ಮುಖ್ಯ ಶಿಕ್ಷಕ ವರ್ಗಾವಣೆಗೆ ಆಗ್ರಹಿಸಿ ಶಾಲೆಗೆ ಬೀಗ
ಪಿರಿಯಾಪಟ್ಟಣ: ಶಾಲೆಯ ಮುಖ್ಯ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ. ಅಲ್ಲದೆ ಪೋಷಕರು ಹಾಗೂ ಮಕ್ಕಳೊಂದಿಗೆ ಸೌಜನ್ಯಯುತವಾಗಿ ವರ್ತಿಸದೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಬೆಕ್ಕರೆ ಗ್ರಾಮದ ಗ್ರಾಮಸ್ಥರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್.ಕೆ.ಕೃಷ್ಣ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪಾಠ ಮಾಡುವುದಿಲ್ಲ. ಸಾರ್ವಜನಿಕರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಮುಖ್ಯಶಿಕ್ಷಕ ಕೃಷ್ಣ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಪಟ್ಟುಹಿಡಿದು ಶಾಲೆಗೆ ಬೀಗ ಹಾಕಿ ಶಿಕ್ಷಕರನ್ನು ಹಾಗೂ ಮುಖ್ಯಶಿಕ್ಷಕ ಕೃಷ್ಣ ಅವರನ್ನು ಶಾಲೆಯ ಗೇಟಿನಿಂದ ಹೊರಗೆ ನಿಲ್ಲಿಸಿ ತೀವ್ರವಾಗಿ ಪ್ರತಿಭಟಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಟ್ಟದಪುರ ಪೊಲೀಸರೊಂದಿಗೆ ಮಾತನಾಡಿದ ಪೋಷಕರು, ಮುಖ್ಯ ಶಿಕ್ಷಕರ ವಿರುದ್ಧ ಈ ಹಿಂದೆ ಬಿಇಒ ಆಗಿದ್ದ ರಾಮಲಿಂಗು ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ಮುಖ್ಯಶಿಕ್ಷಕ ಕೃಷ್ಣ ಅವರನ್ನು ಈ ಕೂಡಲೇ ವರ್ಗಾವಣೆ ಮಾಡದಿದ್ದರೆ ಶಾಲೆಯ ಬೀಗ ತೆರೆಯುವುದಿಲ್ಲ. ಇಲ್ಲವೇ ನಮ್ಮ ಮಕ್ಕಳಿಗೆ ಸಾಮೂಹಿಕವಾಗಿ ವರ್ಗಾವಣೆ ಪತ್ರ ಕೊಡಿಸಿ ಎಂದು ವಾಗ್ವಾದಕ್ಕಿಳಿದರು.
ಸ್ಥಳಕ್ಕಾಗಮಿಸಿದ ಸಿಆರ್ಪಿ ರಾಮಚಂದ್ರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ನೂತನ ಬಿಇಒ ಕರೀಗೌಡ ಅವರ ಮೌಖಿಕ ಆದೇಶದಂತೆ ಮುಖ್ಯಶಿಕ್ಷಕ ಎಚ್.ಕೆ. ಕೃಷ್ಣ ಅವರನ್ನು ತಕ್ಷಣ ಬೇರೆಡೆಗೆ ನಿಯೋಜಿಸಿರುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಶಾಲೆಯ ಬೀಗ ತೆರೆದು ಶಾಲೆ ಪ್ರಾರಂಭಕ್ಕೆ ಅನುವು ಮಾಡಿಕೊಟ್ಟರು. ಎಸ್ಡಿಎಂಸಿ ಅಧ್ಯಕ್ಷ ಸ್ವಾಮಿ, ಮುಖಂಡರಾದ ಸತೀಶ್, ಮಹದೇವ್, ಜಗದೀಶ್, ವಿರೂಪಾಕ್ಷ, ಲೋಕೇಶ್, ತಮ್ಮಯ್ಯ, ಚಂದ್ರಶೇಖರ್, ಸುರೇಶ್, ಶಂಕರ್, ಗೋಪಾಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

