ಅವಮಾನ ತಾಳಲಾರದೆ ಯುವಕ ಆತ್ಮಹತ್ಯೆ
ಮೈಸೂರು: ಪೊಲೀಸರು ಮಾಡಿದ ಅವಮಾನಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ತಾಲೂಕಿನ ಕಪ್ಪಸೋಗೆ ಗ್ರಾಮದ ಶ್ರೀನಿವಾಸ್ (24) ಮೃತ ದುರ್ದೈವಿ. ಶ್ರೀನಿವಾಸ್ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಕೆಲವರು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಕೆಲವರು ಈತನ ಮೇಲೆ ತೀವ್ರ ಹಲ್ಲೆ ನಡೆಸಿದ್ದರು, ಗಾಯಗೊಂಡಿದ್ದ ಶ್ರೀನಿವಾಸ್ಗೆ ಹುಲ್ಲಹಳ್ಳಿಯ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಹಲ್ಲೆಗೊಳಗಾದ ಶ್ರೀನಿವಾಸ್ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಶ್ರೀನಿವಾಸ್ ಹಾಗೂ ತಾಯಿ ಆಲಮ್ಮ ಅವರನ್ನು ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಶ್ರೀನಿವಾಸ್ ಜು.6 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ತೀವ್ರ ಅಸ್ವಸ್ಥಗೊಂಡಿದ್ದ ಈತನನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀನಿವಾಸ್ ಗುರುವಾರ ಮೃತಪಟ್ಟಿದ್ದಾರೆ.
ವಿದ್ಯಾರ್ಥಿಗಳಿಗೆ
ಪ್ರೋತ್ಸಾಹಧನ
ಮೈಸೂರು,: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉತ್ತೇಜನ ಯೋಜನೆಯಡಿ ಪ್ರೋತ್ಸಾಹಧನ ವಿತರಿಸಲು ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು ಆ. 30 ರೊಳಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾಗಿರುವ ಪರೀಕ್ಷೆಯ ಅಂಕ ಪಟ್ಟಿ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, 2 ಭಾವ ಚಿತ್ರ, ಆಧಾರ್ ಕಾರ್ಡ್ ಪ್ರತಿ ಹಾಗೂ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿಯೊಂದಿಗೆ ಸಲ್ಲಿಸಬೇಕು. ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸೆ. 31 ಕಡೆ ದಿನ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ನ. 20 ಕಡೆ ದಿನ. ಹೆಚ್ಚಿನ ಮಾಹಿತಿಗೆ ದೂ. 2422088 ಸಂಪರ್ಕಿಸಿ.
ಹಿಂದುಳಿದ ವರ್ಗಕ್ಕೆ
ಸೇರಿಸಲು ಮನವಿ
ಮೈಸೂರು: ಕಳೆದ ಬಾರಿ ಸಮೀಕ್ಷೆಯಲ್ಲಿ ಆರ್ಯವೈಶ್ಯ ಜನಾಂಗವನ್ನು ಬಿಟ್ಟು ಹೋಗಿದ್ದು, ಈ ಬಾರಿ ನಮ್ಮ ಜನಾಂಗವನ್ನು ಹಿಂದುಳಿದ ವರ್ಗಗಳ ಜಾತಿವಾರು ಪಟ್ಟಿಯಲ್ಲಿ ಸೇರಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ನೂತನ ಅಧ್ಯಕ್ಷ ಕಾಂತರಾಜು ಅವರಿಗೆ ನಗರದ ವಾಸವಿ ಯುವಜನ ಸಂಘ ಮನವಿಪತ್ರ ಸಲ್ಲಿಸಿತು. ಬೆಂಗಳೂರಿನ ದೇವರಾಜ ಅರಸು ಭವನದಲ್ಲಿ ನೂತನ ಅಧ್ಯಕ್ಷರನ್ನು ಭೇಟಿ ಮಾಡಿ ಅಭಿನಂದಿಸಿದ ಸಂಘದ ಸದಸ್ಯರು ನಂತರ ಮನವಿ ಸಲ್ಲಿಸಿದರು.
ಕುಸ್ತಿ ಪಂದ್ಯಾವಳಿ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಅಂಗವಾಗಿ ಆ. 10ರ ಬೆಳಗ್ಗೆ 10.30ಕ್ಕೆ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಾಡಕುಸ್ತಿ ಪಂದ್ಯಾವಳಿ ಆಯೋಜಿಸಿರುವುದಾಗಿ ಕನ್ನಡ ಜನ ಜಾಗೃತಿ ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಮೇಯರ್ ಡಿ. ಧೃವಕುಮಾರ್ ತಿಳಿಸಿದರು. ಅಂದು ಮಧ್ಯಾಹ್ನ 1.30ಕ್ಕೆ ಮೈಸೂರು ವಿಭಾಗ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಮೈಸೂರು ವಿಭಾಗದ ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಆಸಕ್ತ ಕುಸ್ತಿ ಪಟುಗಳಿಗೆ ಜು. 13ರ ಬೆಳಗ್ಗೆ 10.30ಕ್ಕೆ ದೇವರಾಜ ಅರಸು ವಿವಿಧೋದೇಶ ಕ್ರೀಡಾಂಗಣದಲ್ಲಿ ಜೊತೆ ಕಟ್ಟಲಾಗುತ್ತದೆ. ಆದ್ದರಿಂದ ವಿಭಾಗದ ಎಲ್ಲಾ ಜಿಲ್ಲೆಗಳ ಪೈಲ್ವಾನರು ತಮ್ಮ ಭಾವಚಿತ್ರದ ಜೊತೆಗೆ ಆಗಮಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು. ಆ. 10ರ ಮಧ್ಯಾಹ್ನ 3 ರಿಂದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಮತ್ತು ಸಂಜೆ 6 ರಿಂದ ರಾಷ್ಟ್ರಮಟ್ಟದ ಪೈಲ್ವಾನರ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ನಡೆಯುವುದು. ರಾಷ್ಟ್ರಮಟ್ಟದ ಪೈಲ್ವಾನರಾದ ವರುಣ್ಕುಮಾರ್ ಮತ್ತು ಮಹಮದ್ ಇಬ್ರಾಹಿಂ, ಸಚಿಂದ್ರನ್ ಡಾಗರ್ ಮತ್ತು ಮಹಮದ್ ದಿಲ್ಷಾ ನಡುವೆ ರಾಷ್ಟ್ರಮಟ್ಟದ ಪಂದ್ಯ ನಡೆಯಲಿದೆ. ವೀಕ್ಷಕರಿಗೆ ಪ್ರವೇಶ ಉಚಿತ ಎಂದರು. ಕಾಂಗ್ರೆಸ್ ಮುಖಂಡ ಸಿ. ಕೃಷ್ಣಪ್ಪ, ಶ್ರೀನಿವಾಸ್, ಪುಟ್ಟಸ್ವಾಮಿ, ಅಮರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

