ನಿರುದ್ಯೋಗಿಗಳ ಸ್ಟಾರ್ ಬದಲಾಯ್ತು
ಕ.ಪ್ರ. ವಾರ್ತೆ, ಮೈಸೂರು, ಜೂ.18
ಪದವಿ ಪಡೆದು ಹೊರ ಬರುವ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡುವ ಸ್ಟಾರ್ ಯೋಜನೆಯನ್ನು ಈ ಸಾಲಿನಲ್ಲೂ ಮುಂದುವರಿಸಲು ಕಾಲೇಜು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಯುವಜನತೆಗಾಗಿ ಕೇಂದ್ರ ಸರ್ಕಾರವು ಸ್ಟಾರ್ ಎಂಬ ಯೋಜನೆ ರೂಪಿಸಿದೆ. ನಿರುದ್ಯೋಗ ನಿರ್ಮೂಲನೆ, ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಈ ಯೋಜನೆ ಗುರಿಯಾಗಿದೆ. ಕೇಂದ್ರ ಸರ್ಕಾರದ ಪ್ರಾಯೋಜಿತ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮವು (ಎನ್ಎಸ್ಡಿಸಿ) 2013-14ನೇ ಸಾಲಿನಲ್ಲಿ ಸ್ಟಾರ್ ಯೋಜನೆ ರೂಪಿಸಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಓದುತ್ತಿರುವ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ಟಾರ್ ಯೋಜನೆಯಡಿ ತರಬೇತಿ ನೀಡಲಾಗುತ್ತದೆ. ಈ ಯೋಜನೆಯನ್ನು 2014-15ನೇ ಸಾಲಿನಲ್ಲೂ ಮುಂದುವರಿಯಲಿದೆ.
ಉದ್ದೇಶ ಏನು?: ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಬೇಡಿಕೆಯಲ್ಲಿರುವ ಕೌಶಲಗಳಲ್ಲಿ ತರಬೇತಿ ನೀಡಿ, ರಾಷ್ಟ್ರದ ಯುವ ಸಮುದಾಯವನ್ನು ದಕ್ಷತೆ ಮತ್ತು ಉತ್ಪಾದಕತೆ ಹೆಚ್ಚಿಸುವುದು ಸ್ಟಾರ್ ಯೋಜನೆಯ ಮುಖ್ಯ ಉದ್ದೇಶ. ಈ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಯು ಕೌಶಲ ಅಭಿವೃದ್ಧಿ ತರಬೇತಿ ಯಶಸ್ವಿಯಾಗಿ ಪೂರೈಸಿದ ಪ್ರಮಾಣ ಪತ್ರ ಪಡೆದ ನಂತರ ಪ್ರತಿ ವಿದ್ಯಾರ್ಥಿಗೆ ತರಬೇತಿಗಾಗಿ ತಗಲುವ 10,000 ಕೇಂದ್ರ ಸರ್ಕಾರವು ಭರಿಸುತ್ತದೆ.
ಎಸ್ಎಸ್ಡಿಸಿಯಲ್ಲಿ ನೋಂದಾಯಿತರಾಗಿ ಕೌಶಲ ತರಬೇತಿ ಸಂಸ್ಥೆಗಳನ್ನು ಕಾಲೇಜು ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಹಂಚಿಕೆ ಮಾಡುತ್ತದೆ. ಇಲಾಖೆಯಿಂದ ಆಯಾ ಕಾಲೇಜುಗಳಿಗೆ ಹಂಚಿಕೆಯಾಗಿರುವ ತರಬೇತಿ ಸಂಸ್ಥೆಗಳನ್ನು ಹೊರತುಪಡಿಸಿ ಇತರೆ ಸಂಸ್ಥೆಗಳಿಂದ ತರಬೇತಿಗೆ ಅವಕಾಶ ನೀಡಬಾರದು. ತರಬೇತುದಾರರು ನಿಗದಿತ ಸಮಯದೊಳಗೆ ಕಾಲೇಜುಗಳಲ್ಲಿ ತರಬೇತಿ ಆರಂಭಿಸಬೇಕು.
ಈ ತರಬೇತಿಗೆ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಕಡ್ಡಾಯವಾಗಿ ಹೊಂದಿರಬೇಕು. ತರಬೇತಿ ನೀಡುವ ಸಂಸ್ಥೆಗಳು ಎನ್ಎಸ್ಡಿಸಿ ವೆಬ್ಸೈಟ್ನಲ್ಲಿ ನೋಂದಾಯಿಸಿ ನೋಂದಣಿ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಾರೆ.
ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ. ತರಬೇತಿ ಕೊನೆಯಲ್ಲಿ ಅಗತ್ಯ ಹಾಜರಾತಿಯುಳ್ಳ ವಿದ್ಯಾರ್ಥಿಗಳಿಗೆ ಮಾತ್ರ ಬಾಹ್ಯ ಸಂಸ್ಥೆಯೊಂದು ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಸ್ಟಾರ್ ಪ್ರಮಾಣ ಪತ್ರ ನೀಡಲಾಗುತ್ತದೆ.
ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 10,000 ಅನ್ನು ಕೇಂದ್ರ ಸರ್ಕಾರದಿಂದ ನೇರವಾಗಿ ವರ್ಗಾಯಿಸಲಾಗುತ್ತದೆ. ಈ ಮೊತ್ತವು ತರಬೇತಿ ವೆಚ್ಚ, ಪರೀಕ್ಷೆ ಮತ್ತು ಮೌಲ್ಯಮಾಪನ ವೆಚ್ಚ ಹಾಗೂ ವಿದ್ಯಾರ್ಥಿಗಳಿಗೆ ಸಲ್ಲುವ ಪ್ರೋತ್ಸಾಹ ಧನ ಒಳಗೊಂಡಿರುತ್ತದೆ. ಪ್ರತಿ ಕಾಲೇಜುಗಳಲ್ಲಿ ಸ್ಟಾರ್ ತರಬೇತಿ ಕಾರ್ಯಕ್ರಮದ ನಿರ್ವಹಣೆಗಾಗಿ ಒಬ್ಬ ಉಪನ್ಯಾಸಕರನ್ನು ಸಂಯೋಜಕರನ್ನಾಗಿ ನೇಮಿಸಲಾಗುತ್ತದೆ.
ಎಲ್ಲ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಸ್ಟಾರ್ ಕಾರ್ಯಕ್ರಮವನ್ನು ಏಕರೂಪದಲ್ಲಿ ಅನುಷ್ಠಾನಗೊಳಿಸಲು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.
ಹಣ ವಸೂಲಿ ಮಾಡಿದರೆ ಶಿಸ್ತು ಕ್ರಮ: ಸ್ಟಾರ್ ಕಾರ್ಯಕ್ರಮಕ್ಕೆ ಯಾವುದೇ ಹಂತದಲ್ಲಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಬಾರದು. ಜೊತೆಗೆ ಅವರಿಗೆ ಯಾವುದೇ ಬಗೆಯ ಧನಸಹಾಯ, ಪ್ರೋತ್ಸಾಹ ಧನ ನೀಡಬಾರದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೊದಲಿಗೆ ತರಬೇತಿಗೆ ತಗಲುವ ವೆಚ್ಚವನ್ನು ತರಬೇತಿ ಸಂಸ್ಥೆಗಳೇ ಭರಿಸುತ್ತವೆ. ವಿದ್ಯಾರ್ಥಿಗಳಿಂದ ಸ್ಟಾರ್ ಕಾರ್ಯಕ್ರಮಕ್ಕೆ ಹಣ ವಸೂಲಿ ಮಾಡಿದ್ದು ಕಂಡುಬಂದಲ್ಲಿ ಇದಕ್ಕೆ ಆಯಾ ಕಾಲೇಜು ಪ್ರಾಂಶುಪಾಲರು ಮತ್ತು ಸಂಯೋಜಕರನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಇಲಾಖೆಯು ಎಚ್ಚರಿಸಿದ್ದಾರೆ.
ಬಿ. ಶೇಖರ್ ಗೋಪಿನಾಥಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

