ಹರಾಜು ಪ್ರಕ್ರಿಯೆ ವೇಳೆ ವಾಗ್ವಾದ
ಕ.ಪ್ರ. ವಾರ್ತೆ, ಹುಣಸೂರು, ಜೂ. 18
ತಾಲೂಕಿನ ಹನಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಹಾಲಿ ಇರುವ ಮಾಂಸದಂಗಡಿ ಹೊರತಾಗಿ ಹರಾಜು ಮಾಡಬೇಕು, ಗೋಮಾಂಸಕ್ಕೂ ಅನುಮತಿ ನೀಡುವಂತೆ ಒತ್ತಾಯಿಸಿ ಬುಧವಾರ ನಡೆದ ಹರಾಜು ಪ್ರಕ್ರಿಯೆಯನ್ನು ಮಂದೂಡಿದ ಘಟನೆ ನಡೆಯಿತು.
ಹನಗೋಡು ಗ್ರಾಪಂ ಆಡಳಿತ ಮಂಡಳಿಯು ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯ ಮಾಂಸದಂಗಡಿಗಳು ಸಂತೆ, ದನಗಳ ದೊಡ್ಡಿ, ತೆಂಗು, ಹುಣಸೆ ಮರಗಳ ಫಸಲಿನ ಹರಾಜು ಸೇರಿದಂತೆ ಗ್ರಾಪಂ ವರಮಾನ ಹೆಚ್ಚಿಸಲು ಆಸಕ್ತಿಯುಳ್ಳ ಗ್ರಾಮಸ್ಥರಿಂದ ಹರಾಜಿನಲ್ಲಿ ಭಾಗವಹಿಸಲು ಟೆಂಡರ್ ಕರೆಯಲಾಗಿತ್ತು.
ಗ್ರಾಪಂ ಆವರಣದಲ್ಲಿ ಗ್ರಾಮದ ಕೆಲ ಅಂಗಡಿಗಳವರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಠೇವಣೆ ಹಣ ಕಟ್ಟಿದ್ದರು. ಕೆಲ ಗ್ರಾಮಸ್ಥರೊಂದಿಗೆ ಹಾಲಿ ಮಾಂಸದಂಗಡಿಗಳನ್ನು ನಡೆಸುತ್ತಿರುವ ಮಾಲೀಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ನಾವು ನಮ್ಮ ಸ್ವಂತ ಜಾಗದಲ್ಲಿ ಪಂಚಾಯಿತಿ ವತಿಯಿಂದ ಪರವಾನಿಗೆ ಪಡೆದು ವ್ಯಾಪಾರ ಮಾಡುತ್ತಿದ್ದೇವೆ. ಪಂಚಾಯಿತಿ ವತಿಯಿಂದಲೇ ಗ್ರಾಪಂ ಸ್ಥಳದಲ್ಲಿ ಮಳಿಗೆ ನಿರ್ಮಿಸಿ ಮಳಿಗೆಗಳನ್ನು ಹರಾಜು ಮಾಡಿ, ನಮಗೂ ಪರವಾನಗಿ ನೀಡಿ, ಮಾಂಸದಂಗಡಿಗಳನ್ನು ಟೆಂಡರ್ ಮೂಲಕ ಹರಾಜು ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಪಿಡಿಒ ಮಣಿಯವರೊಂದಿಗೆ ವಾಗ್ವಾದಕ್ಕಿಳಿದರು.
ಸಾಲುತ್ತಿಲ್ಲ: ಪಿಡಿಒ ಮಣಿ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿಯ ಸಲಹೆ ಸೂಚನೆ ಮೇರೆಗೆ ಹರಾಜು ಪ್ರಕ್ರಿಯೆಗೆ ದಿನಾಂಕ ಗುರುತಿಸಿ ಹರಾಜು ನಡೆಸಲಾಗುತ್ತಿದೆ. ಪಂಚಾಯಿತಿಯಲ್ಲಿ ಈಗ ವಾರ್ಷಿಕ 9.5 ಲಕ್ಷ ರು. ಮಾತ್ರ ಆದಾಯವಿದ್ದು, ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಸರಿಯಾಗಿ ವೇತನ ನೀಡಲಾಗುತ್ತಿಲ್ಲ. ಬೀದಿ ದೀಪ ನಿರ್ವಹಣೆ ಮಾಡಲಾಗುತ್ತಿಲ್ಲ. ಈ ಹಣ ಕೇವಲ ಪಂಚಾಯಿತಿ ನೌಕರರ ವೇತನ ನೀಡುವುದಕ್ಕು ಸಾಲುತ್ತಿಲ್ಲ. ಹೀಗಿರುವಾಗ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿಭಾಯಿಸಲು ಹೇಗೆ ಸಾಧ್ಯವೆಂದು ಗ್ರಾಮಸ್ಥರಿಗೆ ಪ್ರಶ್ನಿಸಿ ಹರಾಜು ಮಾಡಲು ಬಿಡಿ ಎಂದರೂ ಹರಾಜು ಸ್ಥಗಿತಗೊಳಿಸುವಂತೆ ಪಟ್ಟು ಹಿಡಿದಿದ್ದರಿಂದ ಹರಾಜು ಪ್ರಕ್ರಿಯೆ ಮುಂದೂಡಲಾಯಿತು.
ಗೋಮಾಂಸ ಮಾರಾಟಕ್ಕೆ ಪರವಾನಿಗೆ ನೀಡಿ: ಪಂಚಾಯಿತಿ ಹರಾಜು ಕರಪತ್ರದಲ್ಲಿ ಕೋಳಿ, ಕುರಿ, ಆಡು, ಹಂದಿ, ಮೀನು ಮಾಂಸಗಳ ಮಾರಾಟಕ್ಕೆ ಮಾತ್ರ ಹರಾಜು ಟೆಂಡರ್ಗೆ ಅವಕಾಶ ನೀಡಿದ್ದೀರಿ, ನಮಗೂ ಗೋಮಾಂಸ ಮಾರಾಟ ಮಾಡಲು ಪರವಾನಿಗೆ ನೀಡಬೇಕು ಎಂದು ಗ್ರಾಮದ ಕೆಲ ಯುವಕರು ಅರ್ಜಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದೆಂದು ಭರವಸೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎನ್. ನಾಗರಾಜ್, ಸದಸ್ಯರಾದ ಮಹೇಂದ್ರಕುಮಾರ್, ನಾಗಮ್ಮ, ಮುಖಂಡರಾದ ನಂಜಪ್ಪ, ಸುರೇಶ್, ಇಮ್ತಿಯಾಜ್, ಅನ್ಸರ್, ಖಲಿಲ್ ಪಾಷ, ಗಿರಿಧರ್, ಆಂಟೋನಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

