ಗೃಹಿಣಿ ಬಹಿಷ್ಕಾರ; ನ್ಯಾಯ ಸಿಗುವವರೆಗೆ ಹೋರಾಟ
ಮೈಸೂರು: ಬಹಿಷ್ಕಾರಕ್ಕೆ ಒಳಗಾದ ಮಹಿಳೆಯನ್ನು ಆಕೆಯ ಗಂಡನೊಂದಿಗೆ ಸೇರಿಸುವವರೆಗೆ ಹೋರಾಟ ನಡೆಸುವುದಾಗಿ ಕರ್ನಾಟಕ ಜನಪರ ಶಕ್ತಿ ವೇದಿಕೆ ಅಧ್ಯಕ್ಷೆ ಆರ್.ಮಧು ಹೇಳಿದರು. ಹುಣಸೂರು ತಾಲೂಕು ಕಲ್ಕುಣಿಕೆ ಗ್ರಾಮದ ಶಿಲ್ಪಾ ಬಹಿಷ್ಕಾರಕ್ಕೆ ಒಳಗಾದವರು. ಶಿಲ್ಪಾಳ ಮೇಲೆ ಅಕ್ರಮ ಸಂಬಂಧದ ಆರೋಪ ಹೊರಿಸಿ ಬಹಿಷ್ಕಾರ ಹಾಕಲಾಗಿದೆ. ಈ ಸಂಬಂಧ ದೂರು ನೀಡಲು ಹೋದರೆ ಹುಣಸೂರು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಸ್ಪಿಗೆ ಈ ಸಂಬಂಧ ದೂರು ನೀಡಿದ ನಂತರ ಕಲ್ಕುಣಿಕೆಗೆ ತೆರಳಿ ಶಿಲ್ಪಾಳಿಗೆ ಆದ ಅನ್ಯಾಯ ಸರಿಪಡಿಸುವವರೆಗೆ ಹೋರಾಟ ನಡೆಸುತ್ತೇವೆ. ಶಿಲ್ಪಾಳಿಗೆ ಮತ್ತು ಆಕೆಯ ಒಂದು ತಿಂಗಳ ಮಗುವಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದರು. ನರಸಿಂಹಸ್ವಾಮಿ, ಸುಧಾಮಣಿ, ಲಕ್ಷ್ಮಮ್ಮ, ಶಿಲ್ಪಾ ಇದ್ದರು.
ಮತದಾನ ಕುರಿತು ಸಾರ್ವಜನಿಕರ ಅರಿವಿಗೆ ಬೃಹತ್ ಜಾಗೃತಿ ಜಾಥಾ
ಮೈಸೂರು: ಮತದಾರರ ಪಟ್ಟಿಯಲ್ಲಿ ಹೆಸರು, ನೋಂದಣಿ ಹಾಗೂ ಮತದಾನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಮತದಾರರ ಶಿಕ್ಷಣ ಹಾಗೂ ಜಾಗೃತಿ ಸಮಿತಿಯು ಮಾ. 8ಕ್ಕೆ ಬೃಹತ್ ಜಾಥಾ ಏರ್ಪಡಿಸಿದೆ. ಅಂದು ಸಂಜೆ 4.30ಕ್ಕೆ ಅರಮನೆ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾಗುವ ಜಾಥಾ ಜಿಲ್ಲಾಧಿಕಾರಿ ಕಚೇರಿ ಬಳಿ ಅಂತ್ಯಗೊಳ್ಳುವುದು. ಈ ಜಾಥಾದಲ್ಲಿ ವಿವಿಧ ಯುವ ಸಂಘಟನೆಗಳು, ಸ್ತ್ರೀಶಕ್ತಿ ಸಂಘಟನೆಯ ಸದಸ್ಯರು, ವಿದ್ಯಾರ್ಥಿಗಳು, ಆರೋಗ್ಯ ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸುವರು. ಸಾರ್ವಜನಿಕರು ಭಾಗವಹಿಸುವಂತೆ ಜಿಲ್ಲಾಧಿಕಾರಿ ಸಿ. ಶಿಖಾ ಹಾಗೂ ಜಿಪಂ ಸಿಇಒ ಗೋಪಾಲ್ ಕೋರಿದ್ದಾರೆ.
ಮಾಧ್ಯಮ ಪ್ರಮಾಣೀಕರಣ, ಮೇಲ್ವಿಚಾರಣಾ ಸಮಿತಿ ರಚನೆ
ಮೈಸೂರು: ಲೋಕಸಭಾ ಚುನಾವಣೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಶ್ರವಣ, ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಮಾಡುವ ಚುನಾವಣಾ ಪ್ರಚಾರಗಳಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಜಾಹಿರಾತುಗಳ ಪರಿಶೀಲನೆ ನಡೆಸಿ ನಿಯಂತ್ರಣಗಳನ್ನು ಜಾರಿಯಲ್ಲಿ ತರಲು ಜಿಲ್ಲಾ ಮಟ್ಟದಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿಯನ್ನು ಜಿಲ್ಲಾಧಿಕಾರಿ ಸಿ. ಶಿಖಾ ರಚಿಸಿದ್ದಾರೆ. ಈ ಸಮಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಸದಸ್ಯರಾಗಿ, ಕೊಡಗು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳು ಸಹ ಸದಸ್ಯರಾಗಿ, ಮೈಸೂರು ಜಿಲ್ಲಾ ವಾರ್ತಾ ಇಲಾಖೆ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವರು. ಜಿಲ್ಲಾ ವ್ಯಾಪ್ತಿಯಲ್ಲಿ ಪಾವತಿ ಸುದ್ದಿಗಳ ಪರಿಶೀಲನಾ ಕಾರ್ಯಕ್ಕಾಗಿ ಡಿಸಿ ಅಧ್ಯಕ್ಷರಾಗಿ, ಹೆಚ್ಚುವರಿ ಜಿಲ್ಲಾಧಿಕಾರಿ, ಮಾಹಿತಿ ಮತ್ತು ಪ್ರಸಾರ ಅಧಿಕಾರಿ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ನಿರಂಜನ ವಾನಳ್ಳಿ ಸದಸ್ಯರಾಗಿ, ಜಿಲ್ಲಾ ವಾರ್ತಾ ಇಲಾಖೆ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವರು.
ಕಾಂಗ್ರೆಸ್ ಕಚೇರಿಯಲ್ಲಿ ಸಭೆ
ಮೈಸೂರು: ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ಜಿಲ್ಲಾಧ್ಯಕ್ಷ ಆರ್.ಧರ್ಮಸೇನ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಪಕ್ಷದ ಕಚೇರಿಯಲ್ಲಿ ನಡೆಯಿತು. ವೀಕ್ಷಕರಾಗಿ ಆಗಮಿಸಿದ್ದ ಕೆಪಿಸಿಸಿ ಕಾರ್ಯದರ್ಶಿ ಪಿ.ಆರ್.ರಮೇಶ್ ಭಾಗವಹಿಸಿದ್ದ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳಲಾಯಿತು. ಕೆಪಿಸಿಸಿ ವತಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ 15 ಕಿ.ಮೀ. ಪಾದಯಾತ್ರೆ ಕೈಗೊಳ್ಳುವುದು, ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸುವುದು ಹಾಗೂ ಲೋಕಸಭಾ ಚುನಾವಣಾ ಸಿದ್ಧತೆ ಕೈಗೊಳ್ಳುವ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು. ಪದಾಧಿಕಾರಿಗಳಾದ ಆರ್.ಪ್ರಕಾಶ್ ಕುಮಾರ್, ಕೋಟೆಹುಂಡಿ ಮಹದೇವು, ಮಹಿಳಾ ಅಧ್ಯಕ್ಷೆ ಶಶಿರೇಖಾ, ಹುಣಸೂರು ಬಸವಣ್ಣ, ಅಕ್ಬರ್ ಅಲೀಂ ಇತರರಿದ್ದರು.
ಇಬ್ಬರು ನಾಪತ್ತೆ
ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಯುವತಿ ಸೇರಿದಂತೆ ಇಬ್ಬರು ನಾಪತ್ತೆಯಾಗಿರುವ ಘಟನೆ ಕೆ.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸ್ ಸಹಾಯವಾಣಿಯಿಂದ ಶಕ್ತಿಧಾಮದಲ್ಲಿ ಇರಿಸಲಾಗಿದ್ದ ಚೆಲುವರಾಯಸ್ವಾಮಿ ಎಂಬವರ ಪುತ್ರಿ ಎಂ.ಸಿ. ರೂಪಾ (23) ಮಂಗಳವಾರ ನಾಪತ್ತೆಯಾಗಿದ್ದಾರೆ.ಪತ್ತೆ ಮಾಡಿಕೊಡುವಂತೆ ಶಕ್ತಿಧಾಮದ ಅಧೀಕ್ಷಕ ನಾರಾಯಣಶಾಸ್ತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.4 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಕನ್ನಡ ಮಾತನಾಡುತ್ತಾರೆ. ಟಿ.ಆರ್. ರವೀಂದ್ರ (50) ಫೆ.26ರಂದು ದೇವಸ್ಥಾನಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5.4 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದೃಢಕಾಯ, ದುಂಡು ಮುಖ, ಕನ್ನಡ, ತೆಲುಗು, ಇಂಗ್ಲಿಷ್ ಮಾತನಾಡುತ್ತಾರೆ. ಇಬ್ಬರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418319, 519 ಸಂರ್ಕಿಸಲು ಕೆ.ಆರ್.ಠಾಣೆ ಪೊಲೀಸರು ಕೋರಿದ್ದಾರೆ.
ಈ ಬೈಕ್ ನಿಮ್ಮದೆ?
ಮೈಸೂರು: ಮಂಡಿ ಠಾಣೆ ಪೊಲೀಸರು ನಾರಾಯಣಸ್ವಾಮಿ ಎಂಬ ಆರೋಪಿಯನ್ನು ಬಂಧಿಸಿ, ಹೀರೊಹೊಂಡಾ ಸ್ಪ್ಲೆಂಡರ್ ಪ್ಲಸ್ (ಕೆಎ-02, ಎಚ್- 6340) ಬೈಕ್ ವಶಪಡಿಸಿಕೊಂಡಿದ್ದಾರೆ. ಬೈಕ್ನ ವಾರಸುದಾರರು ಪತ್ತೆಯಾಗಿಲ್ಲ. ಈ ಬೈಕಿನ ವಾರಸುದಾರರು ಇದ್ದಲ್ಲಿ ದಾಖಲಾತಿ ಸಮೇತ ಮಂಡಿ ಪೊಲೀಸ್ ಠಾಣೆಗೆ ಬರುವಂತೆ ಕೋರಿದ್ದಾರೆ.
ಪೇದೆ ಪತ್ನಿ ಆತ್ಮಹತ್ಯೆ
ಮೈಸೂರು: ಪೇದೆಯೊಬ್ಬರ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಆಲನಹಳ್ಳಿ ಬಳಿಯ ಗಿರಿದರ್ಶಿನಿ ಬಡಾವಣೆ ನಿವಾಸಿ ಹಾಗೂ ಕುವೆಂಪುನಗರ ಠಾಣೆಯ ಪೇದೆ ಸುರೇಶ್ ಎಂಬವರ ಪತ್ನಿ ಶ್ವೇತಾ (25) ಆತ್ಮಹತ್ಯೆ ಮಾಡಿಕೊಂಡವರು. ಮೂರು ವರ್ಷದ ಹಿಂದೆ ಸುರೇಶ್ ಮತ್ತು ಶ್ವೇತಾ ವಿವಾಹವಾಗಿದ್ದು, ಇವರಿಗೆ 2 ವರ್ಷದ ಹೆಣ್ಣು ಮಗು ಇದೆ. ಗಿರಿದರ್ಶಿನಿ ಬಡಾವಣೆಯ ಬಾಡಿಗೆ ಮನೆಯಲ್ಲಿ ಈ ದಂಪತಿ ವಾಸವಾಗಿದ್ದರು. ಎಂದಿನಂತೆ ಸುರೇಶ್ ಕರ್ತವ್ಯಕ್ಕೆ ತೆರಳಿ ರಾತ್ರಿ ವಾಪಸ್ ಮನೆಗೆ ಬಂದಿದ್ದಾರೆ. ಈ ವೇಳೆ ಮನೆ ಬಾಗಿಲು ಹಾಕಿತ್ತು. ಅನುಮಾನಗೊಂಡು ಬಾಗಿಲು ಮುರಿದು ನೋಡಿದಾಗ ಶ್ವೇತಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರೆ, ಶ್ವೇತಾ ಪೋಷಕರು ತಮ್ಮ ಮಗಳ ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ನಜರ್ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರೈಲಿಗೆ ಸಿಕ್ಕಿ ಅಪರಿಚಿತ ಯುವಕ ಸಾವು
ಮೈಸೂರು: ಅಪರಿಚಿತ ಯುವಕ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಮೈಸೂರಿನ ಎಂಎನ್ಜಿಟಿ- ನಾಗನಹಳ್ಳಿ ರೈಲು ನಿಲ್ದಾಣಗಳ ನಡುವೆ ಗುರುವಾರ ನಡೆದಿದೆ. ಚಹರೆ- 28 ವರ್ಷ, 5 ಅಡಿ ಎತ್ತರ, ಸಾಧಾರಣ ಶರೀರ, ಎಣ್ಣೆಗೆಂಪು ಬಣ್ಣ, ಕೋಲು ಮುಖ, ಕಪ್ಪು ಕೂದಲು ಇದೆ. ಕಪ್ಪು ಗಡ್ಡ ಮೀಸೆ ಬಿಟ್ಟಿದ್ದಾರೆ. ಬಿಳಿ ಬಣ್ಣದ ಹಳದಿ ಹೂಗಳ್ಳುಳ್ಳ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕಪ್ಪು ಬೆಲ್ಟ್ ಧರಿಸಿದ್ದಾರೆ. ಮೃತ ವ್ಯಕ್ತಿಯ ದೇಹವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ. ವಾರಸುದಾರರು ಇದ್ದಲ್ಲಿ ದೂ. 0821- 2516579 ಸಂಪರ್ಕಿಸಲು ಮೈಸೂರು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

