೂರು ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ವಿಸ್ತೀರ್ಣದಲ್ಲಿ ದೊಡ್ಡ ತಾಲೂಕು. ಪ್ರಮುಖ ವಾಣಿಜ್ಯ ಸ್ಥಳವಾದ ಸರಗೂರು ಹಾಲಿ ಹೋಬಳಿ ಕೇಂದ್ರ. 3 ಜಿಪಂ ಕ್ಷೇತ್ರಗಳು, 150ಕ್ಕೂ ಹೆಚ್ಚು ಗ್ರಾಮಗಳಿವೆ. ಜನಸಂಖ್ಯೆ 1.70 ಲಕ್ಷ. ಎಪಿಎಂಸಿ ಮುಖ್ಯ ಮಾರುಕಟ್ಟೆ ಇದೆ. ಪಟ್ಟಣ ಪಂಚಾಯ್ತಿಯೂ ಇದೆ. ನಾಡ ಕಚೇರಿ, ಬಿಎಸ್ಎನ್ಎಲ್ ಕಚೇರಿ, ಅರಣ್ಯ, ಕೃಷಿ, ರೇಷ್ಮೆ, ಒಳನಾಡು ಸಾರಿಗೆ ಇಲಾಖೆ ಕಚೇರಿಗಳು, ಸೆಸ್ಕ್ ಕಚೇರಿ, ಪೊಲೀಸ್ ಠಾಣೆ, ವಸತಿಗೃಹಗಳು ಇವೆ.
ಸರ್ಕಾರಿ ಕಿರಿಯ, ಹಿರಿಯ, ಪ್ರೌಢ, ಬಾಲಕರ ಹಾಗೂ ಬಾಲಕಿಯರ ಪದವಿಪೂರ್ವ, ಪ್ರಥಮದರ್ಜೆ ಕಾಲೇಜುಗಳಿವೆ. ಜೆಎಶ್ಎಸ್ ಶಿಕ್ಷಣ ಸಂಸ್ಥೆಗಳು, ಸ್ವಾಮಿ ವಿವೇಕಾನಂದ ಸಂಸ್ಥೆ, ಲಯನ್ಸ್, ಆರ್ಎಲ್ಎಫ್ ಶಿಕ್ಷಣ ಸಂಸ್ಥೆಗಳಿವೆ.
ಹೊಸ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಸರಗೂರಿನಿಂದ ಸುತ್ತಮುತ್ತಲಿನ ಎಲ್ಲ ಗ್ರಾಮಗಳಿಗೂ ಬಸ್ ಸೌಲಭ್ಯವಿದೆ. ತಾಲೂಕು ಆಸ್ಪತ್ರೆ, ಸ್ವಾಮಿ ವಿವೇಕಾನಂದ ಆಸ್ಪತ್ರೆ, ಕಾರ್ನರ್ ಸ್ಟೋನ್ ಆಸ್ಪತ್ರೆಗಳಿವೆ. 8- 10 ಸಮುದಾಯ ಭವನಗಳಿವೆ.
ಅಧಿಕಾರ ವಿಕೇಂದ್ರೀಕರಣದ ಹಿತದೃಷ್ಟಿಯಿಂದ ಸರಗೂರು ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲ. ಏಕೆಂದರೆ ಎಚ್.ಡಿ.ಕೋಟೆ 50 ಕಿ.ಮೀ. ದೂರವಿದೆ.
ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಮನಸ್ಸು ಮಾಡಿದರೆ ಸರಗೂರಿಗೆ ತಾಲೂಕು ಕೇಂದ್ರದ ಭಾಗ್ಯ ಸಿಗಲಿದೆ. ಎಚ್.ಡಿ.ಕೋಟೆಯು ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಸಂಸದ ಆರ್.ಧ್ರುವನಾರಾಯಣ, ಶಾಸಕ ಎಸ್.ಚಿಕ್ಕಮಾದು ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ.
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

