ಅಂಗವಿಕಲ ಮಕ್ಕಳ ಪೋಷಕರಿಗೂ ರಿಯಾಯ್ತಿ ಬಸ್ ಪಾಸ್
ಮೈಸೂರು: ಪ್ರಸ್ತುತ ಅಂಗವಿಕಲ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡಲಾಗುತ್ತಿದ್ದು, ಅವರ ಪೋಷಣೆಯಲ್ಲಿ ತೊಡಗಿರುವ ಪೋಷಕರಿಗೂ ಈ ಸೇವೆ ವಿಸ್ತರಿಸುವ ಬಗೆಗೆ ಚಿಂತಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಚ್.ಎಸ್. ಬಲರಾಮ್ ಹೇಳಿದರು.
ಬುಧವಾರ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಸಹನಾ ಸಮನ್ವಯ ಶಿಕ್ಷಣ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗವಿಕಲ ಮಕ್ಕಳು, ವಿಶೇಷ ಮಕ್ಕಳಿರುವ ಪೋಷಕರ ಕರುಣೆ, ಸಹನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ದಿನನಿತ್ಯ ತಮ್ಮ ಕಾರ್ಯಗಳ ನಡುವೆಯೂ ಅಂಗವಿಕಲ, ವಿಶೇಷ ಮಕ್ಕಳ ಪೋಷಣೆ ಮಾಡುತ್ತಿರುವ ಇವರ ಸೇವೆ ಸ್ಮರಿಸುವಂತದ್ದು ಎಂದರು.
ನಮ್ಮ ಇಲಾಖೆಯು ಅಂಗವಿಕಲರ ಏಳಿಗೆಗಾಗಿಯೇ ಸ್ಥಾಪಿತವಾದದ್ದು. ನಮ್ಮ ಸೇವೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಅಂಗವಿಕಲ ಮಕ್ಕಳ ಪೋಷಕರ ಕಷ್ಟಗಳನ್ನು ಆಲಿಸಲು ನಗರಪಾಲಿಕೆ ಸಹಯೋಗದೊಂದಿಗೆ ಪುನರ್ವಸತಿ ಕೇಂದ್ರ ತೆರೆಯಲು ಸಕಲ ಸಿದ್ಧತೆ ನಡೆಸಲಾಗಿದೆ. ಈ ಕಾರ್ಯಕ್ರಮಕ್ಕೆ ಚುನಾವಣೆ ನೀತಿ ಸಂಹಿತೆ ಅಡ್ಡ ಬರುವುದಿಲ್ಲ ಎಂದಾದಲ್ಲಿ ಮುಂದಿನ ವಾರದಲ್ಲಿ ಪಾಲಿಕೆಯ ಎಲ್ಲಾ ವಾರ್ಡುಗಳಲ್ಲಿ ಕೇಂದ್ರಗಳು ಆರಂಭಗೊಳ್ಳಲಿವೆ. ಇಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ಹೇಳಿಕೊಳ್ಳಬಹುದು. ನಮ್ಮ ಸಿಬ್ಬಂದಿ ನಿಮಗೆ ಸಲಹೆ- ಸೂಚನೆ, ಮಾರ್ಗದರ್ಶನ ನೀಡುವರು. ಹೆಚ್ಚಿನ ಮಾಹಿತಿಗೆ ತಮ್ಮನ್ನು (ದೂ.0821- 249011, ಮೊ. 94491 18334) ಸಂಪರ್ಕಿಸುವಂತೆ ಅವರು ಕೋರಿದರು.
ರೋಟರಿ ಜಿಲ್ಲೆ ವಲಯ ಸಂಖ್ಯೆ 7ರ ಸಹಾಯಕ ಗೌರ್ನರ್ ಎಂ.ಎನ್. ಭೀಮೇಶ್, ಜೆಎಸ್ಎಸ್ ಸಂಸ್ಥೆಯ ನಿವೃತ್ತ ಶಿಕ್ಷಕಿ ಎಂ.ಎ. ನೀಲಾಂಬಿಕೆ, ಸಹನಾ ಸಮನ್ವಯ ಶಿಕ್ಷಣ ಶಾಲೆಯ ಮುಖ್ಯಶಿಕ್ಷಕ ಶಿವಕುಮಾರ್ ಇದ್ದರು. ನಂತರ ವಿಶೇಷ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಶಾಲೆಯ ಬಗ್ಗೆ: ಜೆಎಸ್ಎಸ್ ಸಹನಾ ಸಮನ್ವಯ ಶಿಕ್ಷಣ ಶಾಲೆ 1987ರಲ್ಲಿ ಸ್ಥಾಪನೆಯಾಯಿತು. ಬುದ್ಧಿಮಾಂದ್ಯ ಮಕ್ಕಳ ಶೈಕ್ಷಣಿಕ, ಸಾಮಾಜಿಕ, ಬೌದ್ಧಿಕ ಬೆಳವಣಿಗೆಗೆ ಈ ಶಾಲೆ ಶ್ರಮಿಸುತ್ತಿದೆ. ವಿಶೇಷ ತರಬೇತಿಯುಳ್ಳ ಶಿಕ್ಷಕರನ್ನು ಒಳಗೊಂಡು, ಕೇಂದ್ರ ಪುರಸ್ಕೃತ ಸಮನ್ವಯ ಶಿಕ್ಷಣ ಯೋಜನೆ ಅಡಿಯಲ್ಲಿ ಅನುದಾನಕ್ಕೆ ಒಳಪಟ್ಟಿದೆ. ವಿಶೇಷ ಮಕ್ಕಳಿಗೆ ಸೀಮಿತವಾಗಿದ್ದ ಈ ಶಾಲೆಯಲ್ಲಿ ಶ್ರವಣದೋಷವುಳ್ಳ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ.
ಈ ಶಾಲೆಯಲ್ಲಿ ಓದಿದ ಮಕ್ಕಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅರುಣ್ಕುಮಾರ್ ಎಂಬ ವಿದ್ಯಾರ್ಥಿ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪೆಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕ್ನಲ್ಲಿ ಭಾಗವಹಿಸಿ ಚೆಂಡು ಎಸೆಯುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಬೋಚಿ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದನು. ಹಾಗೆ ಎಂ. ಭರತ್ ಶರ್ಮಾ ಎಂಬ ವಿದ್ಯಾರ್ಥಿ ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪೆಷಲ್ ಒಲಂಪಿಕ್ಸ್ಗೆ ಆಯ್ಕೆಯಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

