ಲಾರಿ ಕಳವು: 6 ಮಂದಿ ಬಂಧನ ಗುಜರಿಯಲ್ಲಿ ಬಿಡಿಭಾಗ ಪತ್ತೆ
ಮೈಸೂರು: ಲಾರಿ ಕಳವು ಮಾಡಿ, ಕೆಲವೇ ಗಂಟೆಗಳಲ್ಲಿ ಪ್ರತಿ ಬಿಡಿ ಭಾಗಗಳನ್ನು ಬೇರ್ಪಡಿಸಿದ್ದ 6 ಮಂದಿ ಆರೋಪಿಗಳನ್ನು ನಜರ್ಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಕೆಸರೆ ನಿವಾಸಿ ಇರ್ಫಾನ್ ಷರೀಫ್, ಉದಯಗಿರಿಯ ನದೀಮ್ ಪಾಷ, ಶಾಹೆನ್ಯಾ, ರಾಜೀವ್ನಗರದ ಹ್ಯಾರೀಶ್ ಇಕ್ಬಾಲ್, ಟಿ. ನರಸೀಪುರದ ಸಿದ್ದೀಖ್ ಅಹಮ್ಮದ್ ಮತ್ತು ಹಂಜಾ ಹುಸೇನ್ ಬಂಧಿತರು.
ಸಿದ್ದಾರ್ಥ ಬಡಾವಣೆ ನಿವಾಸಿ ಪ್ರಕಾಶ್ ಎಂಬವರಿಗೆ ಸೇರಿದ ಲಾರಿಯನ್ನು ಯರಗನಹಳ್ಳಿಯಲ್ಲಿ ನಿಲ್ಲಿಸಲಾಗಿತ್ತು.
ಭಾನುವಾರ ರಾತ್ರಿ ಈ ಲಾರಿ ಕಳುವಾಗಿದ್ದು, ಈ ಸಂಬಂಧ ಮಾಲೀಕ ಪ್ರಕಾಶ್ ಅವರು ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ತಕ್ಷಣ ಹುಡುಕಾಟ ಆರಂಭಿಸಿದ ಪೊಲೀಸರಿಗೆ, ಉದಯಗಿರಿ ಮುಖ್ಯ ರಸ್ತೆಯಲ್ಲಿರುವ ಗಾಂಧಿನಗರದ ಗುಜರಿಯಲ್ಲಿ ಲಾರಿಯ ಬಿಡಿ ಭಾಗಗಳನ್ನು ಬೇರ್ಪಡಿಸಿರುವ ಮಾಹಿತಿ ಲಭ್ಯವಾಗಿದೆ. ಪೊಲೀಸರು ಗುಜರಿ ಮೇಲೆ ದಾಳಿ ನಡೆಸಿದಾಗ ಲಾರಿ ಬಿಡಿಭಾಗಗಳು ಇರುವುದು ಪತ್ತೆಯಾಗಿದೆ.
ಲಾರಿಯನ್ನು ಕಳವು ಮಾಡಿದ್ದ ಆರು ಮಂದಿ ಆರೋಪಿಗಳು, 4 ಗಂಟೆಗಳಲ್ಲಿ ಲಾರಿಯ ಪ್ರತಿ ಭಾಗವನ್ನು ಬೇರ್ಪಡಿಸಿದ್ದಾರೆ. ಅಲ್ಲದೆ, ಯಾವುದೇ ಗುರುತು ಸಿಗದಂತೆ ಚಾರ್ಸಿ ಸಂಖ್ಯೆ, ನಂಬರ್ ಪ್ಲೇಟ್ ಹಾಗೂ ಇತರೆ ಮಾಹಿತಿಗಳನ್ನು ಅಳಿಸಿ ಹಾಕಿದ್ದಾರೆ. ಲಾರಿಯ ಬಗ್ಗೆ ಯಾವುದೇ ಮಾಹಿತಿ ಸಿಗಬಾರದೆಂದು ಕೆಲವು ಭಾಗಗಳನ್ನು ನುಜ್ಜುಗುಜ್ಜು ಮಾಡಿದ್ದಾರೆ.
ಗ್ಯಾರೇಜ್ನಲ್ಲಿದ್ದ 4 ಲಕ್ಷ ಮೌಲ್ಯದ ಲಾರಿಯ ಬಿಡಿ ಭಾಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿಸಿಪಿ ಎಂ.ಎಂ. ಮಹದೇವಯ್ಯ, ದೇವರಾಜ ಉಪ ವಿಭಾಗದ ಎಸಿಪಿ ಎಂ.ಪಿ.ಜಯಮಾರುತಿ ಮಾರ್ಗದರ್ಶನದಲ್ಲಿ ನಜರ್ಬಾದ್ ಠಾಣೆ ಇನ್ಸ್ಪೆಕ್ಟರ್ ಕೆ.ಸಿ.ಪೂವಯ್ಯ, ಎಸ್ಐ ಎಚ್.ಎಂ.ಮಾಧು ಮತ್ತು ಸಿಬ್ಬಂದಿ ಕೆ.ಎಸ್.ಗುರುಸ್ವಾಮಿ, ಎಂ.ಎಂ.ಬಾಬು, ಅನಿಲ್ ಕೆ.ಶಂಖಪಾಲ್, ಎಚ್.ವಿ.ಮಧುಕೇಶ್, ಪ್ರಕಾಶ್, ಜಯಕುಮಾರ್, ವಿ. ಶ್ರೀನಿವಾಸ್, ಲಿಂಗರಾಜು, ಸ್ವಾಮಿ ಈ ಪತ್ತೆ ಮಾಡಿದ್ದಾರೆ.
ಸುಪ್ರೀಂ ತೀರ್ಪಿನಿಂದ ಸಂತೃಪ್ತಿ: ವೇಣು
ಮೈಸೂರು: ಕಾಡುಗಳ್ಳ ವೀರಪ್ಪನ್ ನಾಲ್ವರು ಸಹಚರರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಸುಪ್ರೀಂ ಕೋರ್ಟ್ ಆದೇಶಿಸಿರುವುದು ತೃಪ್ತಿ ತಂದಿದೆ ಎಂದು ಸೈಮನ್ ಮತ್ತು ಮೀಸೆಕಾರ ಮಾದಯ್ಯ ಪರ ವಕೀಲ ವೇಣುಗೋಪಾಲ್ ಹೇಳಿದರು. ವೀರಪ್ಪನ್ ನಾಲ್ಕು ಜನ ಸಹಚರರ ಪೈಕಿ ಸೈಮನ್ ಮತ್ತು ಮೀಸೆಕಾರ ಮಾದಯ್ಯ ಪರವಾಗಿ ವಕಾಲತ್ತು ವಹಿಸಿದ್ದೆ. ಇವರು ಪಾಲಾರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ 20 ವರ್ಷದಿಂದ ಜೈಲಿನಲ್ಲಿದ್ದಾರೆ. ಅಮಾಯಕರು ಹೋರಾಟ ನಡೆಸಿದ್ದಕ್ಕೆ ಈಗ ಜಯ ಸಿಕ್ಕಿದೆ. ಇಳಿ ವಯಸ್ಸಿನಲ್ಲಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಸುಪ್ರೀಂ ಕೋರ್ಟ್ನಿಂದ ಈ ತೀರ್ಪು ಬಂದಿರುವುದು ಸಂತೃಪ್ತಿ ತಂದಿದೆ ಎಂದು ಅವರು 'ಕನ್ನಡಪ್ರಭ'ಕ್ಕೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

