ಸಿವಿಲ್ ಪ್ರಕರಣದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಬೇಜವಾಬ್ದಾರಿ
ಮೈಸೂರು: ನಗರ ಪಾಲಿಕೆ ಆಸ್ತಿಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ವಲಯ ಕಚೇರಿ ಆಯುಕ್ತರಿಗೆ ನೋಟಿಸ್ ನೀಡಿ ವಿವರ ಪಡೆಯಲು ಮುಂದಾಗಿರುವ ವಿಲಕ್ಷಣ ಘಟನೆ ನಡೆದಿದೆ.
ಪಾಲಿಕೆ ವ್ಯಾಪ್ತಿಗೆ ಸೇರಿದ ಗೌರಿಶಂಕರ ನಗರದ 6.28 ಎಕರೆ ಪ್ರದೇಶವನ್ನು ಸಂರಕ್ಷಿಸಲು ನಗರ ಪಾಲಿಕೆ ಮುಂದಾಗಿದೆ. ಈ ಸಂಬಂಧ ವಲಯ ಕಚೇರಿ 1ರ ಆಯುಕ್ತ ಸತ್ಯಮೂರ್ತಿ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಕೆ.ಆರ್. ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪರಿಶೀಲಿಸಬೇಕಾದ ಪೊಲೀಸ್ ಇನ್ಸ್ಪೆಕ್ಟರ್ ದೂರು ನೀಡಿದ ಸತ್ಯಮೂರ್ತಿ ಅವರಿಗೇ ನೋಟಿಸ್ ನೀಡಿದ್ದಾರೆ.
ನೋಟಿಸ್ ವಿವರ ಇಂತಿದೆ: ಈ ಪ್ರಕರಣದ ತನಿಖೆಗಾಗಿ ಗೌರಿಶಂಕರ ನಗರ ಸರ್ವೇ ನಂ. 103, 104 ಮತ್ತು ಇತ್ಯಾದಿ ದಲಿತ ಸ್ಮಶಾನಕ್ಕೆ ಮೀಸಲಿಟ್ಟ ಸ್ಥಳವು ನಗರ ಪಾಲಿಕೆಗೆ ಸೇರಿದ ಸ್ವತ್ತು ಎಂಬುದಕ್ಕೆ ನಿಮ್ಮ ಬಳಿ ಇರುವ ದಾಖಲಾತಿ, ಸ್ಥಳ ಪರಿಶೀಲನೆಗೆ ಹೋಗಿದ್ದ ಜಾಮೀದ್ ಮತ್ತು ಇತರರು ಕರ್ತವ್ಯಕ್ಕೆ ಹಾಜರಾಗಿರುವ ಬಗ್ಗೆ ಹಾಜರಾತಿಯ ನಕಲು, ಅವರ ಪದನಾಮದ ಮಾಹಿತಿ ಹಾಗೂ ಆ ದಿನ ಪರಿಶೀಲನೆಗೆ ತೆರಳಲು ಆದೇಶ ನೀಡಿದ ಅಧಿಕಾರಿಯ ವಿವರ ನೀಡಬೇಕು. ಮಾಹಿತಿ ಹಾಗೂ ದಾಖಲಾತಿ ಒದಗಿಸದಿದ್ದಲ್ಲಿ ನಿಮ್ಮ ಬಳಿ ಯಾವುದೇ ದಾಖಲಾತಿ ಹಾಗೂ ಮಾಹಿತಿ ಇಲ್ಲ ಎಂದು ಪರಿಗಣಿಸಿ ಪ್ರಕರಣ ಮುಕ್ತಾಯಗೊಳಿಸುವುದಾಗಿ ತಿಳಿಸಿದ್ದಾರೆ.
ಘಟನೆ ವಿವರ: ಪಾಲಿಕೆ ವ್ಯಾಪ್ತಿಗೆ ಸೇರಿದ ಗೌರಿಶಂಕರ ನಗರದ 6.28 ಎಕರೆ ಪ್ರದೇಶವನ್ನು ಸಂರಕ್ಷಿಸಲು ಕೌನ್ಸಿಲ್ ಸಭೆ 2011ರಲ್ಲಿಯೆ ತೀರ್ಮಾನಿಸಿತು. ಆದರೆ, ಇತ್ತೀಚೆಗೆ ಮಲ್ಲಿಕಾರ್ಜುನ ಎಂಬಾತ ಖಾಸಗಿ ವ್ಯಕ್ತಿಗೆ ಸುಳ್ಳು ದಾಖಲೆ ಸೃಷ್ಟಿಸಿ, 20್ಢ40 ಅಳತೆಯ ನಿವೇಶವನ್ನು ರು.50 ಮೌಲ್ಯದ ಛಾಪಾ ಕಾಗದದಲ್ಲಿ ನೋಂದಣಿ ಮಾಡಿಸಿಕೊಟ್ಟಿದ್ದಾರೆ. ಇದು ಕಾನೂನು ಬಾಹಿರ. ಅಲ್ಲದೆ ನೋಂದಣಿ ವೇಳೆ ಪತ್ನಿಯಿಂದ ಮತ್ತೊಬ್ಬರಿಗೆ ವರ್ಗಾಯಿಸಿದ್ದಾರೆ. ಆದರೆ ಸಹಿಯನ್ನು ಮಾತ್ರ ಮಲ್ಲಿಕಾರ್ಜುನ ಹಾಕಿದ್ದಾರೆ. ಈ ಸಂಬಂಧ ವಲಯ ಕಚೇರಿ ಆಯುಕ್ತ ಸತ್ಯಮೂರ್ತಿ ಕೆ.ಆರ್. ಪೊಲೀಸ್ ಠಾಣೆಗೆ ದೂರು ನೀಡಿ ಕಟ್ಟಡ ನಿರ್ಮಾಣಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.
ಈ ಘಟನೆ ಸಿವಿಲ್ ವ್ಯಾಜ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ವರ್ಗಾಯಿಸಬೇಕಾದ ಪೊಲೀಸರು ದೂರು ನೀಡಿದ ವಲಯ ಆಯುಕ್ತರಿಗೇ ನೋಟಿಸ್ ಜಾರಿಗೊಳಿಸಿರುವ ವಿಷಯ ನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ನಡೆದ ಹಣಕಾಸು ಮತ್ತು ಅಫೀಲುಗಳ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆಗೆ ಬಂತು. ಅಲ್ಲದೆ ಮನೆ ನಿರ್ಮಾಣ ಕಾಮಗಾರಿ ಆರಂಭ ಆಗುವವರೆಗೂ ಸುಮ್ಮನಿದ್ದ ಪಾಲಿಕೆ ಅಭಿವೃದ್ಧಿ ಅಧಿಕಾರಿ ದೇವರಾಜು ಶಾಮೀಲಾಗಿದ್ದಾರೆ ಎಂದು ಶಂಕಿಸಿ ಅವರ ಅಮಾನತಿಗೆ ಸಭೆ ತೀರ್ಮಾನಿಸಿತು.
ಪಾಲಿಕೆ ವ್ಯಾಪ್ತಿಯ 1ನೇ ವಾರ್ಡ್ನಲ್ಲಿ 1302 ಮನೆ, 2ನೇ ವಾರ್ಡ್ನಲ್ಲಿ 1124, 3ನೇ ವಾರ್ಡ್ನಲ್ಲಿ 2441, 5ನೇ ವಾರ್ಡ್ನಲ್ಲಿ 3360, 7ನೇ ವಾರ್ಡ್ನಲ್ಲಿ 134, 8ನೇ ವಾರ್ಡ್ನಲ್ಲಿ 3383 ಮತ್ತು 9ನೇ ವಾರ್ಡ್ನಲ್ಲಿ 8059 ಸೇರಿ ಒಟ್ಟು 19,803 ಅನಧಿಕೃತ ಮನೆಗಳಿವೆ. ಪಾಲಿಕೆ ಮೂಲ ಸೌಲಭ್ಯ ಕಲ್ಪಿಸುತ್ತಿರುವ ಅನಧಿಕೃತ (ಕಂದಾಯ) ಬಡಾವಣೆ ಮತ್ತು ಅನಧಿಕೃತ ಮನೆಗಳ ಬಗ್ಗೆ ಪ್ರತ್ಯೇಕ ಕಡತ ತೆರೆಯಬೇಕು. ಈ ಬಡಾವಣೆಗಳಲ್ಲಿ ಸರ್ಕಾರದ ಆದೇಶದಂತೆ ಎರಡು ಪಟ್ಟು ಕರ ಸಂಗ್ರಹಿಸಬೇಕು ಎಂದು ಸಮಿತಿ ಅಧ್ಯಕ್ಷ ಬಿ.ಎಲ್. ಬೈರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ವಲಯ ಕಚೇರಿ 2ರ ವ್ಯಾಪ್ತಿಯ ವಾರ್ಡ್ 12ರಲ್ಲಿ ಕಂದಾಯ ಬಡಾವಣೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಮತ್ತು ಅಲ್ಲಿ ಅಕ್ರಮಗಳು ನಡೆದಿರುವ ಸಾಧ್ಯತೆ ಇದೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಆ ವಾರ್ಡ್ಗೆ ಸಂಬಂಧಿಸಿದ ಕಡತವನ್ನು ಆರ್ಒ ಜಗದೀಶ್ಗೆ ಹಿಂದಿರುಗಿಸುತ್ತಿರುವುದಾಗಿ ಹೇಳಿದರು.
ಅರಮನೆ ಸಮೀಪದ ವರಹ ಗೇಟ್ ಬಳಿ ಅನಧಿಕೃತವಾಗಿ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ಕೂಡಲೆ ತೆರವುಗೊಳಿಸುವಂತೆ ನಗರ ಪೊಲೀಸ್ ಆಯುಕ್ತರು, ನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದರು.
ನಾಚನಹಳ್ಳಿ ಪಾಳ್ಯದ ನಿವಾಸಿಗಳಿಗೆ ಕೊಳಚೆ ನಿರ್ಮೂಲನ ಮಂಡಳಿಯಿಂದ ಮನೆ ನಿರ್ಮಿಸಿಕೊಡಲಾಗಿದೆ. ಸಭೆಯಲ್ಲಿ ಸಮಿತಿ ಸದಸ್ಯರಾದ ಬಿ.ವಿ. ಮಂಜುನಾಥ್, ಎಂ.ಕೆ. ಶಂಕರ್, ಶಿವಮಾದು, ಕಮಲಾ ಇದ್ದರು.
ಇಂಗ್ಲಿಷ್ ಪತ್ರ ಹಿಂದಕ್ಕೆ
ಅಕ್ರಮ ನೀರಿನ ಸಂಪರ್ಕ ಕುರಿತು ಕೇಳಲಾಗಿದ್ದ ಮಾಹಿತಿಗೆ ಜಸ್ಕೋ ಅಧಿಕಾರಿಗಳು ಇಂಗ್ಲಿಷ್ನಲ್ಲಿ ಉತ್ತರ ನೀಡಿದ್ದರು. ಆದ್ದರಿಂದ ಆಡಳಿತ ಭಾಷೆ ಕನ್ನಡದಲ್ಲಿಯೆ ಮಾಹಿತಿ ನೀಡುವಂತೆ ಸೂಚಿಸಿ ಪತ್ರವನ್ನು ಬಿ.ಎಲ್. ಬೈರಪ್ಪ ಹಿಂದಿರುಗಿಸಿದರು. ಕರ್ನಾಟಕ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಲ್ಲದೆ ಸಭೆಗೆ ಹಾಜರಾಗಿ ನಿಖರ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಆ. 18ರ ಬೆಳಗ್ಗೆ 11ಕ್ಕೆ ನೀರು ಸರಬರಾಜು ಕಚೇರಿ ಎದುರು ಪ್ರತಿಭಟಿಸುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

