ಮಾನಭಂಗ ವಿರುದ್ಧ ಮಾನಿನಿ ಗುಡುಗು
ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಸರ್ಕಾರ ಬಂದ ನಂತರ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳು
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರನ್ನು ಆರೋಪಿಗಳು ಎಂದು ಪರಿಗಣಿಸುವಂತೆ ಒತ್ತಾಯ
ಕ.ಪ್ರ.ವಾರ್ತೆ ಮೈಸೂರು ಜೂ.6
ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿನ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಖಂಡಿಸಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು. ಬದೌನ್ ಜಿಲ್ಲೆಯ ಸಾದತಗಂಜ್ ಗ್ರಾಮದ ಹಿಂದುಳಿದ ವರ್ಗಕ್ಕೆ ಸೇರಿದ ಇಬ್ಬರು ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ ಮಾವಿನ ಮರಕ್ಕೆ ನೇತು ಹಾಕಲಾಗಿದೆ. ಯಾದವರ ಪ್ರಾಬಲ್ಯ ಇರುವ ಆ ಪ್ರದೇಶದಲ್ಲಿ ಆಕ್ರಮಣಕಾರಿ ಪ್ರವೃತ್ತಿ ಹೆಚ್ಚಿದೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇಂತಹ ಪ್ರಕರಣ ಹೆಚ್ಚಿದೆ. ಈ ಘಟನೆಯಲ್ಲಿ ಪೊಲೀಸರ ಪಾಲೂ ಇದೆ ಎಂದು ಆರೋಪಿಸಿದರು. ಬರೇಲಿ ಜಿಲ್ಲೆಯ ಯಂತಾಪುರ್ ಗ್ರಾಮದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ದೇಹದ ಮೇಲೆ ಆ್ಯಸಿಡ್ ಸುರಿಯಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹತ್ತು ವರ್ಷದ ಬಾಲಕಿಯನ್ನು ಅಪಹರಿಸಲಾಗಿದೆ. ಹೆಣ್ಣು ಮಕ್ಕಳು ಶೌಚಾಲಯಕ್ಕೆ ಹೋದಾಗ ಇಂತಹ ಘಟನೆ ನಡೆಯುತ್ತಿದೆ. ದೇಶದ ಜನಸಂಖ್ಯೆಯ ಪೈಕಿ 1.2 ಬಿಲಿಯನ್ ಮಂದಿಗಿಂತಲೂ ಹೆಚ್ಚು ಜನರು ಶೌಚಾಲಯ ಹೊಂದಿಲ್ಲದಿರುವುದು ದುರದೃಷ್ಟಕರ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರನ್ನು ಆರೋಪಿಗಳು ಎಂದು ಪರಿಗಣಿಸಬೇಕು, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು, ಅತ್ಯಾಚಾರಕ್ಕೆ ಒಳಗಾದವರಿಗೆ ಪುನರ್ ವಸತಿ ಸೌಲಭ್ಯ ಕಲ್ಪಿಸಬೇಕ ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಲ.ಜಗನ್ನಾಥ್, ರತಿರಾವ್, ಮರಿದಂಡಯ್ಯ ಬುದ್ಧ, ವೆಂಕಟರಾಮ್, ಆಶೋದಯ ಸಮಿತಿಯ ಪ್ರಣತಿಪ್ರಕಾಶ್, ಭಾಗ್ಯ ಇದ್ದರು.
ನೆಟ್ಟ ಸಸಿ ಪೋಷಿಸುವ ಕೆಲಸವಾಗಲಿ
ಪರಿಸರ ದಿನದ ಅಂಗವಾಗಿ ನೆಡುವ ಸಸಿಗಳನ್ನು ಪೋಷಿಸುವ ಕೆಲಸ ಆಗಬೇಕು ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹೇಳಿದರು.ಗಾಂಧಿನಗರದ ಆದಿಜಾಂಬವ ಸರ್ಕಾರಿ ಸಂಯುಕ್ತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾಭಿವೃದ್ಧಿ ಸಮಿತಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಟಾಟಿಸಿ ಅವರು ಮಾತನಾಡಿದರು.
ಗಿಡ ಮರಗಳನ್ನು ಬೆಳೆಸಿ ಪರಿಸರ ಕಾಪಾಡುವಲ್ಲಿ ನಾವೆಲ್ಲರೂ ಮುಂದಾಗಬೇಕು. ಅಂತೆಯೇ ಪರಿಸರ ದಿನದ ನೆನಪಿನಲ್ಲಿ ನಾನು ಸಹ ಈ ಆವರಣದಲ್ಲಿ ಸಸಿ ನೆಟ್ಟಿದ್ದೇನೆ. ಇಷ್ಟಕ್ಕೆ ಸುಮ್ಮನಾಗಬಾರದು ಎಂದರು. ಮಕ್ಕಳಿಗೆ ಪಠ್ಯ ಬೋಧನೆ ಜತೆಗೆ, ಪರಿಸರದ ಜ್ಞಾನವನ್ನು ತುಂಬುವ ಕೆಲಸ ಹೆಚ್ಚಾಗಿ ನಡೆಯಬೇಕು. ಮರ ಗಿಡಗಳಿಂದ ಆಗುವ ಅನುಕೂಲಗಳೇನು ಹಾಗೂ ಪರಿಸರ ನಾಶದಿಂದ ಒದಗುವ ದುಷ್ಪರಿಣಾಮಗಳೇನು ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಎಂದು ತಿಳಿಸಿದರು.
ಸರ್ಕಾರಿ ಶಾಲೆ ಕ್ಷೀಣ: ನಗರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ಕ್ಷೀಣಿಸುತ್ತಿವೆ. ಅನೇಕ ಅಧಿಕಾರಿಗಳು ಹಾಗೂ ಉನ್ನತ ಸ್ಥಾನ ಪಡೆದವರು ಬಹುತೇಕ ಸರ್ಕಾರಿ ಶಾಲೆಯಲ್ಲಿ ಕಲಿತವರು ಎಂಬುದನ್ನು ಮರೆಯಬಾರದು. ವಿದ್ಯೆ ಕಲಿತು ಉತ್ತಮ ಬದುಕು ನಡೆಸುತ್ತಿರುವವರು ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಮರಳಿ ನೋಡುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಸರ್ಕಾರ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕಲ್ಪಿಸಿದೆ. ಕಡುಬಡವರು ಮಕ್ಕಳು ಇಂತಹ ಶಾಲೆಯಲ್ಲಿ ಕಲಿಯುತ್ತಿದ್ದು ಅವರಿಗೆ ಬೇಕಾದ ಸವಲತ್ತುಗಳನ್ನು ನೀಡುತ್ತಿದೆ. ಪುಸ್ತಕ ಭಂಡಾರ ಹಾಗೂ ಕಲಿಕಾ ಸಾಧನಗಳು ಸದುಪಯೋಗವಾಗಬೇಕು. ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಲು ಉತ್ತಮ ವಾತಾವರಣ ನಿರ್ಮಾಣವಾಗಬೇಕು ಎಂದ ಅವರು, ಶಾಲೆಗೆ ಪ್ರೌಢಶಾಲೆಯ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮೈಸೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸುಶೀಲಮ್ಮ, ರಾಷ್ಟ್ರೀಯ ಪ್ರತಿಭಾ ಪರೀಕ್ಷೆಯಲ್ಲಿ ಉತೀರ್ಣರಾಗಿರುವ ಶಾಲೆಯ ವಿದ್ಯಾರ್ಥಿಗಳಾದ ಕೆ.ಪ್ರಿಯಾಂಕ, ಎನ್. ರಾಜೇಶ್ ಹಾಗೂ ಕೌಶಿಕ್ ಈ ಮೂವರಿಗೆ ನಾಲ್ಕು ವರ್ಷಗಳವರೆಗೆ ಪ್ರತಿ ತಿಂಗಳು ವಿದ್ಯಾರ್ಥಿ ವೇತನ ಸೌಲಭ್ಯ ಸಿಗಲಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ತನ್ವೀರ್ ಸೇಠ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ತನ್ವೀರ್ ಸೇಠ್ ಅವರು ಶಾಲೆಯ ಆವರದಲ್ಲಿ ಸಾಂಕೇತಿಕವಾಗಿ ಸಸಿ ನೆಟ್ಟರು. ನಗರ ಪಾಲಿಕೆ ಸದಸ್ಯ ಎಸ್. ಸ್ವಾಮಿ, ಮುಖ್ಯೋಪಾಧ್ಯಾಯ ಸಿದ್ದನಾಯಕ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

