ಮೈಸೂರು

ಕಸ್ತೂರಿರಂಗನ್ ವರದಿ ನಿರ್ಧಾರ ಕೈಗೊಳ್ಳದಿರಿ

Published On :

ಮೈಸೂರು: ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್‌ಡೇಕರ್ ಜೂ.4 ರಂದು ನವದೆಹಲಿಯಲ್ಲಿ ಕರೆದಿರುವ ಸಭೆಯಲ್ಲಿ ಕಸ್ತೂರಿರಂಗನ್ ವರದಿಯ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
ಸಭೆ ನಡೆಯುವ ಸೂಚನೆ ಅರಿತ ರಾಜ್ಯ ಸಂಸದರು ಸಚಿವರನ್ನು ಭೇಟಿಯಾಗಿ ಕರ್ನಾಟಕದ ಪಶ್ಚಿಮ ಘಟ್ಟಗಳು ಹಾಗೂ ಮುಖ್ಯವಾಗಿ ಕೊಡಗು ಜಿಲ್ಲೆಯ ಬಹುಭಾಗ ಕಸ್ತೂರಿರಂಗನ್ ವರದಿಯಿಂದ ತೊಂದರೆಗೀಡಾಗುವ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದಕ್ಕೆ ಸ್ಪಂದಿಸಿದ ಜಾವ್‌ಡೇಕರ್ ಅವರು, ಸ್ಥಳೀಯ ಸಂಸದರಾದ ಪ್ರತಾಪ್‌ಸಿಂಹ, ನಳಿನ್‌ಕುಮಾರ್ ಕಟೀಲ್, ಅನಂತಕುಮಾರ ಹೆಗ್ಗಡೆ ಮತ್ತು ಶೋಭಾ ಕರಂದ್ಲಾಜೆ ಅವರ ಅಭಿಪ್ರಾಯ ಮತ್ತು ಜನರ ಆಶೋತ್ತರಗಳನ್ನು ಗಮನಿಸಿದ ಬಳಿಕ ಕಸ್ತೂರಿರಂಗನ್ ವರದಿ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸಂಸತ್ ಅಧಿವೇಶನದ ಅವಧಿಯಲ್ಲಿ ಸಚಿವ ಪ್ರಕಾಶ್ ಜಾವ್‌ಡೇಕರ್ ಅವರನ್ನು ಭೇಟಿಯಾಗಿ ಕೊಡಗಿನ ಜನರ ಆಶೋತ್ತರ ಮತ್ತು ಕಸ್ತೂರಿರಂಗನ್ ವರದಿಯಿಂದ ಆಗುವ ಪರಿಣಾಮದ ಕುರಿತು ಮನವರಿಕೆ ಮಾಡಿಕೊಡಲಾಗುವುದು. ಈ ಬಗ್ಗೆ ಜನರು ಆತಂಕಗೊಳ್ಳುವ ಅಗತ್ಯ ಇಲ್ಲ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.



ಹಡಪದ ಪ್ರಶಸ್ತಿ
ಮೈಸೂರು: ಗುರು ಪುಟ್ಟರಾಜ ಸಂಗೀತ ಸಭಾವು ನೀಡಲಿರುವ ಪಂಡಿತ ಕೆ.ಎಸ್.ಹಡಪದ ಪ್ರಶಸ್ತಿಗೆ ರಾಜ್ಯದ ಇಬ್ಬರು ಕಲಾವಿದರು ಆಯ್ಕೆಯಾಗಿದ್ದಾರೆ. ಹೊನ್ನಾವರದ ಡಾ.ಅಶೋಕ್ ಹುಗ್ಗಣ್ಣವರ ಹಾಗೂ ಧಾರಾವಾಡದ ಕಡಕೋಳದ ಪಂಡಿತ ಅಲ್ಲಮ ಪ್ರಭು ಅವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಸಂಗೀತ ತಿಳಿಸಿದ್ದಾರೆ. ಜೂ.7-8 ರಂದು ಮೈಸೂರಿನ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವಿದ್ಯುತ್ ವ್ಯತ್ಯಯ
ಮೈಸೂರು: ವಿಜಯನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಜೂ.5ರ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ. ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು. ಗೋಕುಲಂ 1ನೇ ಮತ್ತು 2ನೇ ಹಂತ, ಮಹದೇಶ್ವರ ಬಡಾವಣೆ, ವಿಜಯನಗರ 1ನೇ ಮತ್ತು 2ನೇ ಹಂತ, ಹಿನಕಲ್, ಯಾದವಗಿರಿ, ಮಂಜುನಾಥಪುರ, ಮಹಾಜನ ಲೇಔಟ್, ಒಂಟಿಕೊಪ್ಪಲ್, ಗೋಕುಲಂ 3ನೇ ಹಂತ, ಜಯಲಕ್ಷ್ಮೀಪುರಂ, ಪಡುವಾರಹಳ್ಳಿ, ಸಿಎಫ್‌ಟಿಆರ್‌ಐ, ಡಿ.ಸಿ.ಹೌಸ್, ನರ್ಸ್ ಕ್ವಾಟ್ರಸ್, ಆಕಾಶವಾಣಿ, ಇಎಸ್‌ಐ ಆಸ್ಪತ್ರೆ, ಹಸುಕರು ಪಾರ್ಕ್, ಗೋಕುಲಂ ಪಾರ್ಕ್, ವಿನಾಯಕನಗರ, ಕಾಳಿದಾಸರಸ್ತೆ, ಯಾದವಗಿರಿ ಕೈಗಾರಿಕಾ ಪ್ರದೇಶ ಸುತ್ತಮುತ್ತಲಿನ ಪ್ರದೇಶಗಳು.
ನಾಳೆ ಪ್ರತಿಭಟನೆ
ಮೈಸೂರು: ಈ ಹಿಂದೆ ಟಿ.ನರಸೀಪುರ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿ.ಟಿ. ವಿಲ್ಸನ್ ಬಂಧನಕ್ಕೆ ಆಗ್ರಹಿಸಿ ಜೂ.5ರ ಮಧ್ಯಾಹ್ನ 12ಕ್ಕೆ ಪಪಂ ಎದುರು ಪ್ರತಿಭಟಿಸುವುದಾಗಿ ಟಿ.ನರಸೀಪುರ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಆಲಗೂಡು ಮಹದೇವ ತಿಳಿಸಿದರು. ಕೆ.ಆರ್.ಪೇಟೆ ಪುರಸಭೆ ಮುಖ್ಯಾಧಿಕಾರಿ ಆಗಿದ್ದ ವಿ.ಟಿ. ವಿಲ್ಸನ್ ವಿರುದ್ಧ ಲೋಕಾಯುಕ್ತ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಇವರು ಈ ಹಿಂದೆ ಟಿ.ನರಸೀಪುರ ಪಪಂನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಹಲವು ಅಕ್ರಮ ಎಸಗಿದ್ದಾರೆ. ಆದ್ದರಿಂದ ಇವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
3 ವರ್ಷ ಜೈಲು
ಮೈಸೂರು: ಪಾಸ್‌ಪೋರ್ಟ್ ನಿಯಮ ಉಲ್ಲಂಘಿಸಿ ಭಾರತದಲ್ಲಿ ನೆಲೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಬಾಂಗ್ಲಾದೇಶದ ನಿವಾಸಿಗಳಿಗೆ ಮೈಸೂರಿನ ನ್ಯಾಯಾಲಯವು 3 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬಾಂಗ್ಲಾದೇಶ ಮೂಲದ ಮೊಹಮ್ಮದ್ ಬಷೀರ್ ಶೇಖ್ ಮತ್ತು ಮೊಹಮ್ಮದ್ ಅಸನ್ ಎಂಬವರೇ ಶಿಕ್ಷೆಗೆ ಗುರಿಯಾದವರು. ಈ ಇಬ್ಬರು ಬಾಂಗ್ಲಾದೇಶದ ಪಾಸ್‌ಪೋರ್ಟ್ ಪಡೆದು ಭಾರತಕ್ಕೆ ಬಂದು ನೆಲೆಸಿದ್ದರು. ಆದರೆ, ಪಾಸ್‌ಪೋರ್ಟ್ ಅವಧಿ ಮುಗಿದಿದ್ದರೂ ನಿಯಮ ಉಲ್ಲಂಘಿಸಿ ಮೈಸೂರಿನಲ್ಲಿ ನೆಲೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಕುವೆಂಪುನಗರ ಠಾಣೆ ಪೊಲೀಸರು 2009 ರಲ್ಲಿ ಪ್ರಕರಣ ದಾಖಲಿಸಿ, ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ರೂಪಾ ನಾಯಕ್ ಅವರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಬಷೀರ್ ಶೇಖ್ ಮತ್ತು ಮೊಹಮ್ಮದ್ ಅಸನ್ ತಲಾ 3 ವರ್ಷಗಳ ಕಠಿಣ ಶಿಕ್ಷೆ ಹಾಗೂ 10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಅಪರಿಚಿತ ಸಾವು
ಮೈಸೂರು: ಸಯ್ಯಾಜಿರಾವ್ ರಸ್ತೆ ಸುಹಾಸಿನಿ ಲಾಡ್ಜ್ ಬಳಿ ಅಸ್ವಸ್ಥಗೊಂಡು ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಚಹರೆ- 60 ವರ್ಷ, 6 ಅಡಿ ಎತ್ತರ, ಸಾಧಾರಣ ಶರೀರ, ಕೋಲು ಮುಖ, ಗೋದಿ ಮೈಬಣ್ಣ, ಬಿಳಿ ಕೂದಲು, ಗಡ್ಡ ಮೀಸೆ ಬಿಟ್ಟಿದ್ದಾರೆ. ಮೈಮೇಲೆ ಯಾವುದೇ ಬಟ್ಟೆ ಇಲ್ಲ. ಮೃತರ ವಾರಸುದಾರರು ಇದ್ದಲ್ಲಿ ದೂ.0821- 2418313 ಸಂಪರ್ಕಿಸಲು ಮಂಡಿ ಠಾಣೆ ಎಸ್‌ಐ ಆರ್. ಕೇಶವಮೂರ್ತಿ ಕೋರಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.