ಸ್ಥಾಯಿ ಸಮಿತಿ ರಚನೆ ಮುಂದಕ್ಕೆ
ಕ.ಪ್ರ.ವಾರ್ತೆ ಟಿ.ನರಸೀಪುರ ಜ. 23
ತಾಪಂ ಉಪ ಸಮಿತಿಗಳ ರಚನೆಗೆ ಆಡಳಿತರೂಢ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಒಮ್ಮತ ಮೂಡದ ಹಿನ್ನೆಲೆ ಗುರುವಾರ ಉಪ ಸಮಿತಿಗಳ ಸದಸ್ಯರ ಆಯ್ಕೆಗೆ ನಡೆದ ಸಭೆ ವಿಫಲವಾಯಿತು.
ತಾಪಂ ಸಭಾಂಗಣದಲ್ಲಿ ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು ಲೆಕ್ಕ ಪರಿಶೋಧನಾ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗಳಿಗೆ ಸದಸ್ಯರು ಹಾಗೂ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಭೆ ಕರೆಯಲಾಗಿತ್ತು. ಅಧ್ಯಕ್ಷ ನಟರಾಜು ಅವರು ರಾಜಿಸೂತ್ರಕ್ಕೆ ಪ್ರತಿಪಕ್ಷಗಳ ಸದಸ್ಯರು ಒಪ್ಪಿಗೆ ಸೂಚಿಸದ್ದಕ್ಕೆ ಸಭೆ ಮುಂದೂಡಿ, ಚುನಾವಣೆ ನಡೆಸಲು ನಿರ್ಧರಿಸಲಾಯಿತು.
ನಾಲ್ಕು ವರ್ಷಗಳಿಂದ ಉಪ ಸಮಿತಿಗಳನ್ನು ರಚನೆ ಮಾಡಲು ನಡೆಯುವ ಸಭೆಗಳೆಲ್ಲವೂ ವಿಫಲವಾಗುತ್ತಿದ್ದು, ಸಮಿತಿಗಳಿಗೆ ಆಯ್ಕೆ ಮಾಡಬೇಕಾಗಿರುವ ಸದಸ್ಯರ ಸಂಖ್ಯೆಗೆ ಅಧ್ಯಕ್ಷರು ಹಾಗೂ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿಯೇ ನಡೆಯಿತು. ಕೊನೆಗೆ ಆಡಳಿತರೂಢ ಕಾಂಗ್ರೆಸ್ ಸದಸ್ಯರೇ ಚುನಾವಣೆ ಮೂಲಕ ಸಮಿತಿಗಳನ್ನು ರಚನೆ ಮಾಡಲು ಒತ್ತಡ ಹೇರಿದ್ದರಿಂದ ಸಭೆ ರದ್ದಾಯಿತು.
ಅಧ್ಯಕ್ಷ ನಟರಾಜು ಮಾತನಾಡಿ, ಅಭಿವೃದ್ಧಿ ಕಾರ್ಯಕ್ರಮಗಳ ಹಿತದೃಷ್ಟಿಯಿಂದ ಜೆಡಿಎಸ್ ಮತ್ತು ಬಿಜೆಪಿಯ ಇಬ್ಬರು ಸದಸ್ಯರನ್ನು ಉಪ ಸಮಿತಿಗಳಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲು ಸಹಕಾರ ನೀಡಬೇಕು ಎಂದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಬಸವರಾಜು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯನ್ನು ಪ್ರತಿಪಕ್ಷ ಸದಸ್ಯರಿಗೆ ಬಿಟ್ಟು ಕೊಡಬೇಕು ಎಂಬ ಪಟ್ಟು ಹಿಡಿದರು. ಅಲ್ಲದೆ, ಮೂವರು ಸದಸ್ಯರನ್ನಾದರೂ ಆಯ್ಕೆ ಮಾಡಿ, ಅಧ್ಯಕ್ಷರ ಆಯ್ಕೆ ಅವರೇ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದಾಗ, ಇದಕ್ಕೆ ಸದಸ್ಯಯರಾದ ರೂಪಶ್ರೀ ಪರಮೇಶ್, ಶಿವಮ್ಮ ಮಹದೇವ ಹಾಗೂ ಸವಿತಾ ಜಯರಾಮ್ ಧ್ವನಿಗೂಡಿಸಿದರು.
ಚುನಾವಣೆ ಮುನ್ನ ನಡೆಯಲಿ: ಲೋಕಸಭೆ ಚುನಾವಣೆ ಘೋಷಣೆಯಾಗುವ ಮೊದಲೆ ಉಪ ಸಮಿತಿಗಳ ರಚನೆಗೆ ಚುನಾವಣೆ ಸಭೆಯನ್ನು ಕರೆಯಬೇಕು. ಮುಂದಿನ ಆರೇಳು ತಿಂಗಳಲ್ಲಿ ತಮ್ಮ ಚುನಾಯಿತ ಸದಸ್ಯತ್ವದ ಅಧಿಕಾರವೇ ಮುಗಿದು ಹೋಗಲಿದೆ. ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪ ಸಮಿತಿಗಳ ರಚನೆಯತ್ತ ತುರ್ತು ಕ್ರಮ ವಹಿಸಬೇಕೆಂದು ಬಹುತೇಕ ಸದಸ್ಯರೆಲ್ಲರೂ ಸಭೆಯಲ್ಲಿ ಆಗ್ರಹಿಸಿದರು.
ಉಪಾಧ್ಯಕ್ಷೆ ಕಮಲಾಕ್ಷಿ ನಾಗರಾಜು, ಮಾಜಿ ಅಧ್ಯಕ್ಷ ತುಂಬಲ ಅಂದಾನಿ, ಮಾಜಿ ಉಪಾಧ್ಯಕ್ಷೆ ಸುಜಾತ ವೆಂಕಟೇಶ್, ಸದಸ್ಯರಾದ ಗುರುಮೂರ್ತಿ, ಪುಟ್ಟಮಾದಮ್ಮ, ನಂಜಮ್ಮ, ನಾಗರತ್ನ, ನಸ್ರೀನ್ ರೂಹಿ, ಸುವಣ್ಣಪ್ರಸನ್ನ, ಜಯಲಕ್ಷ್ಮೀಕುಮಾರ, ಶಂಕರೇಗೌಡ, ಪ್ರಭಾಕರ, ಸುಬ್ರಮಣ್ಯ, ಮಲ್ಲಾಜಮ್ಮ, ಗ್ರಾಪಂ ಅಧ್ಯಕ್ಷರಾದ ಬಿ.ಎಸ್. ಮಹೇಶ, ಸೋಮಪ್ರಭ, ರಾಜಮ್ಮ, ಚಿಕ್ಕೇಣ್ಣಮ್ಮ ಇದ್ದರು.
ಮೊಬೈಲ್ ಮೊರೆ ಹೋದ ಅಧ್ಯಕ್ಷ
ಉಪ ಸಮಿತಿಗಳ ರಚನೆಗಾಗಿ ನಡೆದ ಸಭೆಯಲ್ಲಿ ಅಧ್ಯಕ್ಷ ನಟರಾಜು ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಪದೇ ಪದೇ ಮೊಬೈಲ್ ಕರೆ ಮಾಡಿ, ಹೊರಗಿನವರ ಸಲಹೆ ಪಡೆಯುತ್ತಿದ್ದರು. ಸಭೆಯ ಆರಂಭದಲ್ಲಿಯೇ ಎಲ್ಲ ಉಪ ಸಮಿತಿಗಳಿಗೂ ಸದಸ್ಯರನ್ನು ಆಯ್ಕೆ ಮಾಡಲು ಆಡಳಿತರೂಢ ಮತ್ತು ಪ್ರತಿಪಕ್ಷ ಸದಸ್ಯರಿಗೆ ಸಮಾನ ಅವಕಾಶ ನೀಡುವುದಾಗಿ ಘೋಷಣೆ ಮಾಡಿದ್ದರಾದರೂ, ನಂತರ ಇಬ್ಬರು ಪ್ರತಿಪಕ್ಷ ಸದಸ್ಯರಿಗೆ ಮಾತ್ರ ಅವಕಾಶ ಎಂದಾಗ ಪ್ರತಿಪಕ್ಷ ಸದಸ್ಯರು ವಾಗ್ದಾಳಿ ಆರಂಭಿಸಿದರು. ಸದಸ್ಯ ಬಸವರಾಜು ಮಾತನಾಡಿ, ಸದಸ್ಯರ ಸಭೆ ಕರೆದು ಮೊಬೈಲ್ ಕರೆ ಮಾಡಿ, ನಿರ್ಧಾರ ಪ್ರಕಟಿಸುವುದು ಸರಿಯಲ್ಲ. ಸಾಮರ್ಥ್ಯವಿದ್ದರೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಇಲ್ಲದಿದ್ದರೆ ರಾಜಿನಾಮೆ ಕೊಟ್ಟು ನಿರ್ಗಮಿಸಬೇಕು. ಕಾರ್ಯನಿರ್ವಾಹಕ ಅಧಿಕಾರಿಗಳ ಸಲಹೆ ಪಡೆದು ಚುನಾವಣೆ ನಡೆಸುವಂತೆ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

