ಚುಂಚನಕಟ್ಟೆ ಸುತ್ತಮುತ್ತ ಕರೆಂಟ್ ಕಣ್ಣಾಮುಚ್ಚಾಲೆ: ರೈತರು, ವಿದ್ಯಾರ್ಥಿಗಳ ಪರದಾಟ
ಕೆ.ಆರ್. ನಗರ: ತಾಲೂಕಿನ ಚುಂಚನಕಟ್ಟೆ ಹೋಬಳಿಯಲ್ಲಿ ಪ್ರತಿನಿತ್ಯ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲು ಸೆಸ್ಕ್ ವಿಫಲವಾಗಿದ್ದು, ರಾತ್ರಿ ವೇಳೆಯಂತೂ ಸಂಪೂರ್ಣ ವಿದ್ಯುತ್ ನಿಲುಗಡೆಯಾಗುವುದರಿಂದ ರೈತರು, ವಿದ್ಯಾರ್ಥಿಗಳು ಮತ್ತು ಗುಡಿಕೈಗಾರಿಕೆ ಉದ್ಯಮಿಗಳು ಪರದಾಡುವಂತಾಗಿದೆ.
ನಿತ್ಯ ಹಗಲಿನಲ್ಲಿ ಕೊಡುವ 4 ಗಂಟೆ ತ್ರಿಫೇಸ್ ವಿದ್ಯುತ್ನಲ್ಲಿ ಕನಿಷ್ಠ ಪಕ್ಷ 8 ಬಾರಿಯಾದರೂ ಹೋಗಿಬಂದು ಕಿರಿಕಿರಿ ಮಾಡುವ ವಿದ್ಯುತ್ನ್ನು ಸರಬರಾಜಿಗೆ ಯಾವುದೇ ನಿಗದಿತ ಸಮಯ ತಿಳಿಸದ ಸೆಸ್ಕ್ನವರು ತಮಗಿಷ್ಟ ಬಂದ ರೀತಿಯಲ್ಲಿ ವಿದ್ಯುತ್ ತೆಗೆದು ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತಿರುವುದರಿಂದ ಹೋಬಳಿಯಲ್ಲಿರುವ ಗುಡಿ ಕೈಗಾರಿಕೆಗಳಾದ ರೈಸ್ಮಿಲ್, ಸಾಮಿಲ್, ಫ್ಲೋರ್ಮಿಲ್ ಜೆರಾಕ್ಸ್ ಅಂಗಡಿಗಳು ನಿಂತು ಹೋಗಿದ್ದು, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ, ಸಾರ್ವಜನಿಕರು ಪರದಾಡುವಂತಾಗಿದೆ. ಹೋಬಳಿಯಲ್ಲಿ ಈ ಬಾರಿ ಬರದ ಛಾಯೆ ಆವರಿಸಿದ್ದು, ಸರಿಯಾಗಿ ಮಳೆ ಬಾರದ ಹಿನ್ನೆಲೆ ಇದೀಗ ಬೆಳೆಯಲಾಗಿರುವ ಕಬ್ಬು, ತಂಬಾಕು, ಬಾಳೆ, ಅರಿಶಿಣ, ಕಲ್ಲಂಗಡಿ ಸೇರಿದಂತೆ ಇನ್ನಿತರ ಬೆಳೆಗಳಿಗೆ ಪಂಪ್ಸೆಟ್ ಮೂಲಕವಾದರೂ ನೀರು ಹರಿಸಲು ರೈತರು ಕಾಡುಹಂದಿಗಳ ಹಾವಳಿ ನಡುವೆ ರಾತ್ರಿ ಹಗಲೆನ್ನದೇ ಜಮೀನಿನಲ್ಲಿಯೇ ಮಲಗಿ ವಿದ್ಯುತ್ ಬರುವುದನ್ನೇ ಜಾತಕಪಕ್ಷಿಗಳಂತೆ ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಚುಂಚನಕಟ್ಟೆಯಲ್ಲಿಯೇ ವಿದ್ಯುತ್ ವಿತರಣಾ ಕೇಂದ್ರವಿದ್ದರೂ ವಿದ್ಯುತ್ ಸಮಸ್ಯೆ ಉಂಟಾಗುತ್ತಿರುವುದು ಈ ಇಲಾಖೆಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಇನ್ನು 3-4 ದಿನದೊಳಗೆ ಸಮರ್ಪಕ ವಿದ್ಯುತ್ ನೀಡಲು ಮುಂದಾಗದಿದ್ದರೆ ಸೆಸ್ಕ್ ಕಚೇರಿ ಬೀಗಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮುಖಂಡರಾದ ಎಚ್.ಜೆ. ಜಯಶಂಕರ ಕೋಟಿ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

