ಮೈಸೂರು

ವೇಶ್ಯಾವಾಟಿಕೆ ನೆಪದಲ್ಲಿ ವಂಚನೆ: ಆರೋಪಿ ಸೆರೆ

Published On :

ಮೈಸೂರು: ಅಂತರ್ಜಾಲದ ಮೂಲಕ ವೇಶ್ಯೆಯರೊಂದಿಗೆ ಸಂಬಂಧ ದೊರಕಿಸುವುದಾಗಿ ಗಿರಾಕಿಗಳನ್ನು ವಂಚಿಸುತ್ತಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಡಗು ಜಿಲ್ಲೆ ಶುಂಠಿಕೊಪ್ಪದ ಸುಲೇಮಾನ್ ಬಂಧಿತ ಆರೋಪಿ. ಈತನಿಗೆ ಸಹಕಾರ ನೀಡಿದ ನಾಲ್ವರಿಗೆ ಪೊಲೀಸರು ಶೋಧ ಆರಂಭಿಸಿದ್ದಾರೆ. ಆರೋಪಿ ಸುಲೇಮಾನ್ನಿಂದ 40 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಈತ ಅಂತರ್ಜಾಲದಲ್ಲಿ ತನ್ನ ಮೊಬೈಲ್ ಸಂಖ್ಯೆ ನಮೂದಿಸಿ, ತನ್ನನ್ನು ಸಂಪರ್ಕಿಸುವ ಗಿರಾಕಿಗಳೊಂದಿಗೆ ನಯವಾಗಿ ವರ್ತಿಸಿ ಸುಲಿಗೆ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಈತ ರಂಜಿತ್ಕುಮಾರ್ ಎಂಬಾತನನ್ನು ಕಾರಿನಲ್ಲಿ ಹತ್ತಿಸಿಕೊಂಡು ಬಿಳಿಕೆರೆ ಸಮೀಪ ಹಲ್ಲೆ ನಡೆಸಿ, ಮೂರುವರೆ ಲಕ್ಷ ರು. ಬೆಲೆ ಬಾಳುವ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.
ಹಲ್ಲೆ: ಬಾಲಕಿ ಸ್ಥಿತಿ ಚಿಂತಾಜನಕ
ಸಿದ್ದಲಿಂಗಪುರದಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ವೈಭವಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ದುಷ್ಕರ್ಮಿಗಳು ಗುರುವಾರ ರಾತ್ರಿ ಪದ್ಮಾ ಅವರನ್ನು ಕೊಲೆ ಮಾಡಿದ್ದಲ್ಲದೆ, ಅವರ ಪುತ್ರಿ ವೈಭವಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತಲೆಗೆ ತೀವ್ರ ಪೆಟ್ಟಾಗಿರುವ ವೈಭವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮಹಿಳೆ ಆತ್ಮಹತ್ಯೆ
ಆಲನಹಳ್ಳಿ ನಿವಾಸಿ ಉಮೇಶ್ ಎಂಬವರ ಪತ್ನಿ ಸಾವಿತ್ರಿ (30) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವು ಅನುಮಾನಾಸ್ಪದವಾಗಿದೆ ಎಂದು ಆಕೆಯ ಪೋಷಕರು ಆರೋಪಿಸಿ ಶವ ತೆಗೆಯಲು ಅಡ್ಡಿಪಡಿಸಿದ್ದರು. ಉಮೇಶ್ ಕೆಲಸದ ನಿಮಿತ್ತ ಉಜಿರೆಗೆ ತೆರಳಿದ್ದ ಹಿನ್ನೆಲೆಯಲ್ಲಿ ಆಕೆಯ ಪೋಷಕರಿಗೆ ವಿಷಯ ತಿಳಿಸಿ ಕರೆಸಿಕೊಳ್ಳಲಾಗಿತ್ತು. ಪೋಷಕರು ಶವ ಕೆಳಗಿಳಿಸದಂತೆ ಆಗ್ರಹಿಸಿದ್ದರು. ಅವರ ಒತ್ತಡಕ್ಕೆ ಮಣಿಯದ ಪೊಲೀಸರು ಕಡೆಗೂ ಶವವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಸಾವಿತ್ರಿ ಆತ್ಮಹತ್ಯೆಗೆ ವರದಕ್ಷಿಣೆ ಕಿರುಕುಳ ಕಾರಣ ಎಂದು ಕೆಲವರು ಆರೋಪಿಸಿದರೆ, ಈಗಲೆ ಮಕ್ಕಳು ಬೇಡ ಎಂಬ ಉಮೇಶ್ ಅವರ ಸಲಹೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.
ಯುವಕನ ಶವ ಪತ್ತೆ
ಪಾಳುಬಿದ್ದ ಕಟ್ಟಡವೊಂದರಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಜೆ.ಪಿ. ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಕೆಲಸವನ್ನು ಕಾರಣಾಂತರಗಳಿಂದ ಸ್ಥಗಿತಗೊಳಿಸಲಾಗಿತ್ತು. ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಪಾನಮತ್ತನಾಗಿ ಓಡಾಡುತ್ತಿದ್ದ ಯುವಕನೆ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.
ಮೊಬೈಲ್ ದೋಚಿದ್ದ ಐವರ ಸೆರೆ
ಹಣ ಮತ್ತು ಮೊಬೈಲ್ ದೋಚುತ್ತಿದ್ದ ಐವರು ಆರೋಪಿಗಳನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಇಬ್ಬರು ಬಾಲಾಪರಾಧಿಗಳೂ ಸೇರಿದ್ದಾರೆ. ಕುಂಬಾರಕೊಪ್ಪಲು ನಿವಾಸಿ ಕಿರಣ್(22), ಮಂಚೇಗೌಡನಕೊಪ್ಪಲು ಸುರೇಶ (19) ಮತ್ತು ರಂಗನಾಥೇಗೌಡ (18) ಜೊತೆಗೆ ಇನ್ನಿಬ್ಬರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ. ಎರಡು ದಿನಗಳ ಹಿಂದಷ್ಟೆ ಬಲಮುರಿಗೆ ಹೋಗುತ್ತಿದ್ದ ಯುವಕರನ್ನು ಅಡ್ಡಗಟ್ಟಿ ಹಣ ಮತ್ತು ಮೊಬೈಲ್ ದೋಚಿದ್ದ ಇವರನ್ನು ಪೊಲೀಸರು ಕೆಲ ದಿನಗಳಲ್ಲಿಯೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ನಾಪತ್ತೆ
ಪೇಂಟಿಂಗ್ ಕೆಲಸಕ್ಕೆ ಹೋದ ವ್ಯಕ್ತಿಯೊಬ್ಬರು ವಸಂತನಗರದಿಂದ ಕಾಣೆಯಾಗಿದ್ದಾರೆ. ವಸಂತನಗರ, 2ನೇ ಕ್ರಾಸ್ ನಿವಾಸಿ ಚೆಲುವರಾಜು(26) ನಾಪತ್ತೆಯಾಗಿದ್ದು, ಅವರ ಪತ್ನಿ ಸೌಮ್ಯ ಸರಸ್ವತಿಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. 5 ಅಡಿ ಎತ್ತರ, ತೆಳುವಾದ ಮೈಕಟ್ಟು, ಗೋಧಿ ಬಣ್ಣ ಇದ್ದು, ಕನ್ನಡ ಮತ್ತು ಹಿಂದಿ ಮಾತನಾಡುತ್ತಾರೆ. ಮತ್ತೊಂದು ಪ್ರಕರಣದಲ್ಲಿ ಮನೆಗೆಲಸಕ್ಕೆ ಹೋಗುತ್ತಿದ್ದ ಸರಸ್ವತಿಪುರಂ 8ನೇ ಕ್ರಾಸ್ ನಿವಾಸಿ ಮಂಜುಳಾ ಅ. ಮೋನಿಷಾ (19) ನಾಪತ್ತೆ ಆಗಿದ್ದಾರೆ. ತಾಯಿ ಜಯಮ್ಮ ಅವರೊಂದಿಗೆ ಮನೆಗೆಲಸಕ್ಕೆ ಹೋಗುತ್ತಿದ್ದ ಮಂಜುಳಾ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ನಾಪತ್ತೆ ಆಗಿದ್ದಾರೆ. 5.5 ಅಡಿ ಎತ್ತರ, ತೆಳು ಮೈಕಟ್ಟು, ಗೋಧಿ ಬಣ್ಣ. ದೂ. 2418123 ಸಂಪರ್ಕಿಸಬಹುದು.


ನಾಳೆ ಸಭೆ
ಮೈಸೂರು: ಹೊಯ್ಸಳ ಕನ್ನಡ ಸಂಘದ ಸದಸ್ಯರ ಸಭೆಯನ್ನು ಜ.26ರ ಬೆಳಗ್ಗೆ 10.30ಕ್ಕೆ ಜೆ.ಪಿ. ನಗರದ ಇ ಬ್ಲಾಕ್ನ ನಂ.75 ರಲ್ಲಿ ಏರ್ಪಡಿಸಲಾಗಿದೆ. ಸಂಘ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಸದಸ್ಯತ್ವ ಪಡೆಯಲು ಮೊ. 98457 51252 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.