ಹಿಂದುಳಿದ ಜಿಲ್ಲೆಗಳ ಸೇವೆಗೆ ಮುಂದಾಗಿ: ಧ್ರುವನಾರಾಯಣ
ಮೈಸೂರು: ಸರ್ಕಾರಿ ನೌಕರರು ಹಿಂದುಳಿದ ಜಿಲ್ಲೆಗಳ ಸೇವೆಗೂ ಮುಂದಾಗಬೇಕು ಎಂದು ಚಾಮರಾಜನಗರ ಸಂಸದ ಆರ್. ಧ್ರುವನಾರಾಯಣ ಕರೆ ನೀಡಿದರು.
ಮೈಸೂರು ವಿಶ್ವವಿದ್ಯಾನಿಲಯದ ದಲಿತ ನೌಕರರ ಸಂಘವು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಹಾಗೂ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ ತಹಸೀಲ್ದಾರ್ ಮತ್ತಿತರ ಹುದ್ದೆಗಳಿಗೆ ಆಯ್ಕೆಯಾದ ಕೂಡಲೇ ರಾಜಕಾರಣಿಗಳಿಗೆ ದುಂಬಾಲು ಬಿದ್ದು ತಮ್ಮ ಜಿಲ್ಲೆಯಲ್ಲಿಯೇ ಕೆಲಸ ಮಾಡಲು ಅವಕಾಶ ಕೊರುವುದುಂಟು. ಮೈಸೂರು ಸುತ್ತಮುತ್ತ ಕೆಲಸ ಮಾಡಲು ಬಯಸುವವರೇ ಹೆಚ್ಚು. ಬೇರೆ ಜಿಲ್ಲೆಗಳಿಗೆ ಹೋಗಲು ಬಯಸುವುದಿಲ್ಲ. ಆದ್ದರಿಂದ ಹಿಂದುಳಿದ ಜಿಲ್ಲೆಗಳ ಸೇವೆಗೂ ನೌಕರರು ಮುಂದಾಗಬೇಕು ಎಂದರು.
ರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಇಂದು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರಾಜ್ಯ ಸರ್ಕಾರವು ಈ ಬಾರಿಯ ಬಜೆಟ್ನಲ್ಲಿ 21 ಸಾವಿರ ಕೋಟಿ ರು. ಮೀಸಲಿರಿಸಿದೆ. ಶಿಕ್ಷಣದ ಪ್ರಗತಿಯಿಂದ ಮಾತ್ರ ಜಿಲ್ಲೆ ಹಾಗೂ ವ್ಯಕ್ತಿಯ ಉದ್ಧಾರ ಸಾಧ್ಯ. ಅನಕ್ಷರಸ್ಥರು ಹಾಗೂ ಶೋಷಿತರ ಪರ ಕೆಲಸ ಮಾಡುವ ಮನೋಭಾವ ಹೆಚ್ಚಾಗಬೇಕು. ಸವಲತ್ತು ಪಡೆದು ಬೆಳೆದವರು ಕೆಳಗಿರುವವರನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ಅವರು ಆಶಿಸಿದರು.
ಉತ್ತರ ಕರ್ನಾಟಕಕ್ಕೆ ಹೊಲಿಸಿದರೆ ಮೈಸೂರು ಹಾಗೂ ಚಾಮರಾಜನಗರ ಸುತ್ತಮುತ ಜಿಲ್ಲೆಗಳಲ್ಲಿ ಪ್ರಗತಿಪರರು ಹಾಗೂ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಮಾಜ ಸುಧಾರಣೆಯಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಶಿಕ್ಷಣದ ಮಹತ್ವವನ್ನು ಸಾರಿದವರು. ಅವರ ಆಶಯದಂತೆ ಮುನ್ನಡೆಬೇಕು. ಸಂಘಟನೆಯು ದಲಿತ ಮಕ್ಕಳಿಗೆ ಐಎಎಸ್ ಮತ್ತಿತರ ಹುದ್ದೆಗಳಿಗೆ ತರಬೇತಿ ನೀಡುವ ಕೆಲಸ ಮಾಡಲಿ ಎಂದರು.
ಸ್ಮರಣೆ: ಆಗಿನ ಕಾಲದಲ್ಲಿಯೇ ಮೈಸೂರು ವಿವಿ ಸ್ಥಾಪಿಸಿ ದಲಿತರ ಶಿಕ್ಷಣಕ್ಕೆ ಒತ್ತು ನೀಡಿದ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಬೇಕು. ಈಡೀ ದೇಶದಲ್ಲಿಯೇ ಮೈಸೂರು ವಿವಿ ಮಾದರಿಯಾಗಿದ್ದು, ದಲಿತರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ಅವರ ಅಭಿವೃದ್ಧಿಗೆ ಸಹಕಾರ ನೀಡಿದೆ ಎಂದು ಅವರು ಪ್ರಶಂಸಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ನಿವೃತ್ತ ನೌಕರರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ 2013 -14 ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಉತ್ತಮ ಸಾಧನೆ ಮಾಡಿರುವ ದಲಿತ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಟಿ.ಸಿ. ಶಿವಶಂಕರಮೂರ್ತಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪ್ರೊ. ರಮೇಶ್ ಸ್ವಾಗತಿಸಿದರು.
ನಂತರ ನಡೆದ ವಿಚಾರ ಸಂಕಿರಣದಲ್ಲಿ ಸಮಕಾಲೀನ ಸಮಾಜದಲ್ಲಿ ದಲಿತರ ಸವಾಲುಗಳು ಎಂಬ ವಿಷಯ ಕುರಿತು ಪ್ರೊ. ಮಹೇಶ್ ಚಂದ್ರಗುರು, ದಲಿತರು ಮತ್ತು ಉಪಯೋಜನೆಗಳು ಎಂಬ ವಿಷಯ ಕುರಿತು ಸಿ. ಹರಕುಮಾರ್ ಹಾಗೂ ದಲಿತರು ಹಾಗೂ ಶಿಕ್ಷಣದಲ್ಲಿನ ಆಯಾಮಗಳು ಎಂಬ ವಿಷಯ ಕುರಿತು ಡಾ.ಎಸ್. ತುಕರಾಂ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

