ಆನೆ ದಾಳಿಗೆ ಗಿರಿಜನ ಮಹಿಳೆ ಬಲಿ
ಕೊಳ್ಳೇಗಾಲ: ಆನೆ ದಾಳಿಗೆ ಗಿರಿಜನ ಮಹಿಳೆಯೊಬ್ಬರು ಬಲಿಯಾಗಿರುವ ದುರಂತ ಘಟನೆ ತಾಲೂಕಿನ ಹನೂರು ಕ್ಷೇತ್ರ ವ್ಯಾಪ್ತಿಯ ಹೊಸಪೋಡು ಗ್ರಾಮದಲ್ಲಿ ಜರುಗಿದೆ.
ಹೊಸಪೋಡು ಗ್ರಾಮದ ಗಿರಿಜನ ಮಹಿಳೆ ಕುನ್ನಈರಮ್ಮ (53) ಆನೆ ದಾಳಿಗೆ ಸಾವಿಗೀಡಾದ ದುರ್ದೈವಿ ಮಹಿಳೆಯಾಗಿದ್ದಾಳೆ. ತಮ್ಮ ತೋಟದ ಮನೆಯಲ್ಲಿ ಅವರು 15ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಬೆಳೆದಿದ್ದರು. ಬಾಳೆ ತಿನ್ನಲು ಆಗಮಿಸಿದ ಆನೆ ಬಾಳೆ ಬೆಳೆ ತಿನ್ನುತ್ತಿದ್ದಂತೆ ಶಬ್ದವಾದ ಹಿನ್ನೆಲೆ ಸೋಮವಾರ ಮಧ್ಯರಾತ್ರಿ 2ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಬಂದು ಶಬ್ದವಾಗುತ್ತಿದ್ದ ಕಡೆ ತಾಯಿ ಕುನ್ನಈರಮ್ಮ ಹಾಗೂ ಪುತ್ರ ಮಾದೇವ ಇಬ್ಬರು ನೋಡಿದ್ದಾರೆ. ಕತ್ತಲಾದ ಕಾರಣ ಟಾರ್ಚ್ ಬೆಳಕನ್ನು ಆನೆಯ ಕಡೆ ಹರಿಸುತ್ತಿದ್ದಂತೆ ಏಕಾಏಕಿ ಆನೆ ತಾಯಿ ಮಕ್ಕಳಿಬ್ಬರನ್ನು ಅಟ್ಟಾಸಿಕೊಂಡು ಬಂದಿದೆ.
ದುರದೃಷ್ಟವಶಾತ್ ಮಗ ಮಾದೇವ ಪಾರಾದ. ಆದರೆ ಓಡಲಾಗದ ವೃದ್ಧೆ ಕುನ್ನಈರಮ್ಮ ಆನೆಯ ದಾಳಿಗೆ ಬಲಿಯಾಗಬೇಕಾಯಿತು ಎನ್ನಲಾಗಿದೆ. ಆನೆ ವೃದ್ಧ ಮಹಿಳೆಯನ್ನು ತುಳಿದು ಮುಖದ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲೆ ಸಾವಿಗೀಡಾದರು ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಶಬ್ದ ಆಯಿತು ಹೊರಗೆ ಬಂದೆವು: ಮಧ್ಯರಾತ್ರಿಯಲ್ಲಿ ಏನೋ ಶಬ್ದವಾಯಿತು. ನೋಡೋಣ ಎಂದು ಆ ಕಡೆ ನಾನು ಹಾಗೂ ನಮ್ಮ ತಾಯಿ ಟಾರ್ಚ್ ಹರಿಸುತ್ತಿದ್ದಂತೆ ನಮ್ಮನ್ನು ಕಂಡು ಆನೆ ಅಟ್ಟಾಡಿಸಿಕೊಂಡು ಬಂತು. ನಾನು ಓಡಿ ಪರಾದೆ. ಆದರೆ ನಮ್ಮ ತಾಯಿ ಆನೆಯ ತುಳಿತಕ್ಕೊಳಗಾಗಿ ಸ್ಥಳದಲ್ಲೆ ಸಾವಿಗೀಡಾದರು ಎಂದು ಘಟನೆಯ ಬಗ್ಗೆ ಪುತ್ರ ಮಾದೇವ ವಿವರಿಸಿದ. ಅಲ್ಲದೆ ಅವರ ಕುಟುಂಬದ ಬಂಧುಗಳ ರೋಧನ ಮುಗಿಲು ಮುಟ್ಟುವಂತಿತ್ತು. ಸ್ಥಳಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ವಲಯ ಅರಣ್ಯಾಧಿಕಾರಿ ಮಹದೇವಯ್ಯ, ಅರಣ್ಯ ಸಿಬ್ಬಂದಿಗಳಾದ ವಿಶ್ವ ಹೀರೆಮಠ್, ಮಹೇಶ್ ಮತ್ತಿತರರು ಆಗಮಿಸಿ ಪರಿಶೀಲಿಸಿದರು.
ಕಾಡಂಚಿನ ಗ್ರಾಮಗಳಲ್ಲಿ ಸೋಲಾರ್ ಬೇಲಿ ಅಳವಡಿಸಿ ಪ್ರಾಣಿಗಳ ದಾಳಿಗೆ ತುತ್ತಾಗಿ ಸಾವಿಗೀಡಾಗುವುದನ್ನು ತಪ್ಪಿಸಬೇಕು ಎಂದು ನಾಗರಿಕರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೊಸದೊಡ್ಡಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಗಿರಿಜನ ಮುಖಂಡ ಬುಡಕಿಮಹದೇವ ಮತ್ತಿತರರು ಹಾಜರಿದ್ದರು.
2ಲಕ್ಷ ಪರಿಹಾರ ವಿತರಣೆ : ಆನೆ ದಾಳಿಗೆ ವೃದ್ಧೆ ಬಲಿಯಾದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೈಲೂರು, ಒಡೆಯರ ಪಾಳ್ಯ, ಪಿಜಿಪಾಳ್ಯ ಸೇರಿದಂತೆ ಹಲವು ಗ್ರಾಮಗಳಿಂದ ನೂರಾರು ಸಂಖ್ಯೆಯ ನಾಗರಿಕರು ಜಮಾಯಿಸಿ ಆನೆದಾಳಿಗೆ ಸಾವಿಗೀಡಾದ ಮಹಿಳೆಯ ಶವ ವೀಕ್ಷಿಸಿ ಆತಂಕ ವ್ಯಕ್ತಪಡಿಸಿದರಲ್ಲದೆ ಸಾವಿಗೀಡಾದ ಬಗ್ಗೆ ಮರುಕ ಪಟ್ಟರು.
ಸ್ಥಳಕ್ಕೆ ಬಿಳಿಗಿರಿ ವನ್ಯಧಾಮದ ಸಿ.ಎಫ್. ಲಿಂಗಾರಾಜ ಭೇಟಿ ನೀಡಿ ಆನೆ ದಾಳಿಗೆ ಸಾವಿಗೀಡಾದ ಮಹಿಳೆಯ ಕುಟುಂಬಕ್ಕೆ 2ಲಕ್ಷ ಪರಿಹಾರದ ಚೆಕ್ ವಿತರಿಸಿದರಲ್ಲದೆ ಕುಟುಂಬಕ್ಕೆ ಸಾಂತ್ವನ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

