ರೈಲು ಸಂಪರ್ಕ ಕಲ್ಪಿಸಲು ಆಗ್ರಹ
ಟಿ. ನರಸೀಪುರ: ನರಸೀಪುರಕ್ಕೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಯನ್ನು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕೈಗೆತ್ತಿಕೊಳ್ಳಬೇಕೆಂದು ನಾಗರಿಕ ಸೇವಾ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎನ್.ಪ್ರಭುಸ್ವಾಮಿ ಹೇಳಿದರು.
ಪಟ್ಟಣದ ಎಂ.ಮಹದೇವಪ್ಪ ಸ್ಮಾರಕ ಸಮುದಾಯ ಭವನದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ನರಸೀಪುರ ಮಾರ್ಗವಾಗಿ ಚಾಮರಾಜನಗರಕ್ಕೆ ರೈಲು ಸಂಪರ್ಕ ಕಲ್ಪಿಸಲು ಈ ಹಿಂದೆ ಸರ್ವೆ ಮಾಡಲಾಗಿತ್ತು. ಯೋಜನೆಯನ್ನು ಕನಕಪುರ- ಕೊಳ್ಳೇಗಾಲ ಮಾರ್ಗಕ್ಕೆ ವರ್ಗಾಯಿಸಿ, ನರಸೀಪುರವನ್ನು ಕೈಬಿಡಲಾಗಿದೆ. ಮುಖ್ಯಮಂತ್ರಿಗಳು ಈ ಯೋಜನೆಗೆ ಮರುಜೀವ ನೀಡಿ, ರೈಲು ಸಂಪರ್ಕ ಕಲ್ಪಿಸಲು ಮುಂದಾಗಬೇಕೆಂದು ತಿಳಿಸಿದರು. ಪಪಂನಲ್ಲಿ ಭೈರಾಪುರ ಹಾಗೂ ಆಲಗೂಡು ಗ್ರಾಪಂಗಳನ್ನು ವಿಲೀನಗೊಳಿಸಿ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದರಿಂದ ಅಭಿವೃದ್ಧಿ ಕಾರ್ಯಗಳ ಮೂಲಕ ನರಸೀಪುರದ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು. ಪುರಸಭೆಯಾಗಬೇಕೆಂಬ ಹಲವು ದಶಕಗಳ ನರಸೀಪುರದ ಜನರ ಮಹತ್ವಾಕಾಂಕ್ಷೆಯ ಬೇಡಿಕೆಯನ್ನು ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಸನ್ಮಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಪಿ.ಪುಟ್ಟರಾಜು, ಅಧ್ಯಕ್ಷ ಎಚ್.ಆರೀಫ್, ಭೈರಾಪುರ ಗ್ರಾಪಂ ಉಪಾಧ್ಯಕ್ಷ ಪುಟ್ಟು, ಟಿ.ಎಂ.ನಂಜುಂಡಸ್ವಾಮಿ ಇದ್ದರು.
ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಬೈಲಕುಪ್ಪೆ: ಬೈಲಕುಪ್ಪೆ ಪಂಚಾಯಿತಿ ವ್ಯಾಪ್ತಿಗೆ ಸೇರಿದ ದೊಡ್ಡಹರವೆಯಿಂದ ಟಿಬೆಟಿಯನ್ ಲಾಮಾ ಕ್ಯಾಂಪ್ ಮೂಲಕ ರಾಣಿಗೇಟ್ ಕೊಪ್ಪ ಗ್ರಾಮಕ್ಕೆ ಹಾಯ್ದು ಹೋಗಿರುವ ರಸ್ತೆ ಅವ್ಯವಸ್ಥೆಗೊಂಡಿದ್ದು, ವಾಹನ ಮತ್ತು ಜನ ಸಂಚಾರಕ್ಕೆ ಬಾರಿ ತೊಂದರೆಯಾಗಿರುವುದರಿಂದ ಸರಿಪಡಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟಿಸಿದರು.
ರಸ್ತೆಯ ಮಧ್ಯೆ ದೊಡ್ಡ ಹೊಂಡದಂತೆ ಗುಂಡಿಯಾಗಿದ್ದು, ಕೆಸರು ಗದ್ದೆಗಳಂತೆ ಕಾಣುತ್ತಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ರಸ್ತೆ ಸರಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಛಲವಾದಿ ಮಹಾಸಭಾದ ಅಧ್ಯಕ್ಷ ರವಿಕುಮಾರ್, ಗ್ರಾಮಸ್ಥರಾದ ಮಂಜು, ಹರೀಶ್, ರಾಜು, ಪ್ರದೀಪ್, ವಿಜಯ್ಕುಮಾರ್, ಸಿದ್ದು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

