ಬ್ಯಾಂಕ್ ಸಿಬ್ಬಂದಿ ಗ್ರಾಹಕರ ಜೊತೆ ಮಾನವತೆಯಿಂದ ವರ್ತಿಸಬೇಕು
ಮೈಸೂರು: ಸರ್ಕಾರದ ನಾನಾ ಯೋಜನೆಗಳು ಬ್ಯಾಂಕ್ಗಳ ಮೂಲಕ ಜನಸಾಮಾನ್ಯರಿಗೆ ತಲುಪುತ್ತಿರುವುದರಿಂದ ಬ್ಯಾಂಕ್ ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಕಿವಿಮಾತು ಹೇಳಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ಲೀಡ್ ಬ್ಯಾಂಕ್ ಆಯೋಜಿಸಿದ್ದ ಬ್ಯಾಂಕ್ಗಳ ತ್ರೈಮಾಸಿಕ ಜಿಲ್ಲಾ ಸಮಾಲೋಚನಾ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್ಗೆ ಆಗಮಿಸುವ ಪ್ರತಿಯೊಬ್ಬ ಗ್ರಾಹಕನೊಂದಿಗೂ ಸೌಜನ್ಯದಿಂದ ವರ್ತಿಸಿ ಅವರಿಗೆ ಯೋಜನೆಗಳ ಕುರಿತು ಮಾಹಿತಿ ನೀಡಬೇಕು. ಆಗ ಮಾತ್ರ ಸರ್ಕಾರದ ಯೋಜನೆ ಜನಸಾಮಾನ್ಯರಿಗೆ ತಲುಪಲು ಸಾಧ್ಯ ಎಂದರು.
ಕೋಟ್ಯಂತರ ರು. ಸಾಲ ಹಿಂದಿರುಗಿಸದವರ ವಿರುದ್ಧ ಕ್ರಮಕ್ಕೆ ಬ್ಯಾಂಕ್ ಅಧಿಕಾರಿಗಳು ಮುಂದಾಗುವುದಿಲ್ಲ. ಆದರೆ ರು. 2 ಲಕ್ಷ ಸಾಲ ಪಡೆದ ರೈತರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಇಂಥ ಮನಸ್ಥಿತಿಯಿಂದ ಬ್ಯಾಂಕ್ ಅಧಿಕಾರಿಗಳು ಹೊರ ಬರಬೇಕು. ಸಾಲ ವಿತರಣೆ ವೇಳೆ ಅನಗತ್ಯ ದಾಖಲೆ ಕೇಳಿ ಜನರನ್ನು ಬ್ಯಾಂಕ್ಗೆ ಅಲೆಯುವಂತೆ ಅಥವಾ ಸೌಲಭ್ಯ ವಂಚಿತರಂತೆ ಮಾಡಬಾರದು ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶಿವಲಿಂಗಯ್ಯ ಮಾತನಾಡಿ, ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬ್ಯಾಂಕ್ಗಳಿಗೆ ಆರ್ಬಿಐ ಸ್ಪಷ್ಟ ನಿರ್ದೇಶನ ನೀಡಿದೆ. ಆದ್ದರಿಂದ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಯೋಜನೆ ಅನುಷ್ಠಾನದ ಉಸ್ತುವಾರಿ ವಹಿಸಿಕೊಂಡಿರುವ ಸರ್ಕಾರಿ ಇಲಾಖೆ ಅಧಿಕಾರಿಗಳು ಬ್ಯಾಂಕ್ಗಳಿಗೆ ಸಕಾಲದಲ್ಲಿ ಯೋಜನೆಗೆ ಸಂಬಂಧಿಸಿದ ದಾಖಲೆ ಒದಗಿಸಿದರೆ ಯೋಜನೆಗಳ ಅನುಷ್ಠಾನಕ್ಕೆ ಸಹಕಾರಿ ಆಗಲಿದೆ ಎಂದರು.
ಈ ಬಾರಿ ಕೆಲವು ಯೋಜನೆಗಳ ಅರ್ಜಿಗಳು ಮಾರ್ಚ್ ಅಂತ್ಯದಲ್ಲಿ ಬ್ಯಾಂಕ್ಗಳಿಗೆ ತಲುಪಿದ ಹಿನ್ನೆಲೆಯಲ್ಲಿ ಆರ್ಥಿಕ ನೆರವು ಒದಗಿಸಲು ಸಾಧ್ಯವಾಗಲಿಲ್ಲ. ಇಲಾಖೆ ಅಧಿಕಾರಿಗಳು ಬ್ಯಾಂಕ್ಗಳಿಗೆ ಆಗಸ್ಟ್ ಅಂತ್ಯದೊಳಗೆ ಯೋಜನೆಯ ಗುರಿ ನೀಡಬೇಕು ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಕೆಲವು ಸಂದರ್ಭಗಳಲ್ಲಿ ಶಾಸಕರು ರಾಜಕೀಯ ಕಾರಣಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆಪಟ್ಟಿಯಿಂದ ಕೈ ಬಿಡುವ ಸಾಧ್ಯತೆ ಇದೆ. ಅಂಥ ವ್ಯಕ್ತಿಗಳ ಮಾಹಿತಿಯನ್ನು ನನಗೆ ನೀಡಿದರೆ ಅವರಿಗೆ ನ್ಯಾಯ ಒದಗಿಸುತ್ತೇನೆ. ಅಧಿಕಾರಿಗಳು ಕೇವಲ ಆರ್ಥಿಕ ನೆರವು ನೀಡಿದರೆ ನಮ್ಮ ಪಾಲಿನ ಕರ್ತವ್ಯ ಮುಗಿಯಿತು ಎಂದು ತಿಳಿಯದೆ ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಫಲಾನುಭವಿಗಳು ಬ್ಯಾಂಕ್ ಖಾತೆಯಿಂದ ಸರ್ಕಾರ ನೀಡಿದ ಹಣ ಪಡೆಯದಂತೆ ಎಚ್ಚರ ವಹಿಸಲು ಬ್ಯಾಂಕ್ ಅಧಿಕಾರಿಗಳು ನಿರ್ದಿಷ್ಟ ಮೊತ್ತವನ್ನು ಲಾಕ್ ಮಾಡಬೇಕು ಎಂದು ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಮಹಾಂತೇಶಪ್ಪ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶಿವಲಿಂಗಯ್ಯ ಭರವಸೆ ನೀಡಿದರು.
ನಬಾರ್ಡ್ ವ್ಯವಸ್ಥಾಪಕ ಮದನ್, ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಬಂಗಾರು ರಾಜು ಮತ್ತಿತರರು ಇದ್ದರು.
ಕನ್ನಡದಲ್ಲಿ ವ್ಯವಹರಿಸಿ
ಬ್ಯಾಂಕ್ಗಳಿಗೆ ಬರುವ ಜನಸಾಮಾನ್ಯರೊಂದಿಗೆ ಕನ್ನಡದಲ್ಲಿ ವ್ಯವಹರಿಸಿ. ಬ್ಯಾಂಕ್ಗಳಲ್ಲಿ ಇಂಗ್ಲಿಷ್, ತಮಿಳು, ಮಲೆಯಾಳಂ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಅನ್ಯಭಾಷೆಯಲ್ಲಿ ಮಾತನಾಡಿದರೆ ಸಾಮಾನ್ಯ ರೈತ ತಬ್ಬಿಬ್ಬಾಗುತ್ತಾನೆ. ಅಂಥ ಪರಿಸ್ಥಿತಿ ನಿರ್ಮಾಣ ಆಗಬಾರದು. ಬ್ಯಾಂಕ್ ಅಧಿಕಾರಿಗಳ ಹುದ್ದೆಗೆ ಕನ್ನಡಿಗರನ್ನೆ ನೇಮಕ ಮಾಡಬೇಕು ಎಂದು ಸಲಹೆ ನೀಡಿದರು. ಐಬಿಪಿಎಸ್ ಮೂಲಕ ಬ್ಯಾಂಕ್ ಅಧಿಕಾರಿಗಳ ನೇಮಕ ನಡೆಯುತ್ತಿದ್ದು, ವಿಶೇಷವಾಗಿ ಗ್ರಾಮೀಣಾಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಒಡಿಶಾ, ಬಿಹಾರದ ಅಭ್ಯರ್ಥಿಗಳು ನೇಮಕ ಆಗುತ್ತಿದ್ದಾರೆ. ರಾಜ್ಯದಲ್ಲಿ ಅಭ್ಯರ್ಥಿಗಳ ಕೊರತೆ ಇದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ರಾಜ್ಯದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಆದರೆ ರಾಜ್ಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮನಸ್ಸುಗಳ ಕೊರತೆ ಇದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

