ಮೈಸೂರು

ಆಡಂಬರದ ವಿವಾಹಕ್ಕೆ ಕಡಿವಾಣ ಅಗತ್ಯ: ಸಿದ್ದಲಿಂಗ ಶಿವಾಚಾರ್ಯ ಶ್ರೀ

Published On :

ಟಿ. ನರಸೀಪುರ: ಯುವಜನರು ಸರಳವಾಗಿ ಸಾಮೂಹಿಕ ವಿವಾಹವಾಗುವ ಮೂಲಕ ಆಡಂಬರದ ಅದ್ಧೂರಿ ವಿವಾಹಕ್ಕೆ ಕಡಿವಾಣ ಹಾಕಬೇಕು ಎಂದು ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹಳೇ ತಿರುಮಕೂಡಲು ಕ್ಷೇತ್ರದಲ್ಲಿ ಸೋಮವಾರ ನಡೆದ ತಾಲೂಕು ಗಾಣಿಗರ ಸಂಘದ 37ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಏಳು ಜೋಡಿಯನ್ನು ಆಶೀರ್ವದಿಸಿ ಮಾತನಾಡಿದರು.
ನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ದುಂದು ವೆಚ್ಚ ಕಡಮೆ ಮಾಡಲು ಸಾಮೂಹಿಕ ವಿವಾಹಗಳತ್ತ ಮುಖಮಾಡಬೇಕು. ಗಾಣಿಗರ ಸಂಘ ಸತತ ಮೂರೂವರೆ ದಶಕಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುವ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತ, ಬಡವರಿಗೆ ನೆರವಾಗುತ್ತಿದೆ. ನೂತನ ದಂಪತಿಗಳು ಜೀವನ ಅರ್ಥೈಸಿಕೊಂಡು ಅನ್ಯೋನ್ಯವಾಗಿ ಬಾಳಬೇಕು. ದುಡಿಮೆಯ ಮೂಲಕ ಸ್ವಾಭಿಮಾನದ ಬದುಕು ರೂಪಿಸಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಗಾಣಿಗ ಸಮುದಾಯದ ಜನರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕು. ರಾಜಕೀಯವಾಗಿ ಸಂಘಟನೆ ಆಗಬೇಕು. ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಗಾಣಿಗರ ಮಠ ಹಾಗೂ ಶೈಕ್ಷಣಿಕ ಕೇಂದ್ರಗಳನ್ನು ಆರಂಭಿಸಲು ಅಗತ್ಯವಿದ್ದ ನಿವೇಶ ಮಂಜೂರು ಮಾಡಿಕೊಟ್ಟಿರುವುದಾಗಿ ತಿಳಿಸಿದರು.
ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ರಾಮಚಂದ್ರ, ಗೌರವಾಧ್ಯಕ್ಷ ಎಸ್. ಮಹದೇವಶೆಟ್ಟಿ, ಮಾಜಿ ಅಧ್ಯಕ್ಷ ಮಹಾಲಿಂಗು, ಉಪಾಧ್ಯಕ್ಷ ಎಂ. ಮಹದೇವಸ್ವಾಮಿ, ಖಜಾಂಚಿ ಎ.ಪಿ. ಶ್ರೀಧರ್, ಕಾರ್ಯದರ್ಶಿ ಗಂಗರಾಜು, ಎಂ. ಶಿವರಾಜು, ಜಿ. ಪ್ರಕಾಶ್, ಸಂಘಟನ ಕಾರ್ಯದರ್ಶಿ ಕೆ.ಎಸ್. ಮಹದೇವಸ್ವಾಮಿ, ಬಿಜೆಪಿ ಮುಖಂಡರಾದ ಎಂ. ವೆಂಕಟರಮಣಶೆಟ್ಟಿ, ಎ.ಎನ್. ರಂಗುನಾಯ್ಕ, ಕುಮಾರ, ಮಹದೇವಸ್ವಾಮಿ, ಗಿರಿಮಲ್ಲೇಶ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.